ವಿಶ್ವಯುದ್ಧದ ಭೀತಿ: ಇಸ್ರೇಲ್‌ನ ಪ್ರಿವೆಂಟಿವ್ ಸ್ಟ್ರೈಕ್ ಬೆನ್ನಲ್ಲೇ ಟ್ರಂಪ್ ಎಂಟ್ರಿ! ಇರಾನ್ ಸೇನೆಗೆ ಯುಎಸ್​ ಅಧ್ಯಕ್ಷ ಕೊಟ್ಟ ಡೆಡ್‌ಲೈನ್ ಏನು.? Donald Trump

ವಿಶ್ವಯುದ್ಧದ ಭೀತಿ: ಇಸ್ರೇಲ್‌ನ ಪ್ರಿವೆಂಟಿವ್ ಸ್ಟ್ರೈಕ್ ಬೆನ್ನಲ್ಲೇ ಟ್ರಂಪ್ ಎಂಟ್ರಿ! ಇರಾನ್ ಸೇನೆಗೆ ಯುಎಸ್​ ಅಧ್ಯಕ್ಷ ಕೊಟ್ಟ ಡೆಡ್‌ಲೈನ್ ಏನು.?
ವಿಶ್ವಯುದ್ಧದ ಭೀತಿ: ಇಸ್ರೇಲ್‌ನ ಪ್ರಿವೆಂಟಿವ್ ಸ್ಟ್ರೈಕ್ ಬೆನ್ನಲ್ಲೇ ಟ್ರಂಪ್ ಎಂಟ್ರಿ! ಇರಾನ್ ಸೇನೆಗೆ ಯುಎಸ್​ ಅಧ್ಯಕ್ಷ ಕೊಟ್ಟ ಡೆಡ್‌ಲೈನ್ ಏನು.?
Published on
ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಈಗ ಕೈಮೀರಿ ಹೋಗಿದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ಪ್ರಿವೆಂಟಿವ್ ಅಟ್ಯಾಕ್ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ವಿರುದ್ಧ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭವಾಗಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಘೋಷಣೆಯು ಇಡೀ ಜಗತ್ತನ್ನು ಆತಂಕದ ಮಡುವಿಗೆ ತಳ್ಳಿದ್ದು, ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಸ್ಪಷ್ಟ ಮುನ್ಸೂಚನೆ ನೀಡಿದೆ.

ಇರಾನ್ ಜನತೆಗೆ ಟ್ರಂಪ್ ನೇರ ಕರೆ: ನಿಮ್ಮ ಸ್ವಾತಂತ್ರ್ಯದ ಸಮಯ ಬಂದಿದೆ

ಅತ್ಯಂತ ಅಪರೂಪದ ಮತ್ತು ನಾಟಕೀಯ ಬೆಳವಣಿಗೆಯಲ್ಲಿ, ಅಧ್ಯಕ್ಷ ಟ್ರಂಪ್ ಇರಾನ್ ಜನತೆಯನ್ನು ಉದ್ದೇಶಿಸಿ ನೇರವಾಗಿ ಮಾತನಾಡಿದ್ದಾರೆ. ಇರಾನ್‌ನ ಹೆಮ್ಮೆಯ ಜನರೇ, ನಿಮ್ಮ ಸ್ವಾತಂತ್ರ್ಯದ ಕ್ಷಣ ಸನ್ನಿಹಿತವಾಗಿದೆ. ನಾವು ನಮ್ಮ ಕಾರ್ಯಾಚರಣೆಯನ್ನು ಮುಗಿಸಿದ ನಂತರ, ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ. ತಲೆಮಾರುಗಳ ನಂತರ ಸಿಗುತ್ತಿರುವ ಈ ಏಕೈಕ ಅವಕಾಶವನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಇರಾನ್‌ನ ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿರುವ ಟ್ರಂಪ್, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದವರಿಗೆ ಸಂಪೂರ್ಣ ಅಭಯ ನೀಡಲಾಗುವುದು. ಆದರೆ ಪ್ರತಿರೋಧ ತೋರುವವರಿಗೆ ಸಾವು ಖಚಿತ ಎಂದು ಗುಡುಗಿದ್ದಾರೆ. ಯಾವೊಬ್ಬ ಅಮೆರಿಕ ಅಧ್ಯಕ್ಷರೂ ಮಾಡದ ಸಾಹಸಕ್ಕೆ ತಾವು ಕೈಹಾಕಿರುವುದಾಗಿ ಪ್ರತಿಪಾದಿಸಿದ್ದಾರೆ.

ಟೆಹ್ರಾನ್ ಮೇಲೆ ಸರಣಿ ದಾಳಿ: ಇಸ್ರೇಲ್-ಇರಾನ್ ಮಹಾಕಾಳಗ

ಶನಿವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಕಚೇರಿಯ ಸಮೀಪವೇ ಸಂಭವಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ಆರಂಭಿಸಿದ್ದು, ಜೆರುಸಲೇಂ ಮತ್ತು ಟೆಲ್ ಅವಿವ್ ನಗರಗಳಲ್ಲಿ ಸೈರನ್‌ಗಳು ಮೊಳಗುತ್ತಿವೆ. ಇರಾನ್ ಸರ್ಕಾರವು ಇಸ್ರೇಲ್‌ಗೆ ಜಜ್ಜುವ ಪ್ರತಿಕ್ರಿಯೆ ನೀಡಲಾಗುವುದು ಎಂದು ಪ್ರತಿಜ್ಞೆ ಮಾಡಿದೆ.

ಭಾರತೀಯರಿಗೆ ರಾಯಭಾರ ಕಚೇರಿಯ ಎಚ್ಚರಿಕೆ

ಪರಿಸ್ಥಿತಿ ಹದಗೆಡುತ್ತಿದ್ದಂತೆಯೇ, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು, ಅನಗತ್ಯ ಓಡಾಟವನ್ನು ನಿಲ್ಲಿಸಿ ಮನೆಯೊಳಗೇ ಸುರಕ್ಷಿತವಾಗಿ ಇರಬೇಕು ಎಂದು ಸೂಚಿಸಲಾಗಿದೆ.

ಯುದ್ಧದ ತೀವ್ರತೆ ಮತ್ತು ಭವಿಷ್ಯದ ಆತಂಕ

ಅಮೆರಿಕವು ತನ್ನ ಬೃಹತ್ ನೌಕಾಪಡೆ ಮತ್ತು ವಾಯುಪಡೆಯನ್ನು ಇರಾನ್ ಗಡಿಯೊಳಗೆ ನುಗ್ಗಿಸಿದೆ. ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮುಂದುವರಿಯುತ್ತಿದ್ದು, ಇರಾನ್‌ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರುತ್ತಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಇದರ ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net