ಸುಂದರ್​ ಪಿಚೈಗೆ ಶಾಕ್​! ಗೂಗಲ್ ಸಿಇಒ ಭಾಷಣದ ಮಧ್ಯೆಯೇ ಹೊರನಡೆದ ವಿದ್ಯಾರ್ಥಿಗಳ ಗುಂಪು

ಗೂಗಲ್ ಸಿಇಒ ಸುಂದರ್ ಪಿಚೈ
ಗೂಗಲ್ ಸಿಇಒ ಸುಂದರ್ ಪಿಚೈ
Published on

ಪ್ರಮುಖ ಮುಖ್ಯಾಂಶಗಳು

  • ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಬೇಸರ
  • ಗೂಗಲ್​ ಸಿಇಓ ಸುಂದರ್​ ಪಿಚೈ ಭಾಷಣಕ್ಕೆ ಬಂದ ವೇಳೆಯೇ ಅವಮಾನ
  • ಸುಂದರ್​ ಭಾಷಣದ ಮಧ್ಯೆಯೇ ಎದ್ದು ಹೋದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಅಮೆರಿಕ: ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣಕ್ಕೆಂದು ಎದ್ದು ನಿಂತ ಗೂಗಲ್​ ಸುಂದರ್ ಪಿಚೈ ಅವರಿಗೆ ನೂರಾರು ವಿದ್ಯಾರ್ಥಿಗಳ ಗುಂಪಿಂದ ಭಾರಿ ಮುಖಭಂಗ ಉಂಟಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಂದರ್​, ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲು ವೇದಿಕೆಗೆ ಆಗಮಿಸಿದರು. ಇದೇ ವೇಳೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು, ಶಿಳ್ಳೆ, ಚಪ್ಪಾಳೆ ಹೊಡೆದು, ಪ್ಯಾಲೆಸ್ತೀನಿಯನ್ ಧ್ವಜಗಳನ್ನು ಎತ್ತಹಿಡಿದು ತಮ್ಮ ಅಸಮಾಧಾನ ತೋರಿದ್ದಾರೆ. ನಿನ್ನೆ (ಜೂ.14) ನಡೆದ ಕಾರ್ಯಕ್ರಮದಲ್ಲಿ, ಸುಂದರ್​ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಭಾಂಗಣದಿಂದ ಏಕಾಏಕಿ ಹೊರನಡೆದರು. ಈ ಘಟನೆಯ ಫೋಟೋ, ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಗಮನವನ್ನು ಸೆಳೆದಿದೆ.

ಪ್ಯಾಲೆಸ್ತೀನಿಯನ್ ನ್ಯಾಯಕ್ಕೆ ಕೂಗು!

ಇಸ್ರೇಲ್ ಸರ್ಕಾರದೊಂದಿಗಿನ ಗೂಗಲ್‌ನ 'ಪ್ರಾಜೆಕ್ಟ್ ನಿಂಬಸ್' ಒಪ್ಪಂದದ ವಿರುದ್ಧ ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಯೋಜನೆಯ ಭಾಗವಾಗಿ, ಗೂಗಲ್ ಮತ್ತು ಅಮೆಜಾನ್ ಇಸ್ರೇಲ್ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಮಿಲಿಟರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಪೂರೈಸುತ್ತಿವೆ. ಇದು ಪಿಚೈ ವಿರುದ್ಧ ಪ್ರತಿಭಟಿಸಲು ಮುಖ್ಯ ಕಾರಣ ಎನ್ನಲಾಗಿದೆ.
ಗಾಜಾದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಇಸ್ರೇಲ್ ಸುಧಾರಿತ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳನ್ನು ಬಳಸುತ್ತಿದೆ ಎಂಬ ಆರೋಪವು ಕೇಳಿಬಂದಿದೆ. ಯಾವಾಗ ಕಾರ್ಯಕ್ರಮವನ್ನು ಉದ್ದೇಶಿಸಿ ಸುಂದರ್ ಪಿಚೈ ಭಾಷಣಕ್ಕೆ ಬಂದರೋ, ತಕ್ಷಣವೇ ಅಲ್ಲೇ ಇದ್ದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಭಾಂಗಣದಿಂದ ಕೂಗುತ್ತಾ, ಶಿಳ್ಳೆ ಹೊಡೆಯುತ್ತಾ ಹೊರನಡೆದಿದ್ದಾರೆ.

ಇಸ್ರೇಲ್​-ಗೂಗಲ್​ ಒಪ್ಪಂದ ಸಹಿಸದು

ಇದನ್ನೆಲ್ಲ ಗಮನಿಸಿದ ಸುಂದರ್​, ತಮ್ಮ ಭಾಷಣದಲ್ಲಿ ಎಲ್ಲಿಯೂ ಇಸ್ರೇಲ್, ಗಾಜಾ ಅಥವಾ ಪ್ರಾಜೆಕ್ಟ್ ನಿಂಬಸ್ ಕುರಿತಾಗಿ ಉಲ್ಲೇಖಿಸಲಿಲ್ಲ. ಆದಾಗ್ಯೂ, ಗೂಗಲ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅತೃಪ್ತಿ ವ್ಯಕ್ತಪಡಿಸಿ ನಡೆಸಿದ ಪ್ರತಿಭಟನೆಯು ಸದ್ಯ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ, ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಎಐ ಪ್ರಭಾವಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಕಳವಳ ಹೆಚ್ಚಾಗಿದೆ.
ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗಾವಕಾಶಗಳನ್ನು ಕಸಿಯುವ ಭಯ ಗರಿಗೆದರಿದೆ. ಇದರಿಂದಾಗಿ, ಟೆಕ್ ಕಂಪನಿ ಮ್ಯಾನೇಜ್​ಮೆಂಟ್​ ಮತ್ತು ಪ್ರಮುಖ ತಂತ್ರಜ್ಞಾನ ತಜ್ಞರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಾಜರಾಗುವಾಗ ಇಂತಹ ಪ್ರಶ್ನೆಗಳು ಮತ್ತು ಪ್ರತಿಭಟನೆಗಳನ್ನು ಎದುರಿಸುವ ಸಂದರ್ಭಗಳು ಸಾಮಾನ್ಯ ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net