Contact Lens: ಬಾಲಿಗೆ ಪ್ರವಾಸ ತೆರಳಿದ್ದ ಇಂಗ್ಲೆಡ್ ವ್ಯಕ್ತಿಯೊಬ್ಬರು ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಈಜುಕೊಳಕ್ಕೆ ಇಳಿದ ಪರಿಣಾಮ ಕಣ್ಣಿನ ಗಂಭೀರ ಸೋಂಕಿಗೆ ತುತ್ತಾಗಿದ್ದು, ತಮ್ಮ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಇಂಗ್ಲೆಂಡ್‌ನ ಕೊಲ್ಚೆಸ್ಟರ್ ನಿವಾಸಿ ಮ್ಯಾಟ್ ಫ್ಲಾಕ್ ಎಂಬುವವರು ಮೇ ತಿಂಗಳಲ್ಲಿ ಇಂಡೋನೇಷ್ಯಾದ ಬಾಲಿಗೆ ರಜೆಗಾಗಿ ತೆರಳಿದ್ದರು. ಈ ವೇಳೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿಕೊಂಡೇ ಈಜುಕೊಳದಲ್ಲಿ ಈಜಾಡಿದ್ದರು. ಈಜಿದ ಕೆಲವೇ ಸಮಯದಲ್ಲಿ ಅವರ ಎಡಕಣ್ಣಿನಲ್ಲಿ ತೀವ್ರ ಕಿರಿಕಿರಿ ಹಾಗೂ ನೋವು ಕಾಣಿಸಿಕೊಂಡಿದೆ.
ಆದಾಗ್ಯೂ, ಆರಂಭದಲ್ಲಿ ಸರ್ಫಿಂಗ್ ಮಾಡುವಾಗ ಕಣ್ಣಿಗೆ ಮರಳು ಅಥವಾ ಉಪ್ಪು ನೀರು ಬಿದ್ದಿರಬಹುದು ಎಂದು ಭಾವಿಸಿದ ಅವರು, ಸಾಮಾನ್ಯ ಐ ಡ್ರಾಪ್ಸ್ ಬಳಸಿದ್ದರು. ಆದರೆ ದಿನ ಕಳೆದಂತೆ ಕಣ್ಣು ತೀವ್ರವಾಗಿ ಕೆಂಪಾಗುವುದು, ನಿರಂತರ ನೀರು ಸುರಿಯುವುದು ಹಾಗೂ ಬೆಳಕನ್ನು ನೋಡಲು ಸಾಧ್ಯವಾಗದಷ್ಟು ನೋವು ಹೆಚ್ಚಾಯಿತು ಎಂದಿದ್ದಾರೆ.
ಏನಿದು ಅಕಾಂಥಮೀಬಾ ಕೆರಟೈಟಿಸ್?
ಜುಲೈ 10 ರಂದು ಯುಕೆಗೆ ಮರಳಿದ ನಂತರ ಅವರು ವೈದ್ಯರನ್ನು ಸಂಪರ್ಕಿಸಿ ಕಣ್ಣಿನ ಪರೀಕ್ಷೆಗೆ ಒಳಗಾದರು. ಪರೀಕ್ಷೆಯ ವರದಿಯಲ್ಲಿ ಅವರಿಗೆ 'ಅಕಾಂಥಮೀಬಾ ಕೆರಟೈಟಿಸ್' ಎಂಬ ಗಂಭೀರ ಕಣ್ಣಿನ ಸೋಂಕು ತಗುಲಿರುವುದು ದೃಢಪಟ್ಟಿತು.
ಈ ಸೋಂಕು ನೀರು, ಈಜುಕೊಳ, ಹಾಟ್ ಟಬ್ ಹಾಗೂ ನಲ್ಲಿ ನೀರಿನಲ್ಲಿ ಕಂಡುಬರುವ ಅತ್ಯಂತ ಸೂಕ್ಷ್ಮ ಜೀವಿಯಿಂದ ಬರುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ನೀರಿಗಿಳಿದಾಗ, ಲೆನ್ಸ್ ಹಾಗೂ ಕಣ್ಣಿನ ಗುಡ್ಡೆಯ ನಡುವಿನ ಸಣ್ಣ ಜಾಗದಲ್ಲಿ ಈ ಕ್ರಿಮಿಗಳು ಸಿಲುಕಿಕೊಳ್ಳುತ್ತವೆ. ನಂತರ ಇವು ಕಣ್ಣಿನ ಮುಂಭಾಗದ ಪದರಕ್ಕೆ ಬಂದು ಕಣ್ಣಿನ ಕಣಗಳನ್ನು ತಿನ್ನುತ್ತಾ ತೀವ್ರ ನೋವು ಮತ್ತು ಉರಿಯೂತವನ್ನು ಉಂಟು ಮಾಡುತ್ತವೆ.
ಸಾಮಾನ್ಯ ಕಣ್ಣಿನ ಸೋಂಕಿನ ಲಕ್ಷಣಗಳೇ ಇದಕ್ಕೂ ಇರುವುದರಿಂದ ಆರಂಭದಲ್ಲಿ ಇದನ್ನು ಪತ್ತೆ ಮಾಡುವುದು ಕಷ್ಟವಾದ ಕೆಲಸ. ತಡವಾದಷ್ಟು ಈ ಜೀವಿ ಕಣ್ಣಿನ ದೃಷ್ಟಿಯನ್ನೇ ಸಂಪೂರ್ಣವಾಗಿ ನಾಶಪಡಿಸುವ ಅಪಾಯವಿರುತ್ತದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಮ್ಯಾಟ್, ದಿನಬಳಕೆಯ (Daily disposable) ಕಾಂಟ್ಯಾಕ್ಟ್ ಲೆನ್ಸ್ ಬಳಸುವವರೂ ಸಹ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಹೀಗಾಗಿ ಈಜುಕೊಳ ಅಥವಾ ಯಾವುದೇ ನೀರಿಗೆ ಇಳಿಯುವ ಮುನ್ನ ಕಡ್ಡಾಯವಾಗಿ ಲೆನ್ಸ್‌ಗಳನ್ನು ತೆಗೆದಿಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ (ಏಜೆನ್ಸೀಸ್).