ಅಂತರಿಕ್ಷದಲ್ಲಿ ಡೇಟಾ ಸೆಂಟರ್​ ಸ್ಥಾಪನೆ; ವಿಜ್ಞಾನಿಗಳನ್ನೇ ದಂಗುಬಡಿಸಿದ ಮಸ್ಕ್ ಯೋಚನೆ

ಎಲಾನ್​ ಮಸ್ಕ್​
ಎಲಾನ್​ ಮಸ್ಕ್​
Published on

ನ್ಯೂಯಾರ್ಕ್: ವಾಹನ ಮತ್ತು ರಾಕೆಟ್ ಉದ್ಯಮದಲ್ಲಿ ಕ್ರಾಂತಿ ಮಾಡಿದ ಬೆನ್ನಲ್ಲೇ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೀಗ ಮತ್ತೊಂದು ಅಸಾಧ್ಯ ಎನ್ನಬಹುದಾದ ಗುರಿಯ ಮೇಲೆ ಕಣ್ಣಿಟ್ಟಿದ್ದಾರೆ. ಸೌರಶಕ್ತಿಯಿಂದ ನಡೆಯುವ ಬೃಹತ್ ಡೇಟಾ ಸೆಂಟರ್​ಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಲು ಅವರು ಸಜ್ಜಾಗಿದ್ದಾರೆ. ಇದಕ್ಕಾಗಿ 10 ಲಕ್ಷ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಂಕಲ್ಪ ಮಾಡಿದ್ದಾರೆ. ಈ ಮೂಲಕ ಡೇಟಾ ಸೆಂಟರ್​ಗಳಿಗಾಗಿ ಭೂಮಿಯ ಮೇಲೆ ಆಗುತ್ತಿರುವ ವಿದ್ಯುತ್ ವೆಚ್ಚ ಮತ್ತು ಪರಿಸರ ಹಾನಿಯನ್ನು ತಪ್ಪಿಸುವುದು ಅವರ ಉದ್ದೇಶ.

ತಮ್ಮ ಬಾಹ್ಯಾಕಾಶ ಸಂಸ್ಥೆ ಸ್ಪೇಸ್​ಎಕ್ಸ್ ಅನ್ನು ತಮ್ಮದೇ ಆದ ಕೃತಕ ಬುದ್ಧಿಮತ್ತೆ (ಎಐ) ವ್ಯವಹಾರದೊಂದಿಗೆ ವಿಲೀನಗೊಳಿಸಿರುವ ಮಸ್ಕ್, ‘ಬಾಹ್ಯಾಕಾಶ ಆಧಾರಿತ ಎಐ ಮಾತ್ರ ಭವಿಷ್ಯದ ಬೆಳವಣಿಗೆಗೆ ಏಕೈಕ ದಾರಿ. ಬಾಹ್ಯಾಕಾಶದಲ್ಲಿ ಯಾವಾಗಲೂ ಸೂರ್ಯನ ಬೆಳಕು ಲಭ್ಯವಿರುತ್ತದೆ!’ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಆದರೆ, ‘ಈ ಫ್ಯಾನ್ಸಿ ಐಡಿಯಾ ಟೆಸ್ಲಾವನ್ನು ಯಶಸ್ವಿಗೊಳಿಸಿದಷ್ಟು ಸುಲಭವಲ್ಲ. ಮಸ್ಕ್​ಗೆ ಈ ಬಾರಿ ತಾಂತ್ರಿಕ, ಆರ್ಥಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಸವಾಲುಗಳು ಎದುರಾಗಲಿವೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಯಾಗುವ ಕಂಪ್ಯೂಟರ್ ಚಿಪ್​ಗಳು

ಭೂಮಿಯ ಮೇಲೆ ಎಐ ಡೇಟಾ ಸೆಂಟರ್​ಗಳನ್ನು ನಡೆಸಲು ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಅಗತ್ಯ. ಬಾಹ್ಯಾಕಾಶದಲ್ಲಿ ಸ್ಥಾಪಿಸುವುದರಿಂದ ಭೂಮಿಯ ಮೇಲಿನ ಒತ್ತಡ ಕಡಿಮೆಯಾಗಬಹುದು. ಆದರೆ ಬಾಹ್ಯಾಕಾಶ ಒಂದು ಶೂನ್ಯ ಪ್ರದೇಶ (ವ್ಯಾಕ್ಯೂಮ್. ಅಲ್ಲಿ ಗಾಳಿ ಇಲ್ಲ. ಉಪಕರಣಗಳಿಂದ ಹೊರಬರುವ ಶಾಖವನ್ನು ಹೊರಹಾಕುವುದು ಅತ್ಯಂತ ಕಠಿಣ. ‘ಬಾಹ್ಯಾಕಾಶದಲ್ಲಿ ಕಂಪ್ಯೂಟರ್ ಚಿಪ್​ಗಳು ಕರಗಬಹುದು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಸುವಂತಹ ಬೃಹತ್ ರೇಡಿಯೇಟರ್ ಪ್ಯಾನಲ್​ಗಳನ್ನು ಮಸ್ಕ್ ಅವರ ಡೇಟಾ ಸೆಂಟರ್​ಗಳಿಗೆ ಅಳವಡಿಸಬೇಕಾಗುತ್ತದೆ. ಆದರೆ ಇಷ್ಟು ದೊಡ್ಡ ಮಟ್ಟದ ವಿನ್ಯಾಸಗಳನ್ನು ಇದುವರೆಗೆ ಯಾರೂ ನಿರ್ವಿುಸಿಲ್ಲ ಎನ್ನುತ್ತಾರೆ ನಾರ್ತ್ ಈಸ್ಟರ್ನ್ ವಿವಿಯ ಪ್ರೊ. ಜೋಸೆಫ್ ಜಾರ್ನೆಟ್.

ದುರಸ್ತಿ ಸಮಸ್ಯೆ

ಭೂಮಿಯ ಮೇಲಿನ ಡೇಟಾ ಸೆಂಟರ್​ಗಳಲ್ಲಿ ಯಾವುದೇ ಭಾಗ ಹಾಳಾದರೆ ತಕ್ಷಣವೇ ತಂತ್ರಜ್ಞರನ್ನು ಕಳುಹಿಸಿ ಸರಿಪಡಿಸಬಹುದು. ಆದರೆ ಬಾಹ್ಯಾಕಾಶದಲ್ಲಿ ಅಂತಹ ಸೌಲಭ್ಯವಿಲ್ಲ. ಎಐ ತಂತ್ರಜ್ಞಾನಕ್ಕೆ ಬಳಸುವ ದುಬಾರಿ ಜಿಪಿಯು ಚಿಪ್​ಗಳು ಸೂರ್ಯನ ತೀವ್ರ ವಿಕಿರಣಗಳಿಂದ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಪ್ರತಿ ಚಿಪ್​ಗೆ ಲಕ್ಷಾಂತರ ರೂ. ಬೆಲೆ ಇರುವುದರಿಂದ, ಪದೇಪದೆ ಅವುಗಳನ್ನು ಬದಲಾಯಿಸುವುದು ಅಥವಾ ಹೆಚ್ಚುವರಿ ಚಿಪ್​ಗಳನ್ನು ಮೊದಲೇ ಕಳುಹಿಸುವುದು ಆರ್ಥಿಕವಾಗಿ ಭಾರಿ ಹೊರೆಯಾಗಲಿದೆ.

ಇವರೊಬ್ಬರೇ ಅಲ್ಲ...

ಮಸ್ಕ್ ಮಾತ್ರವಲ್ಲದೆ ಗೂಗಲ್​ನ ‘ಪ್ರಾಜೆಕ್ಟ್ ಸನ್​ಕ್ಯಾಚರ್’ ಮತ್ತು ಜೆಫ್ ಬೆಜೋಸ್ ಅವರ ‘ಬ್ಲ್ಯೂ ಒರಿಜಿನ್’ ಕೂಡ ಇಂತಹ ಪ್ರಯತ್ನಗಳಲ್ಲಿ ತೊಡಗಿವೆ. ಆದರೂ ಮಸ್ಕ್ ಬಳಿ ದೊಡ್ಡ ಪ್ರಮಾಣದಲ್ಲಿ ರಾಕೆಟ್​ಗಳಿವೆ. ಪ್ರತಿಸ್ಪರ್ಧಿ ಕಂಪನಿಗಳು ತಮ್ಮ ಚಿಪ್​ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮಸ್ಕ್ ಅವರ ಫಾಲ್ಕನ್ ರಾಕೆಟ್​ಗಳನ್ನೇ ಅವಲಂಬಿಸಬೇಕಾಗುತ್ತದೆ.

‘ಮಸ್ಕ್ ತಮಗೆ ಬೇಕಾದ ಸಾಧನಗಳನ್ನು ಕಳುಹಿಸಲು, ತಗಲುವ ವೆಚ್ಚಕ್ಕಿಂತ ಹತ್ತು ಪಟ್ಟು ಹೆಚ್ಚಿನ ದರವನ್ನು ಇತರ ಕಂಪನಿಗಳಿಗೆ ವಿಧಿಸುತ್ತಿದ್ದಾರೆ. ಈ ಮೂಲಕ ಅವರು ಬಾಹ್ಯಾಕಾಶ ವ್ಯವಹಾರ ವಲಯದಲ್ಲಿ ಏಕಸ್ವಾಮ್ಯ ಸಾಧಿಸಲು ಮತ್ತು ಇತರರನ್ನು ಹಿಂದೆ ಹಾಕಲು ಪ್ಲ್ಯಾನ್ ಮಾಡಿದ್ದಾರೆ’ ಎಂಬುದು ತಜ್ಞರ ಅನಿಸಿಕೆ.

ಬಾಹ್ಯಾಕಾಶ ಕಸದ ಭೀತಿ

ಬಾಹ್ಯಾಕಾಶದ ತ್ಯಾಜ್ಯ ಅಥವಾ ಕಸ (ಸ್ಪೇಸ್ ಜಂಕ್) ಮತ್ತೊಂದು ಪ್ರಮುಖ ಆತಂಕ. ಈಗಾಗಲೇ ಸ್ಟಾರ್​ಲಿಂಕ್ ಮೂಲಕ ಸಾವಿರಾರು ಉಪಗ್ರಹಗಳನ್ನು ಮಸ್ಕ್ ಉಡಾವಣೆ ಮಾಡಿದ್ದಾರೆ. ಆದರೆ 10 ಲಕ್ಷ ಉಪಗ್ರಹಗಳನ್ನು ಕಕ್ಷೆಗೆ ಬಿಟ್ಟಾಗ ಅವುಗಳ ನಡುವೆ ಘರ್ಷಣೆ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ಒಂದು ಉಪಗ್ರಹ ವಿಫಲವಾದರೂ ಅದು ಇತರ ಉಪಗ್ರಹಗಳಿಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಬಹುದು. ಈ ಉಪಗ್ರಹಗಳು ಗಂಟೆಗೆ 17,500 ಮೈಲಿ ವೇಗದಲ್ಲಿ ಚಲಿಸುತ್ತಿರುವುದರಿಂದ ಸಣ್ಣ ಡಿಕ್ಕಿಯೂ ಭೀಕರ ಪರಿಣಾಮ ಬೀರಬಹುದು. ತುರ್ತು ಸಂವಹನ ಮತ್ತು ಹವಾಮಾನ ಮುನ್ಸೂಚನೆ ವ್ಯವಸ್ಥೆಯೂ ಅಸ್ತವ್ಯಸ್ತಗೊಳ್ಳಬಹುದು ಎನ್ನುತ್ತಾರೆ ನಾಸಾದ ಮಾಜಿ ಇಂಜಿನಿಯರ್ ಜಾನ್ ಕ್ರಾಸಿಡಿಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net