ಪ್ರಾಣಿ ಸಂಗ್ರಹಾಲಯಕ್ಕೆ ಸಾಕುನಾಯಿ ಕರೆತಂದ ಮಾಲಕಿ: ಮುಂದೇನಾಯ್ತು ಗೊತ್ತಾ? ನಂಬಲು ಸಾಧ್ಯವಿಲ್ಲ! Dog

ಪ್ರಾಣಿ ಸಂಗ್ರಹಾಲಯಕ್ಕೆ ಸಾಕುನಾಯಿ ಕರೆತಂದ ಮಾಲಕಿ: ಮುಂದೇನಾಯ್ತು ಗೊತ್ತಾ? ನಂಬಲು ಸಾಧ್ಯವಿಲ್ಲ! Dog
ಪ್ರಾಣಿ ಸಂಗ್ರಹಾಲಯಕ್ಕೆ ಸಾಕುನಾಯಿ ಕರೆತಂದ ಮಾಲಕಿ: ಮುಂದೇನಾಯ್ತು ಗೊತ್ತಾ? ನಂಬಲು ಸಾಧ್ಯವಿಲ್ಲ! Dog
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಣಿಸಂಗ್ರಹಾಲಯ ಅಥವಾ ಮೃಗಾಲಯಗಳು ಇಡೀ ಕುಟುಂಬಕ್ಕೆ ಒಂದು ಮೋಜಿನ ಅನುಭವವನ್ನು ನೀಡುತ್ತವೆ
  • ಆದರೆ, ಮೃಗಾಲಯಕ್ಕೆ ಭೇಟಿ ನೀಡುವಾಗ ಸಾಕುಪ್ರಾಣಿಗಳನ್ನು ಮನೆಯಲ್ಲಿಯೇ ಬಿಟ್ಟು ಬರುವುದು ಉತ್ತಮ
  • ಜೆಸೆನ್ನಾ ವಿಯ್ಲಾ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ವೈರಲ್​ ಆಗಿದೆ
Dog : ಪ್ರಾಣಿಸಂಗ್ರಹಾಲಯ ಅಥವಾ ಮೃಗಾಲಯಗಳು ಇಡೀ ಕುಟುಂಬಕ್ಕೆ ಒಂದು ಮೋಜಿನ ಅನುಭವವನ್ನು ನೀಡುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅಲ್ಲಿಗೆ ಭೇಟಿ ನೀಡುವಾಗ ಸಾಕುಪ್ರಾಣಿಗಳನ್ನು ಮನೆಯಲ್ಲಿಯೇ ಬಿಟ್ಟು ಬರುವುದು ಉತ್ತಮ ಎಂಬದನ್ನು ಜೆಸೆನ್ನಾ ವಿಯ್ಲಾ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋವೊಂದು ಸಾಬೀತುಪಡಿಸಿದೆ.
ಜೆಸೆನ್ನಾ ಎಂಬಾಕೆ ತನ್ನ ಪುಟ್ಟ ನಾಯಿ 'ಲೀಕಾ'ಳನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ದಾಗ, ಅಲ್ಲಿನ ಆವರಣವೊಂದರ ಮುಂದೆ ನಾಯಿ ಕುಳಿತಿದ್ದ ಸಂದರ್ಭದಲ್ಲಿ ನಡೆದ ಅಚ್ಚರಿಯ ಘಟನೆಯನ್ನು ಜೆಸೆನ್ನಾ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸಾಕುಪ್ರಾಣಿಗಳನ್ನು ಇಂತಹ ಸ್ಥಳಗಳಿಗೆ ಕರೆತಂದಾಗ ವನ್ಯಮೃಗಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಮತ್ತು ಎಚ್ಚರಿಕೆಯ ಸಂದೇಶವನ್ನು ಈ ವಿಡಿಯೋ ಸಾರುತ್ತದೆ. 
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಹಿಮ ಚಿರತೆಯೊಂದು ತನ್ನ ಆವರಣದ ಒಳಗಿನಿಂದ ಗಾಜಿನ ಗೋಡೆಯ ಹತ್ತಿರ ಓಡಿ ಬರುವುದನ್ನು ಕಾಣಬಹುದು. ಗಾಜಿನ ಆಚೆಗಿದ್ದ ಲಿಕಾ ಎಂಬ ಪುಟ್ಟ ನಾಯಿಯನ್ನು ನೋಡಿ ಅದು ಗಾಜನ್ನು ಪರಚುತ್ತಾ, ಘರ್ಜಿಸುತ್ತಾ ಲಿಕಾಳನ್ನು ತಲುಪಲು ಪ್ರಯತ್ನಿಸುತ್ತಿತ್ತು. ಚಿರತೆಯ ಈ ವರ್ತನೆಯು ನಾಯಿಯೊಂದಿಗೆ ಆಟವಾಡಲು ಇತ್ತೇ ಅಥವಾ ಅದರ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕೂಡಿತ್ತೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ನೋಡುಗರಲ್ಲಿ ಕುತೂಹಲ ಹಾಗೂ ಭಯ ಮೂಡಿಸುವಂತಿತ್ತು.
ಆದರೆ, ತನ್ನ ಎದುರಿಗಿದ್ದ ಬೃಹತ್ ಚಿರತೆಯನ್ನು ಕಂಡು ಲಿಕಾ ಮಾತ್ರ ಕಿಂಚಿತ್ತೂ ಎದೆಗುಂದಲಿಲ್ಲ. ಚಿರತೆಯ ಆಕ್ರಮಣಕಾರಿ ನಡವಳಿಕೆಗೆ ಲಿಕಾ ಭಯಪಡುವ ಬದಲು, ತನ್ನ ಪಕ್ಕಕ್ಕೆ ಬಂದಿದ್ದಕ್ಕೆ ಸಿಟ್ಟಿನಿಂದ ಅದರತ್ತ ತಿರುಗಿ ಗುರುಗುಟ್ಟಿದ್ದಾಳೆ. ಈ ದೃಶ್ಯವನ್ನು ಹಂಚಿಕೊಂಡಿರುವ ಅದರ ಮಾಲೀಕಿ ಜೆಸೆನ್ನಾ, "ಲಿಕಾ ಪ್ರಪಂಚದ ಸಣ್ಣಪುಟ್ಟ ವಿಷಯಗಳಿಗೂ ಹೆದರುತ್ತಾಳೆ, ಆದರೆ ಈ ದೈತ್ಯ ಚಿರತೆಯ ಎದುರು ಮಾತ್ರ ಅವಳು ಅಚಲವಾಗಿದ್ದಾಳೆ. ತನ್ನ ಶಾಂತ ಸಮಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವಳು ಚಿರತೆಗೇ ಎಚ್ಚರಿಕೆ ನೀಡುತ್ತಿದ್ದಾಳೆ," ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಜೆಸೆನ್ನಾ ಅವರು ಮತ್ತೊಂದು ಆಯಾಮದ ಎರಡನೇ ವಿಡಿಯೋವನ್ನು ಸಹ ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಹಿಮ ಚಿರತೆ ಗಾಜಿನ ಮೂಲಕ ಲೈಕಾಳನ್ನು ತಲುಪಲು ಪ್ರಯತ್ನಿಸುವ ಸಲುವಾಗಿ ತನ್ನ ಆವರಣದಲ್ಲಿರುವ ಬಂಡೆಗಳ ಮೇಲೆ ಜಿಗಿದು ಬರುವುದನ್ನು ತೋರಿಸಲಾಗಿದೆ. ಎರಡನೇ ವಿಡಿಯೋಗೆ ದಾಳಿ 100 ಆದರೆ, ಹಾನಿ ಶೂನ್ಯ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಮಾಲಕಿ ಜೆಸೆನ್ನಾ ತಮಾಷೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರೂ ಈ ವಿಡಿಯೋಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 
ನಾಯಿಗೆ ಹೊರಗಿನ ಸಣ್ಣಪುಟ್ಟ ವಸ್ತುಗಳಿಗೂ ಭಯವಿದ್ದರೂ, ಪ್ರಾಣಿ ಸಂಗ್ರಹಾಲಯದ ಕಾಡುಪ್ರಾಣಿಯ ಮುಂದೆ ಅದನ್ನು ಈ ರೀತಿ ಬಿಟ್ಟಿರುವುದು ಎರಡೂ ಜೀವಿಗಳಿಗೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ ಎಂಬುದು ಅನೇಕ ನೆಟ್ಟಿಗರ ಅಭಿಪ್ರಾಯವಾಗಿದೆ. ಕೇವಲ ಮನರಂಜನೆಗಾಗಿ ಪ್ರಾಣಿಗಳ ಸುರಕ್ಷತೆಯನ್ನು ನಿರ್ಲಕ್ಷಿಸಿ, ಚಿರತೆಯನ್ನು ಕೆರಳಿಸುವಂತೆ ನಾಯಿಯನ್ನು ಗಾಜಿನ ಬಳಿ ಬಿಟ್ಟಿದ್ದು ತಪ್ಪು ಎಂದು ಕಾಮೆಂಟ್‌ಗಳಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಯಿಯನ್ನು ಮೃಗಾಲಯಕ್ಕೆ ಕರೆದೊಯ್ಯಬಹುದೇ?

ಯುನೈಟೆಡ್ ಕಿಂಗ್‌ಡಮ್‌ನ ಪ್ರಾಣಿಸಂಗ್ರಹಾಲಯಗಳಿಗೆ ನಾಯಿಗಳನ್ನು ಕರೆದೊಯ್ಯುವುದು ಭೇಟಿ ನೀಡುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಎಡಿನ್‌ಬರ್ಗ್, ಚೆಸ್ಟರ್ ಮತ್ತು ಲಂಡನ್‌ನಂತಹ ಪ್ರಮುಖ ಪ್ರಾಣಿಸಂಗ್ರಹಾಲಯಗಳಲ್ಲಿ ಕೇವಲ ತರಬೇತಿ ಪಡೆದ ನಾಯಿಗಳಿಗೆ ಮಾತ್ರ ಅವಕಾಶವಿದ್ದು, ಸಾಮಾನ್ಯ ಸಾಕು ನಾಯಿಗಳನ್ನು ನಿಷೇಧಿಸಲಾಗಿದೆ. ಲಂಡನ್ ಪ್ರಾಣಿಸಂಗ್ರಹಾಲಯದ ಮಾರ್ಗಸೂಚಿಗಳ ಪ್ರಕಾರ, ಇತರ ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಪಾಲಿಸಲಾಗುತ್ತದೆ. ಆದಾಗ್ಯೂ, ಆಕ್ಸ್‌ಫರ್ಡ್‌ಶೈರ್‌ನ ಕೋಟ್ಸ್‌ವೋಲ್ಡ್ ವೈಲ್ಡ್‌ಲೈಫ್ ಪಾರ್ಕ್, ಲಂಡನ್‌ನ ಗೋಲ್ಡರ್ಸ್ ಹಿಲ್ ಪಾರ್ಕ್ ಮತ್ತು ಸಫೊಲ್ಕ್‌ನ ಜಿಮ್ಮಿಸ್ ಫಾರ್ಮ್‌ನಂತಹ ಕೆಲವು ಸ್ಥಳಗಳಲ್ಲಿ ನಾಯಿಗಳನ್ನು ಕರೆದೊಯ್ಯಲು ಅವಕಾಶವಿದ್ದು, ಅಲ್ಲಿ ಅವುಗಳನ್ನು ಕಡ್ಡಾಯವಾಗಿ ಹಗ್ಗ ಅಥವಾ ಸರಪಳಿಯಿಂದ ಕಟ್ಟಿಹಾಕಿರಬೇಕು. ಭಾರತದಲ್ಲಿ ಮಾತ್ರ ಮೃಗಾಲಯಗಳಿಗೆ ಯಾವುದೇ ಸಾಕು ಪ್ರಾಣಿಗಳನ್ನು ಕರೆದದೊಯ್ಯುವಂತಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net