_1774635671645.webp?w=480&auto=format%2Ccompress&fit=max)
_1774635671645.webp?w=480&auto=format%2Ccompress&fit=max)
ಜೆನ್-ಝಿಗಳ ನೆಚ್ಚಿನ ಹೀರೋ, ರಾಪ್ ಗಾಯಕ 35 ವರ್ಷದ ಬಾಲೇಂದ್ರ ಶಾ ನೇಪಾಳದ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ, ದೇಶದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ನೇಪಾಳದಲ್ಲಿ ರಾಜಪ್ರಭುತ್ವದಿಂದ ಅಧಿಕಾರ ಕಸಿದುಕೊಂಡ ಮೇಲೆ ರಾಜಕೀಯ ಸ್ಥಿರತೆ ಎಂಬುದು ಮರೀಚಿಕೆಯಾಗಿದೆ. ಯಾವುದೇ ಸರ್ಕಾರ ಬಂದರೂ ಜನರ ಸಮಸ್ಯೆ ಪರಿಹರಿಸಲು ಕೆಲಸ ಮಾಡುವುದನ್ನು ಬಿಟ್ಟು, ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲೇ ನಿರತವಾಗಿರುತ್ತಿತ್ತು. ಅಲ್ಲದೆ, ದೇಶದ ಎಲ್ಲ ರಂಗಗಳಲ್ಲೂ ಭ್ರಷ್ಟಾಚಾರ ಮೀತಿಮೀರಿದ್ದು, ಜೆನ್ ಝಿ ಪೀಳಿಗೆಯ ತರುಣರು ಮತ್ತು ಯುವಕರು ಕಳೆದ ವರ್ಷ ನಡೆಸಿದ ಭಾರಿ ಪ್ರತಿಭಟನೆಗೆ ಕೆ.ಪಿ.ಶರ್ವ ಓಲಿ ಸರ್ಕಾರವೇ ಪತನಗೊಂಡಿತು. ಹೊಸ ಪ್ರಧಾನಿಯ ಮುಂದೆ ಹಲವು ಜ್ವಲಂತ ಸವಾಲುಗಳು ಇದ್ದು, ನೇಪಾಳದ ಮುಂದಿನ ದಾರಿ ಹೇಗಿರಲಿದೆ? ಈ ಕುರಿತಾದ ಅವಲೋಕನ ಇಲ್ಲಿದೆ.
ಗಾಯಕನಿಂದ ಪ್ರಧಾನಿ ಹುದ್ದೆಯವರೆಗೆ...
ಬಾಲೇಂದ್ರ ಶಾ! ರ್ಯಾಪ್ ಹಾಡುಗಳ ಮೂಲಕವೇ ಯುವಕರಲ್ಲಿ ಸಂಚಲನ ಮೂಡಿಸಿದವರು. ಯುವಸಮೂಹದಲ್ಲಿ ಬಾಲೆನ್ ಎಂದೇ ಚಿರಪರಿಚತರು. 35 ವರ್ಷದ ಯುವಕನೊಬ್ಬ ನೇಪಾಳದ ಪ್ರಧಾನಿ ಹುದ್ದೆಯನ್ನು ಏರಿದ್ದು ಇದೇ ಮೊದಲ ಬಾರಿಗೆ. ಹಾಗಾಗಿಯೇ, ದೇಶದ ತರುಣರು ಮತ್ತು ಯುವಸಮೂಹದ ಕಣ್ಣುಗಳು ಖುಷಿ ಮತ್ತು ಅಚ್ಚರಿಯಿಂದ ಅರಳಿವೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸಬಹುದು ಎಂಬ ನಿರೀಕ್ಷೆ ಬಲವಾಗಿದೆ. ಮುಖ್ಯವಾಗಿ, ರಾಜಕೀಯ ಅಸ್ಥಿರತೆ ಕೊನೆಗೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ನೇಪಾಳದ ಪ್ರಧಾನಿ ಹುದ್ದೆಗೇರಿದ ಮೊದಲ ಮಧೇಸಿ ಸಮುದಾಯದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರದ್ದು.
ಹಿನ್ನೆಲೆ: ಶಾ ಕಾಠ್ಮಂಡುವಿನ ನರದೇವಿಯಲ್ಲಿ 1990ರ ಏಪ್ರಿಲ್ 27ರಂದು ಜನಿಸಿದರು. ಇವರ ಕುಟುಂಬ ಮೂಲತಃ ನೇಪಾಳದ ಮಧೇಶ್ ಪ್ರಾಂತ್ಯದ ಮಹೋತ್ತರಿ ಜಿಲ್ಲೆಯ ಏಕದರಾಕ್ಕೆ ಸೇರಿದ್ದರೂ, ಇವರು ಬೆಳೆದದ್ದೆಲ್ಲ ಕಾಠ್ಮಂಡುವಿನಲ್ಲಿ. ಕಾಠ್ಮಂಡುವಿನ ಅಲಯನ್ಸ್ ಅಕಾಡೆಮಿ ಮತ್ತು ವಿ.ಎಸ್. ನಿಕೇತನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡಿದರು. ಕಾಠ್ಮಂಡುವಿನ ಹಿಮಾಲಯನ್ ವೈಟ್ಹೌಸ್ ಇಂಟರ್ನ್ಯಾಷನಲ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. ಕರ್ನಾಟಕದ ಬೆಂಗಳೂರಿನಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ, ಪ್ರತಿಭಾವಂತ ಇಂಜಿನಿಯರ್ ಕೂಡ ಹೌದು. ಪ್ರಸ್ತುತ ಇವರು ಕಾಠ್ಮಂಡು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಸಂಶೋ ಧನೆಯಲ್ಲಿ ತೊಡಗಿ ದ್ದಾರೆ.
ಭ್ರಷ್ಟಾಚಾರವಿರೋಧಿ ಹಾಡುಗಳು: ರಾಜ ಕೀಯಕ್ಕೆ ಬರುವ ಮುನ್ನವೇ ‘ಬಾಲೆನ್’ ಹೆಸರಿನಿಂದ ನೇಪಾಳ ದಲ್ಲಿ ಜನಪ್ರಿಯ ರ್ಯಾಪರ್ ಆಗಿದ್ದರು. 2012ರಲ್ಲಿ ಇವರ ಮೊದಲ ಹಾಡು ‘ಸಡಕ್ ಬಾಲಕ್’ ಬಿಡುಗಡೆಯಾಯಿತು. ನೇಪಾಳದ ಜನಪ್ರಿಯ ರ್ಯಾಪ್ ಬ್ಯಾಟಲ್ ಶೋ ಆದ ‘ಚಡಿ ಆಚ್ಟ್ಢ ಮೂಲಕ ಯುವಜನರಲ್ಲಿ ಜನಪ್ರಿಯತೆ ಗಳಿಸಿದರು. ಶಾ ಹಾಡುಗಳು ಸಮಾಜದ ಭ್ರಷ್ಟಾಚಾರ, ನಿರುದ್ಯೋಗ ಮತ್ತು ರಾಜಕೀಯ ವ್ಯವಸ್ಥೆಯ ವಿಫಲತೆಗಳ ವಿರುದ್ಧ ಧ್ವನಿ ಎತ್ತಿದವು. ತಾವೇ ಹಾಡು ಬರೆದು, ಅವುಗಳಿಗೆ ಸಂಗೀತ ಸಂಯೋಜಿಸಿ, ತಾವೇ ಹಾಡುವ ಅಭ್ಯಾಸದಿಂದಾಗಿ ಜೀವನ ಬದಲಾಯಿಸಿಕೊಂಡರು. 2013ರಲ್ಲಿ ‘ಟ್ಯೂಬ್ ರ್ಯಾಪ್’ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಸರು ಮಾಡಿದರು. ಇವರ ‘ಸಡಕ್ ಬಾಲಕ್’ ಮತ್ತು ‘ಬಲಿದಾನ’ ಸೇರಿ ಮುಂತಾದ ಹಾಡುಗಳು ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದಿವೆ.
ಪ್ರಮುಖ ಸವಾಲುಗಳು
ಬಾಲೆನ್ ಶಾ ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ನೇಪಾಳದ ಯುವಪೀಳಿಗೆಯ ಆಶೋತ್ತರಗಳ ಪ್ರತಿಬಿಂಬವಾಗಿದ್ದಾರೆ. ಇವರ ಆಡಳಿತ ಶೈಲಿಯೂ ಭಿನ್ನ. ಕಾಠ್ಮಂಡು ಮೇಯರ್ ಆಗಿದ್ದಾಗ ಇವರು ಜಾರಿಗೆ ತಂದ ಕಟ್ಟುನಿಟ್ಟಿನ ಕ್ರಮಗಳನ್ನು ಈಗ ಇಡೀ ದೇಶಕ್ಕೆ ಅನ್ವಯಿಸಲು ಮುಂದಾಗಿದ್ದಾರೆ.
ಅತಿಕ್ರಮಣ ತೆರವು: ನಗರದ ಸೌಂದಯೀಕರಣ ಕ್ಕಾಗಿ ಅಕ್ರಮ ಕಟ್ಟಡಗಳನ್ನು ಮತ್ತು ಫುಟ್ಪಾತ್ ಅತಿಕ್ರಮಣಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದ ಇವರ ಧೈರ್ಯಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ.
ತ್ಯಾಜ್ಯ ನಿರ್ವಹಣೆ: ಕಾಠ್ಮಂಡುವಿನ ದಶಕಗಳ ಕಾಲದ ಕಸದ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಲು ಶಾ ಕೈಗೊಂಡ ಕ್ರಮಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಲಿವೆ.
ತಂತ್ರಜ್ಞಾನದ ಬಳಕೆ: ಆಡಳಿತದಲ್ಲಿ ಪಾರದರ್ಶಕತೆ ತರಲು ಸಾರ್ವಜನಿಕ ಕೆಲಸಗಳ ನೇರ ಪ್ರಸಾರ ಮಾಡುವ ಪದ್ಧತಿಯನ್ನು ದೇಶಾದ್ಯಂತ ಜಾರಿಗೆ ತರುವ ಭರವಸೆ ನೀಡಿದ್ದಾರೆ.
ಕುಟುಂಬ
ತಂದೆ ರಾಮ್ ನಾರಾಯಣ್ ಶಾ ಆಯುರ್ವೆದ ವೈದ್ಯರಾಗಿದ್ದರು, 2025ರ ಡಿಸೆಂಬರ್ನಲ್ಲಿ ನಿಧನರಾದರು. ತಾಯಿ ಧ್ರುವದೇವಿ ಶಾ ಗೃಹಿಣಿ. ಪತ್ನಿ ಸಬೀನಾ ಕಾಫ್ಲೆ ವೃತ್ತಿಯಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕರ್ತೆ. ಈ ದಂಪತಿಗೆ ಪುಟ್ಟ ಮಗಳಿದ್ದಾಳೆ.
ರಾಜಕೀಯ ಪಯಣ
2022ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಠ್ಮಂಡುವಿನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. 2026ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನೇ ಸೋಲಿಸಿದರು.
ರಾಜಕೀಯ ಸಿದ್ಧಾಂತ
ಶಾ ಯಾವುದೇ ಹಳೆಯ ಪಾರ್ಟಿಗಳ ಸಿದ್ಧಾಂತಕ್ಕೆ ಅಂಟಿಕೊಳ್ಳದೆ ಡೆಲಿವರಿ ಓರಿಯೆಂಟೆಡ್ ಪಾಲಿಟಿಕ್ಸ್ನ್ನು (ಕೆಲಸ ಮಾಡುವ ರಾಜಕೀಯ) ನಂಬುತ್ತಾರೆ. ಇವರ ಪಕ್ಷ (ರಾಷ್ಟ್ರೀಯ ಸ್ವತಂತ್ರ ಪಾರ್ಟಿ) ಮುಖ್ಯವಾಗಿ ಭ್ರಷ್ಟಾಚಾರಮುಕ್ತ ಆಡಳಿತ ಮತ್ತು ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದನ್ನು ಗುರಿಯಾಗಿರಿಸಿಕೊಂಡಿದೆ.
ಭಾರತದೊಂದಿಗೆ ಸಂಬಂಧ
ಬಾಲೇಂದ್ರ ಶಾ ಭಾರತದಲ್ಲಿ (ಕರ್ನಾಟಕದಲ್ಲಿ) ಉನ್ನತ ಶಿಕ್ಷಣ ಪಡೆದಿರುವುದರಿಂದ, ಭಾರತದ ಬಗ್ಗೆ ಅವರಿಗೆ ಗೌರವವಿದೆ. ಕಾಠ್ಮಂಡುವಿನ ಪಶುಪತಿನಾಥ ಮತ್ತು ಕಾಶಿ ವಿಶ್ವನಾಥನ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸಲು ಆಸಕ್ತಿ ಹೊಂದಿದ್ದಾರೆ. ಭಾರತದ ಸ್ಟಾರ್ಟಪ್ ಸಂಸ್ಕೃತಿಯನ್ನು ನೇಪಾಳದಲ್ಲೂ ತರಲು ಮತ್ತು ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಒತ್ತು ನೀಡು ತ್ತಿದ್ದಾರೆ. ಆದರೆ, ಈ ಹಿಂದಿನ ಪ್ರಧಾನಿ ಕೆ.ಪಿ.ಶರ್ವ ಓಲಿ ಚೀನಾದ ಪರ ವಾಲಿ ಭಾರತವಿರೋಧಿ ನಿಲುವನ್ನು ತಳೆದಿದ್ದರು. ಬಾಲೇಂದ್ರ ಶಾ ವಿದೇಶಾಂಗ ನೀತಿ ಮತ್ತು ಭಾರತದೊಂದಿಗಿನ ಸಂಬಂಧವನ್ನು ಹೇಗೆ ಮುಂದುವರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಬಾಲೇಂದ್ರ ಶಾ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನೊಂದಿಗೆ ನಿಕಟ ನಂಟನ್ನು ಹೊಂದಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿಷಯದಲ್ಲಿ ಎಂ.ಟೆಕ್ ವ್ಯಾಸಂಗ ಮಾಡಿದ್ದಾರೆ (2016ರಿಂದ 2018). ಈ ಕಾಲೇಜು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿತ್ತು.
ಸಂಶೋಧನಾ ವಿಷಯ: 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ, ಇವರು ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ಗಾಗಿ ‘ಭೂಕಂಪನ ಕ್ರಿಯಾತ್ಮಕ ವಿಶ್ಲೇಷಣೆ’ (ಉಚ್ಟಠಿಜಟ್ಠಿಚkಛಿ ಈಢ್ಞಚಞಜ್ಚಿ ಅಚ್ಝಢಠಜಿಠ) ವಿಷಯವನ್ನು ಆರಿಸಿಕೊಂಡಿದ್ದರು. ಬೆಂಗಳೂರಿನಲ್ಲಿದ್ದಾಗಲೂ ಬಾಲೆನ್ ರ್ಯಾಪ್ ಸಂಗೀತದ ಹವ್ಯಾಸವನ್ನು ಮುಂದುವರಿಸಿದ್ದರು. ಕಾಲೇಜಿನ ಸಹಪಾಠಿಗಳೊಂದಿಗೆ ಸ್ನೇಹಪರರಾಗಿದ್ದ ಇವರು, ಬಿಡುವಿನ ವೇಳೆಯಲ್ಲಿ ನೇಪಾಳಿ ರ್ಯಾಪ್ ಹಾಡುಗಳನ್ನು ಬರೆಯುತ್ತಿದ್ದರು.
ಬೆಂಗಳೂರು ಜೀವನದ ಪ್ರಭಾವ: ಬೆಂಗಳೂರಿನಂತಹ ಬೃಹತ್ ನಗರದ ಮೂಲಸೌಕರ್ಯ, ಸಂಚಾರಸಿಕ್ಕು ನಿರ್ವಹಣೆ ಮತ್ತು ತಂತ್ರಜ್ಞಾನದ ಬಳಕೆಯನ್ನು ಬಾಲೆನ್ ಹತ್ತಿರದಿಂದ ಗಮನಿಸಿದ್ದರು. ಕಾಠ್ಮಂಡುವಿನ ಮೇಯರ್ ಆಗಿ ಅವರು ಕೈಗೊಂಡ ಅನೇಕ ಸುಧಾರಣೆಗಳಲ್ಲಿ (ಉದಾಹರಣೆಗೆ ಡಿಜಿಟಲ್ ಆಡಳಿತ ಮತ್ತು ನಗರ ಸೌಂದಯೀಕರಣ) ಬೆಂಗಳೂರಿನ ಪ್ರಭಾವವೂ ಇದೆ ಎಂದು ಹೇಳಲಾಗುತ್ತದೆ.
ನಿಜವಾದ ಮಾತು!: ಬಾಲೆನ್ ಎಂ.ಟೆಕ್ ಓದುತ್ತಿದ್ದಾಗಲೇ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿದ್ದರು- ‘ನಾನು ಈಗ ಮತ ಹಾಕುತ್ತಿಲ್ಲ, ಏಕೆಂದರೆ, ನಾನು ಈಗ ದೇಶವನ್ನು ಕಟ್ಟುವ ಬಗ್ಗೆ ಕಲಿಯುತ್ತಿದ್ದೇನೆ (ಇಂಜಿನಿಯರಿಂಗ್ ಮೂಲಕ). ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆ’. ಅವರ ಆ ಮಾತು ನಿಜವಾಗಿದೆ. ಅಭ್ಯರ್ಥಿ ಮಾತ್ರವಲ್ಲ, ಚುನಾವಣೆಯಲ್ಲಿ ಗೆದ್ದು, ಪ್ರಧಾನಿಯೂ ಆಗಿದ್ದಾರೆ.
ಕಾಠ್ಮಂಡು: ಭ್ರಷ್ಟಾಚಾರದ ವಿರುದ್ಧ ನೇಪಾಳದ ಯುವಕರು 2025ರಲ್ಲಿ ನಡೆಸಿದ ಹೋರಾಟದ ಮುಖ್ಯ ಚಹರೆಯಾಗಿದ್ದ ಬಾಲೇಂದ್ರ ಶಾ (ಬಾಲೆನ್) ಶುಕ್ರವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾವಿಧಿಯಲ್ಲಿ, ‘ಬಾಲೇಂದ್ರ ಶಾ ಎಂಬ ಹೆಸರಿನವನಾದ ನಾನು, ದೇಶ ಮತ್ತು ಜನರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಸಂವಿಧಾನಕ್ಕೆ ನಿಷ್ಠನಾಗಿ ಇರುತ್ತೇನೆ ಮತ್ತು ಪ್ರಧಾನ ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಪೂರೈಸುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸುತ್ತೇನೆ’ ಎಂದು ಹೇಳುವ ಮೂಲಕ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿಂದೂ ಪುರೋಹಿತರು ಮತ್ತು ಬೌದ್ಧ ಸಂನ್ಯಾಸಿಗಳ ಆಶೀರ್ವಾದ ಪಡೆದ ರು. ಶಾ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೂ ಅವರು ತಮ್ಮ ನೆಚ್ಚಿನ ಕಪ್ಪು ಕನ್ನಡಕ ಧರಿಸುವುದನ್ನು ಬಿಟ್ಟಿಲ್ಲ, ಇದು ಅವರ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಟ್ಟಿದೆ.