ಕೊನೆಗೂ, ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಏರ್ಪಟ್ಟಿದ್ದು, ಜಾಗತಿಕ ವಲಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಯುದ್ಧದ ಭಾಗವಾಗಿದ್ದ ಇಸ್ರೇಲ್ ಕೂಡ ಕದನವಿರಾಮವನ್ನು ಸ್ವಾಗತಿಸಿದೆ. ಸಮರ ದೀರ್ಘಾವಧಿಯವರೆಗೆ ನಡೆದರೆ ಹೇಗೆ ಎಲ್ಲ ರಂಗಗಳು ಪ್ರಭಾವಿತವಾಗಿ, ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕುತ್ತಾರೆ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ. ಕಳೆದ 40 ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಯಿತು, ಜಾಗತಿಕ ಷೇರುಪೇಟೆಗಳು ನೆಲ ಕಚ್ಚಿದವು, ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಯಿತು, ಎಲ್ಪಿಜಿ ಸಂಕಷ್ಟ ವಿಕೋಪಕ್ಕೆ ಹೋಯಿತು. ದಾಳಿಯಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳು ಕೂಡ ಹಾನಿ ಅನುಭವಿಸಿದವು. ಮೂಲಸೌಕರ್ಯಗಳು ಅಪಾರ ಪ್ರಮಾಣದಲ್ಲಿ ನಷ್ಟವಾದವು. ಆಮದು ಮೇಲಿನ ಅತಿಯಾದ ಅವಲಂಬನೆ ಹೇಗೆ ಪೂರೈಕೆ ಸರಪಳಿಯನ್ನೇ ದುರ್ಬಲಗೊಳಿಸುತ್ತದೆ ಎಂಬುದಕ್ಕೂ ನಿದರ್ಶನವಾಯಿತು. ಇರಾನ್ನ ಹಲವು ನಗರಗಳು ಭಾಗಶಃ ಹಾನಿಗೊಳಗಾಗಿದ್ದು, ಅಲ್ಲಿ ಬದುಕನ್ನು ಹೊಸದಾಗಿ ಆರಂಭಿಸುವ ಸವಾಲು ಇದೆ. ಯುದ್ಧ ಮಕ್ಕಳ ಮಾನಸಿಕತೆಯ ಮೇಲೂ ಗಾಢವಾದ ಪರಿಣಾಮ ಬೀರಿದ್ದು, ಅವರು ಶವಯಾತ್ರೆ ಅನುಕರಣೆಯ ಆಟವನ್ನು ಆಡುತ್ತಿದ್ದಾರೆ. ಯುದ್ಧ ಎಂಬುದು ಹೇಗೆ ಭೀಕರ ಹಾನಿ ಮತ್ತು ಹಾಹಾಕರ ಸೃಷ್ಟಿಸಿತು, ಇಲ್ಲಿದೆ ವಿವರ.