ಫಿಫಾ ಫೈನಲ್ ಟಿಕೆಟ್ ಬೆಲೆಗೆ ಲಕ್ಸುರಿ ಕಾರೇ ಖರೀದಿ ಮಾಡಬಹುದು! ಫುಟ್ಬಾಲ್​ ಇತಿಹಾಸದಲ್ಲೇ ಹೊಸ ದಾಖಲೆ

ಫಿಫಾ ವಿಶ್ವಕಪ್​ 2026
ಫಿಫಾ ವಿಶ್ವಕಪ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಸೋಮವಾರ (ಜು.20) ತಡರಾತ್ರಿ ಫಿಫಾ ವಿಶ್ವಕಪ್​ ಫೈನಲ್​
  • ಅರ್ಜೆಂಟೀನಾ-ಸ್ಪೇನ್​ ಪಂದ್ಯ ನೋಡಲು ಟಿಕೆಟ್​ ಬೆಲೆ ದುಬಾರಿ
  • ಪಂದ್ಯದ ಒಂದು ಟಿಕೆಟ್​ ಬೆಲೆಯಲ್ಲಿ ಲಕ್ಸುರಿ ಕಾರನ್ನೇ ಖರೀದಿಸಬಹುದು
FIFA Final Ticket: ಇದೇ ಸೋಮವಾರ ತಡರಾತ್ರಿ ಆರಂಭವಾಗಲಿರುವ ಫಿಫಾ ವಿಶ್ವಕಪ್ 2026ರ ಬಹುನಿರೀಕ್ಷಿತ ಫೈನಲ್​ ಪಂದ್ಯಕ್ಕೆ ಫುಟ್ಬಾಲ್​ ಪ್ರೇಮಿಗಳ ಕ್ರೇಜ್​ ದುಪ್ಪಟ್ಟಾಗಿದೆ. ಸ್ಪೇನ್​ ಮತ್ತು ಅರ್ಜೆಂಟೀನಾ ತಂಡಗಳು ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದ್ದು, ಎರಡನೇ ಬಾರಿ ಫಿಫಾ ಟ್ರೋಫಿಗೆ ಮುತ್ತಿಡಲು ಲಿಯೋನಲ್​ ಮೆಸ್ಸಿ ಪಡೆ ತುದಿಗಾಲಿನಲ್ಲಿದೆ. ಈ ಮಧ್ಯೆ, ಫೈನಲ್​ ಮ್ಯಾಚ್​ನ ಟಿಕೆಟ್​ ಬೆಲೆ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಮೆಸ್ಸಿ ನೆರಳಿನಲ್ಲಿ ಕಣಕ್ಕಿಳಿಯಲಿರುವ ಅರ್ಜೆಂಟೀನಾ ಮತ್ತು ಯುವ ಸ್ಪೇನ್ ತಂಡದ ನಡುವೆ ಫೈನಲ್ ಜಿದ್ದಾಜಿದ್ದಿ ಮೂಡಿದ್ದು, ಟಿಕೆಟ್​ಗಳು ಎಂದಿನಂತೆ ಗಗನಕ್ಕೇರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆಗಮಿಸಲಿರುವ ಫೈನಲ್​ ಪಂದ್ಯಕ್ಕೆ ವಿಶ್ವಾದ್ಯಂತ ಭಾರೀ ಡಿಮಾಂಡ್​ ಆಗಿದೆ. ಜು.20ರಂದು ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ ಮಧ್ಯರಾತ್ರಿ 12:30ಕ್ಕೆ ಶುರುವಾಗಲಿದೆ.

ಇದೇ ಮೊದಲು

ಟಿಕೆಟ್ ಸೇಲ್ಸ್​ ವೇದಿಕೆಯಾದ ಟಿಕ್‌ಪಿಕ್ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಫಿಫಾ ವಿಶ್ವಕಪ್​ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರತಿ ಟಿಕೆಟ್‌ಗೆ ಸರಾಸರಿ 11,327 ಯುಎಸ್ ಡಾಲರ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ ಸುಮಾರು 11 ಲಕ್ಷ ರೂ.) ಕೊಟ್ಟು ಟಿಕೆಟ್​ ಖರೀದಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅಮೆರಿಕಾದ ಕ್ರೀಡಾ ಇತಿಹಾಸದಲ್ಲಿ ಇದುವರೆಗೆ ಯಾವುದೇ ಕ್ರೀಡೆಗೂ ಈ ಮಟ್ಟಿಗಿನ ಗರಿಷ್ಠ ಸರಾಸರಿ ಟಿಕೆಟ್ ದರ ಸಿಕ್ಕಿರಲಿಲ್ಲ ಎಂದು ಟಿಕ್‌ಪಿಕ್ ಹೇಳಿದೆ.

ಕಡಿಮೆ ಬೆಲೆಯ ಟಿಕೆಟ್​ 6.7 ಲಕ್ಷ ರೂ.

ವಾಸ್ತವವಾಗಿ, ಈ ಫಿಫಾ ಫೈನಲ್ ಸೂಪರ್ ಬೌಲ್ LVIII ನ ಟಿಕೆಟ್ ಬೆಲೆಗಳು 9,411 ಡಾಲರ್ (ಸುಮಾರು 9 ಲಕ್ಷ ರೂ.)ಗೆ ಮಾರಾಟವಾಗುತ್ತಿದೆ. ದುಬಾರಿ ಅಥವಾ ಅತಿ ಹೆಚ್ಚು ಎಂದರೆ 11 ಲಕ್ಷ ರೂ. ಆಗಿದೆ. ಅದೇ ಕಡಿಮೆ ದರಕ್ಕೆ ಲಭ್ಯವಿರುವ ಟಿಕೆಟ್ 6,943 ಡಾಲರ್​ (ಅಂದಾಜು 6.7 ಲಕ್ಷ ರೂ.) ಎಂದು ದಾಖಲಾಗಿದೆ. ಮೆಸ್ಸಿ ಮತ್ತು ಸ್ಪೇನ್​ ತಂಡದಲ್ಲಿ ಯಾರಿಗೆ 2026ರ ವಿಶ್ವಕಪ್​ ಕಿರೀಟ ಮುಡಿಗೇರಲಿದೆ ಎಂಬ ಕುತೂಹಲ ಸದ್ಯ ಟಿಕೆಟ್ ಬೇಡಿಕೆಗೆ ಸಖತ್ ಡಿಮಾಂಡ್​ ತಂದುಕೊಟ್ಟಿದೆ ಎಂಬುದರಲ್ಲಿ ಅನುಮಾನ ಬೇಡ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net