ಇರಾನ್ ಪರಮಾಣು ಕೇಂದ್ರದ ಅಂತ್ಯ ಶುರುವಾಯ್ತಾ? ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾದ ದೃಶ್ಯ ಕಂಡು ಜಗತ್ತೇ ಸ್ತಬ್ಧ! Natanz Attack

ಇರಾನ್ ಪರಮಾಣು ಕೇಂದ್ರದ ಅಂತ್ಯ ಶುರುವಾಯ್ತಾ? ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾದ ದೃಶ್ಯ ಕಂಡು ಜಗತ್ತೇ ಸ್ತಬ್ಧ!
ಇರಾನ್ ಪರಮಾಣು ಕೇಂದ್ರದ ಅಂತ್ಯ ಶುರುವಾಯ್ತಾ? ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾದ ದೃಶ್ಯ ಕಂಡು ಜಗತ್ತೇ ಸ್ತಬ್ಧ!
Published on
ಟೆಹ್ರಾನ್: ಇರಾನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಸಮರ ಈಗ ಪರಮಾವಧಿ ತಲುಪಿದೆ. ಇರಾನ್‌ನ ಅತ್ಯಂತ ರಹಸ್ಯ ಮತ್ತು ಮಹತ್ವದ ಪರಮಾಣು ಕೇಂದ್ರವಾದ ನಟಾಂಜ್(Natanz Attack) ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿರುವುದು ಈಗ ಉಪಗ್ರಹ ಚಿತ್ರಗಳ ಮೂಲಕ ದೃಢಪಟ್ಟಿದೆ. ಜೂನ್ ತಿಂಗಳ ದಾಳಿಯ ನಂತರ, ನಟಾಂಜ್ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿದ್ದು, ಇರಾನ್‌ನ ಪರಮಾಣು ಬಾಂಬ್ ತಯಾರಿಸುವ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ.

ಸ್ಯಾಟಲೈಟ್ ಚಿತ್ರಗಳು ಹೇಳುತ್ತಿರುವ ಸತ್ಯವೇನು..?

ಕೊಲೊರಾಡೋ ಮೂಲದ ವಾಂಟರ್ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳ ಪ್ರಕಾರ, ನಟಾಂಜ್‌ನ ಭೂಗತ ಯುರೇನಿಯಂ ಪುಷ್ಟೀಕರಣ ಘಟಕದ ಪ್ರವೇಶ ದ್ವಾರಗಳ ಮೇಲೆ ಎರಡು ಪ್ರಬಲ ಕ್ಷಿಪಣಿ ದಾಳಿಗಳು ನಡೆದಿವೆ.
ಮೂರು ಕಟ್ಟಡಗಳು ಧೂಳೀಪಟ: ಈ ದಾಳಿಯಲ್ಲಿ ನಟಾಂಜ್ ಸಂಕೀರ್ಣದ ಒಟ್ಟು ಮೂರು ಪ್ರಮುಖ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.
ಭೂಗತ ಸುರಂಗಗಳಿಗೆ ಕನ್ನ: ಸಾವಿರಾರು ಸೆಂಟ್ರಿಫ್ಯೂಜ್‌ಗಳನ್ನು ಹೊಂದಿದ್ದ ಭೂಗತ ಹಾಲ್‌ಗಳಿಗೆ ಹೋಗುವ ಸಿಬ್ಬಂದಿ ಪ್ರವೇಶ ದ್ವಾರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ.
ವಾಹನ ಸಂಚಾರ ಸ್ಥಗಿತ: ಭೂಗತ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ವಾಹನ ರಾಂಪ್ ಕೂಡ ಧ್ವಂಸಗೊಂಡಿದ್ದು, ಇಡೀ ಕೇಂದ್ರವು ಈಗ ಬಾಹ್ಯ ಪ್ರಪಂಚದಿಂದ ಕಡಿದುಹೋಗಿದೆ.

ಐಎಇಎ ಮತ್ತು ಇರಾನ್ ನಡುವೆ ವಾಗ್ವಾದ!

ಈ ದಾಳಿಯ ಕುರಿತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಮುಖ್ಯಸ್ಥ ರಾಫೆಲ್ ಗ್ರೋಸಿ ಮತ್ತು ಇರಾನ್ ರಾಯಭಾರಿ ರೆಜಾ ನಜಾಫಿ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಪರಮಾಣು ಕೇಂದ್ರದ ಮೇಲೆ ದಾಳಿಯಾದ ಕುರುಹುಗಳಿಲ್ಲ ಎಂದು ಗ್ರೋಸಿ ಹೇಳಿದ ಬೆನ್ನಲ್ಲೇ, ನಜಾಫಿ ಅವರು ನಟಾಂಜ್ ಮೇಲೆ ನಿನ್ನೆ ದಾಳಿಯಾಗಿದೆ ಎಂದು ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ವಿಶ್ವಸಂಸ್ಥೆಯ ಅಣು ಇನ್ಸ್ಪೆಕ್ಟರ್ ಡೇವಿಡ್ ಆಲ್ಬ್ರೈಟ್ ಅವರ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಭಾನುವಾರ ಮಧ್ಯಾಹ್ನ ಮತ್ತು ಸೋಮವಾರ ಮುಂಜಾನೆಯ ನಡುವೆ ಈ ದಾಳಿ ನಡೆದಿದೆ ಎಂದು ಅವರು ಖಚಿತಪಡಿಸಿದ್ದಾರೆ.

ನಟಾಂಜ್ ಗುರಿಯಾಗಿದ್ದೇಕೆ..?

ಇರಾನ್ ಪರಮಾಣು ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುವನ್ನು ಇದೇ ನಟಾಂಜ್ ಕೇಂದ್ರದಲ್ಲಿ ಸಿದ್ಧಪಡಿಸುತ್ತಿದೆ ಎಂಬುದು ಅಮೆರಿಕದ ಗಂಭೀರ ಆರೋಪ ಮಾಡಿದೆ. ಕಳೆದ ಜೂನ್‌ನಲ್ಲಿ ನಡೆದ ದಾಳಿಯಿಂದ ಈ ಕೇಂದ್ರವು ನಿಷ್ಕ್ರಿಯಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ, ಅಲ್ಲಿ ಇನ್ನೂ ವಶಪಡಿಸಿಕೊಳ್ಳಬಹುದಾದ ಸೆಂಟ್ರಿಫ್ಯೂಜ್‌ಗಳು ಮತ್ತು ಸಲಕರಣೆಗಳು ಇರುವ ಕಾರಣ, ಅಮೆರಿಕ ಮತ್ತೊಮ್ಮೆ ದಾಳಿ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಪಡಿಸಲು ಮುಂದಾಗಿದೆ ಎನ್ನಲಾಗಿದೆ.

ಸಂವಹನ ಕಡಿತ: ಹೆಚ್ಚಿದ ಆತಂಕ

ಪ್ರಸ್ತುತ ಇರಾನ್‌ನಲ್ಲಿ ಐಎಇಎಯ ಯಾವುದೇ ಸಿಬ್ಬಂದಿ ಇಲ್ಲ. ಇರಾನ್ ಅಧಿಕಾರಿಗಳೊಂದಿಗೆ ಸಂಸ್ಥೆಯ ಸಂಪರ್ಕವು ಅತ್ಯಂತ ಸೀಮಿತವಾಗಿದೆ. ಜಿನೀವಾದಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಈ ದಾಳಿ ನಡೆದಿರುವುದು ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚನ್ನು ಹಚ್ಚಿದೆ. ಇರಾನ್ ತನ್ನ ಪರಮಾಣು ಕೇಂದ್ರಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಸಜ್ಜಾಗಿದೆ ಎಂಬ ವರದಿಗಳೂ ಇವೆ.

ಜಗತ್ತಿಗೆ ಎದುರಾದ ಹೊಸ ಆಪತ್ತು..?

ಪರಮಾಣು ಕೇಂದ್ರದ ಮೇಲಿನ ದಾಳಿಯು ವಿಕಿರಣ ಸೋರಿಕೆಗೆ ಕಾರಣವಾಗಬಹುದೇ ಎಂಬ ಆತಂಕವೂ ಎದುರಾಗಿದೆ. ಇರಾನ್ ತನ್ನ ಪರಮಾಣು ಕೇಂದ್ರಗಳನ್ನು ರಕ್ಷಿಸಿಕೊಳ್ಳಲು ವಿಫಲವಾಗಿರುವುದು ಅದರ ಮಿಲಿಟರಿ ಶಕ್ತಿಯ ಮೇಲೂ ಪ್ರಶ್ನೆಗಳನ್ನು ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net