ನಿಮಗೂ ಥೈಲ್ಯಾಂಡ್‌ಗೆ ಹೋಗುವ ಪ್ಲ್ಯಾನ್​ ಇದ್ಯಾ? ಹಾಗಿದ್ರೆ, ಈ ವಿಚಾರಗಳು ಗೊತ್ತಿರಲಿ! ಇಲ್ಲದಿದ್ರೆ ಎಂಟ್ರಿ ಸಿಗೋದು ಡೌಟ್

ಥೈಲ್ಯಾಂಡ್​
ಥೈಲ್ಯಾಂಡ್​
Published on

ಪ್ರಮುಖ ಮುಖ್ಯಾಂಶಗಳು

  • ದೇಶ-ವಿದೇಶಗಳಿಂದ ಥೈಲ್ಯಾಂಡ್‌ಗೆ ಪ್ರವಾಸಿಗರ ದಂಡು
  • ವೀಸಾ ನೀತಿಯಲ್ಲಿ ಮತ್ತು ಒಂದಷ್ಟು ನಿಯಮಗಳಲ್ಲಿ ಬದಲಾವಣೆಗಳು
  • ನಿಯಮ ಹೇಳುವುದೇನು? ಯಾಕಾಗಿ ಇದೆಲ್ಲ?
ನವದೆಹಲಿ: ಪ್ರತಿವರ್ಷ ದೇಶ-ವಿದೇಶಗಳಿಂದ ಥೈಲ್ಯಾಂಡ್‌ಗೆ ಪ್ರವಾಸಿಗರ ದಂಡೇ ಹರಿದಬರುತ್ತದೆ. ಇಲ್ಲಿಗೆ ಭೇಟಿ ಕೊಡುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ವೀಸಾ ನೀತಿಯಲ್ಲಿ ಮತ್ತು ಒಂದಷ್ಟು ನಿಯಮಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆ ಎದುರಾಗಿದೆ.
ಈ ಬದಲಾವಣೆಗಳನ್ನು ಅರಿಯದೆ ಥೈಲ್ಯಾಂಡ್​ ಪ್ರವೇಶಿಸುವ ಭಾರತೀಯರು ಸೇರಿ ಹಲವು ದೇಶಗಳ ಪ್ರವಾಸಿಗರ ಮೇಲೆ ಇದು ಪರಿಣಾಮ ಬೀರುತ್ತಿವೆ. ದೇಶದಲ್ಲಿ ವಲಸೆ ನಿಯಂತ್ರಣಗಳನ್ನು ಬಿಗಿಗೊಳಿಸಲು ಮತ್ತು ದೃಢ ಪ್ರವೇಶ ಪ್ರಕ್ರಿಯೆಯನ್ನು ಜಾರಿಗೆ ತರಲು ಥೈಲ್ಯಾಂಡ್​ ಸರ್ಕಾರ ಈ ಬದಲಾವಣೆಗಳನ್ನು ಜಾರಿಗೆ ತರುತ್ತಿರುವಂತೆ ತೋರಿದೆ. ಇತ್ತೀಚೆಗಷ್ಟೇ, ಡಾನ್ ಮುವಾಂಗ್ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರವಾಸಿಗರಿಗೆ ವಲಸೆ ಅಧಿಕಾರಿಗಳು ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಈ ಘಟನೆ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಯಿತು. ಅಲ್ಲಿಂದ ಕಟ್ಟುನಿಟ್ಟಿನ ರೂಲ್ಸ್​ ಬಗ್ಗೆ ಮಾಹಿತಿ ಹಲವರ ಗಮನಕ್ಕೆ ಬರುತ್ತಿದೆ.

ಏನಿದು ಹೊಸ ನಿಯಮ?

ವಾಸ್ತವವಾಗಿ, ಈ ನಿಯಮ ಹೊಸದೇನಲ್ಲ. ಥೈಲ್ಯಾಂಡ್‌ನ ಅಧಿಕೃತ ಪ್ರವೇಶ ನಿಯಮಗಳ ಪ್ರಕಾರ, ದೇಶವನ್ನು ಪ್ರವೇಶಿಸುವ ವಿದೇಶಿ ಪ್ರವಾಸಿಗರು ಸಾಕಷ್ಟು ಆರ್ಥಿಕ ಮಾರ್ಗಗಳ ಪುರಾವೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಲಗ್ಗತ್ತಿಸಬೇಕು.
  • ಪ್ರತಿ ವ್ಯಕ್ತಿಗೆ ಕನಿಷ್ಠ 20,000 ಥಾಯ್ ಬಹ್ತ್
  • ಪ್ರತಿ ಕುಟುಂಬಕ್ಕೆ ಕನಿಷ್ಠ 40,000 ಬಹ್ತ್
ಪ್ರವಾಸಿ ವೀಸಾಗಳಿಗೆ ಅದೇ ಹಣಕಾಸಿನ ದಾಖಲೆಯನ್ನು ಕಡ್ಡಾಯಗೊಳಿಸಲಾಗಿದೆ. ನೀವು ವೀಸಾ ಮನ್ನಾ ನಿಯಮದ ಅಡಿಯಲ್ಲಿ ಪ್ರವೇಶಿಸಿದರೂ ಸಹ, ವಲಸೆ ಅಧಿಕಾರಿಗಳು ಕೇಳಿದರೆ ನೀವು ಈ ರೆಕಾರ್ಡ್​ ಅನ್ನು ತೋರಿಸಬೇಕು. ಅಗತ್ಯವಿದ್ದರೆ ಕಾನ್ಸುಲರ್ ಅಧಿಕಾರಿಗಳು ಹೆಚ್ಚುವರಿ ದಾಖಲೆಗಳನ್ನು ಸಹ ಕೋರಿ, ಪರಿಶೀಲಿಸಬಹುದು.
  • ವೀಸಾ ಶುಲ್ಕ ಮತ್ತು ಗಡುವು ವಿವರಗಳು
  • ಪ್ರವೇಶ ವೀಸಾ ಶುಲ್ಕ: 1,000 ಬಹ್ತ್
  • ವೀಸಾ ಸಿಂಧುತ್ವ: 60 ದಿನಗಳ ವಾಸ್ತವ್ಯ ಸಾಧ್ಯಅಗತ್ಯವಿದ್ದರೆ ಬ್ಯಾಂಕಾಕ್ ವಲಸೆ ಬ್ಯೂರೋದಲ್ಲಿ ವಿಸ್ತರಣೆ ಸಾಧ್ಯ
ಹೆಚ್ಚುವರಿಯಾಗಿ, ಕೆಲವು ದೇಶಗಳ ನಾಗರಿಕರು ಥೈಲ್ಯಾಂಡ್‌ಗೆ ಪ್ರಯಾಣಿಸುವ ಮುನ್ನ ತಮ್ಮ ದೇಶದ ಥಾಯ್ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಥಾಯ್ ಎಂಎಫ್​ಎ ಶಿಫಾರಸು ಮಾಡುತ್ತದೆ.

ಪ್ರಯಾಣಿಕರ ಗಮನಕ್ಕೆ!

  • ಥೈಲ್ಯಾಂಡ್‌ಗೆ ಆಗಮಿಸುವ ಮೊದಲು ಕನಿಷ್ಠ 20,000 ಬಹ್ತ್ (56,570 ರೂ.) ಕ್ಯಾಶ್​ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು.
  • ದಾಖಲೆಗಳಲ್ಲಿ ಯಾವುದೇ ದೋಷಗಳು ಇರಬಾರದು.
  • ನಿರ್ಗಮಿಸುವ ಮೊದಲು ಹತ್ತಿರದ ಥಾಯ್ ರಾಯಭಾರ ಕಚೇರಿ/ದೂತಾವಾಸದಲ್ಲಿ ಇತ್ತೀಚಿನ ವೀಸಾ ನಿಯಮಗಳನ್ನು ಪರಿಶೀಲಿಸುವುದು ಅತ್ಯಗತ್ಯ.
  • ವಿಮಾನ ನಿಲ್ದಾಣಗಳಲ್ಲಿ ವಲಸೆ ತಪಾಸಣೆಯ ಸಮಯದಲ್ಲಿ ಅಧಿಕಾರಿಗಳ ನಿರ್ಧಾರವೇ ಅಂತಿಮ.
ಥೈಲ್ಯಾಂಡ್‌ನಲ್ಲಿ ಜಾರಿಗೆ ಬಂದಿರುವ ಹೊಸ ವೀಸಾ ಮತ್ತು ವಲಸೆ ನಿಯಮಗಳು ಜಾಗತಿಕ ಪ್ರವಾಸಿಗರ ಮೇಲೆ ನೇರ ಪರಿಣಾಮ ಬೀರುತ್ತಿವೆ. ನಿಯಮಗಳನ್ನು ಮುಂಚಿತವಾಗಿ ಅರಿತು ಪ್ರಯಾಣಿಸುವುದು ಉತ್ತಮ ಎನ್ನಲಾಗಿದೆ. ಇದರಿಂದ ಆ ದೇಶಕ್ಕೆ ಹೋದ ಬಳಿಕ ಆಗುವ ಸಮಸ್ಯೆಗಳು ತಪ್ಪುತ್ತದೆ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net