ಒಳ್ಳೆಯದಕ್ಕೆ ಒಳ್ಳೆಯದು, ಯುದ್ಧಕ್ಕೆ ಯುದ್ಧ! ಇರಾನ್ ವಿದೇಶಾಂಗ ಸಚಿವ ನೀಡಿದ ಆ ಕರಾಳ ಎಚ್ಚರಿಕೆ ಏನು..? Abbas Araghchi
ಒಳ್ಳೆಯದಕ್ಕೆ ಒಳ್ಳೆಯದು, ಯುದ್ಧಕ್ಕೆ ಯುದ್ಧ! ಇರಾನ್ ವಿದೇಶಾಂಗ ಸಚಿವ ನೀಡಿದ ಆ ಕರಾಳ ಎಚ್ಚರಿಕೆ ಏನು..?
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಂತಿಮ ಹಂತದಲ್ಲಿ ಇಸ್ಲಾಮಾಬಾದ್ ಶಾಂತಿ ಒಪ್ಪಂದದ ವೈಫಲ್ಯ.
ಅಮೆರಿಕದ 'ಶಿಫ್ಟಿಂಗ್ ಗೋಲ್‌ಪೋಸ್ಟ್' ನೀತಿಯನ್ನು ಖಂಡಿಸಿದ ಇರಾನ್.
ಇರಾನ್ ಬಂದರುಗಳ ಮೇಲೆ ಅಧಿಕೃತವಾಗಿ ಅಮೆರಿಕದ ದಿಗ್ಬಂಧನ ಆರಂಭ.
ನಮ್ಮನ್ನು ಪರೀಕ್ಷಿಸಬೇಡಿ" ಎಂದು ಅಮೆರಿಕಕ್ಕೆ ಇರಾನ್ ಸ್ಪೀಕರ್ ಎಚ್ಚರಿಕೆ.
ಟೆಹ್ರಾನ್: ಕಳೆದ 47 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ಅತ್ಯಂತ ಉನ್ನತ ಮಟ್ಟದ ಅಮೆರಿಕ-ಇರಾನ್ ನೇರ ಮಾತುಕತೆಗಳು ಅಂತಿಮ ಕ್ಷಣದಲ್ಲಿ ಹಳಿ ತಪ್ಪಿವೆ. ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಸುದೀರ್ಘ ಸಂಧಾನದ ನಂತರ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ(Abbas Araghchi), ಶಾಂತಿ ಒಪ್ಪಂದವು ಅಂತಿಮಗೊಳ್ಳುವ ಹಂತದಲ್ಲಿತ್ತು. ಆದರೆ ಅಮೆರಿಕದ ಪಟ್ಟುಹಿಡಿಯುವ ಧೋರಣೆಯಿಂದಾಗಿ ಎಲ್ಲವೂ ವ್ಯರ್ಥವಾಯಿತು ಎಂದು ಕಿಡಿಕಾರಿದ್ದಾರೆ.
ಇರಾನ್ ವಿದೇಶಾಂಗ ಸಚಿವರ ಗಂಭೀರ ಆರೋಪ
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಬ್ಬಾಸ್ ಅರಾಗ್ಚಿ, ನಾವು ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಮಾತುಕತೆಯಲ್ಲಿ ತೊಡಗಿದ್ದೆವು. ಇಸ್ಲಾಮಾಬಾದ್ ಒಪ್ಪಂದಕ್ಕೆ ಸಹಿ ಹಾಕಲು ನಾವು ಕೇವಲ ಇಂಚುಗಳಷ್ಟು ದೂರದಲ್ಲಿದ್ದೆವು. ಆದರೆ ಅಮೆರಿಕದ ಸೈನ್ಯವು ದಿಗ್ಬಂಧನದ ಹಠ ಹಿಡಿಯಿತು ಮತ್ತು ಅಂತಿಮ ಕ್ಷಣದಲ್ಲಿ ತನ್ನ ಷರತ್ತುಗಳನ್ನು ಬದಲಿಸಿತು ಎಂದು ಆಕ್ರೋಶ ಹೊರಹಾಕಿದ್ದಾರೆ. ಒಳ್ಳೆಯದಕ್ಕೆ ಒಳ್ಳೆಯದು, ಶತ್ರುತ್ವಕ್ಕೆ ಶತ್ರುತ್ವವೇ ಉತ್ತರ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಅಧ್ಯಕ್ಷರ ನಿಲುವು ಮತ್ತು 'ಗೌರವ'ದ ಬೇಡಿಕೆ
ಈ ಕುರಿತು ಪ್ರತಿಕ್ರಿಯಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಅಮೆರಿಕವು ತನ್ನ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು ಇರಾನ್ ರಾಷ್ಟ್ರದ ಹಕ್ಕುಗಳನ್ನು ಗೌರವಿಸಿದರೆ ಮಾತ್ರ ಶಾಂತಿ ಸಾಧ್ಯವಾಗುತ್ತದೆ. ಗೌರವಯುತ ವಾತಾವರಣವಿದ್ದರೆ ಖಂಡಿತವಾಗಿಯೂ ಒಪ್ಪಂದದ ಮಾರ್ಗಗಳು ತೆರೆಯುತ್ತವೆ ಎಂದು ಹೇಳಿದ್ದಾರೆ. ಸಂಧಾನ ತಂಡದ ನೇತೃತ್ವ ವಹಿಸಿದ್ದ ಮೊಹಮ್ಮದ್ ಬಾಕರ್ ಖಾಲಿಬಾಫ್ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ಟ್ರಂಪ್ ಅವರ ನೌಕಾ ದಿಗ್ಬಂಧನದ ಎಚ್ಚರಿಕೆಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಟ್ರಂಪ್ ಅವರ ಬೆದರಿಕೆಗಳು ಇರಾನ್ ರಾಷ್ಟ್ರದ ಮೇಲೆ ಯಾವುದೇ ಪರಿಣಾಮ ಬೀರದು. ನೀವು ತರ್ಕಬದ್ಧವಾಗಿ ಬಂದರೆ ನಾವು ತರ್ಕದಿಂದ ಉತ್ತರಿಸುತ್ತೇವೆ, ನೀವು ಯುದ್ಧಕ್ಕೆ ಬಂದರೆ ನಾವು ಯುದ್ಧವನ್ನೇ ಮಾಡುತ್ತೇವೆ ಎಂದು ಗುಡುಗಿದ್ದಾರೆ. ನಮ್ಮ ಇಚ್ಛಾಶಕ್ತಿಯನ್ನು ಮತ್ತೊಮ್ಮೆ ಪರೀಕ್ಷಿಸಲು ಅವರಿಗೆ ಅವಕಾಶ ನೀಡಿ, ನಾವು ಅವರಿಗೆ ದೊಡ್ಡ ಪಾಠವನ್ನೇ ಕಲಿಸುತ್ತೇವೆ ಎಂದು ಸಿಂಹಘರ್ಜನೆ ಮಾಡಿದ್ದಾರೆ.
ಜಾರಿಗೆ ಬಂದ ಅಮೆರಿಕದ ನೌಕಾ ದಿಗ್ಬಂಧನ
ಇರಾನ್ ಸಮಯ ಸಂಜೆ 5:30ಕ್ಕೆ ಸರಿಯಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್ ಬಂದರುಗಳ ಮೇಲೆ ದಿಗ್ಬಂಧನವನ್ನು ಆರಂಭಿಸಿದೆ.
ನಿರ್ಬಂಧ: ಇರಾನ್‌ನ ಎಲ್ಲಾ ಬಂದರುಗಳಿಗೆ ಬರುವ ಮತ್ತು ಹೋಗುವ ಹಡಗುಗಳನ್ನು ತಪಾಸಣೆ ಮಾಡುವುದು ಮತ್ತು ತಡೆಯುವುದು.
ಶಕ್ತಿ ಪ್ರದರ್ಶನ: ಟೋಲ್ ಪಾವತಿಸುವ ಅಥವಾ ಅಕ್ರಮವಾಗಿ ತೈಲ ಸಾಗಿಸುವ ಹಡಗುಗಳ ಮೇಲೆ ದಾಳಿ ನಡೆಸಲು ಅಮೆರಿಕ ನೌಕಾಪಡೆಗೆ ಸೂಚನೆ ನೀಡಲಾಗಿದೆ.
ಜಾಗತಿಕ ಪರಿಣಾಮಗಳು ಮತ್ತು ಆತಂಕ
ಮಾತುಕತೆಗಳು ವಿಫಲವಾಗಿರುವುದು ಜಾಗತಿಕ ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಹೋರ್ಮುಜ್ ಜಲಸಂಧಿಯ ಮೂಲಕ ನಡೆಯುವ ಶೇ. 20ರಷ್ಟು ತೈಲ ಸಾಗಾಟಕ್ಕೆ ಕುತ್ತು ಬಂದಿರುವುದರಿಂದ, ವಿಶ್ವದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಲಿವೆ. ಇಸ್ಲಾಮಾಬಾದ್‌ನಲ್ಲಿ ಒಂದು ವಾರದ ಕಾಲ ನೆಲೆಸಿದ್ದ ಅಂತಾರಾಷ್ಟ್ರೀಯ ರಾಜತಾಂತ್ರಿಕರು ಈಗ ಮೌನಕ್ಕೆ ಶರಣಾಗಿದ್ದಾರೆ.
ಒಟ್ಟಾರೆಯಾಗಿ, ಇರಾನ್ ಮತ್ತು ಅಮೆರಿಕ ನಡುವಿನ ಈ ದರ್ಪ ಮತ್ತು ಅಹಂನ ಹೋರಾಟವು ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಇರಾನ್ ತನ್ನ ಗೌರವಕ್ಕಾಗಿ ಹೋರಾಡುತ್ತಿದ್ದರೆ, ಅಮೆರಿಕ ತನ್ನ ಪಾರುಪತ್ಯ ಉಳಿಸಿಕೊಳ್ಳಲು ಹವಣಿಸುತ್ತಿದೆ,(ಏಜೆನ್ಸೀಸ್).