ಈ ಊರಿನಲ್ಲಿ ಗೊಂಬೆಗಳೇ ಮನುಷ್ಯರು! ಇಲ್ಲಿನ ಮೌನ ಲೋಕದ ಹಿಂದಿದೆ ಒಂದು ಕಣ್ಣೀರಿನ ಕಥೆ | Doll Village

ಗೊಂಬೆಗಳ ಊರು
ಗೊಂಬೆಗಳ ಊರು
Published on

ಪ್ರಮುಖ ಮುಖ್ಯಾಂಶಗಳು

  • ಮನುಷ್ಯನ ಜಾಗದಲ್ಲಿ ಊರನ್ನು ಆಳುತ್ತಿರುವ ಬೊಂಬೆಗಳು
  • ಮಾನವನಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ ವಾಸವಿವೆ ಗೊಂಬೆಗಳು
Doll Village: ಮನುಷ್ಯರಿಲ್ಲದ ಊರುಗಳನ್ನು ಊಹಿಸಿಕೊಳ್ಳುವುದೇ ಕಷ್ಟಸಾಧ್ಯ. ಏಕೆಂದರೆ, ನಾಡನ್ನು ಮಾತ್ರವಲ್ಲ, ಪ್ರಾಣಿಗಳ ಕಾಡನ್ನೂ ಆವರಿಸಿಕೊಂಡಿರುವ ಮಾನವನಿಗೆ ಸಣ್ಣ ಭೂಮಿ ಸಿಕ್ಕರೂ ಬಿಡೋದಿಲ್ಲ ಎನ್ನುವಂತಿದೆ ಪ್ರಸ್ತುತ ಕಾಲಮಾನ. ಹೀಗಿರುವಾಗ, ವಿಚಿತ್ರ-ವಿಸ್ಮಯ ಲೋಕಗಳ ನಡುವಿನಲ್ಲಿ ಜೀವನ ಸಾಗಿಸುತ್ತಿರುವ ಮನುಷ್ಯನಿಗೆ ಬೊಂಬೆಗಳೇ ಒಂದು ಊರನ್ನು ಆಳುತ್ತಿದೆ.
ತುಂಬಾ ವಿಚಿತ್ರವೆನಿಸಿದರೂ ಇದೇ ಸತ್ಯ. ಇಡೀ ಹಳ್ಳಿಯೇ ಮನುಷ್ಯನ ಓಡಾಟ, ಮಾತು-ವ್ಯವಹಾರಗಳಿಲ್ಲದೆ ಸಂಪೂರ್ಣವಾಗಿ ಮೌನವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ರಸ್ತುತ ಕೇವಲ 20 ಜನರು ಮಾತ್ರ ಇಲ್ಲಿ ಬದುಕುತ್ತಿದ್ದಾರೆ. ಅವರೆಲ್ಲ ವೃದ್ಧರೇ ಆಗಿದ್ದಾರೆ ಎನ್ನಲಾಗಿದೆ. ಇವರೆಲ್ಲ ತುಟಿಪಿಟಿಕ್​ ಎನ್ನದೆ, ಶಬ್ದ ಮಾಡದಂತೆ ಜೀವನ ಮಾಡುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ, ಈ ಊರಿನಲ್ಲಿ ಜನರಿಗಿಂತ ಬೊಂಬೆಗಳೇ ಜೀವಿಸುತ್ತಿರುವುದು ಕಲ್ಪನೆಗೂ ಮೀರಿ ಹೋಗಿದೆ.
ಈ ಗ್ರಾಮದ ಬೀದಿ ಬೀದಿಗಳಲ್ಲಿ, ಅಂಗಡಿಗಳು, ಬಸ್ ನಿಲ್ದಾಣಗಳು, ಜಮೀನು ಮತ್ತು ಶಾಲೆಗಳಲ್ಲಿ ಬೊಂಬೆಗಳೇ ತುಂಬಿವೆ. ಈ ವಿಚಿತ್ರ ಲೋಕದ ನಿರ್ಮಾಣಗೊಂಡಿದ್ದು ಹೇಗೆ? ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಜನರಿಗಿಂತ ಬೊಂಬೆಗಳೇ ಸ್ಥಾನಮಾನ ಪಡೆದುಕೊಂಡಿದ್ದು ಯಾಕಾಗಿ ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಅಕ್ಷರಶಃ ಬೆಚ್ಚಿಬೀಳಿಸುವ ರೋಚಕ ಸ್ಟೋರಿ.

ಎಲ್ಲಿದೆ ಈ ವಿಚಿತ್ರ ಹಳ್ಳಿ?

ಈ ವಿಚಿತ್ರ ಹಳ್ಳಿ ಟೆಕ್ನಾಲಜಿಗೆ ಪ್ರಖ್ಯಾತಿ ಹೊಂದಿರುವ ಜಪಾನ್‌ನ ಶಿಕೋಕು ದ್ವೀಪದಲ್ಲಿದೆ. ಇದರ ಹೆಸರು 'ನಾಗೋರೊ'. ಒಂದು ಕಾಲದಲ್ಲಿ, ಈ ಗ್ರಾಮವು ಎಲ್ಲ ಹಳ್ಳಿಯಂತೆ ಸದ್ದು-ಗದ್ದಲದಿಂದ ಕೂಡಿತ್ತು. ಆದರೆ, ಕಾಲಕ್ರಮೇಣ, ಯುವಕರು ಮತ್ತು ವಯಸ್ಕರು ಉದ್ಯೋಗ ಅರಸಿ ಬೇರೆ ನಗರ, ದೇಶಗಳಿಗೆ ವಲಸೆ ಹೋದಾಗ ಇಡೀ ಊರೇ ಬಿಕೋ ಎನ್ನಲು ಆರಂಭಿಸಿತು. ಉಳಿದಿದ್ದ ವೃದ್ಧರು ಇಹಲೋಕ ತ್ಯಜಿಸಿ, ಮನುಷ್ಯರು ಕಣ್ಮರೆಯಾಗುತ್ತಿದ್ದಂತೆ ಬೊಂಬೆಗಳು ಅವರ ಸ್ಥಾನವನ್ನು ತುಂಬಿರುವುದು ಒಂದು ರೀತಿ ಅಚ್ಚರಿಯೇ.

ಗೊಂಬೆಗಳ ಹಿಂದಿನ ಅಸಲಿ ಕಥೆ

ಈ ಹಳ್ಳಿಯನ್ನು ಗೊಂಬೆಗಳ ಲೋಕವಾಗಿ ಪರಿವರ್ತಿಸಿದ ಹಿಂದೆ ಅಯಾನೋ ತ್ಸುಕಿಮಿ ಎಂಬ ವೃದ್ಧ ಮಹಿಳೆಯ ಭಾವನಾತ್ಮಕ ಕಥೆ ಅಡಗಿದೆ. ದಶಕಗಳ ಹಿಂದೆ ಈ ಗ್ರಾಮವನ್ನು ತೊರೆದ ತ್ಸುಕಿಮಿ ಎಂಬಾಕೆ, ತನ್ನ ತವರು ಗ್ರಾಮಕ್ಕೆ ಹಿಂತಿರುಗಿದಾಗ ಊರಿನಲ್ಲಿ ಜನರು ಖಾಲಿಯಾಗಿರುವುದನ್ನು ಕಂಡು ಬೇಸರಕ್ಕೊಳಗಾದರು. ತನಗೆ ಪರಿಚಯವಿರುವ ಬಹುತೇಕ ಮಂದಿ ಕಣ್ಮರೆಯಾಗುತ್ತಿದ್ದಂತೆ ವಿಪರೀತ ಒಂಟಿತನ ಅನುಭವಿಸಿದರು. ಇದರಿಂದ ಹೊರಬರಲು ಮಾನವ ಗಾತ್ರದ ಗೊಂಬೆಯನ್ನು ಮಾಡಿ, ತನ್ನ ಮೃತ ತಂದೆಯ ನೆನಪಿಗಾಗಿ ಹೊಲದಲ್ಲಿ ಇರಿಸಿದಳು. ಅಲ್ಲಿಂದ ಇಡೀ ಗ್ರಾಮದಲ್ಲಿ ಮೃತಪಟ್ಟವರ ಮನೆಗಳಲ್ಲಿ ಗೊಂಬೆಗಳನ್ನು ಇಡುವ ಮೂಲಕ ಹಳ್ಳಿಯ ಲೋಕವನ್ನೇ ಬದಲಿಸಿದರು.
ಇಲ್ಲಿಯವರೆಗೆ, 400ಕ್ಕೂ ಹೆಚ್ಚು ಗೊಂಬೆಗಳನ್ನು ತಯಾರಿಸಿದ ಮಹಿಳೆ, ವಿಪರ್ಯಾಸ ಎನ್ನುವಂತೆ ಈ ಎಲ್ಲಾ ಬೊಂಬೆಗಳ ಹೆಸರುಗಳನ್ನು ಸ್ಥಳೀಯ ರಿಜಿಸ್ಟರ್‌ನಲ್ಲಿ ನೋಂದಾಯಿಸಲಾಗಿದೆ. ಈಗ, ಈ ಗೊಂಬೆಗಳ ಜನಸಂಖ್ಯೆಯು ಹಳ್ಳಿಯಲ್ಲಿರುವ ಮಾನವ ಜನಸಂಖ್ಯೆಗಿಂತ ಹೆಚ್ಚಿದೆ ಎಂದು ವರದಿಯಾಗಿದೆ. ಒಂದು ಕಾಲದಲ್ಲಿ ಅಷ್ಟಾಗಿ ಯಾರೊಬ್ಬರಿಗೂ ತಿಳಿಯದ ಈ ಊರು ಈಗ ಗೂಗಲ್​ನಲ್ಲಿಯೂ ಲಭ್ಯವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net