ದೋಹಾದಲ್ಲಿ ನಾಳೆ ಅಮೆರಿಕ-ಇರಾನ್ ಮಹತ್ವದ ಮಾತುಕತೆ: ಟೆಹ್ರಾನ್​ ಮನವಿ ಮೇರೆಗೆ ಸಭೆ ಎಂದ ಡೊನಾಲ್ಡ್ ಟ್ರಂಪ್! Donald Trump

ದೋಹಾದಲ್ಲಿ ನಾಳೆ ಅಮೆರಿಕ-ಇರಾನ್ ಮಹತ್ವದ ಮಾತುಕತೆ: ಟೆಹ್ರಾನ್​ ಮನವಿ ಮೇರೆಗೆ ಸಭೆ ಎಂದ ಡೊನಾಲ್ಡ್ ಟ್ರಂಪ್!
ದೋಹಾದಲ್ಲಿ ನಾಳೆ ಅಮೆರಿಕ-ಇರಾನ್ ಮಹತ್ವದ ಮಾತುಕತೆ: ಟೆಹ್ರಾನ್​ ಮನವಿ ಮೇರೆಗೆ ಸಭೆ ಎಂದ ಡೊನಾಲ್ಡ್ ಟ್ರಂಪ್!
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಮಿಲಿಟರಿ ಸಂಘರ್ಷ ಮತ್ತು ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಅಮೆರಿಕ ಮತ್ತು ಇರಾನ್ ದೇಶಗಳು ಕತಾರ್ ರಾಜಧಾನಿ ದೋಹಾದಲ್ಲಿ ನಾಳೆ ತುರ್ತು ಶಾಂತಿ ಮಾತುಕತೆ ನಡೆಸಲಿವೆ. ಈ ಮಹತ್ವದ ಬೆಳವಣಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಇರಾನ್ ದೇಶವೇ ಮೊದಲು ಈ ಉನ್ನತ ಮಟ್ಟದ ಸಭೆಗೆ ವಿನಂತಿ ಮಾಡಿಕೊಂಡಿತ್ತು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇರಾನ್ ಕಡೆಯಿಂದ ಮಾತುಕತೆಗೆ ಮನವಿ ಬಂದಿದೆ. ಅದರಂತೆ ನಾಳೆ ದೋಹಾದಲ್ಲಿ ಉಭಯ ದೇಶಗಳ ಸಭೆ ನಡೆಯಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ವಿವಾದ: ಸಂಘರ್ಷಕ್ಕೆ ಕಾರಣವೇನು..?

ಓಮನ್ ದೇಶದ ಸಮೀಪವಿರುವ ಬಿಕ್ಕಟ್ಟಿನ ಕೇಂದ್ರಬಿಂದು 'ಹೊರ್ಮುಜ್ ಜಲಸಂಧಿಯಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯೇ ಈ ದಿಢೀರ್ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ. ಇರಾನ್ ಸೇನೆಯು ಹೊರ್ಮುಜ್ ಮೂಲಕ ಸಾಗುತ್ತಿದ್ದ ಸರಕು ಸಾಗಣೆ ನೌಕೆಯೊಂದನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ನ ಕ್ಷಿಪಣಿ ತಾಣಗಳು, ಡ್ರೋನ್ ಕೇಂದ್ರಗಳು ಮತ್ತು ರಾಡಾರ್ ನೆಲೆಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿ ಧ್ವಂಸಗೊಳಿಸಿದ್ದವು.
ಇದರಿಂದ ಕೆರಳಿದ ಇರಾನ್ ಕೂಡ ತಿರುಗೇಟು ನೀಡಲು ಮುಂದಾದಾಗ ಇಡೀ ಪ್ರದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಸದ್ಯಕ್ಕೆ ಉಭಯ ದೇಶಗಳು ಜಾಗತಿಕ ಹಿತದೃಷ್ಟಿಯಿಂದ ಪರಸ್ಪರ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿದ್ದು, ಸದ್ಯಕ್ಕೆ ನೌಕೆಗಳ ಸಂಚಾರ ಮುಕ್ತವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ

ಹೊರ್ಮುಜ್ ಜಲಸಂಧಿಯು ಜಾಗತಿಕ ಪೂರೈಕೆ ಜಾಲದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಶ್ವದ ಒಟ್ಟು ಕಚ್ಚಾ ತೈಲದ ಪೂರೈಕೆಯಲ್ಲಿ ಐದನೇ ಒಂದು ಭಾಗದಷ್ಟು (ಶೇ. 20) ತೈಲ ನೌಕೆಗಳು ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತವೆ. ಹಾಗಾಗಿ, ಇಲ್ಲಿ ಉಂಟಾಗುವ ಸಣ್ಣ ಏರುಪೇರೂ ಸಹ ಇಡೀ ಜಗತ್ತಿನ ತೈಲ ಬೆಲೆಯ ಮೇಲೆ ಭಾರಿ ಪ್ರಭಾವ ಬೀರುತ್ತದೆ.

ಮಾತುಕತೆಯ ಪ್ರಮುಖ ಅಜೆಂಡಾಗಳು

ನಾಳೆ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಹೊರ್ಮುಜ್ ಜಲಸಂಧಿಯ ನಿಯಂತ್ರಣದ ಬಗ್ಗೆ ಚರ್ಚೆಗಳು ನಡೆಯಲಿವೆ. ಇರಾನ್ ಈ ಪ್ರಮುಖ ಜಲಮಾರ್ಗದ ಮೇಲೆ ಸಂಪೂರ್ಣವಾಗಿ ತನ್ನದೇ ಹಿಡಿತ ಇರಬೇಕು ಎಂದು ಪ್ರತಿಪಾದಿಸುತ್ತಿದೆ. ಆದರೆ, ಇದು ಅಂತಾರಾಷ್ಟ್ರೀಯ ಜಲಮಾರ್ಗವಾಗಿದ್ದು, ಎಲ್ಲಾ ದೇಶಗಳ ಹಡಗುಗಳ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿ ಇರಬಾರದು ಎಂದು ಅಮೆರಿಕ ಪಟ್ಟು ಹಿಡಿದಿದೆ.
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಜಲಸಂಧಿಯ ಗಡಿಯನ್ನು ಹಂಚಿಕೊಂಡಿರುವ ಇರಾನ್ ಮತ್ತು ಓಮನ್ ದೇಶಗಳು ಇಲ್ಲಿ ಸಾಗುವ ಇತರ ದೇಶಗಳ ನೌಕೆಗಳನ್ನು ತಡೆಯುವಂತಿಲ್ಲ ಅಥವಾ ಸುಂಕ ವಿಧಿಸುವಂತಿಲ್ಲ. ಆದರೂ ಇರಾನ್ ತನ್ನ ಪ್ರಭಾವ ಬಳಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಉಭಯ ದೇಶಗಳ ನಡುವೆ ನೌಕಾ ಸಂಚಾರದ ಸುಗಮ ನಿರ್ವಹಣೆಗೆ ಹಾಟ್‌ಲೈನ್ ಸ್ಥಾಪಿಸಲು ಈ ಹಿಂದಿನ ಒಪ್ಪಂದದಲ್ಲಿ ತೀರ್ಮಾನಿಸಲಾಗಿದ್ದರೂ, ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ.

ಓಮನ್ ಜೊತೆ ಇರಾನ್ ಪ್ರತ್ಯೇಕ ಸಭೆ

ಅಮೆರಿಕ ಜೊತೆಗಿನ ಸಭೆಗೂ ಮುನ್ನ ಇರಾನ್‌ನ ವಿದೇಶಾಂಗ ಉಪ ಸಚಿವ ಕಾಜೆಮ್ ಘರೀಬಾಬಾದಿ ಅವರು ಓಮನ್ ರಾಜಧಾನಿ ಮಸ್ಕತ್‌ಗೆ ಭೇಟಿ ನೀಡಿ, ಜಂಟಿ ಹೊರ್ಮುಜ್ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೊರ್ಮುಜ್ ಜಲಸಂಧಿಯ ಭವಿಷ್ಯದ ನಿರ್ವಹಣೆ ಮತ್ತು ಪ್ರಸ್ತುತ ಎದುರಾಗಿರುವ ಭದ್ರತಾ ಸವಾಲುಗಳ ಕುರಿತು ಓಮನ್ ಸರ್ಕಾರದೊಂದಿಗೆ ವಿಚಾರ ವಿನಿಮಯ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ಲಂಡನ್ ಮೂಲದ ಥಿಂಕ್ ಟ್ಯಾಂಕ್ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್‌ನ ತಜ್ಞರಾದ ಎಚ್.ಎ. ಹೆಲ್ಲಿಯರ್ ಅವರ ಪ್ರಕಾರ, ಇರಾನ್ ಈ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಮಾತುಕತೆ ನಡೆಸುತ್ತಲೇ, ಮತ್ತೊಂದೆಡೆ ಅಮೆರಿಕದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ. ಸಭೆ ನಡೆದರೂ ಈ ಭಾಗದಲ್ಲಿ ಇರಾನ್‌ನ ಇಂತಹ ಸಣ್ಣಪುಟ್ಟ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ್ದಾರೆ. ನಾಳಿನ ದೋಹಾ ಸಭೆಯನ್ನು ಯಾವ ನಾಯಕರು ಮುನ್ನಡೆಸಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಜಾಗತಿಕ ಮಾರುಕಟ್ಟೆಯ ದೃಷ್ಟಿಯಿಂದ ಈ ಸಭೆ ಅತ್ಯಂತ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net