ಅಮೆರಿಕ ಖರೀದಿಸಬಹುದು! ಆದ್ರೆ, ಭಾರತಕ್ಕೆ ಇಲ್ಲ? ಇದೆಂಥಾ ನ್ಯಾಯ? ಟ್ರಂಪ್​ಗೆ ಪುಟಿನ್​ ಟಾಂಗ್​

ನರೇಂದ್ರ ಮೋದಿ-ವ್ಲಾಡಿಮಿರ್​ ಪುಟಿನ್​
ನರೇಂದ್ರ ಮೋದಿ-ವ್ಲಾಡಿಮಿರ್​ ಪುಟಿನ್​
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ತೈಲ ಖರೀದಿಸಬಹುದು. ಅದೇ ಭಾರತ ಖರೀದಿಸಿದ್ರೆ ತಪ್ಪೇ?
  • ಮೋದಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ
  • ಸಂದರ್ಶನದಲ್ಲಿ ಪುಟಿನ್​ರ ಪ್ರಮುಖ ಹೇಳಿಕೆಗಳು ಇಲ್ಲಿವೆ ನೋಡಿ
ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಎಂಟ್ರಿಕೊಟ್ಟಿದ್ದು, ಡಿ.4 ಮತ್ತು 5ರಂದು ಇಲ್ಲೇ ಉಳಿಯಲಿದ್ದಾರೆ. ನಾಲ್ಕು ವರ್ಷಗಳಲ್ಲಿ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಭಾರತ-ರಷ್ಯಾ ನಡುವೆ ಹೆಚ್ಚಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ರಕ್ಷಣೆ, ಇಂಧನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ. ಈ ಮಧ್ಯೆ, ಸಂದರ್ಶನದಲ್ಲಿ ಮಾತನಾಡಿದ ವ್ಲಾಡಿಮಿರ್​, ಯುಕ್ರೇನ್‌ನಲ್ಲಿನ ಯುದ್ಧ, ಅಮೆರಿಕದ ನಿಲುವು ಮತ್ತು ಪಾಶ್ಚಿಮಾತ್ಯ ದೇಶಗಳ ನಡವಳಿಕೆಯನ್ನು ಟೀಕಿಸಿ, ಮಾತನಾಡಿದರು.
ಅಮೆರಿಕ ರಷ್ಯಾದಿಂದ ತೈಲ ಖರೀದಿಸಲು ಅವಕಾಶವಿದೆ ಎಂದಮೇಲೆ ಅದ್ಯಾಕೆ ಭಾರತ ತೈಲವನ್ನು ಖರೀದಿಸಬಾರದು? ಅದನ್ನೇಕೆ ಯುಎಸ್​ ಪ್ರಶ್ನಿಸುವುದು? ಎಂದು ಟ್ರಂಪ್​ ವಿರುದ್ಧ ಚಾವಟಿ ಬೀಸಿದರು. "ಅಮೆರಿಕ ತನ್ನ ಸ್ವಂತ ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಪರಮಾಣು ಇಂಧನವನ್ನು ಮತ್ತು ಅಮೆರಿಕದ ರಿಯಾಕ್ಟರ್‌ಗಳಿಗೆ ಯುರೇನಿಯಂ ಅನ್ನು ಖರೀದಿಸುತ್ತಿದೆ. ಇದೇ ಹಕ್ಕು ಭಾರತಕ್ಕೂ ಇದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ರಷ್ಯಾ ಚರ್ಚಿಸಲು ಸಿದ್ಧವಿದೆ" ಎಂದರು.
"ಯುಕ್ರೇನ್‌ಗೆ ಶಾಂತಿ ತರಲು ಟ್ರಂಪ್ ಅವರ ಪ್ರಾಮಾಣಿಕ ಪ್ರಯತ್ನಗಳು ನನಗೆ ಖುಷಿ ತಂದಿದೆ. ಅಸಲಿಗೆ ಇದರಲ್ಲಿ ರಾಜಕೀಯ ಮತ್ತು ಆರ್ಥಿಕ ಎರಡೂ ಪ್ರಯೋಜನಗಳಿವೆ. ಭಾರತ-ರಷ್ಯಾ ಸಂಬಂಧಗಳು ಎಂದಿಗೂ ಇತರರಿಗೆ ತೊಂದರೆ ಮಾಡಿಲ್ಲ. ನನ್ನ ಮೇಲೆ ಅಥವಾ ಪ್ರಧಾನಿ ಮೋದಿ ಮೇಲೆ ಯಾರೇ ಒತ್ತಡ ಹೇರಿದರೂ, ನಾವು ನಮ್ಮ ಸಹಕಾರವನ್ನು ಯಾರ ವಿರುದ್ಧವೂ ಬಳಸಿಲ್ಲ. ಟ್ರಂಪ್ ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿದ್ದಾರೆ" ಎಂದು ಹೇಳಿದರು.
ಇನ್ನು ಭಾರತ-ರಷ್ಯಾ ವ್ಯಾಪಾರದ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್​, "ಒಟ್ಟಾರೆ ವ್ಯಾಪಾರ ಸ್ಥಿರವಾಗಿದೆ ಮತ್ತು ರಷ್ಯಾದ ತೈಲ ಕಂಪನಿಗಳು ಭಾರತವನ್ನು ವಿಶ್ವಾಸಾರ್ಹ ಗ್ರಾಹಕ ಎಂದು ಪರಿಗಣಿಸಿವೆ. ಯುಕ್ರೇನ್ ವಿರುದ್ಧದ ಯುದ್ಧಕ್ಕೂ ಮೊದಲು ರಷ್ಯಾ ವ್ಯಾಪಾರ ಕಂಪನಿಗಳು ಭಾರತದೊಂದಿಗೆ ಬಲವಾದ ಇಂಧನ ಪಾಲುದಾರಿಕೆಯನ್ನು ಸ್ಥಾಪಿಸಿದ್ದವು" ಎಂದು ಪುಟಿನ್​ ನುಡಿದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net