ಲಾರಿಜಾನಿ ಹತ್ಯೆಯ ಬೆನ್ನಲ್ಲೇ ಐಆರ್‌ಜಿಸಿ ಮಾಜಿ ಕಮಾಂಡರ್‌ಗೆ ಪಟ್ಟ! ಇರಾನ್‌ನ ಈ ರಣತಂತ್ರಕ್ಕೆ ಅಮೆರಿಕ-ಇಸ್ರೇಲ್ ಬೆಚ್ಚಿಬಿದ್ದಿದ್ದೇಕೆ? Mohammad Bagher Zolghadr

ಲಾರಿಜಾನಿ ಹತ್ಯೆಯ ಬೆನ್ನಲ್ಲೇ ಐಆರ್‌ಜಿಸಿ ಮಾಜಿ ಕಮಾಂಡರ್‌ಗೆ ಪಟ್ಟ! ಇರಾನ್‌ನ ಈ ರಣತಂತ್ರಕ್ಕೆ ಅಮೆರಿಕ-ಇಸ್ರೇಲ್ ಬೆಚ್ಚಿಬಿದ್ದಿದ್ದೇಕೆ?
ಲಾರಿಜಾನಿ ಹತ್ಯೆಯ ಬೆನ್ನಲ್ಲೇ ಐಆರ್‌ಜಿಸಿ ಮಾಜಿ ಕಮಾಂಡರ್‌ಗೆ ಪಟ್ಟ! ಇರಾನ್‌ನ ಈ ರಣತಂತ್ರಕ್ಕೆ ಅಮೆರಿಕ-ಇಸ್ರೇಲ್ ಬೆಚ್ಚಿಬಿದ್ದಿದ್ದೇಕೆ?
Published on
ಟೆಹ್ರಾನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಮಹಾಯುದ್ಧವು ಈಗ ಮತ್ತೊಂದು ಕವಲುದಾರಿಗೆ ಬಂದು ನಿಂತಿದೆ. ಇರಾನ್‌ನ ಅತ್ಯಂತ ಪ್ರಭಾವಶಾಲಿ ರಾಜತಾಂತ್ರಿಕ ಮತ್ತು ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕಾರ್ಯದರ್ಶಿ ಅಲಿ ಲಾರಿಜಾನಿ ಹತ್ಯೆಯ ನಂತರ, ಇರಾನ್ ತನ್ನ ಭದ್ರತಾ ಚುಕ್ಕಾಣಿಯನ್ನು ಕಟುವಾದಿ ಮತ್ತು ಮಾಜಿ ಕ್ರಾಂತಿಕಾರಿ ಹಿರಿಯ ಕಮಾಂಡರ್ ಮೊಹಮ್ಮದ್ ಬಾಘರ್ ಝೋಲ್ಘಾದ್ರ್ (Mohammad Bagher Zolghadr) ಅವರ ಕೈಗೆ ಒಪ್ಪಿಸಿದೆ. 
ಈ ನೇಮಕಾತಿಯು ಇರಾನ್ ಈಗ ಮಾತುಕತೆಗಿಂತ ಹೆಚ್ಚಾಗಿ ಸೇನಾ ಸಂಘರ್ಷಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.

ಅಲಿ ಲಾರಿಜಾನಿ ಹತ್ಯೆ: ಇರಾನ್‌ಗೆ ಭರಿಸಲಾಗದ ನಷ್ಟ

ಮಾರ್ಚ್ 18 ರಂದು ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಅಲಿ ಲಾರಿಜಾನಿ, ಅವರ ಪುತ್ರ ಮೊರ್ತೇಜಾ ಮತ್ತು ಅವರ ಭದ್ರತಾ ತಂಡದ ಮುಖ್ಯಸ್ಥರು ಹತರಾಗಿದ್ದಾರೆ ಎಂದು ಇರಾನ್ ಸರ್ಕಾರ ಅಧಿಕೃತವಾಗಿ ಖಚಿತಪಡಿಸಿದೆ. ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಲಾರಿಜಾನಿ ಅವರು ದೇಶದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದರು.
ಇರಾನ್‌ನ ಕೆನಡಿ ಕುಟುಂಬ: ಲಾರಿಜಾನಿ ಕುಟುಂಬವನ್ನು ಇರಾನ್‌ನ ಅತ್ಯಂತ ಶಕ್ತಿಶಾಲಿ ರಾಜಕೀಯ ಮನೆತನ ಎಂದು ಕರೆಯಲಾಗುತ್ತಿತ್ತು. ಅವರ ತಂದೆ ಧಾರ್ಮಿಕ ವಿದ್ವಾಂಸರಾಗಿದ್ದರೆ, ಸಹೋದರರು ನ್ಯಾಯಾಂಗ ಮತ್ತು ಪ್ರಮುಖ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಧೀಮಂತ ನಾಯಕತ್ವ: ಲಾರಿಜಾನಿ ಕೇವಲ ಒಬ್ಬ ರಾಜಕಾರಣಿಯಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಪರವಾಗಿ ತರ್ಕಬದ್ಧವಾಗಿ ಮಾತನಾಡುವ ಕೌಶಲ ಹೊಂದಿದ್ದ ಏಕೈಕ ನಾಯಕರಾಗಿದ್ದರು. ಅವರ ಸಾವು ಇರಾನ್‌ನ ರಾಜತಾಂತ್ರಿಕ ಶಕ್ತಿಯ ಬೆನ್ನೆಲುಬನ್ನೇ ಮುರಿದಂತಿದೆ.

ಯಾರು ಈ ಮೊಹಮ್ಮದ್ ಬಾಘರ್ ಝೋಲ್ಘಾದ್ರ್..?

ಅಲಿ ಲಾರಿಜಾನಿ ಅವರ ಸ್ಥಾನಕ್ಕೆ ನೇಮಕವಾಗಿರುವ ಝೋಲ್ಘಾದ್ರ್ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಮಾಜಿ ಕಮಾಂಡರ್ ಆಗಿದ್ದವರು.
ಇತ್ತೀಚಿನವರೆಗೆ ಅವರು ಇರಾನ್‌ನ ಎಕ್ಸ್‌ಪೆಡಿಯನ್ಸಿ ಕೌನ್ಸಿಲ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಅವರ ನೇಮಕಾತಿಯು ಇರಾನ್‌ನ ನಿರ್ಧಾರಗಳಲ್ಲಿ ಕ್ರಾಂತಿಕಾರಿ ಸೈನ್ಯದ IRGC ಹಿಡಿತ ಮತ್ತಷ್ಟು ಬಿಗಿಯಾಗುವುದನ್ನು ಸೂಚಿಸುತ್ತದೆ.
ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರಗಾಮಿ ನಿಲುವು ಹೊಂದಿರುವ ಝೋಲ್ಘಾದ್ರ್ ಅವರ ಆಗಮನವು ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಇರಾನ್ ನಾಯಕತ್ವದಲ್ಲಿ ಮಹಾ ಬದಲಾವಣೆ

ಕಳೆದ ಕೆಲವು ವಾರಗಳಲ್ಲಿ ಇರಾನ್‌ನ ಸಾಲು ಸಾಲು ಉನ್ನತ ಅಧಿಕಾರಿಗಳು ಹತರಾಗುತ್ತಿರುವುದು ದೇಶದ ಆಡಳಿತ ವ್ಯವಸ್ಥೆಯನ್ನು ಅಲುಗಾಡಿಸಿದೆ. ಈ ಸರಣಿ ಹತ್ಯೆಗಳ ನಂತರ ಮೊಜ್ತಬಾ ಖಮೇನಿ ಅವರು ಝೋಲ್ಘಾದ್ರ್ ಅವರಿಗೆ ಭದ್ರತೆಯ ಜವಾಬ್ದಾರಿ ನೀಡಿರುವುದು ಇರಾನ್ ಈಗ ಡಿಫೆನ್ಸ್ ಮೂಡ್‌ನಿಂದ ಅಟ್ಯಾಕ್ ಮೂಡ್‌ಗೆ ಬದಲಾಗುತ್ತಿರುವುದರ ಸಂಕೇತವಾಗಿದೆ.

ಜಾಗತಿಕ ಪರಿಣಾಮ ಮತ್ತು ಆತಂಕ

ಲಾರಿಜಾನಿ ಅವರಂತಹ ಮೃದು ಧೋರಣೆಯ ರಾಜತಾಂತ್ರಿಕನ ಅಂತ್ಯ ಮತ್ತು ಝೋಲ್ಘಾದ್ರ್ ಅವರಂತಹ ಸೇನಾ ಕಮಾಂಡರ್‌ನ ಆಗಮನವು ಪಶ್ಚಿಮ ಏಷ್ಯಾದಲ್ಲಿ ಸಂಧಾನದ ಹಾದಿಯನ್ನು ಕಠಿಣಗೊಳಿಸಿದೆ. ಏಪ್ರಿಲ್ 9 ರಂದು ಯುದ್ಧ ಅಂತ್ಯಗೊಳ್ಳಬಹುದು ಎಂಬ ಆಶಾವಾದದ ನಡುವೆ, ಈ ನೇಮಕಾತಿಯು ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಮುನ್ಸೂಚನೆಯಾಗಿ ಕಂಡುಬರುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net