ಭೀಕರ ಪ್ರವಾಹದಿಂದ ಹುಲಿ ರಕ್ಷಿಸಿದ ಆನೆ! ಸಿಕ್ಕಾಪಟ್ಟೆ ವೈರಲ್ ಆಗ್ತಿರೋ​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ...Fact Check

ಭೀಕರ ಪ್ರವಾಹದಿಂದ ಹುಲಿ ರಕ್ಷಿಸಿದ ಆನೆ! ಸಿಕ್ಕಾಪಟ್ಟೆ ವೈರಲ್ ಆಗ್ತಿರೋ​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ...Fact Check
ಭೀಕರ ಪ್ರವಾಹದಿಂದ ಹುಲಿ ರಕ್ಷಿಸಿದ ಆನೆ! ಸಿಕ್ಕಾಪಟ್ಟೆ ವೈರಲ್ ಆಗ್ತಿರೋ​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ...Fact Check
Published on

ಪ್ರಮುಖ ಮುಖ್ಯಾಂಶಗಳು

  • ಕೋಟಿ ವೀಕ್ಷಣೆ ಪಡೆದ ಸುಮಾತ್ರಾ ಆನೆಯ 'ಪ್ರಾಣಿ ಪ್ರೇಮ' ವಿಡಿಯೋದ ಅಸಲಿಯತ್ತೇ ಬೇರೆ
  • ವಾಟ್ಸ್​ಆ್ಯಪ್ ಸ್ಟೇಟಸ್​ಗಳಲ್ಲಿ ಹರಿದಾಡುತ್ತಿರುವ ಆನೆ-ಹುಲಿ ಪ್ರವಾಹದ ವಿಡಿಯೋ ನೈಜ ಘಟನೆಯೇ ಅಲ್ಲವೇ ಅಲ್ಲ
  • ಮತ್ತೊಮ್ಮೆ ವೈರಲ್ ಆದ ಆನೆ-ಹುಲಿ ರಕ್ಷಣೆಯ ಹಳೇ ವಿಡಿಯೋ: 98.6% ಎಐ ಕೃತ್ಯ ಎಂದು ಸಾಬೀತು
  • ಇಂಡೋನೇಷ್ಯಾ ಆನೆ ಮತ್ತು ಕಾಡುಬೆಕ್ಕಿನ ವಿಡಿಯೋ ನೂರಕ್ಕೆ ನೂರು ನಕಲಿ
Fact Check : ಇಂಡೋನೇಷ್ಯಾದ ಸುಮಾತ್ರದಲ್ಲಿ ಉಂಟಾದ ಪ್ರವಾಹದ ವೇಳೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದೆ ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕ ಮಂದಿ ಇದೊಂದು ಅದ್ಭುತ ದೃಶ್ಯವೆಂದು ನಂಬಿದ್ದಾರೆ, ಆದರೆ ವಾಸ್ತವದಲ್ಲಿ ಇದು ಸಂಪೂರ್ಣ ಸುಳ್ಳಾಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ವಿಡಿಯೋ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ನಿಜ ಹೇಳಬೇಕೆಂದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಸುಮಾರು ಏಳೆಂಟು ತಿಂಗಳು ಹಳೆಯದು. ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಡಿಯೋ ನೋಡಿದ ಬಹುತೇಕ ಮಂದಿ ಆಗ ಹುಬ್ಬೇರಿಸಿದ್ದರು. ಇದೀಗ ಮತ್ತೊಮ್ಮೆ ಅದೇ ವಿಡಿಯೋ ವೈರಲ್​ ಆಗುತ್ತಿದೆ. ವಿಡಿಯೋ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೆ ಅನೇಕ ಮಂದಿ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಡುತ್ತಿದ್ದಾರೆ ಮತ್ತು ಆ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಹರಿದುಬರುತ್ತಿವೆ.
ಅಂದಹಾಗೆ, ಕಳೆದ ವರ್ಷ ಅಂದರೆ 2025ರ ನವೆಂಬರ್ ಕೊನೆಯಲ್ಲಿ ಸುಮಾತ್ರಾದಲ್ಲಿ ಸಂಭವಿಸಿದ ಭೀಕರ ಚಂಡಮಾರುತದಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಮನೆಗಳು ನಾಶವಾಗಿದ್ದವು ಹಾಗೂ ಜನರು ಪರಿಹಾರ ಕೇಂದ್ರ ಸೇರುವಂತಾಗಿತ್ತು. ಈ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಇದೇ ವಿಡಿಯೋ ಬರೋಬ್ಬರಿ 13 ಲಕ್ಷಕ್ಕೂ (1.3 ಮಿಲಿಯನ್) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತು.
ಇನ್ನು ನವೆಂಬರ್​ನಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ 1,030 ಮಂದಿ ಸಾವಿಗೀಡಾಗಿ, 206 ಜನರು ನಾಪತ್ತೆಯಾಗಿದ್ದರು. ಹೇಳಬೇಕೆಂದರೆ, ಆ ಸಮಯದಲ್ಲಿ ಮನುಷ್ಯರ ಸಾವು-ನೋವಿಗಿಂತ ಆನೆ, ಹುಲಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆಯಿತು. ಈಗಲೂ ಕೂಡ ಜಾಲತಾಣದಲ್ಲಿ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲದೆ, ಕೆಲವರು ತಮ್ಮ ವಾಟ್ಸ್​ಆ್ಯಪ್​ ಸ್ಟೋರಿಗು ಕೂಡ ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಬೇರೆ ಇದೆ ಅನ್ನೋದು ಇನ್ನೂ ಬಹುತೇಕ ಮಂದಿಗೆ ತಿಳಿದೇ ಇಲ್ಲ.

ಅಂದಹಾಗೆ, ವಾಸ್ತವ ಏನೆಂಬುದನ್ನು ನ್ಯೂಸ್‌ಚೆಕರ್ (Newschecker) ಸಂಸ್ಥೆ ಪತ್ತೆಹಚ್ಚಿದೆ. ಹುಲಿಯನ್ನು ಆನೆ ರಕ್ಷಣೆ ಮಾಡುತ್ತಿರುವ ಸಂಬಂಧ ಯಾವುದೇ ನೈಜ ವಿಡಿಯೋ ವರದಿಯಾಗಿರುವುದು ಕಂಡುಬಂದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿರುವ ಹುಲಿಯ ಮಸುಕಾದ ಚಿತ್ರಣ ಮತ್ತು ನೀರಿನ ಅತಿಯಾದ ಮೃದುವಾದ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಈ ವಿಡಿಯೋದ ಕೆಲವು ಪ್ರಮುಖ ದೃಶ್ಯಗಳನ್ನು (Screengrabs) ಕೃತಕ ಬುದ್ಧಿಮತ್ತೆಯನ್ನು ಪತ್ತೆಹಚ್ಚುವ 'ವಾಸಿತ್ ಎಐ' (WasitAI) ಉಪಕರಣದ ಮೂಲಕ ಪರೀಕ್ಷಿಸಿದಾಗ, ಈ ಚಿತ್ರಗಳು ಅಥವಾ ಇದರ ಪ್ರಮುಖ ಭಾಗಗಳು ಎಐ ಮೂಲಕವೇ ಸೃಷ್ಟಿಸಲ್ಪಟ್ಟಿವೆ ಎಂದು ಅದು ಬಲವಾಗಿ ಖಚಿತಪಡಿಸಿದೆ. ಅದೇ ರೀತಿ, 'ಎಐ ಆರ್ ನಾಟ್' (AIorNot) ಎಂಬ ಮತ್ತೊಂದು ಎಐ ಪತ್ತೆಹಚ್ಚುವ ಸಂಸ್ಥೆಯೂ ಸಹ ಈ ವಿಡಿಯೋ ಕೃತಕವಾಗಿ ಸೃಷ್ಟಿ ಮಾಡಲಾದ ವಿಡಿಯೋ ಇರಬಹುದು ಎಂದು ಪತ್ತೆಹಚ್ಚಿದೆ.
ಈ ವಿಡಿಯೋದ ಒಂದು ಭಾಗವನ್ನು 'ಹೈವ್ ಮಾಡರೇಶನ್' (Hive Moderation) ಎಂಬ ತಂತ್ರಜ್ಞಾನದ ಮೂಲಕ ಪರೀಕ್ಷಿಸಿದಾಗ, ಇದು ಶೇ. 98.6 ರಷ್ಟು ಕೃತಕ ಬುದ್ಧಿಮತ್ತೆ (AI) ಅಥವಾ ಡೀಪ್‌ಫೇಕ್ (Deepfake) ಬಳಸಿ ಸೃಷ್ಟಿ ಮಾಡಲಾದ ದೃಶ್ಯಾವಳಿಗಳನ್ನು ಒಳಗೊಂಡಿದೆ ಎಂದು ವರದಿ ನೀಡಿದೆ. ಆ ಮೂಲಕ ವೈರಲ್ ಆಗಿರುವ ಈ ವಿಡಿಯೋ ಯಾವುದೇ ನೈಜ ಘಟನೆಗೆ ಸಂಬಂಧಿಸಿದ್ದಲ್ಲ ಎಂಬುದು ಸಂಪೂರ್ಣವಾಗಿ ದೃಢಪಟ್ಟಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net