ಒಂದೇ ಒಂದು ರನೌಟ್, ಹತ್ತಾರು ವಿವಾದ! ಮೆಹಿದಿ ಹಸನ್ ಜಾಣಾಟಕ್ಕೆ ಸಲ್ಮಾನ್ ಆಘಾ ಔಟ್; ಪಾಕ್ ಆಟಗಾರನಿಗೆ ಡಿಮೆರಿಟ್ ಪಾಯಿಂಟ್ ಶಾಕ್​ | Salman Agha

Salman Agha | ಪಾಕ್​ ಬ್ಯಾಟರ್ ಸಲ್ಮಾನ್ ಅಲಿ ಆಘಾ
Salman Agha | ಪಾಕ್​ ಬ್ಯಾಟರ್ ಸಲ್ಮಾನ್ ಅಲಿ ಆಘಾ
Published on
Salman Agha: ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನಡೆದ ಸಲ್ಮಾನ್ ಅಲಿ ಆಘಾ ರನೌಟ್ ದೊಡ್ಡ ಮಟ್ಟದ ಸದ್ದು ಮಾಡಿದ್ದು, ಇದಕ್ಕೆ ಪಾಕ್​ ಬ್ಯಾಟರ್ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿ ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಏನಿದು ಘಟನೆ?

ಪಾಕಿಸ್ತಾನ ಇನಿಂಗ್ಸ್‌ನ 39ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ರಿಜ್ವಾನ್ ಬಾರಿಸಿದ ಚೆಂಡನ್ನು ಬೌಲರ್ ಮೆಹಿದಿ ಹಸನ್ ಮಿರಾಜ್ ತಡೆದರು. ಈ ವೇಳೆ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಸಲ್ಮಾನ್ ಅಘಾ ಕ್ರೀಸ್‌ನಿಂದ ಸ್ವಲ್ಪ ಹೊರಗಿದ್ದರು. ಅಘಾ ತಮ್ಮ ಬಳಿ ಬಂದ ಚೆಂಡನ್ನು ಎತ್ತಿ ಬೌಲರ್ ಮಿರಾಜ್‌ಗೆ ನೀಡಲು ಮುಂದಾದರು. ಆದರೆ ಅಷ್ಟೊತ್ತಿಗಾಗಲೇ ಮಿರಾಜ್ ತಾವೇ ಬಾಲ್​ ತೆಗೆದುಕೊಂಡು ಸ್ಟಂಪ್‌ಗೆ ಎಸೆದರು.
ಇದನ್ನು ಥರ್ಡ್​ ಅಂಪೈರ್ ಪರಿಶೀಲಿಸಿದಾಗ ಅಘಾ ಕ್ರೀಸ್‌ನಿಂದ ಹೊರಗಿರುವುದು ಸ್ಪಷ್ಟವಾಯಿತು. ನಿಯಮದ ಪ್ರಕಾರ ಚೆಂಡು ಡೆಡ್ ಆಗಿರದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಆಘಾತಕ್ಕೊಳಗಾದ ಸಲ್ಮಾನ್ ಅಘಾ, ಮಿರಾಜ್​ರ ಕ್ರೀಡಾ ಮನೋಭಾವದ ವಿರುದ್ಧದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಡ್ರೆಸ್ಸಿಂಗ್ ರೂಮ್‌ಗೆ ಮರಳುವಾಗ ಸಿಟ್ಟಿನಿಂದ ಹೆಲ್ಮೆಟ್ ಎಸೆದು ತಮ್ಮ ಆಕ್ರೋಶ ಹೊರಹಾಕಿದರು.
ತಾನು ಔಟ್ ಎಂದು ತಿಳಿದ ಕೂಡಲೇ ಸಲ್ಮಾನ್ ಆಘಾ ಸಂಯಮ ಕಳೆದುಕೊಂಡರು. ಬೌಲರ್ ಮೆಹಿದಿ ಹಸನ್ ಮತ್ತು ಲಿಟ್ಟನ್ ದಾಸ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಕೊನೆಗೆ ನಾಯಕ ರಿಜ್ವಾನ್ ಅಘಾರನ್ನು ಶಾಂತಗೊಳಿಸಿ ಕಳುಹಿಸಿಕೊಟ್ಟರು. ಆದರೆ, ಡ್ರೆಸ್ಸಿಂಗ್ ರೂಮ್‌ಗೆ ಮರಳುವಾಗ ನಿರಾಶೆಗೊಂಡ ಸಲ್ಮಾನ್, ತಮ್ಮ ಕೈಗವಸು (Gloves) ಮತ್ತು ಹೆಲ್ಮೆಟ್ ನೆಲಕ್ಕೆ ಎಸೆದು ಆಕ್ರೋಶ ಹೊರಹಾಕಿದರು. 

ಐಸಿಸಿ ಕ್ರಮ ಮತ್ತು ಡಿಮೆರಿಟ್ ಪಾಯಿಂಟ್

ಸಲ್ಮಾನ್​ರ ಈ ವರ್ತನೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಮ್ಯಾಚ್ ರೆಫರಿ ನಿಯಮೂರ್ ರಶೀದ್ ಸಲ್ಮಾನ್ ಆಘಾರಿಗೆ ಐಸಿಸಿ ನೀತಿ ಸಂಹಿತೆಯ ಕ್ರಿಕೆಟ್ ಉಪಕರಣಗಳ ದುರುಪಯೋಗ ನಿಯಮದಡಿ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿದ್ದಾರೆ. ಸಲ್ಮಾನ್​​ಗೆ ಇಂತಹ ವರ್ತನೆಯ ಇತಿಹಾಸವಿಲ್ಲದಿದ್ದರೂ, ಮೈದಾನದಲ್ಲಿ ಉಪಕರಣಗಳನ್ನು ಎಸೆಯುವುದು ಶಿಸ್ತುಬದ್ಧ ನಡೆಯಲ್ಲ. ಕಾನೂನು ಮತ್ತು ಆಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ವಾಗ್ದಂಡನೆ ವಿಧಿಸಿದ್ದೇವೆ ಎಂದು ನಿಯಮೂರ್ ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net