ಅಂತ್ಯದವರೆಗೆ ಹೋರಾಡಿ, ನಾವಿದ್ದೇವೆ: ಇಸ್ರೇಲ್‌ಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಬಹಿರಂಗ ಬೆಂಬಲ! | Israel Iran War

Israel Iran War
Israel Iran War
Published on
ಜೆರುಸಲೇಂ/ಟೆಹ್ರಾನ್: "ಯುದ್ಧವನ್ನು ಅಂತ್ಯದವರೆಗೆ ಮುಂದುವರಿಸಿ, ನಾವು ನಿಮ್ಮ ಬೆನ್ನಿಗಿದ್ದೇವೆ," ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ (Secretary of War) ಪೀಟ್ ಹೆಗ್ಸೆತ್ ಇಸ್ರೇಲ್‌ಗೆ (Israel Iran War) ಅಭಯ ನೀಡುವ ಮೂಲಕ ಅಮೆರಿಕವು ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ಘೋಷಿಸಿದೆ.
ಗುರುವಾರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮತ್ತು ಪೀಟ್ ಹೆಗ್ಸೆತ್ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಇರಾನ್ ದಾಳಿಯಲ್ಲಿ ಹತರಾದ ಆರು ಅಮೆರಿಕನ್ ಸೈನಿಕರ ಸಾವಿಗೆ ಕಾಟ್ಜ್ ಸಂತಾಪ ಸೂಚಿಸಿದ್ದು, ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳ ರಕ್ಷಣೆಗಾಗಿ ಇಸ್ರೇಲ್ ಯಾವುದೇ ಹಂತಕ್ಕೂ ಹೋಗಲಿದೆ ಎಂದು ಭರವಸೆ ನೀಡಿದ್ದಾರೆ.

ಟ್ರಂಪ್-ನೆತನ್ಯಾಹು ಮೈತ್ರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಇಸ್ರೇಲ್ ರಕ್ಷಣಾ ಸಚಿವರು, "ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನೆತನ್ಯಾಹು ನಡುವಿನ ಸಹಕಾರವು ಇರಾನ್ ವಿರುದ್ಧ ಜಾಗತಿಕ ಇತಿಹಾಸವನ್ನೇ ಬದಲಿಸುತ್ತಿದೆ," ಎಂದು ಬಣ್ಣಿಸಿದ್ದಾರೆ. ಇಸ್ರೇಲ್ ನಾಗರಿಕರನ್ನು ಇರಾನ್ ಕ್ಷಿಪಣಿಗಳಿಂದ ರಕ್ಷಿಸಲು ಅಮೆರಿಕ ನೀಡುತ್ತಿರುವ ಅಭೂತಪೂರ್ವ ಸಹಕಾರವನ್ನು ಅವರು ಶ್ಲಾಘಿಸಿದರು.

'ದಿಮೋನಾ' ಪರಮಾಣು ಕೇಂದ್ರದ ಮೇಲೆ ಕಣ್ಣು?

ಮತ್ತೊಂದೆಡೆ, ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸಿದೆ. ಇಸ್ರೇಲ್ ಅಥವಾ ಅಮೆರಿಕವು ಇಸ್ಲಾಮಿಕ್ ಗಣರಾಜ್ಯದ ಆಡಳಿತವನ್ನು ಉರುಳಿಸಲು ಪ್ರಯತ್ನಿಸಿದರೆ, ಇಸ್ರೇಲ್‌ನ ಅತ್ಯಂತ ರಹಸ್ಯ ಮತ್ತು ಪ್ರಮುಖ 'ದಿಮೋನಾ' (Dimona) ಪರಮಾಣು ಕೇಂದ್ರವನ್ನು ಗುರಿಪಡಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸಚಿವ ಕಾಟ್ಜ್, ಇರಾನ್‌ನ ಯಾವುದೇ ಹೊಸ ನಾಯಕ ಕೂಡ ನಮ್ಮ ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

19ನೇ ಅಲೆಯ ದಾಳಿ

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು 'ಆಪರೇಷನ್ ಟ್ರೂ ಪ್ರಾಮಿಸ್ 4' ರ 19ನೇ ಹಂತದ ದಾಳಿಯನ್ನು ಪ್ರಾರಂಭಿಸಿದೆ. ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಏಕಕಾಲದಲ್ಲಿ ಉಡಾಯಿಸಲಾಗಿದೆ. ಆಕ್ರಮಿತ ಪ್ರದೇಶಗಳಲ್ಲಿರುವ ಅಮೆರಿಕನ್ ಮತ್ತು ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಅಮೆರಿಕಕ್ಕೆ ಪೆಟ್ಟು: ಅಮೆರಿಕ ಮತ್ತು ಇಸ್ರೇಲ್‌ನ ಏಳು ಅತ್ಯಾಧುನಿಕ ರೇಡಾರ್ ವ್ಯವಸ್ಥೆಗಳನ್ನು ನಾಶಪಡಿಸಲಾಗಿದೆ ಎಂದು IRGC ಪ್ರತಿಪಾದಿಸಿದೆ. ಇದರಿಂದಾಗಿ ಉಭಯ ದೇಶಗಳ ಕಣ್ಗಾವಲು ಜಾಲವು 'ಕುರುಡು' ಆಗಿದೆ ಎಂದು ಇರಾನ್ ಹೇಳಿಕೊಂಡಿದೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net