ಭಾರತ ವಿರೋಧಿ ಪ್ರತಿಭಟನೆ ನಡುವೆ ಬಾಂಗ್ಲಾದಲ್ಲಿ ಹಿಂದು ಯುವಕನ ಬರ್ಬರ ಹತ್ಯೆ: ಬೆಂಕಿ ಹಚ್ಚಿದ ಕಿಡಿಗೇಡಿಗಳು! Anti India Protests

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಮತ್ತೊಮ್ಮೆ ಪ್ರತಿಭಟನೆಯ ಬಿಸಿ ತಟ್ಟಿದೆ
  • ಈ ಬಾರಿ ಬಾಂಗ್ಲಾದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ
  • ಹಿಂದು ಯುವಕನ ಮೇಲೆ ಗುಂಪು ಹಲ್ಲೆ ಮಾಡಿ, ಬರ್ಬರವಾಗಿ ಹತ್ಯೆಗೈದಿದ್ದಾರೆ
ಢಾಕಾ: ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಮತ್ತೊಮ್ಮೆ ಪ್ರತಿಭಟನೆಯ ಬಿಸಿ ತಟ್ಟಿದೆ. ಈ ಬಾರಿ ಭಾರತ ವಿರೋಧಿ ಪ್ರತಿಭಟನೆಗಳು ( Anti India Protests ) ಭುಗಿಲೆದ್ದಿದ್ದು, ಇದರ ನಡುವೆ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಹಿಂದು ಯುವಕನ ಮೇಲೆ ಗುಂಪು ಹಲ್ಲೆ ಮಾಡಿ, ಬರ್ಬರವಾಗಿ ಹತ್ಯೆಗೈದಿರುವ ಅಮಾನವೀಯ ಘಟನೆ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕದಲ್ಲಿ ನಡೆದಿದೆ.
ಮೃತಪಟ್ಟ ಹಿಂದು ಯುವಕನನ್ನು ದೀಪು ಚಂದ್ರ ದಾಸ್​ (30) ಎಂದು ಗುರುತಿಸಲಾಗಿದೆ. ದೀಪುರನ್ನು ಸುತ್ತುವರಿದ ಗಲಭೆಕೋರರು ಆತನಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ಬಾಂಗ್ಲಾದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಲು ಕಾರಣವೇನೆಂದರೆ ಶರೀಫ್​ ಒಸ್ಮಾನ್​ ಹಾದಿ ಎಂಬಾತನ ಹತ್ಯೆ. ಈತ ಇಂಕ್ವಿಲಾಬ್ ಮಂಚೊ ಹೆಸರಿನ ಮೂಲಭೂತ ಸಂಘಟನೆಯ ನಾಯಕ. ಕಳೆದ ವರ್ಷ ಅಂದರೆ, 2024ರ ಜುಲೈ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಉಂಟಾದ ಭಾರಿ ದಂಗೆಯ ಬಳಿಕ ಈ ಸಂಘಟನೆ ಹುಟ್ಟಿಕೊಂಡಿತು. ಈ ಸಂಘಟನೆಯಲ್ಲಿ ಸಕ್ರಿಯ ನಾಯಕನಾಗಿದ್ದ ಹಾದಿಗೆ ಡಿಸೆಂಬರ್​ 12ರಂದು ಢಾಕಾದಲ್ಲಿ ಅಪರಿಚಿತ ದಾಳಿಕೋರನೊಬ್ಬ ಗುಂಡು ಹಾರಿಸಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಹಾದಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು.
ಯಾವಾಗ ಹಾದಿ, ಹತ್ಯೆಯಾಗಿದ್ದಾನೆ ಎಂಬ ಸುದ್ದಿ ಬಾಂಗ್ಲಾದೇಶದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತೋ ದೇಶಾದ್ಯಂತ ಪ್ರತಿಭಟನೆಗಳು ಶುರುವಾದವು. ಇದೀಗ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಒಂದು ಗುಂಪು, ಹಿಂದು ಯುವಕ ದೀಪು ಚಂದ್ರ ದಾಸ್​ಗೆ ಬೆಂಕಿ ಹಚ್ಚಿ ಹತ್ಯೆಗೈದಿದೆ. ಈ ಘಟನೆಯನ್ನು ಖಂಡಿಸಿರುವ ಮೊಹಮ್ಮದ್​ ಯೂನಸ್​ ನೇತೃತ್ವದ ಮಧ್ಯಂತರ ಸರ್ಕಾರ, ಹೊಸ ಬಾಂಗ್ಲಾದೇಶದಲ್ಲಿ ಹಿಂಸೆಗೆ ಜಾಗ ಇಲ್ಲ ಎಂದು ಕರೆದಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೋ ಅವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಯೂನಸ್​ ಸರ್ಕಾರ ಹೇಳಿದೆ.
ಈ ನಿರ್ಣಾಯಕ ಸಮಯದಲ್ಲಿ, ಹಿಂಸೆ, ಪ್ರಚೋದನೆ ಮತ್ತು ದ್ವೇಷವನ್ನು ಬದಿಗಿಟ್ಟು, ಹುತಾತ್ಮ ಹಾದಿಯನ್ನು ಗೌರವಿಸಲು ಪ್ರತಿಯೊಬ್ಬ ನಾಗರಿಕರಿಗೂ ನಾವು ಕರೆ ನೀಡುತ್ತೇವೆ ಎಂದು ಯೂನಸ್​ ಸರ್ಕಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅಂದಹಾಗೆ, ವಿಶ್ವ ಅರೇಬಿಕ್ ಭಾಷಾ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಮೃತ ದೀಪು, ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ದೀಪು ಕೆಲಸ ಮಾಡುತ್ತಿದ್ದ ಸ್ಕ್ವೇರ್ ಮಾಸ್ಟರ್‌ಬರಿ ಪ್ರದೇಶದ ಪಯೋನೀರ್ ನಿಟ್ ಕಾಂಪೋಸಿಟ್ ಫ್ಯಾಕ್ಟರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವಿಚಾರ ವೇಗವಾಗಿ ಹರಡಿ ಉದ್ವಿಗ್ನತೆ ಉಂಟಾಯಿತು. ದೀಪು ಹೇಳಿದ್ದಾರೆ ಎನ್ನಲಾದ ಹೇಳಿಕೆಯಿಂದ ಕೋಪಗೊಂಡ ಜನಸಮೂಹ ಆತನನ್ನು ಚೆನ್ನಾಗಿ ಥಳಿಸಿ, ಬೆಂಕಿ ಹಚ್ಚಿ ಕೊಂದಿದೆ.

ಹೆಚ್ಚಿದ ಭಾರತ ವಿರೋಧಿ ಪ್ರತಿಭಟನೆ

ಅಂದಹಾಗೆ, ಹತ್ಯೆಯಾದ ಶರೀಫ್​ ಒಸ್ಮಾನ್​ ಹಾದಿ ಭಾರತವನ್ನು ನೇರವಾಗಿ ಟೀಕಿಸುತ್ತಿದ್ದ. ಅಲ್ಲದೆ, ಈ ಹಿಂದಿನ ಶೇಖ್​ ಹಸೀನಾ ಸರ್ಕಾರವನ್ನೂ ಟೀಕಿಸುತ್ತಿದ್ದ. ಹಾದಿ ಮರಣದ ನಂತರ ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಆವರಿಸಿಕೊಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು, ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ಭುಗಿಲೆದ್ದಿದೆ. ಪ್ರತಿಭಟನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನು ಇತ್ತೀಚೆಗೆ ಬಾಂಗ್ಲಾದ ದಿನಪತ್ರಿಕೆಗಳ ಕಚೇರಿಗಳ ಹೊರಗಡೆಯು ಬಾಂಗ್ಲಾದ ಮೂಲಭೂತವಾದಿಗಳು ಪ್ರತಿಭಟನೆಗಳನ್ನು ನಡೆಸಿದ್ದರು. ಬಾಂಗ್ಲಾದ ಪತ್ರಿಕೆಗಳು ಭಾರತದೊಂದಿಗಿನ ಸಂಬಂಧ ಹೊಂದಿವೆ ಎಂದು ಆರೋಪಿಸಿದ್ದರು. ಅಲ್ಲದೆ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಳ್ವಿಕೆಯ ಅವಧಿಯಲ್ಲಿ ಬಾಂಗ್ಲಾ ಪತ್ರಿಕೆಗಳು ಭಾರತಕ್ಕೆ ಅಧೀನರಾಗಿದ್ದರು ಎಂದು ಆರೋಪಿಸಿದರು.
ಕಳೆದ ವರ್ಷ ಶೇಖ್​ ಹಸಿನಾ ಪದಚ್ಯುತಗೊಂಡ ನಂತರ ರೂಪುಗೊಂಡ ಇಂಕ್ವಿಲಾಬ್ ಮಂಚೊ ಗುಂಪು, ಹಸಿನಾ ಮತ್ತು ಭಾರತವನ್ನು ಖಂಡಿಸಿ ಬೀದಿ ಪ್ರತಿಭಟನೆಗಳು ಮತ್ತು ಅಭಿಯಾನಗಳನ್ನು ಆಯೋಜಿಸುತ್ತಿದೆ. ಅಲ್ಲದೆ, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಭಾರತ ವಿರೋಧಿ ಭಾವನೆಯನ್ನು ಈ ಗುಂಪು ಉತ್ತೇಜಿಸುತ್ತಿದೆ ಎಂಬ ಗಂಭೀರ ಆರೋಪವಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net