ದೋಹಾದಲ್ಲಿ 'ICBF ದಿನ 2026' ಸಂಭ್ರಮಾಚರಣೆ: 'ಪ್ರವಾಸಿ ಸಾಥ್' ಮತ್ತು 'ವಿದ್ಯಾ ಜ್ಯೋತಿ' ಯೋಜನೆಗಳಿಗೆ ಚಾಲನೆ...!

ಕತಾರ್‌ನಲ್ಲಿರುವ ಭಾರತದ ರಾಯಭಾರಿಗಳಾದ ಡಾ. ಕೆ. ಶ್ರೀಕರ್ ರೆಡ್ಡಿ ಅವರು ಈ ಅಧಿಕೃತ ಸಮಾರಂಭವನ್ನು ಉದ್ಘಾಟಿಸಿದರು. ಖ್ಯಾತ ದಕ್ಷಿಣ ಭಾರತೀಯ ಗಾಯಕರಾದ ಅಜಯ್ ವಾರಿಯರ್ ಮತ್ತು ದಿವ್ಯ ರಾಮಚಂದ್ರ ಅವರ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ICBF
ದೋಹಾದಲ್ಲಿ 'ICBF ದಿನ 2026' ಸಂಭ್ರಮಾಚರಣೆ: 'ಪ್ರವಾಸಿ ಸಾಥ್' ಮತ್ತು 'ವಿದ್ಯಾ ಜ್ಯೋತಿ' ಯೋಜನೆಗಳಿಗೆ ಚಾಲನೆ...!
Published on: 

ದೋಹಾ, ಕತಾರ್: ಇಂಡಿಯನ್ ಕಮ್ಯುನಿಟಿ ಬೆನಿವಿಲೆಂಟ್ ಫೋರಮ್ (ICBF) ತನ್ನ ಸಮುದಾಯ ಸೇವೆಯ ದ್ವೈವಾರ್ಷಿಕ ಸಂಭ್ರಮಾಚರಣೆಯಾದ 'ICBF ದಿನ 2026' ಅನ್ನು ನವೆಂಬರ್ 13ರಂದು ದೋಹಾದ ಅಲ್ ವಕ್ರಾಹ್‌ನಲ್ಲಿರುವ ಡಿಪಿಎಸ್-ಮಾಡರ್ನ್ ಇಂಡಿಯನ್ ಸ್ಕೂಲ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.

ಕತಾರ್‌ನಲ್ಲಿರುವ ಭಾರತದ ರಾಯಭಾರಿಗಳಾದ ಡಾ. ಕೆ. ಶ್ರೀಕರ್ ರೆಡ್ಡಿ ಅವರು ಈ ಅಧಿಕೃತ ಸಮಾರಂಭವನ್ನು ಉದ್ಘಾಟಿಸಿದರು. ಖ್ಯಾತ ದಕ್ಷಿಣ ಭಾರತೀಯ ಗಾಯಕರಾದ ಅಜಯ್ ವಾರಿಯರ್ ಮತ್ತು ದಿವ್ಯ ರಾಮಚಂದ್ರ ಅವರ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

1984ರಲ್ಲಿ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಸ್ಥಾಪನೆಯಾದ ICBF, ಕತಾರ್‌ನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಭಾರತೀಯರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಮಾರಂಭದಲ್ಲಿ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಅವರು ಕಳೆದ ಎರಡು ವರ್ಷಗಳ ಸಾಧನೆಗಳನ್ನು ಒಳಗೊಂಡ 'ಸಮರ್ಪಣ್ 2026' ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಅನಿವಾಸಿ ಭಾರತೀಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು 'ಪ್ರವಾಸಿ ಸಾಥ್' ಸೇವಾ ಕೇಂದ್ರ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು 'ವಿದ್ಯಾ ಜ್ಯೋತಿ' ಶೈಕ್ಷಣಿಕ ಯೋಜನೆಗೆ ಚಾಲನೆ ನೀಡಿದರು.

ಸಮಾಜ ಸೇವೆ ಮತ್ತು ಮಾನವೀಯ ಕೊಡುಗೆಗಳಿಗಾಗಿ ಈ ವೇಳೆ 19 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ICBF ಸಲಹಾ ಮಂಡಳಿ ಅಧ್ಯಕ್ಷ ಕೆ. ಎಸ್. ಪ್ರಸಾದ್ ಅವರಿಗೆ ಪ್ರತಿಷ್ಠಿತ 'ಕಂಜನಿ ಪ್ರಶಸ್ತಿ', ಮಾಜಿ ಅಧ್ಯಕ್ಷ ಎನ್. ವಿ. ಖಾದರ್ ಅವರಿಗೆ 'ಕೆ. ಪಿ. ಅಬ್ದುಲ್ ಹಮೀದ್ ಸ್ಮಾರಕ ಪ್ರಶಸ್ತಿ', ಡಾ. ಸಿ. ಕೆ. ನೌಶಾದ್ ಅವರಿಗೆ 'ಸಿ. ಕೆ. ಮೆನನ್ ಸ್ಮಾರಕ ಪ್ರಶಸ್ತಿ' ಹಾಗೂ ಜಯತಿ ಬಿ. ಮೈತ್ರಾ ಅವರಿಗೆ 'ICBF ಮಾನವೀಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಇದರೊಂದಿಗೆ ಇನ್ನೂ 15 ಮಂದಿ ಸಾಧಕರಿಗೆ 'ICBF ಮೆಚ್ಚುಗೆ ಪ್ರಶಸ್ತಿ'ಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಲಂಕಾ ರಾಯಭಾರಿ ರೋಷನ್ ಸಿತಾರಾ ಖಾನ್, ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ರೂಹಾನಿ ಘಯಾಸಿ, ಕಾರ್ಮಿಕ ಸಚಿವಾಲಯದ ಖಾಲಿದ್ ಎ. ಅಲ್ ಫಖ್ರು ಸೇರಿದಂತೆ ಭಾರತೀಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಭಾರತೀಯ ಸಂಘಟನೆಗಳ ಅಧ್ಯಕ್ಷರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ICBF ಅಧ್ಯಕ್ಷ ಶಾನವಾಸ್ ಬಾವಾ ಅಧ್ಯಕ್ಷೀಯ ಭಾಷಣ ಮಾಡಿದರೆ, ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಜಾಫರ್ ತಯ್ಯಿಲ್ ವಂದನಾರ್ಪಣೆ ಸಲ್ಲಿಸಿದರು. ಆರ್‌ಜೆ ಅಂಶು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಹಾಗೂ ICBF ಆಡಳಿತ ಸಮಿತಿಯ ಸದಸ್ಯರ ತಂಡವು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿತು.