ಐತಿಹಾಸಿಕ ಅಮೆರಿಕ-ಲೆಬನಾನ್ ಒಪ್ಪಂದ: ದಕ್ಷಿಣ ಲೆಬನಾನ್‌ನ ಎರಡು ಪ್ರಮುಖ ಪ್ರದೇಶಗಳಿಂದ ಸೇನೆ ಹಿಂಪಡೆಯಲು ಇಸ್ರೇಲ್ ನಿರ್ಧಾರ! Israel-Lebanon Deal

ಐತಿಹಾಸಿಕ ಅಮೆರಿಕ-ಲೆಬನಾನ್ ಒಪ್ಪಂದ: ದಕ್ಷಿಣ ಲೆಬನಾನ್‌ನ ಎರಡು ಪ್ರಮುಖ ಪ್ರದೇಶಗಳಿಂದ ಸೇನೆ ಹಿಂಪಡೆಯಲು ಇಸ್ರೇಲ್ ನಿರ್ಧಾರ!
ಐತಿಹಾಸಿಕ ಅಮೆರಿಕ-ಲೆಬನಾನ್ ಒಪ್ಪಂದ: ದಕ್ಷಿಣ ಲೆಬನಾನ್‌ನ ಎರಡು ಪ್ರಮುಖ ಪ್ರದೇಶಗಳಿಂದ ಸೇನೆ ಹಿಂಪಡೆಯಲು ಇಸ್ರೇಲ್ ನಿರ್ಧಾರ!
Published on
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ವಾಷಿಂಗ್ಟನ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ಮಾತುಕತೆಯ ನಂತರ, ಭವಿಷ್ಯದ ಶಾಂತಿ ಒಪ್ಪಂದಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಅಮೆರಿಕ, ಇಸ್ರೇಲ್ ಮತ್ತು ಲೆಬನಾನ್(Israel-Lebanon Deal) ದೇಶಗಳು ಶುಕ್ರವಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ದಕ್ಷಿಣ ಲೆಬನಾನ್‌ನ ಎರಡು ಆಯಕಟ್ಟಿನ ಪ್ರದೇಶಗಳಿಂದ ತನ್ನ ರಕ್ಷಣಾ ಪಡೆಗಳನ್ನು (IDF) ಹಿಂಪಡೆಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಇದು ಆರಂಭದ ಆರಂಭವಷ್ಟೇ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ
ತ್ರಿಪಕ್ಷೀಯ ಒಪ್ಪಂದವನ್ನು ಅಧಿಕೃತವಾಗಿ ಪ್ರಕಟಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಇಸ್ರೇಲ್ ಮತ್ತು ಸಾರ್ವಭೌಮ ಲೆಬನಾನ್ ಸರ್ಕಾರಗಳ ನಡುವೆ ಶಾಂತಿ ಸ್ಥಾಪಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು, ಇದು ಸುದೀರ್ಘ ಶಾಂತಿಯ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ. ಅಲ್ಲದೆ, ಇದನ್ನು ನಾವು ಆರಂಭದ ಆರಂಭ ಎಂದು ಕರೆಯಬಹುದು. ಮುಂದೆ ಇನ್ನೂ ಕಠಿಣ ಮಾತುಕತೆಗಳು ಬಾಕಿ ಇವೆ. ಕೆಲಸ ಎಷ್ಟು ಕಷ್ಟ ಎಂಬುದು ನಮಗೆ ತಿಳಿದಿದೆ, ಆದರೆ ಈ ಪ್ರದೇಶದ ಶಾಂತಿಗೆ ಇದು ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೆಬನಾನ್ ರಾಯಭಾರಿ ನಾದಾ ಹಮಾದ್ ಮೊಅವಾದ್ ಮಾತನಾಡಿ, ಲೆಬನಾನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಇದು ಭರವಸೆಯ ಮೊದಲ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಇರಾನ್‌ಗೆ ಬಿದ್ದ ಭಾರಿ ಪೆಟ್ಟು: ಇಸ್ರೇಲ್ ಪ್ರಧಾನಿ ನೆತನ್ಯಾಹು ಹರ್ಷ

ಒಪ್ಪಂದಕ್ಕೆ ಸಹಿ ಬಿದ್ದ ಕೆಲವೇ ಗಂಟೆಗಳಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲಿಟಾನಿ ನದಿಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿರುವ, ಇಸ್ರೇಲ್ ಸೇನೆಗೆ ಸದ್ಯಕ್ಕೆ ಅಷ್ಟಾಗಿ ಅಗತ್ಯವಿಲ್ಲದ ಎರಡು ನಿರ್ದಿಷ್ಟ ಪ್ರದೇಶಗಳಿಂದ ಸೈನಿಕರನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಆದರೆ, ಲೆಬನಾನ್‌ನ ಸಶಸ್ತ್ರ ಉಗ್ರಗಾಮಿ ಸಂಘಟನೆ ಹೆಜ್ಬೊಲ್ಲಾ ಸಂಪೂರ್ಣವಾಗಿ ನಿಶ್ಶಸ್ತ್ರಗೊಳ್ಳುವವರೆಗೆ ದಕ್ಷಿಣ ಲೆಬನಾನ್‌ನ ಉಳಿದ ಆಯಕಟ್ಟಿನ ಪ್ರದೇಶಗಳು ಇಸ್ರೇಲ್ ನಿಯಂತ್ರಣದಲ್ಲೇ ಇರಲಿವೆ. ಬಲಪ್ರಯೋಗದ ಮೂಲಕ ಇಸ್ರೇಲ್ ಸೈನಿಕರನ್ನು ಹಿಮ್ಮೆಟ್ಟಿಸಲು ಇರಾನ್ ಸಂಚು ರೂಪಿಸಿತ್ತು. ಆದರೆ ಇಸ್ರೇಲ್, ಲೆಬನಾನ್ ಮತ್ತು ಅಮೆರಿಕ ಒಟ್ಟಾಗಿ ಇರಾನ್‌ಗೆ ಇದು ನಿಮಗೇ ಬೇಡದ ವಿಚಾರ ಎಂದು ಸ್ಪಷ್ಟ ಸಂದೇಶ ನೀಡಿವೆ. ಇದು ಇರಾನ್‌ಗೆ ಬಿದ್ದ ಭಾರಿ ರಾಜತಾಂತ್ರಿಕ ಪೆಟ್ಟು ಎಂದು ನೆತನ್ಯಾಹು ಹೇಳಿದ್ದಾರೆ.

ಏನಿದೆ ಈ ಪ್ರಾಯೋಗಿಕ ಒಪ್ಪಂದದಲ್ಲಿ?

ವರದಿಗಳ ಪ್ರಕಾರ, ಈ ಒಪ್ಪಂದದಡಿ ಎರಡು ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇಸ್ರೇಲ್ ಸೇನೆ ಹಿಂತೆಗೆದುಕೊಂಡ ಪ್ರದೇಶಗಳಿಗೆ ತಕ್ಷಣವೇ ಲೆಬನಾನ್‌ನ ಅಧಿಕೃತ ಸಶಸ್ತ್ರ ಪಡೆಗಳು ನಿಯೋಜನೆಗೊಳ್ಳಲಿವೆ.
ಆ ಪ್ರದೇಶಗಳಿಗೆ ಹೆಜ್ಬೊಲ್ಲಾ ಉಗ್ರರು ಮತ್ತೆ ನುಸುಳದಂತೆ ತಡೆಯಲು ಅಮೆರಿಕದ ಮಿಲಿಟರಿ ಅಧಿಕಾರಿಗಳು ನೇರ ಮೇಲ್ವಿಚಾರಣೆ ನಡೆಸಲಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿದ ನಂತರ ವಶಪಡಿಸಿಕೊಂಡಿದ್ದ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಮುಂದುವರಿದ ಕದನ ಮತ್ತು ಅಮೆರಿಕ-ಇರಾನ್ ಮಾತುಕತೆ

ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿದ್ದರೂ, ನೆಲದ ಮಟ್ಟದಲ್ಲಿ ದಾಳಿಗಳು ಮುಂದುವರಿದಿವೆ. ಶುಕ್ರವಾರವೂ ಇಸ್ರೇಲ್ ಪಡೆಗಳು ಏಳು ಹೆಜ್ಬೊಲ್ಲಾ ಉಗ್ರರನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿವೆ. ಮಾರ್ಚ್ 2 ರಂದು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಈ ಭೀಕರ ಸಂಘರ್ಷ ಆರಂಭವಾಗಿತ್ತು. ಈ ಯುದ್ಧದ ಕಾರಣ ಲೆಬನಾನ್‌ನಲ್ಲಿ 4,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಮತ್ತೊಂದೆಡೆ, ಒಟ್ಟಾರೆ ಸಂಘರ್ಷಕ್ಕೆ ಪೂರ್ಣವಿರಾಮ ಇಡಲು ವಾಷಿಂಗ್ಟನ್ ಮತ್ತು ಟೆಹ್ರಾನ್ (ಇರಾನ್) ನಡುವೆಯೂ ಮಾತುಕತೆ ಪ್ರಗತಿಯಲ್ಲಿದೆ. ಇರಾನ್‌ನ ಪರಮಾಣು ಯೋಜನೆ, ಆರ್ಥಿಕ ನಿರ್ಬಂಧಗಳ ಸಡಿಲಿಕೆ ಮತ್ತು ಹಾರ್ಮುಜ್ ಜಲಸಂಧಿಯ ನೌಕಾ ಭದ್ರತೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ 60 ದಿನಗಳ ಕಾಲಾವಧಿಯ ಮಾತುಕತೆಯ ಪ್ರಕ್ರಿಯೆ ಚಾಲ್ತಿಯಲ್ಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net