Gurdwara Clash: ಗುರುದ್ವಾರದಲ್ಲಿ ಗುಂಡಿನ ಸದ್ದು: ಗನ್, ಕಿರ್ಪಾನ್ ದಾಳಿ: 11 ಮಂದಿ ಗಾಯ!

Gurdwara Clash
Gurdwara Clash
Published on
ಜರ್ಮನಿ: ಜರ್ಮನಿಯಲ್ಲಿರುವ ಒಂದು ಗುರುದ್ವಾರದಲ್ಲಿ(Gurdwara Clash) ಭೀಕರ ಹಿಂಸಾಚಾರ ನಡೆದಿದೆ. ಪಶ್ಚಿಮ ಜರ್ಮನಿಯ ಮೋರ್ಸ್ (Moers) ನಗರದಲ್ಲಿರುವ ಡ್ಯೂಸ್‌ಬರ್ಗ್ ಪ್ರದೇಶದ ಗುರುದ್ವಾರದಲ್ಲಿ ಸಂಭವಿಸಿದ ಈ ಘಟನೆದಲ್ಲಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಸುಮಾರು 40ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದ ಈ ಘರ್ಷಣೆ ಅಚ್ಚರಿಯ ಮಟ್ಟಕ್ಕೆ ತಲುಪಿದ್ದು, ಕಿರ್ಪಾನ್, ಚಾಕುಗಳು, ಪೆಪ್ಪರ್ ಸ್ಪ್ರೇ ಹಾಗೂ ಗುಂಡು ಹಾರಿಸಿದ ಘಟನೆಗಳೂ ವರದಿಯಾಗಿವೆ.

ಗುರುದ್ವಾರದಲ್ಲಿ ಹಿಂಸಾಚಾರ ಹೇಗೆ ಶುರುವಾಯಿತು?

ಈ ಘಟನೆ ಸೋಮವಾರ ನಡೆದಿದೆ. ಗುರುದ್ವಾರದಲ್ಲಿ ಪೂಜೆ ಆರಂಭವಾಗುವ ಮುನ್ನವೇ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ಶುರುವಾಯಿತು. ಕೆಲವೇ ಕ್ಷಣಗಳಲ್ಲಿ ಇದು ಹಿಂಸಾತ್ಮಕ ಘರ್ಷಣೆಗೆ ತಿರುಗಿತು.
ಸಾಕ್ಷಿದಾರರ ಪ್ರಕಾರ, ಕೆಲವು ವ್ಯಕ್ತಿಗಳು ಪೆಪ್ಪರ್ ಸ್ಪ್ರೇ ಬಳಸಿದ್ದು, ನಂತರ ಗುಂಡು ಹಾರಿಸಲಾಗಿದೆ. ಜೊತೆಗೆ ಚಾಕು ಮತ್ತು ಕಿರ್ಪಾನ್‌ಗಳನ್ನೂ ಬಳಸಲಾಗಿದೆ ಎಂದು ತಿಳಿದುಬಂದಿದೆ.

ಭಾರೀ ಪೊಲೀಸ್ ಕಾರ್ಯಾಚರಣೆ

ಘಟನೆಯ ತೀವ್ರತೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ವಿಶೇಷ ದಳಗಳನ್ನು ನಿಯೋಜಿಸಿದರು. ಸಂಪೂರ್ಣ ಪ್ರದೇಶವನ್ನು ಸುತ್ತುವರಿದು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರ ಮಾಹಿತಿ ಪ್ರಕಾರ, ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದ್ದು, ಒಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಹಿಂಸಾಚಾರದ ಮೂಲ ಕಾರಣ ಏನು?

ಈ ಭೀಕರ ಘಟನೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ, ಗುರುದ್ವಾರದ ಹಳೆಯ ಮತ್ತು ಹೊಸ ಆಡಳಿತ ಸಮಿತಿಗಳ ನಡುವೆ ನಡೆದ ವಿವಾದವೇ ಈ ಘರ್ಷಣೆಗೆ ಕಾರಣವಾಗಿರಬಹುದು. ಹೌದು, ಗುರುದ್ವಾರದ ನಿಧಿಗಳ (funds) ನಿರ್ವಹಣೆ, ಹೊಸ ಸಮಿತಿಯ ಆಯ್ಕೆ ಮತ್ತು ಪ್ರಭಾವ ಮತ್ತು ನಿಯಂತ್ರಣದ ವಿಚಾರ ಇವೆಲ್ಲವೂ ಈ ಹಿಂಸಾಚಾರದ ಹಿನ್ನೆಲೆಯಲ್ಲಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಾಕ್ಷಿದಾರರ ಭಯಾನಕ ಹೇಳಿಕೆ

ಒಬ್ಬ ಸಾಕ್ಷಿದಾರ ಈ ಘಟನೆ ಕುರಿತು ಹೇಳಿದ್ದು, “ಪೂಜೆ ಶುರುವಾಗುವ ಮುನ್ನವೇ ಅಚ್ಚರಿಯಾಗಿ ದಾಳಿ ನಡೆದಿದೆ. ಪೆಪ್ಪರ್ ಸ್ಪ್ರೇ ಬಳಸಿ ನಂತರ ಗುಂಡು ಹಾರಿಸಿದರು. ಚಾಕುಗಳನ್ನೂ ನೋಡಿದೆವು.” ಈ ಹೇಳಿಕೆ ಘಟನೆ ಎಷ್ಟು ಭೀಕರವಾಗಿತ್ತು ಎಂಬುದನ್ನು ತೋರಿಸುತ್ತದೆ.
ಧಾರ್ಮಿಕ ಸ್ಥಳದಲ್ಲಿ ಈ ರೀತಿಯ ಹಿಂಸಾಚಾರ ನಡೆದಿರುವುದು ವಿಶ್ವದಾದ್ಯಂತ ಆತಂಕ ಹುಟ್ಟಿಸಿದೆ. ಗುರುದ್ವಾರಗಳು ಸಾಮಾನ್ಯವಾಗಿ ಶಾಂತಿ ಮತ್ತು ಸೇವೆಯ ಪ್ರತೀಕವಾಗಿದ್ದು, ಇಂತಹ ಘಟನೆಗಳು ಸಮಾಜದಲ್ಲಿ ಕೆಟ್ಟ ಸಂದೇಶ ನೀಡುತ್ತವೆ. ಸಿಖ್ ಸಮುದಾಯದ ಹಲವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಧಾರ್ಮಿಕ ಸ್ಥಳಗಳ ಗೌರವ ಕಾಪಾಡುವಂತೆ ಕರೆ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net