ವೆನೆಜುವೆಲಾ ಭೂಕಂಪ: ಅವಶೇಷಗಳಡಿ ನಡುಗುತ್ತಿದ್ದ ನಾಯಿಮರಿಯನ್ನು ಬರಿಗೈಯಲ್ಲೇ ರಕ್ಷಿಸಿದ ಅಗ್ನಿಶಾಮಕ ದಳ! Venezuela Earthquake

Venezuela Earthquake (ಚಿತ್ರ X)
Venezuela Earthquake (ಚಿತ್ರ X)
Published on
Venezuela Earthquake: ಉತ್ತರ ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಸರಣಿ ಭೂಕಂಪಗಳು ವ್ಯಾಪಕ ವಿನಾಶವನ್ನು ಉಂಟುಮಾಡಿದ್ದು, ಇಡೀ ದೇಶವನ್ನೇ ಕಣ್ಣೀರಿಡುವಂತೆ ಮಾಡಿದೆ. ಪ್ರಕೃತಿಯ ಈ ವಿಕೋಪದ ನಡುವೆ, ಕ್ಯಾರಕಾಸ್‌ನಲ್ಲಿ ಭರವಸೆಯ ಮತ್ತು ಮಾನವೀಯತೆಯ ಅಪರೂಪದ ಸಂಕೇತವಾಗಿ ಮೂಕ ಪ್ರಾಣಿಗಳ ಪವಾಡಸದೃಶ ರಕ್ಷಣೆಯ ಸರಣಿಯೊಂದು ಬೆಳಕಿಗೆ ಬಂದಿದೆ.
ಜೂನ್​ 24 ರಂದು ಸಂಭವಿಸಿದ ಉತ್ತರ ವೆನೆಜುವೆಲಾದಲ್ಲಿ ರಿಕ್ಟರ್ ಮಾಪಕದಲ್ಲಿ 7.5 ಮತ್ತು 7.2 ತೀವ್ರತೆಯ ಸತತ ಅವಳಿ ಭೂಕಂಪಗಳು ಸಂಭವಿಸಿದ ನಂತರ ಕುಸಿದ ಕಟ್ಟಡಗಳ ಕೆಳಗೆ ಸಿಲುಕಿದ್ದ ಹಲವಾರು ನಾಯಿಗಳನ್ನು ಕ್ಯಾರಕಸ್ ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ತಂಡಗಳು ರಕ್ಷಿಸಿದೆ.
ಕ್ಯಾರಕಾಸ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ಕಾರ್ಯಾಚರಣೆಯ ಸಂದರ್ಭದಲ್ಲಿ  ಶೋಧ ಕಾರ್ಯ ಮುಂದುವರೆಸಿದಾಗ ಕುಸಿದು ಬಿದ್ದಿದ್ದ ಒಂದು ಮನೆಯಲ್ಲಿ ತನ್ನ ಸಂಪೂರ್ಣ ಹುಡುಕಾಟವನ್ನು ರಕ್ಷಣಾ ತಂಡವು ಮುಗಿಸಿತ್ತು. ಅಲ್ಲಿ ಇನ್ಯಾರೂ ಬದುಕುಳಿದಿಲ್ಲ ಎಂದು ಭಾವಿಸಿ, ತಂಡವು ಅಲ್ಲಿಂದ ಹೊರಡಲು ತಯಾರಿ ನಡೆಸುತ್ತಿತ್ತು. ಆದರೆ, ಸರಿಯಾಗಿ ಅದೇ ಕ್ಷಣದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅವಶೇಷಗಳ ಆಳದಿಂದ ಅತ್ಯಂತ ಮಸುಕಾದ ಬೊಗಳುವ ಧ್ವನಿ ಕೇಳಿಸಿದನ್ನು ಗಮನಿಸಿದ ಅವರು ತಕ್ಷಣ ತನಿಖೆಗೆ ಮರಳಿದರು. 
ಆದಾಗ್ಯೂ, ಭೂಕಂಪದಿಂದ ಕುಸಿದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಾಯಿಗಳನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಯಾವುದೇ ಯಂತ್ರಗಳನ್ನು ಬಳಸದೆ, ಪ್ರಾಣಿಗಳಿಗೆ ಗಾಯವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಭಾರವಾದ ಕಾಂಕ್ರೀಟ್ ಚಪ್ಪಡಿಗಳು ಮತ್ತು ತಿರುಚಿದ ಕಬ್ಬಿಣದ ಕಂಬಗಳನ್ನು ತಮ್ಮ ಕೈಗಳಿಂದಲೇ ಅತ್ಯಂತ ಜಾಗರೂಕತೆಯಿಂದ ಪಕ್ಕಕ್ಕೆ ಸರಿಸಿದರು.
ವ್ಯಾಪಕವಾಗಿ ಹಂಚಿಕೊಳ್ಳಲಾದ ಕ್ಲಿಪ್‌ಗಳಲ್ಲಿ, ಕಿರಿದಾದ ಸಂದಿನಲ್ಲಿ ಸಿಲುಕಿ ಹೆದರಿದ್ದ ನಾಯಿಯನ್ನು ಹೊರಗೆ ಎಳೆಯುವ ಮುನ್ನ, ಅದರ ದಣಿವಾರಿಸಲು ಸಿಬ್ಬಂದಿ ಸಣ್ಣ ಗ್ಯಾಪ್ ಮೂಲಕ ನೀರಿನ ಬಾಟಲಿಯನ್ನು ಇಳಿಸಿ ನೀರು ಕುಡಿಸುವ ದೃಶ್ಯವನ್ನು ನೋಡಬಹುದು. ಮತ್ತೊಂದು ವಿಡಿಯೋದಲ್ಲಿ ಮಣ್ಣು-ಕಲ್ಲುಗಳ ಅಡಿಯಲ್ಲಿ ಹೂತುಹೋಗಿ, ರಕ್ಷಿಸಿದ ನಂತರವೂ ಭಯದಿಂದ ತೀವ್ರವಾಗಿ ನಡುಗುತ್ತಿದ್ದ ಪುಟ್ಟ ನಾಯಿಮರಿಯನ್ನು ಮಡಿಲಿಗೆ ತೆಗೆದುಕೊಳ್ಳುವ ಅತ್ಯಂತ ಭಾವುಕ ಕ್ಷಣವನ್ನು ಸೆರೆಹಿಡಿಯುತ್ತದೆ. 
ಈ ಅಸಾಧಾರಣ ಆವಿಷ್ಕಾರವು ವಿಪತ್ತು ಸ್ಥಳದಲ್ಲಿ ಕಷ್ಟದಲ್ಲಿದ್ದ ಎಲ್ಲರಿಗೂ ಭರವಸೆಯ ಸಂಕೇತವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ಯಾರಕಾಸ್ ಅಗ್ನಿಶಾಮಕ ಇಲಾಖೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. 
ನಮ್ಮ ತುರ್ತು ತಂಡಗಳು ಶೋಧ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತವೆ, ಜೀವಗಳನ್ನು ಉಳಿಸುವ ನಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ನಾವು ಶಕ್ತಿ ಮತ್ತು ಒಗ್ಗಟ್ಟಿನಿಂದ ಮುಂದುವರಿಯುತ್ತೇವೆ ಎಂದು ಹೇಳಿದೆ. 
ವೆನೆಜುವೆಲಾದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪದ ನಂತರ ಈ ರಕ್ಷಣಾ ಕಾರ್ಯಗಳು ನಡೆದಿದೆ. ಒಂದು ನಿಮಿಷಕ್ಕಿಂತ ಕಡಿಮೆ ಅಂತರದಲ್ಲಿ ಸಂಭವಿಸಿದ ಅವಳಿ ಭೂಕಂಪಗಳು 250 ಕ್ಕೂ ಹೆಚ್ಚು ಕಟ್ಟಡಗಳ ಕುಸಿತಕ್ಕೆ ಕಾರಣವಾಯಿತು.
 ನೂರಾರು ಜೀವಗಳನ್ನು ಬಲಿ ತೆಗೆದುಕೊಂಡವು ಮತ್ತು ಸಾವಿರಾರು ಜನರು ಗಾಯಗೊಂಡರು.
ಸೀಮಿತ ಭಾರೀ ಯಂತ್ರೋಪಕರಣಗಳು ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳೊಂದಿಗೆ ತುರ್ತು ಪ್ರತಿಕ್ರಿಯೆ ನೀಡುವವರು ಮತ್ತು ಸ್ಥಳೀಯ ಸ್ವಯಂಸೇವಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕಲು ಹೆಚ್ಚಾಗಿ ಕೈಯಾರೆ ಕೆಲಸ ಮತ್ತು ಮೂಲ ಸಾಧನಗಳನ್ನು ಅವಲಂಬಿಸಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net