ಗ್ರೀನ್​ಲ್ಯಾಂಡ್​, ಕ್ಯೂಬಾ, ಕೊಲಂಬಿಯಾ, ಮೆಕ್ಸಿಕೋ...ವೆನೆಜುವೆಲಾ ಬಳಿಕ ಟ್ರಂಪ್ ಮುಂದಿನ ದಾಳಿ ಯಾರ ಮೇಲೆ? Donald Trump

ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ವೆನೆಜುವೆಲಾ ಮೇಲೆ ದಾಳಿ ಮಾಡಿ ವಿದೇಶಿ ಆಕ್ರಮಣದ ರುಚಿ ನೋಡಿರುವ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
  • ತನ್ನ ಕಬಂಧ ಬಾಹುವನ್ನು ಮತ್ತಷ್ಟು ದೇಶಗಳ ಕಡೆ ಚಾಚಲು ರೆಡಿಯಾಗಿದೆ ವಿಶ್ವದ ದೊಡ್ಡಣ್ಣ
  • ಸ್ವಯಂ ಘೋಷಿತ ಶಾಂತಿಧೂತ ಅಂತ ಹೇಳಿಕೊಳ್ಳುವ ಟ್ರಂಪ್​, ಇದೀಗ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ
Donald Trump : ವೆನೆಜುವೆಲಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್​ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ ಅವರನ್ನು ಅಮೆರಿಕ ಬಂಧಿಸಿದ್ದು, ಈ ಕ್ರಮದ ವಿರುದ್ಧ ಜಾಗತಿಕವಾಗಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ವಿಶ್ವದ ದೊಡ್ಡಣ ಮಾತ್ರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಸದ್ಯ ವಿದೇಶಿ ಆಕ್ರಮಣದ ರುಚಿ ನೋಡಿರುವ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ತನ್ನ ಕಬಂಧ ಬಾಹುವನ್ನು ಮತ್ತಷ್ಟು ದೇಶಗಳ ಕಡೆ ಚಾಚಲು ರೆಡಿಯಾಗಿದ್ದಾರೆ.
ಸ್ವಯಂ ಘೋಷಿತ ಶಾಂತಿಧೂತ ಅಂತ ಹೇಳಿಕೊಳ್ಳುವ ಟ್ರಂಪ್​, ಇದೀಗ ಅದರ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ತಮ್ಮ ಎರಡನೇ ಅವಧಿಯಲ್ಲಿ, ಸಾಕಷ್ಟು ಕಠಿಣ ನಿರ್ಧಾರಗಳನ್ನು ಟ್ರಂಪ್​ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ವಲಸಿಗರು ಗಡೀಪಾರು, ಆ ಬಳಿಕ ವಿದೇಶಗಳ ಮೇಲೆ ಭಾರಿ ಸುಂಕ ಹೆಚ್ಚಳ ಹಾಗೂ ವೀಸಾ ನೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡರು. ಇವು ಕೂಡ ಭಾರೀ ಟೀಕೆಗೆ ಗುರಿಯಾಯಿತು. ಇದೀಗ ತಮ್ಮ ದೃಷ್ಟಿಯನ್ನು ಆಕ್ರಮಣದ ಕಡೆಗೆ ನೆಟ್ಟಿದ್ದಾರೆ. ಬೇರೆ ದೇಶಗಳ ಯುದ್ಧವನ್ನು ನಾನೇ ನಿಲ್ಲಿಸಿದೆ. ನಾನೊಬ್ಬ ಶಾಂತಿಧೂತ, ನನಗೆ ನೊಬೆಲ್​ ಕೊಡಬೇಕೆಂದು ಸ್ವಯಂ ಪ್ರಶಂಸೆ ಮಾಡಿಕೊಳ್ಳುವ ಟ್ರಂಪ್​, ಇದೀಗ ತಾವೇ ಯುದ್ಧದ ಭೀತಿಯನ್ನು ಸೃಷ್ಟಿ ಮಾಡಿದ್ದಾರೆ. ವೆನೆಜುವೆಲಾ ಮೇಲೆ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಬಂಧಿಸಿದ ಬಳಿಕ ಇದೀಗ ಟ್ರಂಪ್​ ಕಣ್ಣು ಬೇರೆ ದೇಶಗಳ ಮೇಲೂ ಬಿದ್ದಿದೆ. 
ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್ ನಗರಕ್ಕೆ ಕರೆತಂದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಆಡಳಿತವು ವಿವಿಧ ದೇಶಗಳಿಗೆ ಬೆದರಿಕೆ ಸಂದೇಶಗಳನ್ನು ನೀಡುತ್ತಿದೆ. ಕೊಲಂಬಿಯಾದ ಅಧ್ಯಕ್ಷರು "ಕೊಕೇನ್ ತಯಾರಿಸುತ್ತಿದ್ದಾರೆ" ಎಂದು ಆರೋಪಿಸಿರುವ ಟ್ರಂಪ್​, ನಿಮ್ಮದ್ದನ್ನು ನೀವು ನೋಡಿಕೊಂಡರೆ ಸರಿ ಎಂದು ವಾರ್ನಿಂಗ್​ ನೀಡಿದ್ದಾರೆ. ಅಲ್ಲದೆ, "ನಾವು ಕ್ಯೂಬಾದ ಬಗ್ಗೆಯೂ ಮಾತನಾಡುತ್ತೇವೆ" ಎಂದು ಹೇಳಿದ್ದಾರೆ. 
ಅಮೆರಿಕ ಅಧ್ಯಕ್ಷರ ಸಹಾಯಕರೊಬ್ಬರು ಗ್ರೀನ್‌ಲ್ಯಾಂಡ್‌ನ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಶೀಘ್ರದಲ್ಲೇ" ಎಂಬ ಶೀರ್ಷಿಕೆ ನೀಡಿದ್ದಾರೆ. ಇದನ್ನು ನೋಡಿದರೆ, ಟ್ರಂಪ್ ಅವರ ಮುಂದಿನ ಟಾರ್ಗೆಟ್​ ಗ್ರೀನ್‌ಲ್ಯಾಂಡ್‌ ಎನ್ನಲಾಗುತ್ತಿದೆ. ಅಷ್ಟಕ್ಕೂ ಅಮೆರಿಕದಲ್ಲಿ ಏನು ನಡೆಯುತ್ತಿದೆ? ತನ್ನ ನೆರೆಯ ರಾಷ್ಟ್ರಗಳ ಮೇಲೆ ಅಮೆರಿಕ ಕಂಗೆಣ್ಣು ಬೀರಿರುವುದೇಕೆ? ಎಂಬ ಪ್ರಶ್ನೆ ಮೂಡಿದೆ.
ಶನಿವಾರ ತಡರಾತ್ರಿ, ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ನಡೆಸಿ, ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಸ್ವಲ್ಪ ಸಮಯದ ಬೆನ್ನಲ್ಲೇ ಟ್ರಂಪ್ ಅವರ ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಅವರ ಪತ್ನಿ ಕೇಟೀ ಮಿಲ್ಲರ್, ತಮ್ಮ ಎಕ್ಸ್​ನಲ್ಲಿ ಒಂದು ಚಿತ್ರವನ್ನು ಪೋಸ್ಟ್ ಮಾಡಿದರು. ಆ ಪೋಸ್ಟ್​ ತಕ್ಷಣವೇ ಎಲ್ಲರ ಹುಬ್ಬೇರಿಸಿತು. ಆ ಚಿತ್ರದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಸಂಪೂರ್ಣ ಅಮೆರಿಕ ಧ್ವಜದಿಂದ ಚಿತ್ರಿಸಲಾಗಿದೆ. ಆ ಚಿತ್ರಕ್ಕೆ ಅವರು "ಶೀಘ್ರದಲ್ಲೇ" ಎಂಬ ಶೀರ್ಷಿಕೆ ನೀಡಿದ್ದಾರೆ. ಮಿಲ್ಲರ್​ ಅವರು ಅಮೆರಿಕದ ಪ್ರಭಾವಿ ವ್ಯಕ್ತಿಯಾಗಿದ್ದು, ಅವರು ಮಾಡಿರುವ ಪೋಸ್ಟ್ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ದೇಶವನ್ನು ಕೆರಳಿಸಿದೆ. ವಾಷಿಂಗ್ಟನ್‌ನಲ್ಲಿರುವ ಡೆನ್ಮಾರ್ಕ್​ ರಾಯಭಾರಿ ಜೆಸ್ಪರ್ ಮೊಲ್ಲರ್ ಸೊರೆನ್ಸನ್ ಪ್ರತಿಕ್ರಿಯಿಸಿದ್ದು, ಅಮೆರಿಕದ ನಿಕಟ ಮಿತ್ರನಾಗಿ ಡೆನ್ಮಾರ್ಕ್ ತನ್ನ ಪ್ರಾದೇಶಿಕ ಸಮಗ್ರತೆಗೆ "ಸಂಪೂರ್ಣ ಗೌರವ"ವನ್ನು ನಿರೀಕ್ಷಿಸುತ್ತದೆ ಎನ್ನುವ ಮೂಲಕ ಉಭಯ ದೇಶಗಳ ನಡುವಿನ ಸ್ನೇಹವನ್ನು ನೆನಪಿಸಿದೆ.
ಏಟು-ಎದಿರೇಟು?
ಇನ್ನು ಗ್ರೀನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಜೆನ್ಸ್-ಫ್ರೆಡ್ರಿಕ್ ನೀಲ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಮಿಲ್ಲರ್​ ಮಾಡಿರುವ ಪೋಸ್ಟ್ ನಮಗೆ ತೋರಿದ "ಅಗೌರವ" ಎಂದು ಕರೆದಿದ್ದಾರೆ. ರಾಷ್ಟ್ರಗಳು ಮತ್ತು ಜನರ ನಡುವಿನ ಸಂಬಂಧಗಳು ಪರಸ್ಪರ ಗೌರವ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಮೇಲೆ ನಿರ್ಮಿಸಲ್ಪಟ್ಟಿವೆ ಹೊರತು ನಮ್ಮ ಸ್ಥಾನಮಾನ ಮತ್ತು ನಮ್ಮ ಹಕ್ಕುಗಳನ್ನು ಕಡೆಗಣಿಸುವ ಸನ್ನೆಗಳ ಮೇಲಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ನಾವು ಭಯಪಡಲು ಅಥವಾ ಕಾಳಜಿ ವಹಿಸಲು ಯಾವುದೇ ಕಾರಣವಿಲ್ಲ. ಏಕೆಂದರೆ, ನಮ್ಮ ದೇಶ ಮಾರಾಟಕ್ಕಿಲ್ಲ ಮತ್ತು ನಮ್ಮ ಭವಿಷ್ಯವನ್ನು ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಂದ ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ. 
ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಬಗ್ಗೆ ಟ್ರಂಪ್ ತಮ್ಮ ಬೆದರಿಕೆಗಳನ್ನು ನಿಲ್ಲಿಸಬೇಕು ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಹೇಳಿದ್ದಾರೆ. ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಡ್ಯಾನಿಷ್ ಸಾಮ್ರಾಜ್ಯದ ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಅಮೆರಿಕಕ್ಕೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಡೆನ್ಮಾರ್ಕ್​ ಮತ್ತು ಗ್ರೀನ್​ಲ್ಯಾಂಡ್​ ನ್ಯಾಟೋ ಸದಸ್ಯ ರಾಷ್ಟ್ರಗಳು ಮತ್ತು ನ್ಯಾಟೋ ಮೈತ್ರಿ ಭದ್ರತಾ ಗ್ಯಾರಂಟಿ ನಮಗೂ ಅನ್ವಯಿಸುತ್ತದೆ ಎಂದು ಡೆನ್ಮಾರ್ಕ್​ ಪ್ರಧಾನಿ ಹೇಳಿದ್ದಾರೆ.

ಗ್ರೀನ್​ಲ್ಯಾಂಡ್​ ಮೇಲೆ ಮೊದಲ ದೃಷ್ಟಿ

ಟ್ರಂಪ್​ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಗ್ರೀನ್‌ಲ್ಯಾಂಡ್‌ನ ಬೇಡಿಕೆಯ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ, ಅವರು ಆ ಪ್ರದೇಶಕ್ಕೆ ಅಮೆರಿಕದ ರಾಯಭಾರಿಯನ್ನು ನೇಮಿಸಿದರು. ಇದು ಕೋಪನ್ ಹ್ಯಾಗನ್ ಮತ್ತು ಯುರೋಪಿಯನ್ ಒಕ್ಕೂಟದಿಂದ ತೀವ್ರ ಆಕ್ಷೇಪ ಎದುರಿಸಿತು. ಇದೀಗ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ ಎಂದು ಟ್ರಂಪ್​ ಹೇಳಿದ್ದಾರೆ. ವೆನೆಜುವೆಲಾದಲ್ಲಿ ಅಮೆರಿಕದ ಮಿಲಿಟರಿ ನಡೆಸಿದ ದಾಳಿಯು ಗ್ರೀನ್‌ಲ್ಯಾಂಡ್‌ಗೆ ಯಾವ ಸಂದೇಶವನ್ನು ರವಾನಿಸುತ್ತದೆ ಎಂದು ದಿ ಅಟ್ಲಾಂಟಿಕ್ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಟ್ರಂಪ್​, ಅದನ್ನು ಕಾದು ನೋಡಬೇಕಾಗುತ್ತದೆ. ಏನಾಗುತ್ತದೆ ಎಂದು ನನಗೂ ನಿಜವಾಗಿ ತಿಳಿದಿಲ್ಲ. ಆದರೆ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ. ನಮ್ಮ ರಕ್ಷಣೆಗಾಗಿ ಅದು ಬೇಕು ಎಂದಿದ್ದಾರೆ. 

ಕೊಲಂಬಿಯಾ, ಕ್ಯೂಬಾ ಮತ್ತು ಮೆಕ್ಸಿಕೋ ಕತೆ ಏನು?

ಅಂದಹಾಗೆ, ಡೊನಾಲ್ಡ್​ ಟ್ರಂಪ್​ ಅವರ ಕಣ್ಣು ಕೇವಲ ಗ್ರೀನ್​ಲ್ಯಾಂಡ್​ ಮೇಲೆ ಮಾತ್ರ ಬಿದ್ದಿಲ್ಲ. ಮಡುರೊ ಸೆರೆಹಿಡಿದ ನಂತರ, ಟ್ರಂಪ್ ಅವರು ಮೆಕ್ಸಿಕೊ, ಕ್ಯೂಬಾ ಮತ್ತು ಕೊಲಂಬಿಯಾ ಸರ್ಕಾರಗಳನ್ನು ನಮ್ಮ ಮುಂದಿನ ಟಾರ್ಗೆಟ್​ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಪಡೆಗಳು ಮಡುರೊ ಅವರನ್ನು ನ್ಯೂಯಾರ್ಕ್ ಕರೆತರುತ್ತಿದ್ದಾಗಲೇ ಟ್ರಂಪ್, ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ವಿರುದ್ಧ ವಾಗ್ದಾಳಿ ನಡೆಸಿದರು. ಕೊಲಂಬಿಯಾ ಅಧ್ಯಕ್ಷ ಕೊಕೇನ್ ತಯಾರಿಸಿ, ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸುತ್ತಿದ್ದಾರೆ. ಅವರ ಕೆಲಸ ಅವರು ನೋಡಿಕೊಂಡರೆ ಒಳ್ಳೆಯದು ಎಂದಿದ್ದಾರೆ. ಕೆರಿಬಿಯನ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ಹಡಗುಗಳ ವಿರುದ್ಧ ಟ್ರಂಪ್ ನಡೆಸಿದ ವೈಮಾನಿಕ ದಾಳಿಗಳ ಬಗ್ಗೆ ಪೆಟ್ರೋ ತೀವ್ರ ಟೀಕಾಕಾರರಾಗಿದ್ದಾರೆ. ವಾಸ್ತವವಾಗಿ, ಅಮೆರಿಕ ವೆನೆಜುವೆಲಾ ವಿರುದ್ಧ ದಾಳಿ ನಡೆಸಿದಾಗ, ಪೆಟ್ರೋ ಅಮೆರಿಕದ ಕ್ರಮಗಳನ್ನು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದರು ಮತ್ತು ಅವು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತವೆ ಎಂದು ಖಂಡಿಸಿದರು. 
ಭಾನುವಾರ, ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕೊಲಂಬಿಯಾ ಸರ್ಕಾರದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು. ಅಂತಹ ಕಾರ್ಯಾಚರಣೆ ನನಗೆ ಒಳ್ಳೆಯದು ಎಂದು ತೋರುತ್ತದೆ. ಕೊಲಂಬಿಯಾ ಕೂಡ ತುಂಬಾ ಅನಾರೋಗ್ಯದಿಂದ ಕೂಡಿದೆ. ಅದನ್ನು ಒಬ್ಬ ಅನಾರೋಗ್ಯ ಪೀಡಿತ ವ್ಯಕ್ತಿ ನಡೆಸುತ್ತಿದ್ದಾನೆ. ಆತ ಕೊಕೇನ್ ತಯಾರಿಸಿ ಅದನ್ನು ಯುನೈಟೆಡ್ ಸ್ಟೇಟ್ಸ್‌ಗೆ ಮಾರಾಟ ಮಾಡಲು ಇಷ್ಟಪಡುತ್ತಾನೆ. ಆದರೆ, ಅದನ್ನು ಹೆಚ್ಚು ಕಾಲ ಆತ ಮಾಡುವುದಿಲ್ಲ ಎನ್ನುವ ಮೂಲಕ ಕೊಲಂಬಿಯಾ ಮೇಲೆ ದಾಳಿ ಮಾಡುವ ಮುನ್ಸೂಚನೆ ನೀಡಿದರು. 

ಕ್ಯೂಬಾ ಗತಿಯೇನು?

ಅಮೆರಿಕದ ಅಧ್ಯಕ್ಷರು ಕ್ಯೂಬಾ ಬಗ್ಗೆಯೂ ಮಾತನಾಡಿದ್ದಾರೆ. ಹವಾನಾದಲ್ಲಿನ ಸರ್ಕಾರವೂ ಶೀಘ್ರದಲ್ಲೇ ಬೀಳುತ್ತದೆ ಎಂದಿದ್ದಾರೆ. ಸದ್ಯ ಕ್ಯೂಬಾ ತುಂಬಾ ತೊಂದರೆಯಲ್ಲಿದೆ ಎಂದು ಅವರ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿಕೆ ನೀಡಿದ ಸ್ವಲ್ಪ ಸಮಯದ ಬೆನ್ನಲ್ಲೇ ಟ್ರಂಪ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ವೆನೆಜುವೆಲಾವನ್ನು ಕ್ಯೂಬಾಗೆ ಹೋಲಿಸಿ ಟ್ರಂಪ್​ ಮಾತನಾಡಿದರು. ನಾವು ಕ್ಯೂಬಾದ ಜನರಿಗೆ ಸಹಾಯ ಮಾಡಲು ಬಯಸುತ್ತೇವೆ ಎಂದರು.

ಮೆಕ್ಸಿಕೋ ಮೇಲೆ ಕಣ್ಣೇಕೆ?

ಏನನ್ನಾದರೂ ಮಾಡಲೇಬೇಕು ಎನ್ನುವ ಮೂಲಕ ಟ್ರಂಪ್ ಮೆಕ್ಸಿಕೋ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್​, ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ತಮ್ಮ ದೇಶದಲ್ಲಿ ಡ್ರಗ್ ಕಾರ್ಟೆಲ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ, ಟ್ರಂಪ್​ ಕಣ್ಣು ಮೆಕ್ಸಿಕೋ ಮೇಲೂ ಬಿದ್ದಿದೆ. 
ಒಟ್ಟಾರೆ, ವೆನೆಜುವೆಲಾ ಮೇಲೆ ನಡೆದ ದಾಳಿ ಮತ್ತು ನಿಕೋಲಸ್ ಮಡುರೊ ಅವರ ಬಂಧನ ಬಳಿಕ ತಿಳಿದುಬಂದ ಸಂಗತಿ ಏನೆಂದರೆ,  ಟ್ರಂಪ್ ಅಗತ್ಯವಿರುವಲ್ಲೆಲ್ಲಾ ತಮ್ಮ ಅಧಿಕಾರವನ್ನು ಚಲಾಯಿಸಲು ನೋಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ, ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ ತಮ್ಮ ಅಧಿಕಾರ ವ್ಯಾಪ್ತಿ ವಿಸ್ತರಿಸುವ ಹಪಹಪಿಯನ್ನು ಸಾಬೀತುಪಡಿಸಲು ಅಮೆರಿಕದ ಅಧ್ಯಕ್ಷರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net