ದೊಡ್ಡ ಮನೆ ಬೇಡ, ನೆಮ್ಮದಿ ಸಾಕು: ಬಾಡಿಗೆ ಮನೆಯಿಂದ ಹೋಟೆಲ್‌ಗೆ ಶಿಫ್ಟ್ ಆಗಿ 11 ಲಕ್ಷ ಉಳಿಸಿದ ದಂಪತಿ! | HotelLife

HotelLife
HotelLife
Published on
ಪೆನ್ಸಕೋಲಾ (ಅಮೆರಿಕ): ಆಕಾಶಕ್ಕೇರುತ್ತಿರುವ ಮನೆ ಬಾಡಿಗೆ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆಯಿಂದಾಗಿ ಸಾಮಾನ್ಯ ಜನರು ಕಂಗಾಲಾಗುತ್ತಿದ್ದಾರೆ. ಆದರೆ ಅಮೆರಿಕದ ಫ್ಲೋರಿಡಾದ ದಂಪತಿಗಳಾದ ಮರಂಡಾ ಬೋವರ್ಸ್ ಮತ್ತು ಜಾನ್ ಬೋವರ್ಸ್ ಈ ಸಮಸ್ಯೆಗೆ ಒಂದು ವಿನೂತನ ಮತ್ತು ಧೈರ್ಯದ ಪರಿಹಾರ ಕಂಡುಕೊಂಡಿದ್ದಾರೆ. ದೊಡ್ಡ ಮನೆಯನ್ನು ಬಿಟ್ಟು ಹೋಟೆಲ್(HotelLife)ರೂಮಿಗೆ ಶಿಫ್ಟ್ ಆಗಿರುವ ಇವರು, ಈಗ ವರ್ಷಕ್ಕೆ ಬರೋಬ್ಬರಿ 11 ಲಕ್ಷ ರೂಪಾಯಿ (12,000 ಡಾಲರ್) ಹಣವನ್ನು ಉಳಿಸುತ್ತಿದ್ದಾರೆ!

ಜೀವನವನ್ನೇ ಬದಲಿಸಿದ ಆ ಒಂದು ಅಪಘಾತ

ಈ ದಂಪತಿಗಳ ಜೀವನ ಈ ಮೊದಲು ಸುಗಮವಾಗಿತ್ತು. ಅವರು ಪೆನ್ಸಕೋಲಾದಲ್ಲಿ ಮೂರು ಬೆಡ್‌ರೂಮ್‌ಗಳ ದೊಡ್ಡ ಮನೆಯಲ್ಲಿ ವಾಸವಾಗಿದ್ದರು. ಆದರೆ 2023 ರಲ್ಲಿ ಜಾನ್ ಅವರಿಗೆ ಕೆಲಸದ ಸ್ಥಳದಲ್ಲಿ ಭೀಕರ ಅಪಘಾತ ಸಂಭವಿಸಿತು. ಸ್ಟೀಲ್ ಬೀಮ್ ಅವರ ಬಲಗೈ ಮೇಲೆ ಬಿದ್ದ ಪರಿಣಾಮ ಅವರಿಗೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ಆದಾಯ ಕುಸಿದಾಗ ಅತಿ ಹೆಚ್ಚು ಹೊರೆಯಾಗಿದ್ದು ಮನೆಯ ಬಾಡಿಗೆ.

ಬಾಡಿಗೆ ಮನೆ vs ಹೋಟೆಲ್ ವಾಸ

ಹಿಂದೆ ಈ ದಂಪತಿಗಳು ಪ್ರತಿ ತಿಂಗಳು ಕೇವಲ ಬಾಡಿಗೆಗಾಗಿಯೇ 2,300 ಡಾಲರ್ (ಸುಮಾರು 2 ಲಕ್ಷ ರೂಪಾಯಿ) ಖರ್ಚು ಮಾಡುತ್ತಿದ್ದರು. ಇದರ ಜೊತೆಗೆ ವಿದ್ಯುತ್, ನೀರು ಮತ್ತು ಇತರೆ ಬಿಲ್‌ಗಳ ಹೊರೆ ಪ್ರತ್ಯೇಕವಾಗಿತ್ತು.

ಈಗಿನ ಬದಲಾವಣೆ

ಈಗ ಅವರು ವಾರಕ್ಕೆ ಕೇವಲ 307 ಡಾಲರ್ (ಸುಮಾರು 28,000 ರೂಪಾಯಿ) ಪಾವತಿಸಿ ಹೋಟೆಲ್ ರೂಮಿನಲ್ಲಿ ವಾಸಿಸುತ್ತಿದ್ದಾರೆ. ಈ ಮೊತ್ತದಲ್ಲಿ ವಿದ್ಯುತ್, ನೀರು, ಇಂಟರ್ನೆಟ್, ಪಾರ್ಕಿಂಗ್ ಮತ್ತು ಕಸ ವಿಲೇವಾರಿ ವೆಚ್ಚಗಳೂ ಸೇರಿವೆ.ಯಾವುದೇ ಸೆಕ್ಯೂರಿಟಿ ಡಿಪಾಸಿಟ್ ಅಥವಾ ಮುಂಗಡ ಹಣ ನೀಡುವ ಕಿರಿಕಿರಿ ಇಲ್ಲಿಲ್ಲ. ಮರಂಡಾ ತಮ್ಮ ಕ್ಲೀನಿಂಗ್ ಬಿಸಿನೆಸ್ ಮೂಲಕ ಈಗ ಮನೆಯ ಜವಾಬ್ದಾರಿ ಹೊತ್ತಿದ್ದು, ಪ್ರತಿ ತಿಂಗಳು 1,000 ಡಾಲರ್ ಉಳಿಸುತ್ತಿದ್ದಾರೆ.

ಹೋಟೆಲ್ ರೂಮಿನಲ್ಲೇ ಸುಸಜ್ಜಿತ ಜೀವನ

ಹೋಟೆಲ್ ರೂಮು ಚಿಕ್ಕದಾಗಿದ್ದರೂ, ಅಲ್ಲಿ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳಿವೆ. ಸಣ್ಣ ಕಿಚನ್, ಎರಡು ಸ್ಟೌವ್ ಬರ್ನರ್ ಮತ್ತು ರೆಫ್ರಿಜರೇಟರ್ ವ್ಯವಸ್ಥೆ ಇರುವುದರಿಂದ ಇವರು ಹೊರಗಿನ ಊಟದ ಮೇಲೆ ಅವಲಂಬಿತವಾಗಿಲ್ಲ.
"ನಾವು ಸರಳವಾಗಿ ಬದುಕಲು ಬಯಸುತ್ತೇವೆ. ದೊಡ್ಡ ಮನೆಗೆ ಹಣ ಸುರಿಯುವ ಬದಲು, ಆ ಹಣದಿಂದ ಪ್ರವಾಸ ಹೋಗುವುದು ಮತ್ತು ಜೀವನವನ್ನು ಆನಂದಿಸುವುದು ನಮಗೆ ಇಷ್ಟ," ಎನ್ನುತ್ತಾರೆ ಮರಂಡಾ. ವಿಶೇಷವೆಂದರೆ, ಕಳೆದ ಕ್ರಿಸ್‌ಮಸ್ ಮತ್ತು ಥ್ಯಾಂಕ್ಸ್‌ಗೀವಿಂಗ್ ಹಬ್ಬದ ಸಮಯದಲ್ಲಿ ಮರಂಡಾ ಅವರು ಹೋಟೆಲ್‌ನ ಅರ್ಧದಷ್ಟು ಮಂದಿಗೆ ತಾವೇ ಅಡುಗೆ ಮಾಡಿ ಉಣಬಡಿಸಿದ್ದರು!

ಮುಂದಿನ ಗುರಿ 'ಟೈನಿ ಹೋಮ್'

ಪ್ರಸ್ತುತ ಉಳಿಸುತ್ತಿರುವ ಹಣವನ್ನು ಮರಂಡಾ ದಂಪತಿಗಳು ತಮ್ಮ ಭವಿಷ್ಯಕ್ಕಾಗಿ ಕೂಡಿಡುತ್ತಿದ್ದಾರೆ. ಸ್ವಂತ ಭೂಮಿ ಖರೀದಿಸಿ ಅಲ್ಲಿ ಒಂದು ಪುಟ್ಟ ಮನೆಯನ್ನು (Tiny Home) ನಿರ್ಮಿಸುವುದು ಇವರ ದೊಡ್ಡ ಕನಸಾಗಿದೆ. ಐಷಾರಾಮಿ ಜೀವನಕ್ಕಿಂತ ನೆಮ್ಮದಿಯ ಮತ್ತು ಸಾಲಮುಕ್ತ ಜೀವನವೇ ಲೇಸು ಎಂದು ಈ ದಂಪತಿಗಳು ಸರಳ ಜೀವನಕ್ಕರ ಮಾದರಿಯಾಗಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net