ಪಾಕ್​ನಲ್ಲೇ ದಾವೂದ್ ಇಬ್ರಾಹಿಂ? 3 ರಹಸ್ಯ ನೆಲೆ, ಸೇನಾ ಭದ್ರತೆ, ಲಕ್ಸುರಿ ಲೈಫ್​​ ಬಗ್ಗೆ ಮಾಜಿ FBI ಅಧಿಕಾರಿ ಸ್ಫೋಟಕ ಹೇಳಿಕೆ!

Dawood Ibrahim
ಪಾಕ್​ನಲ್ಲೇ ದಾವೂದ್ ಇಬ್ರಾಹಿಂ? 3 ರಹಸ್ಯ ನೆಲೆ, ಸೇನಾ ಭದ್ರತೆ, ಲಕ್ಸುರಿ ಲೈಪ್​ ಬಗ್ಗೆ ಮಾಜಿ FBI ಅಧಿಕಾರಿಯ ಸ್ಫೋಟಕ ಹೇಳಿಕೆ!
Published on: 

ನವದೆಹಲಿ: ಭೂಗತ ಲೋಕದ ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ? ಪಾಕಿಸ್ತಾನದಲ್ಲೇ ಕುಳಿತು ತನ್ನ ಅಪರಾಧ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾನಾ? ಆತನ ಭದ್ರತೆ ಹೇಗಿದೆ? ಆತನ ಐಷಾರಾಮಿ ಜೀವನದಲ್ಲಿ ಯಾರೆಲ್ಲ ಇದ್ದಾರೆ ಎಂಬ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಇದೀಗ ಅಮೆರಿಕದ ತನಿಖಾ ಸಂಸ್ಥೆ ಎಫ್​ಬಿಐನ ಮಾಜಿ ಅಧಿಕಾರಿ ಕಮ್ರಾನ್ ಫರೀದಿ ಅವರು ಶಾಕಿಂಗ್ ಉತ್ತರಗಳನ್ನೇ ಕೊಟ್ಟಿದ್ದಾರೆ. ಇವು ಸದ್ಯ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ.

ಪಾಕ್​ನಲ್ಲೇ ದಾವೂದ್‌ಗೆ ಮೂರು ನೆಲೆ!

ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಯಾಗಿರುವ ಕಮ್ರಾನ್, ಸಂದರ್ಶನವೊಂದರಲ್ಲಿ ದಾವೂದ್‌ನ ನೆಲೆಗಳು, ಭದ್ರತಾ ವ್ಯವಸ್ಥೆ ಹಾಗೂ ಆತನ ಆಪ್ತ ಸಹಚರ ಜಬೀರ್ ಮೊತಿವಾಲಾ ಬಂಧನದ ಹಿಂದಿನ ಘಟನೆಗಳ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಮ್ರಾನ್ ಫರೀದಿ ಹೇಳಿಕೆ ಪ್ರಕಾರ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ನೆಲೆಸಿದ್ದಾನೆ. ಅಲ್ಲಿ ಆತನಿಗೆ ಮೂರು ಪ್ರತ್ಯೇಕ ವಾಸಸ್ಥಳಗಳಿವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದಾಗಲೆಲ್ಲ ದಾವೂದ್ ತನ್ನ ಸ್ಥಳವನ್ನು ದಿಢೀರ್​ ಎಂಬಂತೆ ಬದಲಾಯಿಸುತ್ತಾನೆ. ಹಗಲಿನಲ್ಲಿ ಕರಾಚಿಯ ರಸ್ತೆಗಳಲ್ಲಿ ಕಾಣಿಸಿಕೊಳ್ಳದ ದಾವೂದ್, ರಾತ್ರಿ ವೇಳೆ ಮಾತ್ರ ಹೊರಗೆ ಬರುತ್ತಾನೆ ಎಂಬ ಶಾಕಿಂಗ್ ಮಾಹಿತಿಯನ್ನೂ ರಿವೀಲ್ ಮಾಡಿದ್ದಾರೆ.

2018ರಲ್ಲಿ ಲಂಡನ್‌ನಲ್ಲಿ ಜಬೀರ್‌

ದಾವೂದ್‌ನ ಆಪ್ತ ಸಹಚರ ಜಬೀರ್ ಮೊತಿವಾಲಾ ಬಂಧನದ ಹಿಂದಿನ ತಮ್ಮ ಪಾತ್ರದ ಬಗ್ಗೆಯೂ ಬಾಯ್ಬಿಟ್ಟಿರುವ ಕಮ್ರಾನ್, 2018ರಲ್ಲಿ ಲಂಡನ್‌ನಲ್ಲಿ ಜಬೀರ್‌ನನ್ನು ತಾವೇ ಬಂಧಿಸಿದ್ದಾಗಿ ಹೇಳಿದ್ದಾರೆ. ದಾವೂದ್‌ನ ಅಂತಾರಾಷ್ಟ್ರೀಯ ಹಣಕಾಸು ಜಾಲವನ್ನು, ವಿಶೇಷವಾಗಿ ಬ್ರಿಟನ್ ಮತ್ತು ಯುಎಇಯಲ್ಲಿನ ಸಂಪರ್ಕಗಳನ್ನು ಜಬೀರ್ ನಿರ್ವಹಿಸುತ್ತಿದ್ದ ಎಂದು ಹೇಳಿದ್ದಾರೆ.

ಜಬೀರ್‌ನನ್ನು ಅಮೆರಿಕಕ್ಕೆ ಕರೆತಂದು ದಾವೂದ್ ಮತ್ತು ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ನಡುವಿನ ಹಣಕಾಸಿನ ಸಂಬಂಧಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಎಫ್​ಬಿಐ ಪ್ಲ್ಯಾನ್​ ಆಗಿತ್ತು ಎಂದು ಕಮ್ರಾನ್ ತಿಳಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬೇಕಿದ್ದ ಸಂದರ್ಭದಲ್ಲಿ ತಾವು ಹಿಂದೆ ಸರಿದಿದ್ದಾಗಿಯೂ ವಿವರಿಸಿದ್ದಾರೆ.

ದಾವೂದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ನೆರವಿನಿಂದ ತಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದು ಎಂಬ ಭಯದಿಂದ ಸಾಕ್ಷಿ ಹೇಳಲಿಲ್ಲ ಎಂದು ಕಮ್ರಾನ್ ಹೇಳಿಕೊಂಡಿದ್ದಾರೆ. ಬಳಿಕ ಪತ್ನಿಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದಾಗ ದಾವೂದ್ ಮತ್ತು ಜಬೀರ್, ಐಎಸ್​ಐ ನೆರವಿನಿಂದ ತಮ್ಮನ್ನು ಬಂಧಿಸುವಂತೆ ಮಾಡಿದ. ಹಲವು ತಿಂಗಳು ಜೈಲಿನಲ್ಲಿದ್ದ ಬಳಿಕ ಅಮೆರಿಕದ ಪೌರತ್ವದ ಕಾರಣದಿಂದ ತಾವು ಬದುಕುಳಿದಿದ್ದಾಗಿ ಹೇಳಿದ್ದಾರೆ. ಸದ್ಯ ಥಾಯ್ಲೆಂಡ್‌ನಲ್ಲಿ ಅಡಗಿಕೊಂಡಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಷಾರಾಮಿ ಬದುಕು, ಡ್ರಗ್ಸ್ ವ್ಯಸನ

ದಾವೂದ್‌ನ ಜೀವನಶೈಲಿ ಬಗ್ಗೆಯೂ ತುಟಿ ಬಿಚ್ಚಿರುವ ಕಮ್ರಾನ್, ಆತ ಎರಡನೇ ಮದುವೆಯಾಗಿದ್ದು, ತನಗಿಂತ ಸಾಕಷ್ಟು ಕಿರಿಯ ವಯಸ್ಸಿನ ಯುವತಿಯನ್ನು ವಿವಾಹವಾಗಿದ್ದಾನೆ. ಹೊರಗೆ ಧಾರ್ಮಿಕ ವ್ಯಕ್ತಿಯಂತೆ ಕಾಣಿಸಿಕೊಳ್ಳುವ ಆತ, ಖಾಸಗಿ ಜೀವನದಲ್ಲಿ ಐಷಾರಾಮಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ. ದಾವೂದ್ ಆಯೋಜಿಸಿದ್ದ ಹಲವು ಪಾರ್ಟಿಗಳಿಗೆ ನಾನೂ ಹೋಗಿದ್ದೇನೆ. ಭಾರತ ಮತ್ತು ಪಾಕಿಸ್ತಾನದಲ್ಲಿ ದಾವೂದ್‌ನ ಗ್ಯಾಂಗ್ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳ ವ್ಯವಹಾರ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಸೇನಾ ಕಮಾಂಡೋಗಳಿಂದ ಭದ್ರತೆ?

ದಾವೂದ್ ಮತ್ತು ಆತನ ಬಲಗೈ ಬಂಟ ಛೋಟಾ ಶಕೀಲ್‌ಗೆ ದುಬೈನಿಂದ ವಿಶೇಷ ಬುಲೆಟ್‌ಪ್ರೂಫ್ ಕಾರುಗಳನ್ನು ತರಿಸಲಾಗಿದೆ. ದಾವೂದ್‌ಗೆ ಪಾಕಿಸ್ತಾನ ಸೇನೆಯ ಎಸ್​ಎಸ್​ಜಿ (SSG) ಕಮಾಂಡೋಗಳಿಂದ ಭದ್ರತೆ ಒದಗಿಸಲಾಗುತ್ತಿದೆ. ಛೋಟಾ ಶಕೀಲ್ ದಾವೂದ್‌ನ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾನೆ. ಪ್ರತಿ ಶುಕ್ರವಾರ ಐಎಸ್​ಐ ಕೇಂದ್ರ ಕಚೇರಿಗೆ ತೆರಳಿ ಭದ್ರತೆಗೆ ಸಂಬಂಧಿಸಿದ ವರದಿ ನೀಡುತ್ತಾನೆ ಎಂದು ಕಮ್ರಾನ್ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ರಾಜಕೀಯ ವಲಯದಲ್ಲೂ ದಾವೂದ್ ಪ್ರಭಾವ ಹೊಂದಿದ್ದಾನೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ದಾವೂದ್ ನೇರವಾಗಿ ಕರೆ ಮಾಡಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.

Also Read
ಬಿಯರ್ ಕುಡಿಯೋದ್ರಿಂದ ಕಿಡ್ನಿಗೆ ಒಳ್ಳೆಯದು, ಕಲ್ಲು ಕರಗುತ್ತೇ ಅನ್ನೋರು ಮೊದಲು ಈ ಶಾಕಿಂಗ್​ ವರದಿಯನ್ನು ಓದಲೇಬೇಕು! Beer Damage
Dawood Ibrahim

'ಇಸ್ಲಾಂ ಬಾಬಾ' ಮಾತಿಲ್ಲದೆ ಕೆಲಸವೇ ನಡೆಯುತ್ತಿರಲಿಲ್ಲ!

ದಾವೂದ್ ಮೂಢನಂಬಿಕೆಗಳನ್ನು ಹೆಚ್ಚಾಗಿ ಅನುಸರಿಸುತ್ತಿದ್ದ. ಮುಂಬೈನಿಂದ 'ಇಸ್ಲಾಂ ಬಾಬಾ' ಎಂಬ ಫಕೀರನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿದ್ದ ದಾವೂದ್, ಆತನ ಅನುಮತಿಯಿಲ್ಲದೆ ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲ. ಇನ್ನು, 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮನ್ ಕೂಡ ಪಾಕಿಸ್ತಾನದಲ್ಲೇ ನೆಲೆಸಿದ್ದು, ತನ್ನ ವ್ಯವಹಾರಗಳನ್ನು ಮುಂದುವರಿಸಿದ್ದಾನೆ ಎಂದು ಕಮ್ರಾನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ದಾವೂದ್​ ಇಬ್ರಾಹಿಂ ಕುರಿತು ಕಮ್ರಾನ್​ ಅವರು ಮಾಡಿರುವ ಬಹಿರಂಗ ಆರೋಪಗಳು ಸದ್ಯ ಭಾರಿ ಗೊಂದಲ, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಇಷ್ಟು ದಿನಗಳವರೆಗೂ ಏನ್ನನ್ನೂ ಬಾಯ್ಬಿಡದ ಮಾಜಿ ಅಧಿಕಾರಿಯಿಂದ ದಿಢೀರ್​ ಈ ಗೌಪ್ಯ ವಿಚಾರಗಳು ಹೊರಬಂದಿದ್ದೇಕೆ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ,(ಏಜೆನ್ಸೀಸ್).