ಭಾರತದ ತಪ್ಪು ನಕ್ಷೆ ಬಿತ್ತರಿಸಿದ ಗ್ಲ್ಯಾಸ್ಗೋ ಹೋಟೆಲ್: ಲವ್ಲೈನಾ ಅಸಮಾಧಾನ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್! Common wealth Games 2026

Common wealth Games 2026 (ಚಿತ್ರ X)
Common wealth Games 2026 (ಚಿತ್ರ X)
Published on

Common wealth Games 2026: ಗ್ಲ್ಯಾಸ್ಗೋ ಮೂಲದ 'ಮಿಸ್ಟರ್ ಸಿಂಗ್ಸ್ ಇಂಡಿಯಾ' ಹೋಟೆಲ್ ತನ್ನ ಲೋಗೋದಲ್ಲಿ ಭಾರತದ ತಪ್ಪು ನಕ್ಷೆಯನ್ನು ಬಳಸಿ ವಿವಾದಕ್ಕೆ ಈಡಾಗಿತ್ತು. ಕೊನೆಗೆ ಈ ಕುರಿತು ಕ್ರೀಡಾಪಟು ಹಾಗೂ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ ಹೋಟೆಲ್ ಆಡಳಿತ ಮಂಡಳಿ, ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದೆ.

ಏನಿದು ಘಟನೆ?

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ ಹಾಗೂ 3 ಬೆಳ್ಳಿ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಬಾಕ್ಸಿಂಗ್ ತಂಡಕ್ಕೆ ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿರುವ ‘ಮಿಸ್ಟರ್ ಸಿಂಗ್ಸ್ ಇಂಡಿಯಾ’ (Mister Singh's India) ಹೋಟೆಲ್‌ನಲ್ಲಿ ಆತಿಥ್ಯ ನೀಡಲಾಗಿತ್ತು. ಈ ವೇಳೆ ಅವರಿಗೆ ನೀಡಲಾಗಿದ್ದ ಟಿಶ್ಯೂ ಪೇಪರ್ (ನ್ಯಾಪ್‌ಕಿನ್) ಮೇಲೆ ಭಾರತದ ನಕ್ಷೆಯನ್ನು ಅರೆಬರೆಯಾಗಿ ಚಿತ್ರಿಸಲಾಗಿತ್ತು. ಇದು ಭಾರತೀಯ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ಭಾರತದ ಖ್ಯಾತ ಬಾಕ್ಸರ್ ಲವ್ಲೈನಾ ಬೊರ್ಗೊಹೈನ್ ಅವರು ವಿಡಿಯೋ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. "ದಯವಿಟ್ಟು ಇದನ್ನು ತಪ್ಪಾಗಿ ತಿಳಿಯಬೇಡಿ, ಆದರೆ ಇದರಿಂದ ನಮಗೆ ಬೇಸರವಾಗಿದೆ. ಈ ನಕ್ಷೆಯಲ್ಲಿ ನಮ್ಮ ಈಶಾನ್ಯ ಭಾರತದ ಭಾಗವೇ ಇಲ್ಲ. ಹೋಟೆಲ್ ಹೊರಗಡೆ ಹಾಕಿರುವ ಬೋರ್ಡ್‌ನಲ್ಲೂ ಈ ಭಾಗವನ್ನು ಕತ್ತರಿಸಲಾಗಿದೆ. ಈಶಾನ್ಯ ಭಾರತದವಳಾಗಿ ನನಗಿದು ತುಂಬಾ ನೋವು ತಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಿ," ಎಂದು ಅವರು ವಿನಂತಿಸಿಕೊಂಡಿದ್ದರು.

ಬಹಿರಂಗ ಕ್ಷಮೆಯಾಚನೆ ಮತ್ತು ಖಾತೆ ಡಿಲೀಟ್

ಲವ್ಲೈನಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೋಟೆಲ್ ಆಡಳಿತ ಮಂಡಳಿ ತಕ್ಷಣವೇ ಬಹಿರಂಗವಾಗಿ ಕ್ಷಮೆಯಾಚಿಸಿತು.

ಹೋಟೆಲ್ ನೀಡಿದ ಸ್ಪಷ್ಟನೆ ಏನು?

"ಕಳೆದ 32 ವರ್ಷಗಳಿಂದ ನಾವು ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದೇವೆ. ಭಾರತದ ತಪ್ಪು ನಕ್ಷೆ ಪ್ರದರ್ಶಿಸಿದ್ದಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಯಾರ ಮನಸ್ಸಿಗೂ ನೋವನ್ನುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಶೀಘ್ರದಲ್ಲೇ ನಮ್ಮ ಲೋಗೋವನ್ನು ಸರಿಯಾದ ನಕ್ಷೆಯೊಂದಿಗೆ ಬದಲಾಯಿಸುತ್ತೇವೆ. ಭಾರತೀಯ ಬಾಕ್ಸಿಂಗ್ ತಂಡಕ್ಕೆ ಆತಿಥ್ಯ ನೀಡಿದ್ದು ನಮಗೆ ಸಿಕ್ಕ ದೊಡ್ಡ ಗೌರವ," ಎಂದು ಹೋಟೆಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿಶೇಷವೆಂದರೆ, ಈ ಕ್ಷಮಾಪಣಾ ಪತ್ರವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹೋಟೆಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net