ಲೈಕ್ಸ್‌ಗಾಗಿ ಜೀವದ ಜೊತೆ ಜೂಜಾಟ: ವಿಷಕಾರಿ ಏಡಿ ಸವಿದು ಸಾವಿನ ಮನೆ ಸೇರಿದ ಫುಡ್​ ವ್ಲಾಗರ್ | Food Vlogger

ವಿಷಕಾರಿ ಏಡಿ ತಿಂದು ಸಾವನ್ನಪ್ಪಿದ ಫುಡ್​ ವ್ಲಾಗರ್​ ಎಮ್ಮಾ ಅಮಿತ್​
ವಿಷಕಾರಿ ಏಡಿ ತಿಂದು ಸಾವನ್ನಪ್ಪಿದ ಫುಡ್​ ವ್ಲಾಗರ್​ ಎಮ್ಮಾ ಅಮಿತ್​
Published on

ಪ್ರಮುಖ ಮುಖ್ಯಾಂಶಗಳು

  • ಫುಡ್​ ವ್ಲಾಗಿಂಗ್​ ಹುಚ್ಚಿಗೆ ಜೀವ ಕಳೆದುಕೊಂಡ ಮಹಿಳೆ
  • ವೈರಲ್​ ವಿಡಿಯೋಗಾಗಿ ವಿಷಕಾರಿ ಏಡಿ ತಿಂದ ಎಮ್ಮಾ ಅಮಿತ್​
  • ಸಾಮಾಜಿಕ ಮಾಧ್ಯಮಗಳಲ್ಲಿ ಫೇಮಸ್​ ಆಗಲು ಹುಚ್ಚುತನ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ
ಫಿಲಿಪೈನ್ಸ್‌: ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈವಿಧ್ಯಮಯ ವಿಡಿಯೋಗಳನ್ನು ಮಾಡಿ ಫೇಮಸ್ ಆಗುವ ಹುಚ್ಚು ಎಲ್ಲರಿಗೂ ಇದೆ. ಇದಕ್ಕಾಗಿ ಕೆಲವರು ಅಪಾಯಕಾರಿ ಸಾಹಸಗಳನ್ನು ಮಾಡಿದರೆ, ಇನ್ನು ಕೆಲವರು ವಿಚಿತ್ರ ಆಹಾರಗಳನ್ನು ಸೇವಿಸಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈಗ ಅಂತಹದ್ದೇ ಒಂದು ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫುಡ್ ವ್ಲಾಗ್ (Food Vlogger) ಮಾಡುತ್ತಿದ್ದ 51 ವರ್ಷದ ಮಹಿಳೆಯೊಬ್ಬರು 'ಡೆವಿಲ್ ಏಡಿ' (Devil Crab) ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ನಡೆದಿದ್ದೇನು?

ಎಮ್ಮಾ ಅಮಿತ್ ಎಂಬ ಫಿಲಿಪಿನೋ ಫುಡ್ ವ್ಲಾಗರ್ ಫೆಬ್ರವರಿ 4 ರಂದು ತಮ್ಮ ಸ್ನೇಹಿತರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ತೆರಳಿ ಚಿಪ್ಪುಮೀನುಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ಕಂಡ ಪ್ರಕಾಶಮಾನವಾದ ಬಣ್ಣದ ಡೆವಿಲ್ ಏಡಿಗಳನ್ನು ಸಂಗ್ರಹಿಸಿ ತಂದ ಎಮ್ಮಾ, ಅವುಗಳನ್ನು ತೆಂಗಿನ ಹಾಲಿನಲ್ಲಿ ಬೇಯಿಸುತ್ತಾ, ನಂತರ ಅವುಗಳನ್ನು ಸವಿಯುವ ವಿಡಿಯೋವನ್ನು ಚಿತ್ರಿಕರಿಸಿದ್ದಾಳೆ.
ಆದರೆ, ಮರುದಿನವೇ ಈ ಏಡಿಯ ವಿಷವು ತನ್ನ ಪ್ರತಾಪ ತೋರಿಸಲು ಶುರುಮಾಡಿತು. ಎಮ್ಮಾ ಅವರಿಗೆ ತೀವ್ರ ಸೆಳೆತ ಉಂಟಾಗಿ, ಉಸಿರಾಟದ ತೊಂದರೆಯಿಂದ ತುಟಿಗಳು ಕಡು ನೀಲಿ ಬಣ್ಣಕ್ಕೆ ತಿರುಗಿದವು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 6 ರಂದು ಅವರು ಕೊನೆಯುಸಿರೆಳೆದರು.
ಎಲ್ಲರಿಗೂ ಶಾಕ್ ಕೊಟ್ಟ ಸಂಗತಿ
ಗ್ರಾಮದ ಮುಖ್ಯಸ್ಥ ಲ್ಯಾಡಿ ಜೆಮಾಂಗ್ ಈ ಬಗ್ಗೆ ಮಾತನಾಡಿ, ಎಮ್ಮಾ ಮತ್ತು ಆಕೆಯ ಪತಿ ಇಬ್ಬರೂ ಅನುಭವಿ ಮೀನುಗಾರರು. ಸಮುದ್ರ ತೀರದಲ್ಲೇ ವಾಸಿಸುವ ಅವರಿಗೆ ಯಾವ ಜೀವಿ ವಿಷಕಾರಿ ಎಂಬುದು ಚೆನ್ನಾಗಿ ತಿಳಿದಿತ್ತು. ಹೀಗಿದ್ದೂ ಆಕೆ ಈ ಡೆವಿಲ್ ಏಡಿಯನ್ನು ಏಕೆ ತಿಂದಳು ಎಂಬುದು ನಮಗೂ ಗೊಂದಲವಾಗಿದೆ, ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಕೇವಲ ಲೈಕ್ಸ್ ಅಥವಾ ವಿಡಿಯೋಗಾಗಿ ಗೊತ್ತಿದ್ದೂ ಪ್ರಾಣವನ್ನು ಪಣಕ್ಕಿಟ್ಟರಾ ಎಂಬ ಸಂಶಯ ಈಗ ಎಲ್ಲರನ್ನು ಕಾಡುತ್ತಿದೆ.

ಏನಿದು ದೆವ್ವ(ಡೆವಿಲ್​)ದ ಏಡಿ? ಯಾಕಿಷ್ಟು ಡೇಂಜರ್?

ಡೆವಿಲ್ ಏಡಿಗಳನ್ನು ವಿಷಕಾರಿ ರೀಫ್ ಏಡಿ ಎಂದೂ ಕರೆಯುತ್ತಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಂಡುಬರುವ ಇವುಗಳು ನೋಡಲು ಆಕರ್ಷಕವಾಗಿರುತ್ತವೆ. ಆದರೆ ಇವುಗಳಲ್ಲಿ ಪಫರ್‌ಫಿಶ್‌ನಲ್ಲಿ ಇರುವಂತೆಯೇ ಮಾರಕವಾದ ಸ್ಯಾಕ್ಸಿಟಾಕ್ಸಿನ್ ಮತ್ತು ಟೆಟ್ರೋಡೋಟಾಕ್ಸಿನ್ ಎಂಬ ನ್ಯೂರೋಟಾಕ್ಸಿನ್‌ಗಳಿರುತ್ತವೆ.
ಈ ಏಡಿಗಳಲ್ಲಿರುವ ವಿಷವು ಅಡುಗೆ ಮಾಡುವುದರಿಂದ ಅಥವಾ ಕುದಿಸುವುದರಿಂದ ನಾಶವಾಗುವುದಿಲ್ಲ. ಇವುಗಳನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ದೇಹದ ಸ್ನಾಯುಗಳು ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ಸಾವು ಸಂಭವಿಸಬಹುದು.

ಸಾರ್ವಜನಿಕರಿಗೆ ಎಚ್ಚರಿಕೆ

ಈ ಘಟನೆಯ ನಂತರ ಪೋರ್ಟೊ ಪ್ರಿನ್ಸೆಸಾ ಭಾಗದ ಜನರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನಮ್ಮ ಪಟ್ಟಣದಲ್ಲಿ ಈ ಏಡಿಗಳು ಈಗಾಗಲೇ ಎರಡು ಜೀವಗಳನ್ನು ಬಲಿ ಪಡೆದಿವೆ. ದಯವಿಟ್ಟು ಇವುಗಳಿಂದ ದೂರವಿರಿ, ನಿಮ್ಮ ಜೀವನದೊಂದಿಗೆ ಜೂಜಾಡಬೇಡಿಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net