ಪ್ರಕ್ಷುಬ್ಧ ಇರಾನ್​; ಇಸ್ಲಾಮಿಕ್ ರಾಷ್ಟ್ರದ ಸ್ಥಿತಿಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ

ಪ್ರಕ್ಷುಬ್ಧ ಇರಾನ್​
ಪ್ರಕ್ಷುಬ್ಧ ಇರಾನ್​
Published on

ಇರಾನ್​ನಲ್ಲಿ ಬೆಲೆಯೇರಿಕೆಯ ಸಂಕಟ ತೀವ್ರವಾಗಿದ್ದು, ಸರ್ಕಾರ ವಿರುದ್ಧದ ಆಕ್ರೋಶ ಭುಗಿಲೆದ್ದಿದೆ. ಬೆಲೆಯೇರಿಕೆ ಮತ್ತು ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಗುರುವಾರ 100 ನಗರಗಳಲ್ಲಿ ಹೋರಾಟ ತಾರಕಕ್ಕೆ ಏರಿದ್ದು, ಕಳೆದ 13 ದಿನಗಳಲ್ಲೇ ಎಂಟು ಮಕ್ಕಳು ಸೇರಿದಂತೆ 62 ಜನರು ಮೃತಪಟ್ಟಿದ್ದಾರೆ. 2300 ಜನರನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಬಂದ್​ನ ವಾತಾವರಣವಿದ್ದು, ಇರಾನ್ ಈ ಸ್ಥಿತಿಗೆ ಕಾರಣ ಏನು, ಪ್ರತಿಭಟನಾಕಾರರ ಬೇಡಿಕೆಗಳೇನು? ಈ ಕುರಿತಾದ ವಿವರ ಇಲ್ಲಿದೆ.

ಇಸ್ಲಾಮಿಕ್ ರಾಷ್ಟ್ರ ಇರಾನ್ ಸ್ಥಿತಿ ದಿನದಿಂದ ದಿನಕ್ಕೆ ಪ್ರಕ್ಷುಬ್ಧವಾಗುತ್ತಿದೆ. ಇರಾನ್​ನ ಸವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ನೇತೃತ್ವದ ಇರಾನ್​ನ ಇಸ್ಲಾಮಿಕ್ ಆಡಳಿತದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಅಂಗಡಿ-ಮುಂಗಟ್ಟು, ಮಾರುಕಟ್ಟೆ, ವಿಶ್ವವಿದ್ಯಾಲಯಗಳು ಮುಚ್ಚಿದ್ದು, ಬಂದ್​ನಂಥ ಸ್ಥಿತಿ ಸೃಷ್ಟಿಯಾಗಿದೆ. ಇರಾನ್ ರಾಜಧಾನಿ ಟೆಹ್ರಾನ್​ನಿಂದ ಗಡೀಪಾರುಗೊಂಡಿದ್ದ ಯುವರಾಜ ರೆಜಾ ಪಹಲ್ವಿ ಸಾಮೂಹಿಕ ಪ್ರತಿಭಟನೆಗೆ ಆಹ್ವಾನ ನೀಡಿದ ಬೆನ್ನಲ್ಲೇ ಗುರುವಾರ ಪ್ರತಿಭಟನೆಗಳು ವ್ಯಾಪಕ ಸ್ವರೂಪ ಪಡೆದುಕೊಂಡವು. ಮನೆಗಳಿಂದ ಬೀದಿಗಿಳಿದ ಜನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಟೆಹ್ರಾನ್ ವಿಮಾನ ನಿಲ್ದಾಣವನ್ನು ಶುಕ್ರವಾರದಿಂದ ತಾತ್ಕಾಲಿಕವಾಗಿ ಮುಚ್ಚಿದ್ದು, ಸೇನೆಗೆ ಅಲರ್ಟ್​ನಿಂದ ಇರುವಂತೆ ಸೂಚಿಸಲಾಗಿದೆ. ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದರೂ, ಹಲವು ಪ್ರತಿಭಟನಾಕಾರರು ಸ್ಟಾರ್​ಲಿಂಕ್ (ಎಲಾನ್ ಮಸ್ಕ್ ಒಡೆತನದ ಇಂಟರ್​ನೆಟ್ ಕಂಪನಿಯಾಗಿದ್ದು, ಸ್ಯಾಟ್​ಲೈಟ್ ಮೂಲಕ ಕಾರ್ಯಾಚರಿಸುತ್ತದೆ) ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಲೆಯೇರಿಕೆ, ಆರ್ಥಿಕ ಸಂಕಷ್ಟದಿಂದ ಜನರು ಈಗಾಗಲೇ ಹೈರಾಣಾಗಿದ್ದು, ಈ ನಡುವೆ ಖಮೇನಿ ಆಡಳಿತ 2026ರ ಬಜೆಟ್​ನಲ್ಲಿ ತೆರಿಗೆ ದರವನ್ನು ಶೇಕಡ 62ರಷ್ಟು ಹೆಚ್ಚಿಸುವುದಾಗಿ ಹೇಳಿದ್ದು, ಜನರಲ್ಲಿ ನಿರಾಸೆ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ.

ಇಂಟರ್​ನೆಟ್ ಸಂಪರ್ಕ ಕಡಿತ

ಮಶಹದ್ ಪ್ರತಿಭಟನಾಕಾರರ ವಶಕ್ಕೆ?

ಇರಾನ್​ನ ಎರಡನೇ ಅತಿ ದೊಡ್ಡ ನಗರವಾದ ಮಶಹದ್ ಅನ್ನು ಪ್ರತಿಭಟನಾಕಾರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಟ್ರಂಪ್, ‘ಹತ್ತು ಲಕ್ಷಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸಿದ್ದಾರೆ. ಇರಾನ್​ನ ಎರಡನೇ ದೊಡ್ಡ ನಗರ ಮಶಹದ್ ಈಗ ಪ್ರತಿಭಟನಾಕಾರರ ವಶದಲ್ಲಿದೆ. ಸರ್ಕಾರದ ಭದ್ರತಾ ಪಡೆಗಳು ಈ ನಗರವನ್ನು ತೊರೆದಿವೆ’ ಎಂದಿದ್ದಾರೆ. ಆದರೆ, ಖಮೇನಿ ಆಡಳಿತ ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದೆ. ಮಶಹದ್ 40 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಈ ನಗರ ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನ ಗಡಿಯ ಸಮೀಪವಿದೆ. ಇದು ಇರಾನ್​ನ ಅತಿ ದೊಡ್ಡ ಧಾರ್ವಿುಕ ನಗರ ಕೂಡ ಆಗಿದೆ. ಶಿಯಾ ಮುಸಲ್ಮಾನರ ಪವಿತ್ರ ಯಾತ್ರಾಸ್ಥಳವಾದ ಇಮಾಮ್ ರೆಜಾರ ಪವಿತ್ರ ದರ್ಗಾ ಕೂಡ ಇದೇ ನಗರದಲ್ಲಿದೆ.

ಹೋರಾಟವೇಕೆ?

  • ಇರಾನ್​ನಲ್ಲಿ ಆರ್ಥಿಕ ಸಂಕಷ್ಟ ಗಂಭೀರ ಸ್ಥಿತಿಗೆ ತಲುಪಿದೆ. 2025ರ ಡಿಸೆಂಬರ್​ನಲ್ಲಿ ಹಣದುಬ್ಬರ ಅಧಿಕಗೊಂಡಿದ್ದು, ಶೇಕಡ 42.2ಕ್ಕೆ ತಲುಪಿದೆ.
  • ಆಹಾರ ಪದಾರ್ಥಗಳ ಬೆಲೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 72ರಷ್ಟು ಹೆಚ್ಚಳಗೊಂಡಿದ್ದು, ಮಧ್ಯಮವರ್ಗಿಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಬೆಲೆಯೇರಿಕೆ ನಿಯಂತ್ರಣ ಮಾಡಲು ಅಯಾತುಲ್ಲಾ ಅಲಿ ಖಮೇನಿ ಆಡಳಿತ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
  • ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿತ ಖರ್ಚಿನಲ್ಲೂ ಶೇಕಡ 50 ಏರಿಕೆಯಾಗಿದ್ದು, ಜನಸಾಮಾನ್ಯರ ಗೃಹ ಬಜೆಟ್ ತಲೆಕೆಳಗಾಗಿದೆ.
  • ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಹತ್ತಾರು ಕಟ್ಟುಪಾಡುಗಳು, ನಿರ್ಬಂಧಗಳಿಂದ ಮಹಿಳೆಯರ ಬದುಕು ಉಸಿರುಗಟ್ಟಿದಂತಾಗಿದೆ.
  • ದೇಶದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಯಾಗಿದ್ದು, ಯುವಕರು ಕೆಲಸ ಸಿಗದೆ ಹತಾಶರಾಗಿದ್ದಾರೆ.

ಪ್ರತಿಭಟನೆಯ ಹಾದಿ

  • 2025ರ ಡಿಸೆಂಬರ್ 28: ರಾಜಧಾನಿ ಟೆಹ್ರಾನ್​ನಲ್ಲಿ ಪ್ರತಿಭಟನೆ ಆರಂಭ. ಗ್ರಾ್ಯಂಡ್ ಬಜಾರ್​ನಲ್ಲಿ ವ್ಯಾಪಾರಸ್ಥರಿಂದ ಮುಷ್ಕರ.
  •  2025ರ ಡಿಸೆಂಬರ್ 29: ಸರ್ಕಾರ ವಿರೋಧಿ ಪ್ರತಿಭಟನೆ ಇತರ ನಗರಗಳಿಗೂ ಹಬ್ಬಿತು. ಮೊದಲ ಬಾರಿಗೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಘರ್ಷಣೆ ನಡೆಯಿತು.
  • 2025ರ ಡಿಸೆಂಬರ್ 30: ಟೆಹ್ರಾನ್, ಜಂಜನ್ ಹಾಗೂ ಯಜದ್ ಸೇರಿದಂತೆ ಕನಿಷ್ಠ 10 ವಿಶ್ವವಿದ್ಯಾಲಯಗಳ ನೂರಾರು ವಿದ್ಯಾರ್ಥಿಗಳು ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಪ್ರತಿಭಟನೆಗೆ ಧುಮುಕಿದರು. ಯುವಜನರ ಪಾಲ್ಗೊಳ್ಳುವಿಕೆಯಿಂದ ಹೋರಾಟ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧದ ಆಕ್ರೋಶ ತೀವ್ರವಾಗಿ ಕಂಡುಬಂತು.
  • 2025ರ ಡಿಸೆಂಬರ್ 31: ಇರಾನ್​ನ 21 ರಾಜ್ಯಗಳಲ್ಲಿ ಹಿಂಸಾಚಾರ ವ್ಯಾಪಿಸಿ, ಓರ್ವ ಪ್ರತಿಭಟನಾಕಾರ, ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟರು.
  • 2026ರ ಜನವರಿ 1: ಹೊಸ ವರ್ಷದ ಮೊದಲ ದಿನವೇ ಆಂದೋಲನ ಮತ್ತಷ್ಟು ಉಗ್ರವಾಯಿತು. ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಪ್ರತಿಭಟನಾನಿರತರು ಪ್ರಾಣ ಕಳೆದುಕೊಂಡರು.
  • ಜನವರಿ 3: ಅಯಾತುಲ್ಲಾ ಅಲಿ ಖಮೇನಿ ಹೋರಾಟಗಾರರನ್ನು ‘ದಂಗೆಕೋರರು’ ಎಂದು ಕರೆದಿದ್ದರಿಂದ ಪರಿಸ್ಥಿತಿ ಪ್ರಕ್ಷುಬ್ಧವಾಯಿತು. ಮೃತರ ಸಂಖ್ಯೆ 28ಕ್ಕೆ ಏರಿಕೆಯಾದ ಪರಿಣಾಮ, ಅಂತಾರಾಷ್ಟ್ರೀಯ ವಲಯ ಇರಾನ್ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿತು.
  •  ಜನವರಿ 5: 28 ರಾಜ್ಯಗಳಿಗೆ ಹಿಂಸೆ ಹಬ್ಬಿತು. ಟೆಹ್ರಾನ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಂದ ಭಾರಿ ಪ್ರತಿಭಟನೆ. ಒಟ್ಟು 369 ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು.
  •  ಜನವರಿ 6: ಸರ್ಕಾರದ ವಿರುದ್ದದ ಹೋರಾಟವನ್ನು ಜ.8ರಿಂದ ತೀವ್ರಗೊಳಿಸುವಂತೆ ಯುವರಾಜ ರೆಜಾ ಪಹಲ್ವಿ ಜನರಿಗೆ ಕರೆ ನೀಡಿದರು.
  • ಜನವರಿ 7: ಉದ್ರಿಕ್ತರ ಗುಂಪು ಭದ್ರತಾ ಪಡೆಯ ಮೇಲೆ ದಾಳಿ ನಡೆಸಿತು. ಪರಿಣಾಮ, ಪೊಲೀಸ್ ಕಮಾಂಡರ್ ಹತ್ಯೆಯಾಯಿತು.
  • ಜನವರಿ 8: 100ಕ್ಕೂ ಹೆಚ್ಚು ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲೂ ಭುಗಿಲೆದ್ದ ಪ್ರತಿಭಟನೆ. ಇಂಟರ್​ನೆಟ್, ಫೋನ್ ಸೇವೆ ಸ್ಥಗಿತ. ಮೃತರ ಸಂಖ್ಯೆ 62ಕ್ಕೆ ಏರಿಕೆ.
  •  ಜನವರಿ 9: ಟೆಹ್ರಾನ್ ವಿಮಾನ ನಿಲ್ದಾಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ. ಯಾವುದೇ ಸ್ಥಿತಿ ಎದುರಿಸಲು ಸನ್ನದ್ಧವಾಗಿ ಇರುವಂತೆ ಸೇನೆಗೆ ಸರ್ಕಾರದ ಸೂಚನೆ.

ಸರ್ಕಾರ ಪತನಗೊಳ್ಳುವುದೆ?

ಪ್ರತಿಭಟನೆಗಳು ನಗರ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿರುವುದರಿಂದ ಅಯಾತುಲ್ಲಾ ಅಲಿ ಖಮೇನಿ ನೇತೃತ್ವದ ಇರಾನ್​ನ ಇಸ್ಲಾಮಿಕ್ ಆಡಳಿತದ ಮೇಲೆ ಒತ್ತಡ ಸೃಷ್ಟಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದು, ‘ಪ್ರತಿಭಟನಾಕಾರರ ರಕ್ಷಣೆಗೆ ಅಮೆರಿಕ ಧಾವಿಸಲಿದೆ’ ಎಂದಿದ್ದಾರೆ. ‘ದೇಶದ ಆಂತರಿಕ ವಿಷಯದಲ್ಲಿ ಕೈ ಹಾಕುವವರನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಇರಾನ್ ತೀಕ್ಷ ್ಣ ಪ್ರತಿಕ್ರಿಯೆ ನೀಡಿದೆ. ಆದರೆ, ಖಮೇನಿ ಸೂಚನೆಯ ಮೇರೆಗೆ ಭದ್ರತಾ ಪಡೆಗಳು ಪ್ರತಿಭಟನಾನಿರತರೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದು, ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ‘ಖಮೇನಿ ಆಡಳಿತವನ್ನು ಕೊನೆಗೊಳಿಸಿಯೇ ವಿಶ್ರಾಂತಿ ಪಡೆಯುತ್ತೇವೆ’ ಎಂದು ಪ್ರತಿಭಟನಾಕಾರರು ಘೋಷಿಸಿದ್ದು, ಸರ್ಕಾರ ಪತನಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕು.

ಮೌನ ಮುರಿದ ಖಮೇನಿ

ಪ್ರತಿಭಟನೆ ತಾರಕಕ್ಕೆ ಏರಿದ್ದರೂ ಮೌನವಾಗಿಯೇ ಇದ್ದ ಅಯಾತುಲ್ಲಾ ಅಲಿ ಖಮೇನಿ ಗುರುವಾರ ಸರ್ಕಾರ ಟೆಲಿವಿಜನ್ ಮುಖಾಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿರುವ ಅವರು, ವಿದೇಶಗಳಿಗಾಗಿ ಕೆಲಸ ಮಾಡುವ ಬಾಡಿಗೆ ಜನರನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಸಂತೋಷಪಡಿಸಲು ದೇಶವನ್ನು ಹಾಳುಗೆಡವಬೇಡಿ ಎಂದಿದ್ದಾರೆ. ಇರಾನ್ ಜನರ ಒಗ್ಗಟ್ಟು ದೇಶದ ಶತ್ರುಗಳನ್ನು ಸೋಲಿಸಲಿದೆ. ಟ್ರಂಪ್ ಇರಾನ್ ಬೆಳವಣಿಗೆಗಳಲ್ಲಿ ಮಧ್ಯಪ್ರವೇಶಿಸುವುದಕ್ಕಿಂತ ತಮ್ಮ ದೇಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಿ ಎಂದಿದ್ದು, ಇಸ್ಲಾಮಿಕ್ ರಿಪಬ್ಲಿಕ್ ಆಡಳಿತ ಹೆದರಿ, ಹಿಂದಡಿ ಇಡುವುದಿಲ್ಲ ಎಂದಿದ್ದಾರೆ.

ವ್ಯಾಪಕ ಹಾನಿ

ಇರಾನ್​ನ 31 ರಾಜ್ಯಗಳಲ್ಲೂ ಸರ್ಕಾರ ವಿರೋಧಿ ಪ್ರತಿಭಟನೆ ಭುಗಿಲೆದ್ದಿದೆ. 100ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನಾಕಾರರು ರಸ್ತೆಗಿಳಿದು ಸರ್ಕಾರವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ನಗರಗಳಿಗೆ ಸೀಮಿತವಾಗಿದ್ದ ಪ್ರತಿಭಟನೆ ಕಳೆದ ಎರಡು ದಿನಗಳಿಂದ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಭದ್ರತಾ ಪಡೆಗಳು ಜನರನ್ನು ಹತ್ತಿಕ್ಕಲು ಬಲಪ್ರಯೋಗ ಮಾಡುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಅಮೆರಿಕದ ಹ್ಯೂಮನ್ ರೈಟ್ ಏಜೆನ್ಸಿಯ ಪ್ರಕಾರ ಪ್ರತಿಭಟನೆಗಳಲ್ಲಿ ಈವರೆಗೆ 62 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 8 ಜನ ಮಕ್ಕಳೂ ಸೇರಿದ್ದಾರೆ. 2300 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net