ಬ್ರೆಜಿಲ್​ನಲ್ಲಿ ಕುಟುಂಬವೊಂದನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನ: ಪೈಲಟ್ ಸೇರಿ ನಾಲ್ವರು ದುರ್ಮರಣ | Helicopter

ಘಟನೆಯ ಸ್ಥಳ
ಘಟನೆಯ ಸ್ಥಳ
Published on
Helicopter: ಬ್ರೆಜಿಲ್‌ನಲ್ಲಿ ಶನಿವಾರ(ಆ. 08) ಕುಟುಂಬವೊಂದನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್​ವೊಂದು ದಟ್ಟ ಕಾಡಿನಲ್ಲಿ ಪತನಗೊಂಡಿದ್ದು, ಪೈಲಟ್ ಹಾಗೂ ಒಂದೇ ಕುಟುಂಬದ ಮೂವರು ಮಹಿಳೆಯವರು ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬ್ರೆಜಿಲ್​ನ ರಿಯೊ ಡಿ ಜನೈರೊದ ಆಲ್ಟೊ ಡ ಬೋವಾ ವಿಸ್ಟಾದ ವಿಸ್ಟಾ ಚಿನಾಸಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 
ಅಪಘಾತಕ್ಕೀಡಾದ ತಕ್ಷಣ ಹೆಲಿಕಾಪ್ಟರ್​ಗೆ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಮೃತಪಟ್ಟವರಲ್ಲಿ ಪೈಲಟ್ ಮತ್ತು ಕೊಲಂಬಿಯಾದ ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿದ್ದಾರೆ.  
ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿರುವ ರಿಯೊ ಮೇಯರ್ ಎಡ್ವರ್ಡೊ ಕ್ಯಾವಲಿಯರ್,  ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ನಗರದಲ್ಲಿ ಹೆಲಿಕಾಪ್ಟರ್‌ಗಳ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿದೆ. ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬ್ರೆಜಿಲ್‌ನ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ(ANAC) ಯನ್ನು ಕೇಳಿಕೊಂಡಿದ್ದೇನೆ. ಅವರು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಿಯೊದಲ್ಲಿ ಇದೇ ರೀತಿಯ ಅಪಘಾತಗಳು ಸಂಭವಿಸಿವೆ. ಈ ವರ್ಷದ ಜೂನ್‌ನಲ್ಲಿ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದರು. ಮತ್ತು ಕಳೆದ ವರ್ಷ ಸಾವೊ ಪಾಲೊ ರಾಜ್ಯದ ಉಬಟುಬಾದಲ್ಲಿ ಸಣ್ಣ ವಿಮಾನವೊಂದು ಪತನಗೊಂಡು ಪೈಲಟ್ ಸಾವನ್ನಪ್ಪಿದ್ದರು (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net