ಗಡಾಫಿ ಪುತ್ರ ಸೈಫ್ ಅಲ್-ಇಸ್ಲಾಂ ಹತ್ಯೆ! ಮನೆಯೊಳಗೆ ಕೊಂದಿದ್ದಾರೂ ಹೇಗೆ? ಇಲ್ಲಿದೆ ಹತ್ಯೆಯ ಪಿನ್​ ಟು ಪಿನ್​​ ಮಾಹಿತಿ | Gaddafi

Gaddafi
Gaddafi
Published on

ಪ್ರಮುಖ ಮುಖ್ಯಾಂಶಗಳು

  • ಮುಅಮ್ಮರ್ ಗಡಾಫಿಯ(Gaddafi) ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಸೈಫ್ ಅಲ್-ಇಸ್ಲಾಂ ಗಡಾಫಿ ಹತ್ಯೆ
  • ತಡರಾತ್ರಿ ಸುಮಾರು 2:30ಕ್ಕೆ ನಾಲ್ವರು ಮುಖವಾಡಧಾರಿ ಸಶಸ್ತ್ರ ದುಷ್ಕರ್ಮಿಗಳು ಸೈಫ್ ಅವರ ನಿವಾಸಕ್ಕೆ ನುಗ್ಗಿ ಕೊಲೆ
  • ಚುನಾವಣೆಯ ಹೊಸ್ತಿಲಲ್ಲೇ ಈ ಹತ್ಯೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಲಿಬಿಯಾ: ಲಿಬಿಯಾದ ದಶಕಗಳ ಕಾಲದ ಆಡಳಿತಗಾರ ಮುಅಮ್ಮರ್ ಗಡಾಫಿಯ(Gaddafi) ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಮಂಗಳವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಶ್ಚಿಮ ಲಿಬಿಯಾದ ಜಿಂಟಾನ್ ನಗರದ ಅವರ ನಿವಾಸದ ಮೇಲೆ ನಡೆದ ಭೀಕರ ದಾಳಿಯಲ್ಲಿ ಸೈಫ್ ಸಾವನ್ನಪ್ಪಿದ್ದಾರೆ ಎಂದು ಸೌದಿ ಮಾಧ್ಯಮ 'ಅಲ್ ಅರೇಬಿಯಾ' ವರದಿ ಮಾಡಿದೆ.

ಹತ್ಯೆ ನಡೆದಿದ್ದು ಹೇಗೆ?

ವರದಿಗಳ ಪ್ರಕಾರ, ಮಂಗಳವಾರ ತಡರಾತ್ರಿ ಸುಮಾರು 2:30ಕ್ಕೆ ನಾಲ್ವರು ಮುಖವಾಡಧಾರಿ ಸಶಸ್ತ್ರ ದುಷ್ಕರ್ಮಿಗಳು ಸೈಫ್ ಅವರ ನಿವಾಸಕ್ಕೆ ನುಗ್ಗಿದ್ದಾರೆ. ಮೊದಲು ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ ದಾಳಿಕೋರರು, ತೋಟದಲ್ಲಿ ಸೈಫ್ ಅವರನ್ನು ಸುತ್ತುವರೆದಿದ್ದಾರೆ. ಅಲ್ಲಿ ನಡೆದ ನೇರ ಸಂಘರ್ಷದಲ್ಲಿ ಸೈಫ್ ಅಲ್-ಇಸ್ಲಾಂಗೆ ಗುಂಡೇಟು ತಗುಲಿದೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ರಾಜಕೀಯ ಭವಿಷ್ಯಕ್ಕೆ ಅಕಾಲಿಕ ಅಂತ್ಯ

2011ರಲ್ಲಿ ನ್ಯಾಟೋ ಬೆಂಬಲಿತ ಕ್ರಾಂತಿಯ ನಂತರ ಗಡಾಫಿ ಆಡಳಿತ ಪತನಗೊಂಡಿತ್ತು. ಆ ಸಮಯದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸೈಫ್‌ನನ್ನು ಜಿಂಟಾನ್ ಮೂಲದ ಬಂಡುಕೋರರು ಸೆರೆಹಿಡಿದಿದ್ದರು. 6 ವರ್ಷಗಳ ಸೆರೆವಾಸದ ನಂತರ 2017ರಲ್ಲಿ ಬಿಡುಗಡೆಯಾಗಿದ್ದ ಅವರು, ಭೂಗತವಾಗಿಯೇ ಉಳಿದಿದ್ದರು. 2021ರಲ್ಲಿ ಲಿಬಿಯಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಅವರು ಮತ್ತೆ ಸುದ್ದಿಯಾಗಿದ್ದರು. ಲಿಬಿಯಾದಲ್ಲಿ ಹಳೆಯ ಸ್ಥಿರತೆಯನ್ನು ಬಯಸುವ ಜನರಲ್ಲಿ ಅವರು ಆಶಾಕಿರಣವಾಗಿದ್ದರು. ಆದರೆ, ಚುನಾವಣೆಯ ಹೊಸ್ತಿಲಲ್ಲೇ (ಏಪ್ರಿಲ್ 2026ರಲ್ಲಿ ನಿಗದಿಯಾಗಿದ್ದ ಚುನಾವಣೆ) ಈ ಹತ್ಯೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೂತುಹೋದ ರಹಸ್ಯಗಳು

ಸೈಫ್ ಅಲ್-ಇಸ್ಲಾಂ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಯುದ್ಧಾಪರಾಧಗಳ ಆರೋಪದಡಿ ವಾರಂಟ್ ಹೊರಡಿಸಿತ್ತು. ಲಿಬಿಯಾದ ಆಂತರಿಕ ಸಮಸ್ಯೆಗಳು ಮತ್ತು ಅಂತರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಇವರ ಬಳಿ ಸಾಕಷ್ಟು ರಹಸ್ಯಗಳಿದ್ದವು. ಇವರ ಸಾವಿನೊಂದಿಗೆ ಆ ಎಲ್ಲಾ ರಹಸ್ಯಗಳು ಮಣ್ಣಾಗಿವೆ. ಅವರ ಆಪ್ತ ಸಲಹೆಗಾರ ಅಬ್ದುಲ್ಲಾ ಓತ್ಮನ್ ಸಾಮಾಜಿಕ ಜಾಲತಾಣದಲ್ಲಿ "ಮುಜಾಹಿದ್ ಸೈಫ್ ಅಲ್-ಇಸ್ಲಾಂ ಇಂದು ದೇವನ ಪಾದ ಸೇರಿದ್ದಾರೆ" ಎಂದು ಬರೆಯುವ ಮೂಲಕ ಸಾವನ್ನು ಖಚಿತಪಡಿಸಿದ್ದಾರೆ. ಈ ಹತ್ಯೆಯು ಈಗಾಗಲೇ ಅಸ್ಥಿರವಾಗಿರುವ ಲಿಬಿಯಾದಲ್ಲಿ ಮತ್ತೆ ಹಿಂಸಾಚಾರ ಮತ್ತು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.

ಲಿಬಿಯಾ ರಾಜಕಾರಣದ ಮೇಲೆ ಪರಿಣಾಮ

ಸೈಫ್ ಅಲ್-ಇಸ್ಲಾಂ ಸಾವು ಲಿಬಿಯಾದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಳೆದ ಕೆಲವು ವರ್ಷಗಳಿಂದ ಸೈಫ್ ಅಲ್-ಇಸ್ಲಾಂ ಸದ್ದಿಲ್ಲದೆ ತನ್ನ ಬೆಂಬಲಿಗರನ್ನು ಒಗ್ಗೂಡಿಸಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರು. ಅವರ ಸಾವು ಗಡ್ಡಾಫಿ ಯುಗದ ಸಂಪೂರ್ಣ ಅಂತ್ಯವನ್ನು ಸೂಚಿಸುತ್ತದೆ.ಅಲ್ಲದೆ,ಈ ಹತ್ಯೆಯು ಲಿಬಿಯಾದಲ್ಲಿ ವಿವಿಧ ಸಶಸ್ತ್ರ ಗುಂಪುಗಳ ನಡುವೆ ಮತ್ತಷ್ಟು ದ್ವೇಷ ಮತ್ತು ರಕ್ತಪಾತಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ.

ಜಾಗತಿಕ ಪ್ರತಿಕ್ರಿಯೆ

ಸೈಫ್ ಅಲ್-ಇಸ್ಲಾಂ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಲಿಬಿಯಾದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿವೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ದೀರ್ಘಕಾಲದಿಂದ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿತ್ತು, ಆದರೆ ಈಗ ಅವರ ಹತ್ಯೆಯೊಂದಿಗೆ ಒಂದು ಅಧ್ಯಾಯ ಮುಕ್ತಾಯಗೊಂಡಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net