ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಇರಾನ್‌ನಿಂದ ಏಕಕಾಲದಲ್ಲಿ 4 ದೇಶಗಳ ಮೇಲೆ ಕ್ಷಿಪಣಿ ದಾಳಿ! | Middle East Crisis

Middle East Crisis
Middle East Crisis
Published on
ಟೆಹ್ರಾನ್/ಜೆರುಸಲೇಂ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಇರಾನ್ ಏಕಕಾಲದಲ್ಲಿ ಇಸ್ರೇಲ್, ಬಹ್ರೇನ್, ಯುಎಇ (UAE) ಮತ್ತು ಕತಾರ್‌ಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ( Middle East Crisis)ಸುರಿಮಳೆಗೈದಿದೆ.
ಇನ್ನೂ ಈ ಮೂಲಕ ಮಧ್ಯಪ್ರಾಚ್ಯದಲ್ಲಿ ತೀವ್ರ ಸ್ವರೂಪದ ಯುದ್ಧಕ್ಕೆ ನಾಂದಿ ಹಾಡಿದೆ. ಈ ಭೀಕರ ದಾಳಿಯಿಂದಾಗಿ ವಿಶ್ವದಾದ್ಯಂತ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಮೂರನೇ ಮಹಾಯುದ್ಧದ ಆತಂಕ ಶುರುವಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದಂತೆ ಅಮೆರಿಕದ ಸೇನೆ ಇರಾನ್‌ನಲ್ಲಿ ‘ಮುಖ್ಯ ಯುದ್ಧ ಕಾರ್ಯಾಚರಣೆ’ಯನ್ನು ಆರಂಭಿಸಿತ್ತು. “ಇರಾನ್ ಆಡಳಿತದಿಂದ ಉಂಟಾಗಲಿರುವ ಅನಿವಾರ್ಯ ಬೆದರಿಕೆಗಳನ್ನು ತೊಡೆದುಹಾಕುವ ಮೂಲಕ ಅಮೆರಿಕನ್ ಜನರನ್ನು ರಕ್ಷಿಸುವುದು ನಮ್ಮ ಗುರಿ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು. ಅವರ ಕ್ಷಿಪಣಿ ಉದ್ಯಮವನ್ನು ನೆಲಸಮ ಮಾಡುತ್ತೇವೆ,” ಎಂದು ಟ್ರಂಪ್ ಘೋಷಿಸಿದ್ದರು. ಈ ಪೂರ್ವಭಾವಿ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈ ಭೀಕರ ದಾಳಿಯನ್ನು ನಡೆಸಿದೆ.

ಏಕಕಾಲದಲ್ಲಿ ನಾಲ್ಕು ದೇಶಗಳ ಮೇಲೆ ದಾಳಿ

ಇರಾನ್‌ನ ಈ ದಾಳಿಯು ಕೇವಲ ಇಸ್ರೇಲ್‌ಗೆ ಸೀಮಿತವಾಗಿರಲಿಲ್ಲ, ಬದಲಾಗಿ ಅಮೆರಿಕದ ಮಿತ್ರರಾಷ್ಟ್ರಗಳನ್ನೂ ಗುರಿಯಾಗಿಸಿಕೊಂಡಿತ್ತು. ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್‌ನಿಂದ ಕ್ಷಿಪಣಿಗಳನ್ನು ಉಡಾಯಿಸಿರುವುದನ್ನು ದೃಢಪಡಿಸಿದೆ. ಇಸ್ರೇಲ್ ತನ್ನ ಲೇಯರ್ಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು (layered missile defence capabilities) ಸಕ್ರಿಯಗೊಳಿಸಿದೆ. ಹೋಮ್ ಫ್ರಂಟ್ ಕಮಾಂಡ್ ನಾಗರಿಕರಿಗೆ ಕೂಡಲೇ ಆಶ್ರಯ ತಾಣಗಳನ್ನು ಸೇರುವಂತೆ ಎಚ್ಚರಿಕೆ ನೀಡಿದೆ. ರಾಜಧಾನಿ ಅಬುಧಾಬಿಯಲ್ಲಿ ಭೀಕರ ಸ್ಫೋಟಗಳು ಕೇಳಿಬಂದಿವೆ. ಇಲ್ಲಿನ ಅಲ್ ಧಾಫ್ರಾ ವಾಯುನೆಲೆಯಲ್ಲಿ ಅಮೆರಿಕ ಮತ್ತು ಯುಎಇ ವಾಯುಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ, ದೋಹಾದಲ್ಲಿರುವ ಅಲ್ ಉದೈದ್ ವಾಯುನೆಲೆಯ ಬಳಿ ಕ್ಷಿಪಣಿಯನ್ನು ತಡೆಯಲಾಗಿದೆ. ಇದು ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಮುಂಚೂಣಿ ಪ್ರಧಾನ ಕಛೇರಿಯಾಗಿದೆ. ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್‌ನ ಪ್ರಧಾನ ಕಛೇರಿಯನ್ನು ಕ್ಷಿಪಣಿ ದಾಳಿ ಗುರಿಯಾಗಿಸಿಕೊಂಡಿದೆ ಎಂದು ಬಹ್ರೇನ್ ದೃಢಪಡಿಸಿದೆ.
ಇರಾನ್‌ನಿಂದ ಎಚ್ಚರಿಕೆ!
ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಅಲ್ ಜಜೀರಾ ವಾಹಿನಿಗೆ ನೀಡಿರುವ ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. “ಇಸ್ರೇಲ್ ಮುಂಬರುವ ದಾಳಿಗೆ ಸಿದ್ಧವಾಗಲಿ. ನಮ್ಮ ಪ್ರತಿಕ್ರಿಯೆ ಸಾರ್ವಜನಿಕವಾಗಿರುತ್ತದೆ ಮತ್ತು ಇನ್ನು ಮುಂದೆ ಯಾವುದೇ ‘ಕೆಂಪು ಗೆರೆ’ (Red Lines) ಇಲ್ಲ. ಮಧ್ಯಪ್ರಾಚ್ಯದಲ್ಲಿನ ಎಲ್ಲಾ ಅಮೆರಿಕದ ಮತ್ತು ಇಸ್ರೇಲ್‌ನ ಸ್ವತ್ತುಗಳು ಮತ್ತು ಆಸಕ್ತಿಗಳು ಈಗ ನ್ಯಾಯಸಮ್ಮತ ಗುರಿಗಳಾಗಿವೆ,” ಎಂದು ಎಚ್ಚರಿಸಿದ್ದಾರೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net