ರಷ್ಯಾ ಹುಡುಗಿಯರ ಜತೆ ಸರಸ... Epstein Files​ ಬಗ್ಗೆ ಕೊನೆಗೂ ಮೌನ ಮುರಿದ ಬಿಲ್​ ಗೇಟ್ಸ್​, ಪಶ್ಚಾತಾಪದ ಮಾತು!

 Epstein Files​ ಬಗ್ಗೆ ಕೊನೆಗೂ ಮೌನ ಮುರಿದ ಬಿಲ್​ ಗೇಟ್ಸ್​
Epstein Files​ ಬಗ್ಗೆ ಕೊನೆಗೂ ಮೌನ ಮುರಿದ ಬಿಲ್​ ಗೇಟ್ಸ್​
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ಜೆಫ್ರಿ ಎಪ್ಸ್ಟೀನ್‌ ಫೈಲ್ಸ್​
  • ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್ಸ್ಟೀನ್‌ ಜತೆ ಕೇಳಿಬರುತ್ತಿವೆ
  • ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಹೆಸರು ಸಹ ತಳುಕು ಹಾಕಿಕೊಂಡಿದೆ
  • ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಕೊನೆಗೆ ಉತ್ತರ ನೀಡಿದ್ದಾರೆ ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ
Epstein Files : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಪ್ಸ್ಟೀನ್‌ ( Jeffrey Epstein )ಗೆ ಸಂಬಂಧಿಸಿದ ಕಡತಗಳು ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದೆ. ಕಳೆದ ಕೆಲವು ದಿನಗಳಿಂದ ನೂರಾರು ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್ಸ್ಟೀನ್‌ ಜತೆ ಕೇಳಿಬರುತ್ತಿವೆ. ಅವರಲ್ಲಿ ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಹಾಗೂ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಹೆಸರು ಸಹ ತಳುಕು ಹಾಕಿಕೊಂಡಿದೆ. ಅಲ್ಲದೆ, ಯುವತಿಯರ ಜತೆ ಬಿಲ್​ ಗೇಟ್ಸ್​ ಇರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಈ ವಿಚಾರವಾಗಿ ಕೊನೆಗೂ ಬಿಲ್​ ಗೇಟ್ಸ್​ ಮೌನ ಮುರಿದಿದ್ದಾರೆ. 
ಅಂದಹಾಗೆ, ಕಳೆದ ವಾರ ಅಮೆರಿಕದ ನ್ಯಾಯಾಂಗ ಇಲಾಖೆ ಜೆಫ್ರಿ ಎಪ್ಸ್ಟೀನ್​ಗೆ ಸಂಬಂಧಿಸಿದ  ದಾಖಲೆಗಳನ್ನು ಬಿಡುಗಡೆ ಮಾಡಿತು. ಅದರ, ಇತ್ತೀಚಿನ ಕಂತುಗಳಲ್ಲಿ ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ಎಪ್ಸ್ಟೀನ್ ನಡುವಿನ ಇಮೇಲ್‌ ಸಂಭಾಷಣೆಗಳು ಬಯಲಾಗಿವೆ. ಅಲ್ಲದೆ, ಇದೇ ಈಮೇಲ್​ಗಳಿಂದ ಎಪ್ಸ್ಟೀನ್ ಮತ್ತು ನಾಯಕರ ನಡುವಿನ ಆತ್ಮೀಯ ಸ್ನೇಹ, ಅಕ್ರಮ ಹಣಕಾಸು ವ್ಯವಹಾರಗಳು ಮತ್ತು ಖಾಸಗಿ ಫೋಟೋಗಳು ಮಾಹಿತಿ ಕೂಡ ಬಹಿರಂಗವಾಗಿವೆ.

ಬಿಲ್​ ಗೇಟ್ಸ್​ಗೆ ಸಹಾಯ

ಅನೇಕ ದಾಖಲೆಗಳ ಪೈಕಿ ಒಂದು ಡ್ರಾಫ್ಟ್​ ಇಮೇಲ್‌ನಲ್ಲಿ, ಗೇಟ್ಸ್ ಅವರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಎಪ್ಸ್ಟೀನ್ ಆರೋಪಿಸಿದ್ದಾರೆ. ರಷ್ಯಾದ ಹುಡುಗಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಎದುರಾಗುವ ಪರಿಣಾಮಗಳನ್ನು ಎದುರಿಸಲು ಗೇಟ್ಸ್​ಗೆ ಮಾದಕ ದ್ರವ್ಯಗಳನ್ನು ಖರೀದಿ ಮಾಡಲು ಸಹಾಯ ಮಾಡಿದ್ದಾಗಿಯೂ ಎಪ್ಸ್ಟೀನ್​ ಬರೆದಿದ್ದಾನೆ. ಅಲ್ಲದೆ, ವಿವಾಹಿತ ಮಹಿಳೆಯರ ಜತೆ ಅಕ್ರಮ ಸಂಬಂಧಗಳನ್ನು ಬೆಳೆಸಲು ​ಗೇಟ್ಸ್​ಗೆ ಅನುಕೂಲ ಮಾಡಿಕೊಟ್ಟಿದ್ದಾಗಿಯೂ ತಿಳಿಸಿದ್ದಾನೆ.

ಬಿಲ್​ ಗೇಟ್ಸ್​ ಪ್ರತಿಕ್ರಿಯೆ ಏನು?

ಯಾವಾ ಬಿಲ್​ ಗೇಟ್ಸ್​ ಸುದ್ದಿ ಆಚೆ ಬಂತೋ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಲ್ಲದೆ, ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ವಿಚಾರವಾಗಿ ಬಿಲ್​ ಗೇಟ್ಸ್​ ಕೊನೆಗೂ ಮೌನ ಮುರಿದಿದ್ದಾರೆ. ಬುಧವಾರ ಪ್ರಸಾರಗೊಂಡ ಆಸ್ಟ್ರೇಲಿಯಾದ 9ನ್ಯೂಸ್​ ಮಾಧ್ಯಮ ಸಂದರ್ಶನದಲ್ಲಿ ಬಿಲ್​ಗೇಟ್ಸ್​ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಎಪ್ಸ್ಟೀನ್​ ಜತೆ ಕಳೆದ ಪ್ರತಿ ಕ್ಷಣಗಳಿಗೂ ನಾನು ಪಶ್ಚಾತಾಪ ಪಡುತ್ತೇನೆ ಮತ್ತು ನಾನು ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಇಮೇಲ್​ ವಿಚಾರವಾಗಿ ಮಾತನಾಡಿದ ಬಿಲ್​ ಗೇಟ್ಸ್, ಆ ಇಮೇಲ್ ಅನ್ನು ನಾನು ಎಂದಿಗೂ ಕಳುಹಿಸಿಲ್ಲ. ಇಮೇಲ್ ಕಳುಹಿಸಿದ್ದೇನೆ ಅನ್ನೋದು ಸುಳ್ಳು ಎಂದು ಹೇಳಿದರು. ಅಲ್ಲದೆ, ಎಪ್ಸ್ಟೀನ್ ಅವರ ತನಿಖೆಗೆ ಸಂಬಂಧಿಸಿದ ಲಕ್ಷಾಂತರ ಫೈಲ್‌ಗಳ ಹೊಸ ಸಂಗ್ರಹ ಬಿಡುಗಡೆಯಾದ ಬೆನ್ನಲ್ಲೇ ಗೇಟ್ಸ್ ವಕ್ತಾರರು ಕೂಡ ಇದೇ ರೀತಿ ನಿರಾಕರಿಸಿದ್ದಾರೆ. 

ಡಿವೋರ್ಸ್​ಗೆ ಇದೇ ಕಾರಣನಾ?

ಇನ್ನು ಬಿಲ್​ ಗೇಟ್ಸ್​ ಅವರ ಡಿವೋರ್ಸ್​ಗೂ ಎಪ್ಸ್ಟೀನ್ ಜತೆಗಿನ ಸಂಪರ್ಕವೇ ಕಾರಣ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಗೇಟ್ಸ್ ಆಗಲಿ ಅಥವಾ ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಆಗಲಿ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಎಪ್ಸ್ಟೀನ್​ ಫೈಲ್ಸ್​ ಎಲ್ಲೆಡೆ ಬಿರುಗಾಳಿ ಸೃಷ್ಟಿಸುತ್ತಿರುವುದರ ನಡುವೆಯೇ ಯುಎಸ್ ನ್ಯಾಷನಲ್ ಪಬ್ಲಿಕ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೆಲಿಂಡಾ, ಈ ದಾಖಲೆಗಳ ಸಂಗ್ರಹವು ನನ್ನ ದಾಂಪತ್ಯದ ಕೆಲವು ನೋವಿನ ಸಮಯಗಳ ನೆನಪುಗಳನ್ನು ಮರಳಿ ತಂದಿತು ಎಂದಿದ್ದಾರೆ. ಅಲ್ಲದೆ, ಆ ವಿವರಗಳು ಬಂದಾಗಲೆಲ್ಲಾ ನನಗೆ ವೈಯಕ್ತಿಕವಾಗಿ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ, ಗೇಟ್ಸ್​ ಮತ್ತು ಮೆಲಿಂಡಾ 2021ರಲ್ಲಿ ಡಿವೋರ್ಸ್​ ಆದರು. 

ಹಲವಾರು ಭೇಟಿ

ಬಿಲ್ ಗೇಟ್ಸ್ 9ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ, 2011ರಲ್ಲಿ ಎಪ್ಸ್ಟೀನ್ ಅವರನ್ನು ಮೊದಲ ಬಾರಿ ಭೇಟಿಯಾದೆ ಮತ್ತು ಮೂರು ವರ್ಷಗಳಲ್ಲಿ ಅವರೊಂದಿಗೆ ಹಲವಾರು ಭೋಜನಗಳನ್ನು ಮಾಡಿದ್ದೇನೆ ಆದರೆ, ಆತನ ಕೆರಿಬಿಯನ್ ದ್ವೀಪಕ್ಕೆ ಎಂದಿಗೂ ನಾನು ಭೇಟಿ ನೀಡಿಲ್ಲ ಮತ್ತು ಮಹಿಳೆಯರೊಂದಿಗೆ ಸಂಬಂಧ ಹೊಂದಿರಲಿಲ್ಲ ಎಂದು ಗೇಟ್ಸ್​ ಹೇಳಿದ್ದಾರೆ.

ಯಾರು ಈ ಜೆಫ್ರಿ ಎಪ್ಸ್ಟೀನ್‌?

ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ (1953-2019) ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿ ಮತ್ತು ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ಕಳ್ಳಸಾಗಾಣೆ ಮಾಡಿದ ಆರೋಪ ಆತನ ಮೇಲಿದೆ. 2008ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಮತ್ತು 2019ರಲ್ಲಿ ಮತ್ತೆ ಬಂಧನಕ್ಕೊಳಗಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು. ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಈ ಎಪ್ಸ್ಟೀನ್  ಸಂಪರ್ಕ ಹೊಂದಿದ್ದ ಆದರೆ, ಅವರ ಮೇಲೆ ಯಾವುದೇ ನೇರ ಆರೋಪಗಳಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net