ಹೊರ್ಮುಜ್ ಜಲಸಂಧಿ ತೆರೆಯುತ್ತಾ? ಒಪ್ಪಂದದ ಬಗ್ಗೆ ಅಮೆರಿಕ ಸುಳಿವು | Hormuz

ಇರಾನ್‌ನ ಬಂದರ್ ಅಬ್ಬಾಸ್ ಬಳಿಯ ಹೊರ್ಮುಜ್ ಜಲಸಂಧಿ
ಇರಾನ್‌ನ ಬಂದರ್ ಅಬ್ಬಾಸ್ ಬಳಿಯ ಹೊರ್ಮುಜ್ ಜಲಸಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಸಾಧ್ಯತೆ
  • ಇರಾನ್ ಮತ್ತು ಒಮಾನ್ ನಡುವೆ ಒಪ್ಪಂದದ ಸುಳಿವು
  • ಬರೋಬ್ಬರಿ ಐದು ತಿಂಗಳ ಬಳಿಕ ಶುರುವಾಗಲಿದೆ ಇಂಧನ ರಫ್ತು ?
ವಾಷಿಂಗ್ಟನ್‌: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಿರುವ ನಡುವೆಯೇ, ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಹತ್ವದ ಬೆಳವಣಿಗೆ ನಡೆದಿದೆ. ಜಲಸಂಧಿಗೆ ಸಂಬಂಧಿಸಿದಂತೆ ಇರಾನ್ ಮತ್ತು ಒಮಾನ್ ನಡುವೆ ಶೀಘ್ರದಲ್ಲೇ ಒಪ್ಪಂದವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಹೊರ್ಮುಜ್ ಜಲಸಂಧಿ ಮತ್ತೆ ತೆರೆದರೆ, ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿರುವ ತೈಲ ರಫ್ತು ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವ ನಿರೀಕ್ಷೆ ಹೆಚ್ಚಿದೆ. ಅಲ್ಲದೆ, ಇಂಧನ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಹಲವು ದೇಶಗಳಿಗೂ ಇದರಿಂದ ದೊಡ್ಡ ಪರಿಹಾರ ಸಿಗಬಹುದು.

ಹೌತಿಗಳಿಂದ ಸೇನಾ ಶಿಬಿರದ ಮೇಲೆ ದಾಳಿ

ಇದೇ ವೇಳೆ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯೆಮೆನ್‌ನ ಮಾರಿಬ್ ಪ್ರದೇಶದಲ್ಲಿರುವ ಸೌದಿ ಅರೇಬಿಯಾ ಬೆಂಬಲಿತ ಯೆಮೆನ್ ಸರ್ಕಾರದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ. ಆಗಸ್ಟ್ 7ರಂದು ನಡೆದ ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಹೌತಿಗಳು ತಿಳಿಸಿದ್ದಾರೆ. ಆದರೆ, ದಾಳಿಯಲ್ಲಿ ಒಟ್ಟು ಎಂಟು ಮಂದಿ ಬಲಿಯಾಗಿದ್ದಾರೆ ಎಂದು ಯೆಮೆನ್ ಸೇನೆ ಹೇಳಿಕೊಂಡಿದೆ.

ಇರಾಕ್ ಪ್ರಧಾನಿ ರಿಯಾದ್‌ಗೆ ಭೇಟಿ?

ಇರಾಕ್‌ನಲ್ಲಿ ನಡೆದ ಅಮೆರಿಕ ಮತ್ತು ಸೌದಿ ದಾಳಿಗಳಿಗೆ ಇರಾನ್ ಬೆಂಬಲಿತ ಗುಂಪುಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ಬೆನ್ನಲ್ಲೇ, ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಅವರಿಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ಭೇಟಿ ನೀಡುವಂತೆ ಬುಲಾವ್​ ಬಂದಿದೆ. ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಗುಂಪುಗಳೇ ತೈಲ ಸೌಲಭ್ಯಗಳ ಮೇಲೆ ಡ್ರೋನ್ ಅಟ್ಯಾಕ್​ ಮಾಡಿವೆ ಎಂದು ಸೌದಿ ಅರೇಬಿಯಾ ಆರೋಪಿಸಿತ್ತು. ಹಲವು ಡ್ರೋನ್‌ಗಳನ್ನು ತಡೆದ ಬಳಿಕ ಅಮೆರಿಕ-ಸೌದಿ ಸೇನೆ ದಾಳಿ ನಡೆಸಿದೆ ಎಂದು ರಿಯಾದ್ ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಆತಂಕ ಹೆಚ್ಚಿರುವ ಸಮಯದಲ್ಲಿ ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿರುವುದು ಮಹತ್ವ ಪಡೆದಿದೆ. ಈ ಮಾತುಕತೆ ಯಶಸ್ವಿಯಾದರೆ ಜಾಗತಿಕ ತೈಲ ಪೂರೈಕೆಯ ಮೇಲಷ್ಟೇ ಅಲ್ಲದೆ, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net