ಪೆಂಟಗನ್‌ನಲ್ಲಿ ಸ್ಯಾಮ್ಯುಯೆಲ್ ಜಾಕ್ಸನ್ ಅವತಾರ ಎತ್ತಿದ ಹೆಗ್ಸೆತ್! ಬೈಬಲ್ ವಾಕ್ಯ ಎಂದು ಸಿನಿಮಾ ಡೈಲಾಗ್ ಪಠಿಸಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ | Pete Hegseth Fake Bible Verse

ಪೆಂಟಗನ್‌ನಲ್ಲಿ ಸ್ಯಾಮ್ಯುಯೆಲ್ ಜಾಕ್ಸನ್ ಅವತಾರ ಎತ್ತಿದ ಹೆಗ್ಸೆತ್! ಬೈಬಲ್ ವಾಕ್ಯ ಎಂದು ಸಿನಿಮಾ ಡೈಲಾಗ್ ಪಠಿಸಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ
ಪೆಂಟಗನ್‌ನಲ್ಲಿ ಸ್ಯಾಮ್ಯುಯೆಲ್ ಜಾಕ್ಸನ್ ಅವತಾರ ಎತ್ತಿದ ಹೆಗ್ಸೆತ್! ಬೈಬಲ್ ವಾಕ್ಯ ಎಂದು ಸಿನಿಮಾ ಡೈಲಾಗ್ ಪಠಿಸಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ
Published on
ವಾಷಿಂಗ್ಟನ್: ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗನ್ ಇತಿಹಾಸದಲ್ಲೇ ಇಂತಹ ಒಂದು ವಿಚಿತ್ರ ಪ್ರಸಂಗ ನಡೆದಿರಲಿಲ್ಲ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth Fake Bible Verse) ಪೆಂಟಗನ್‌ನಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಬೈಬಲ್‌ನ ಎಜೆಕಿಯಲ್ 25:17' (Ezekiel 25:17) ವಾಕ್ಯಗಳನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಭಾಷಣ ಮಾಡಿದರು. ಆದರೆ, ಅವರು ಉಲ್ಲೇಖಿಸಿದ್ದು ಬೈಬಲ್ ವಾಕ್ಯವನ್ನಲ್ಲ, ಬದಲಾಗಿ ಕ್ವೆಂಟಿನ್ ಟ್ಯಾರಂಟಿನೋ ಅವರ ಪ್ರಸಿದ್ಧ ಸಿನಿಮಾ ಪಲ್ಪ್ ಫಿಕ್ಷನ್​ನಲ್ಲಿ ಸ್ಯಾಮ್ಯುಯೆಲ್ ಎಲ್. ಜಾಕ್ಸನ್ ಹೇಳುವ ಫೇಕ್ ಡೈಲಾಗ್ ಹೇಳಿದ್ದಾರೆ.

ಏನಿದು ಘಟನೆ? ಸಿನಿಮೀಯ ಪ್ರಾರ್ಥನೆ!

ಪೆಂಟಗನ್‌ನಲ್ಲಿ ನಡೆದ ಆರಾಧನಾ ಸೇವೆಯ ಸಂದರ್ಭದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪೀಟ್ ಹೆಗ್ಸೆತ್, ಇರಾನ್‌ನಲ್ಲಿ ನಡೆದ ಅಮೆರಿಕದ ವಾಯುಪಡೆಯ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯ (CSAR) ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಅವರು, ದಿ ಪಾತ್ ಆಫ್ ದಿ ಡೌನ್ಡ್ ಏವಿಯೇಟರ್ ಎಂಬ ಸಾಲುಗಳಿಂದ ಆರಂಭವಾಗುವ ಪ್ರಾರ್ಥನೆಯನ್ನು ಪಠಿಸಿದ್ದಾರೆ.

ಹೆಗ್ಸೆತ್ ಹೇಳಿದ ಸಾಲುಗಳು ಹೀಗಿದ್ದವು

ದಬ್ಬಾಳಿಕೆಗಾರರ ದೌರ್ಜನ್ಯದಿಂದಾಗಿ ಕೆಳಗಿಳಿದ ವಿಮಾನ ಚಾಲಕನ ಹಾದಿಯು ಅಡೆತಡೆಗಳಿಂದ ಕೂಡಿದೆ. ಯಾರು ಈ ಕತ್ತಲೆಯ ಕಣಿವೆಯಲ್ಲಿ ಕಳೆದುಹೋದವರನ್ನು ರಕ್ಷಿಸುತ್ತಾರೋ ಅವರು ಆಶೀರ್ವದಿಸಲ್ಪಟ್ಟವರು. ನನ್ನ ಸಹೋದರನನ್ನು ನಾಶಪಡಿಸಲು ಯತ್ನಿಸುವವರ ಮೇಲೆ ನಾನು ತೀವ್ರ ಸೇಡಿನೊಂದಿಗೆ ಮುಗಿಬೀಳುತ್ತೇನೆ ಎಂದು ಹೆಗ್ಸನ್​ ಹೇಳಿದ್ದಾರೆ.

ಸಿನಿಮಾ Vs ಬೈಬಲ್: ಅಸಲಿ ವ್ಯತ್ಯಾಸವೇನು..?

ಪೀಟ್ ಹೆಗ್ಸೆತ್ ಅವರು ಹೇಳಿದ ಈ ಮಾತುಗಳು 1994ರ ಬ್ಲಾಕ್‌ಬಸ್ಟರ್ ಸಿನಿಮಾ ಪಲ್ಪ್ ಫಿಕ್ಷನ್​ನಲ್ಲಿ ಹಿಟ್‌ಮ್ಯಾನ್ ಜೂಲ್ಸ್ ವಿನ್‌ಫೀಲ್ಡ್ ಎಂಬ ಪಾತ್ರವು ಹತ್ಯೆ ಮಾಡುವ ಮುನ್ನ ಹೇಳುವ ಡೈಲಾಗ್‌ಗಳಾಗಿವೆ. ಕುತೂಹಲದ ವಿಷಯವೆಂದರೆ, ಸಿನಿಮಾದಲ್ಲಿಯೂ ಆ ಪಾತ್ರವು ಇದನ್ನು ಬೈಬಲ್ ವಾಕ್ಯ ಎಂದೇ ಹೇಳುತ್ತದೆ. ಆದರೆ ವಾಸ್ತವದಲ್ಲಿ ಬೈಬಲ್‌ನ ಎಜೆಕಿಯಲ್ 25:17 ರಲ್ಲಿ ಅಂತಹ ಯಾವುದೇ ಸುದೀರ್ಘ ಸಾಲುಗಳಿಲ್ಲ. ಟ್ಯಾರಂಟಿನೋ ಅವರು ಸಿನಿಮಾದ ಪ್ರಭಾವಕ್ಕಾಗಿ ಈ ಸಾಲುಗಳನ್ನು ತಾವೇ ಸೃಷ್ಟಿಸಿದ್ದರು.

ತೀವ್ರ ಟೀಕೆಗೆ ಗುರಿಯಾದ ಹೆಗ್ಸೆತ್

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತು ರಾಜಕೀಯ ವಿರೋಧಿಗಳು ಹೆಗ್ಸೆತ್ ಅವರನ್ನು ತೀವ್ರವಾಗಿ ಹಾಸ್ಯ ಮಾಡುತ್ತಿದ್ದಾರೆ.
ಅಜ್ಞಾನದ ಪರಮಾವಧಿ: ಪೆಂಟಗನ್‌ನಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗೆ ಅಸಲಿ ಬೈಬಲ್ ವಾಕ್ಯ ಮತ್ತು ಸಿನಿಮಾ ಡೈಲಾಗ್ ನಡುವಿನ ವ್ಯತ್ಯಾಸ ತಿಳಿಯದಿರುವುದು ವಿಷಾದನೀಯ ಎಂದು ಡೆಮೋಕ್ರಾಟ್ ನಾಯಕರು ಟೀಕಿಸಿದ್ದಾರೆ.
ಸೈನಿಕ ವ್ಯವಸ್ಥೆಯ ಮೇಲೆ ಪ್ರಭಾವ: ಯುದ್ಧದ ಸನ್ನಿವೇಶದಲ್ಲಿ ಬಳಸುವ ಕಾಲ್ ಸೈನ್ ಅನ್ನು ಈ ಪ್ರಾರ್ಥನೆಯೊಳಗೆ ಸೇರಿಸಿ ಹೆಗ್ಸೆತ್ ಓದಿದ್ದು, ಇದು ಸೈನಿಕ ಸಂಸ್ಕೃತಿಯಲ್ಲಿ ಸಿನಿಮಾ ಸಂಭಾಷಣೆಗಳು ಎಷ್ಟು ಆಳವಾಗಿ ಬೇರೂರಿವೆ ಎಂಬುದನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಪೀಟ್ ಹೆಗ್ಸೆತ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ಹೊಸ ವಿವಾದವು ಟ್ರಂಪ್ ಸರ್ಕಾರಕ್ಕೆ ಮುಜುಗರ ತಂದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net