ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಹೊರಾಂಗಣ ಪಾರ್ಥನೆಗೆ ಯುಎಇ ನಿರ್ಬಂಧ; ರಂಜಾನ್​ ನಮಾಜ್‌ಗೆ ಹೈ ಅಲರ್ಟ್! Ramadan

ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ; ಹೊರಾಂಗಣ ಪಾರ್ಥನೆಗೆ ಯುಎಇ ನಿರ್ಬಂಧ
ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ; ಹೊರಾಂಗಣ ಪಾರ್ಥನೆಗೆ ಯುಎಇ ನಿರ್ಬಂಧ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ
  • ರಂಜಾನ್​ ಹಬ್ಬಕ್ಕೆ ಆತಂಕ
  • ಹೊರಾಂಗಣ ಪಾರ್ಥನೆಗೆ ಯುಎಇ ನಿರ್ಬಂಧ
ಯುಎಇ: ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬ ಈದ್ ಅಲ್-ಫಿತರ್ (Ramadan) ಸಂಭ್ರಮಕ್ಕೆ ಯುಎಇ (UAE) ಸಜ್ಜಾಗುತ್ತಿದೆ. ಆದರೆ, ಈ ಬಾರಿಯ ಈದ್ ಆಚರಣೆಯಲ್ಲಿ ಒಂದು ದೊಡ್ಡ ಬದಲಾವಣೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ತೆರೆದ ಮೈದಾನ ಅಥವಾ ಹೊರಾಂಗಣ ಪ್ರದೇಶಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂದು ಯುಎಇ ಸರ್ಕಾರ ಘೋಷಿಸಿದೆ.

ಮಸೀದಿಗಳಲ್ಲೇ ಪ್ರಾರ್ಥನೆ

ಯುಎಇಯ ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಪ್ರಾಧಿಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಈ ವರ್ಷದ ಈದ್ ಪ್ರಾರ್ಥನೆಗಳನ್ನು ಕೇವಲ ಮಸೀದಿಗಳ ಒಳಗೆ ಮಾತ್ರ ನಡೆಸಬೇಕು. ಸಾಮಾನ್ಯವಾಗಿ ಸಾವಿರಾರು ಜನರು ಮೈದಾನಗಳಲ್ಲಿ ಒಟ್ಟಾಗಿ ಸೇರಿ ನಮಾಜ್ ಮಾಡುತ್ತಿದ್ದರು. ಆದರೆ ಈ ಬಾರಿ ಭದ್ರತಾ ದೃಷ್ಟಿಯಿಂದ ಮಸೀದಿ ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ಜನಸಂದಣಿಯನ್ನು ತಪ್ಪಿಸಲು ಜನರಿಗೆ ಸೂಚನೆ ನೀಡಲಾಗಿದೆ.
ಯುದ್ಧದ ಭೀತಿ ಮತ್ತು ಸುರಕ್ಷತೆ
ಈ ಹಠಾತ್ ಬದಲಾವಣೆಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಯುಎಇ ಆಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸಮಯದಲ್ಲಿ ಬದಲಾವಣೆ ಇಲ್ಲ

ಆಚರಣೆಯ ಜಾಗ ಬದಲಾಗಿದ್ದರೂ, ಪ್ರಾರ್ಥನೆಯ ಸಮಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಂದಿನಂತೆ ಸೂರ್ಯೋದಯದ ನಂತರ ಬೆಳಿಗ್ಗೆ 5:45 ರಿಂದ 6:30 ರ ಅವಧಿಯಲ್ಲಿ ಪ್ರಾರ್ಥನೆಗಳು ನಡೆಯಲಿವೆ. ಮಸೀದಿಗಳಲ್ಲಿ ಸ್ಥಳಾವಕಾಶದ ಮಿತಿ ಇರುವುದರಿಂದ ಜನರು ಮುಂಚಿತವಾಗಿಯೇ ಬರಬೇಕು ಮತ್ತು ಶಿಸ್ತು ಕಾಪಾಡಬೇಕು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಭಾವನಾತ್ಮಕ ಆಚರಣೆಗೆ ಭದ್ರತೆಯ ಸವಾಲು

ಈದ್ ಎಂದರೆ ಕೇವಲ ಧಾರ್ಮಿಕ ವಿಧಿಯಲ್ಲ, ಅದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಿಸುವ ಕ್ಷಣ. ತೆರೆದ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗದಿರುವುದು ಕೆಲವರಿಗೆ ಬೇಸರ ತಂದಿದ್ದರೂ, ಪ್ರಸ್ತುತ ಅನಿಶ್ಚಿತ ಪರಿಸ್ಥಿತಿಯಲ್ಲಿ ಸರ್ಕಾರದ ಈ ನಿರ್ಧಾರ ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಸೀದಿಗಳಲ್ಲಿ ಜನಸಂದಣಿಯನ್ನು ನಿಭಾಯಿಸಲು ಈಗಾಗಲೇ ಯುಎಇ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net