ಅವರ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ...ಹಾದಿ ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಲಕ್ಷಾಂತರ ಜನ | Osman Hadi

Osman Hadi | ಬಾಂಗ್ಲಾದೇಶಿ ಕಾರ್ಯಕರ್ತ ಶರೀಫ್ ಉಸ್ಮಾನ್ ಹಾದಿ
Osman Hadi | ಬಾಂಗ್ಲಾದೇಶಿ ಕಾರ್ಯಕರ್ತ ಶರೀಫ್ ಉಸ್ಮಾನ್ ಹಾದಿ
Published on
ಢಾಕಾ: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ಬಾಂಗ್ಲಾದೇಶಿ ಕಾರ್ಯಕರ್ತ ಶರೀಫ್ ಉಸ್ಮಾನ್ ಹಾದಿಗೆ ಅಂತಿಮ ವಿದಾಯ ಹೇಳಲು ಶನಿವಾರ ಲಕ್ಷಾಂತರ ಜನರು ಕೇಂದ್ರ ಢಾಕಾದಲ್ಲಿ ಸೇರಿದ್ದು, ಇದು ಚುನಾವಣೆಗೂ ಮುನ್ನ ಈಗಾಗಲೇ ಅಸ್ಥಿರವಾಗಿರುವ ರಾಜಕೀಯ ವಾತಾವರಣವನ್ನು ಮತ್ತಷ್ಟು ಕೆರಳಿಸಿದೆ ಎಂದು ಹೇಳಲಾಗುತ್ತಿದೆ.
ಬೆಳಿಗ್ಗೆಯಿಂದಲೇ ಸಾಕಷ್ಟು ಜನರ ಗುಂಪುಗಳು ಮಾಣಿಕ್ ಮಿಯಾ ಅವೆನ್ಯೂ ಕಡೆಗೆ ಆಗಮಿಸಿ, ಸಂಸತ್ತಿನ ಸಂಕೀರ್ಣದ ಹೊರಗಿನ ಪ್ರದೇಶದಲ್ಲಿ ಜಮಾವಣೆಯಾದರು. ಹಲವರು ರಾಷ್ಟ್ರಧ್ವಜವನ್ನು ಧರಿಸಿ ಓಡಾಡುತ್ತಿದ್ದರು, ಇನ್ನು ಕೆಲವರು ಹಾದಿ ಹತ್ಯೆಗೆ ನ್ಯಾಯ ಕೇಳುತ್ತಿರುವುದು ಕಂಡು ಬರುತ್ತಿತ್ತು ಎಂದು ವರದಿಯಾಗಿದೆ.
ಜಾತಿಯಾ ಸಂಸದ್ ಭವನ್‌ನ ದಕ್ಷಿಣ ಪ್ಲಾಜಾದಲ್ಲಿ ಅಂತ್ಯಕ್ರಿಯೆಗಾಗಿ ಅಧಿಕಾರಿಗಳು ಭಾರೀ ಭದ್ರತೆಯನ್ನು ಏರ್ಪಡಿಸಿದ್ದರು. ಬಾಡಿ ಕ್ಯಾಮೆರಾಗಳನ್ನು ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಢಾಕಾದಾದ್ಯಂತ ನಿಯೋಜಿಸಲಾಗಿತ್ತು, ಶೋಕಾಚರಣೆಯ ಹಿನ್ನಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಸಂಸತ್ತು ಮತ್ತು ಇತರ ಕಾರ್ಯತಂತ್ರದ ಸ್ಥಳಗಳ ಸುತ್ತಲೂ ಗಡಿ ಕಾವಲು ಪಡೆ ಮತ್ತು ಪೊಲೀಸ್ ಘಟಕಗಳಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹಾದಿಯ ಹಿರಿಯ ಸಹೋದರ ಅಬು ಬಕರ್ ಜನಾಜಾ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಇದಾದ ಬಳಿಕ ದೇಹವನ್ನು ಬಿಗಿ ಭದ್ರತೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಆವರಣಕ್ಕೆ ಕರೆದೊಯ್ಯಲಾಯಿತು, ರಾತ್ರಿಯಿಡೀ ಅಂತ್ಯಕ್ರಿಯೆಯ ಸಿದ್ಧತೆಗಳು ಪೂರ್ಣಗೊಂಡವು. ಬಾಂಗ್ಲಾದೇಶದ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿಯ ಪಕ್ಕದಲ್ಲಿ ಹಾದಿ ಅಂತ್ಯಕ್ರಿಯೆ ನೆರವೇರಿತು. ಮೊದಲೇ ಪ್ರಕಟಿಸಿದಂತೆ, ಶವವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿರಲಿಲ್ಲ, ಕೇವಲ ಆಯ್ದ ಜನರಿಗೆ ಮಾತ್ರ ಅಂತ್ಯಕ್ರಿಯೆಗೆ ಸಾಕ್ಷಿಯಾಗಲು ಅವಕಾಶವಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಾಧಿ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ, ಪೊಲೀಸರು ಹತ್ತಾರು ಸಾವಿರ ಜನರಿಗೆ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಜನಸಮೂಹದಲ್ಲಿ ಹಲವರು ದೆಹಲಿ ಅಥವಾ ಢಾಕಾ - ಢಾಕಾ, ಢಾಕಾ ಮತ್ತು ಸಹೋದರ ಹಾದಿಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿದರು.
ಇಂಕಿಲಾಬ್ ಮೊಂಚೊ ಸಾಂಸ್ಕೃತಿಕ ವೇದಿಕೆಯ ವಕ್ತಾರರಾದ ಹಾದಿ, ಕಳೆದ ವರ್ಷದ ರಾಜಕೀಯ ದಂಗೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದರು, ಇದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿತು. ಡಿಸೆಂಬರ್ 12 ರಂದು ಢಾಕಾದಲ್ಲಿ ಅವರ ಮೇಲೆ ಗುಂಡು ಹಾರಿಸಲಾಯಿತು, ಚಿಕಿತ್ಸೆಗೆಂದು ಸಿಂಗಾಪುರಕ್ಕೆ ಕಳುಹಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ನಿಧನರಾದರು. ಅವರ ದೇಹವನ್ನು ಶುಕ್ರವಾರ ತಡರಾತ್ರಿ ಬಾಂಗ್ಲಾದೇಶಕ್ಕೆ ಹಿಂತಿರುಗಿಸಲಾಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net