ಭೂಮಿಯ ಅಂತರಾಳದಲ್ಲಿ ಅಡಗಿದೆಯೇ ಬೃಹತ್ ಸಾಗರದ ಸಂಗ್ರಹ? ವಿಜ್ಞಾನಿಗಳ ಅಧ್ಯಯನದಲ್ಲಿ ಮಹತ್ವದ ಸುಳಿವು... Earth Science

ಭೂಮಿಯ ಹೊರಪದರದ ಕೆಳಗೆ ಮ್ಯಾಂಟಲ್‌ ಎಂಬ ದಪ್ಪ ಶಿಲಾ ಪದರವು ಇದೆ. ಈ ಪದರವು ಕೋಟ್ಯಂತರ ವರ್ಷಗಳಿಂದ ನಿಧಾನವಾಗಿ ಚಲಿಸುತ್ತಿದೆ. ಈ ಚಲನೆಯೇ ಪ್ಲೇಟ್ ಟೆಕ್ಟಾನಿಕ್ಸ್‌ ಅಥವಾ ಭೂಫಲಕಗಳ ಚಲನೆಗೆ ಪ್ರಮುಖ ಕಾರಣವಾಗಿದೆ.
Earth Science
ಸಾಂದರ್ಭಿಕ ಚಿತ್ರ
Published on

Earth Science : ಭೂಮಿಯ ಮೇಲ್ಮೈಯಲ್ಲಿ ಕಾಣುವ ಸಾಗರಗಳು, ನದಿಗಳು ಮತ್ತು ಸರೋವರಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ, ನಮ್ಮ ಗ್ರಹದ ಒಳಭಾಗದಲ್ಲಿ ಅಪಾರ ಪ್ರಮಾಣದ ನೀರು ಇರಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಹಲವು ವರ್ಷಗಳಿಂದ ಕಾಡುತ್ತಿದೆ. ಇದೀಗ ಭೂಮಿಯ ಆಳದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲ ಹೊಸ ಖನಿಜಗಳ ಬಗ್ಗೆ ಅಧ್ಯಯನವೊಂದು ಮಹತ್ವದ ಸುಳಿವು ನೀಡಿದೆ.

ಭೂಮಿಯ ಹೊರಪದರದ ಕೆಳಗೆ ಮ್ಯಾಂಟಲ್‌ ಎಂಬ ದಪ್ಪ ಶಿಲಾ ಪದರವು ಇದೆ. ಈ ಪದರವು ಕೋಟ್ಯಂತರ ವರ್ಷಗಳಿಂದ ನಿಧಾನವಾಗಿ ಚಲಿಸುತ್ತಿದೆ. ಈ ಚಲನೆಯೇ ಪ್ಲೇಟ್ ಟೆಕ್ಟಾನಿಕ್ಸ್‌ ಅಥವಾ ಭೂಫಲಕಗಳ ಚಲನೆಗೆ ಪ್ರಮುಖ ಕಾರಣವಾಗಿದೆ. ದೀರ್ಘಾವಧಿಯಲ್ಲಿ ಈ ಪ್ರಕ್ರಿಯೆ ಭೂಮಿಯ ಹವಾಮಾನ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಮ್ಯಾಂಟಲ್‌ನಂತಹ ಭೂಮಿಯ ಆಳದ ಪ್ರದೇಶಗಳಲ್ಲಿ ನೀರು ಎಲ್ಲಿದೆ ಮತ್ತು ಅದು ಅಲ್ಲಿಗೆ ಹೇಗೆ ತಲುಪಿತು ಎಂಬುದು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.

ಇದಕ್ಕೆ ಸಂಬಂಧಿಸಿದಂತೆ ನೇಚರ್ ಜಿಯೋಸೈನ್ಸ್​ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ವಿಜ್ಞಾನಿಗಳು ಭೂಮಿಯ ಕೆಳಭಾಗದಲ್ಲಿ ನೀರು ಸಂಗ್ರಹವಾಗಿರುವ ಸಾಧ್ಯತೆಯ ಬಗ್ಗೆ ಹೊಸ ಮಾಹಿತಿಯನ್ನು ನೀಡಿದ್ದಾರೆ. ಸಂಶೋಧಕರ ಪ್ರಕಾರ, ಈ ನೀರು ಮ್ಯಾಂಟಲ್‌ನ ಕೆಳಭಾಗ ಮತ್ತು ದ್ರವ ರೂಪದಲ್ಲಿರುವ ಹೊರಭಾಗದ ಕೋರ್ ನಡುವಿನ ಪ್ರದೇಶದ ಸಮೀಪ ಖನಿಜಗಳೊಳಗೆ ಬಂಧಿತವಾಗಿರಬಹುದು.

ಈ ಪ್ರದೇಶ ಭೂಮಿಯ ಮೇಲ್ಮೈಯಿಂದ ಸುಮಾರು 660 ರಿಂದ 2,900 ಕಿಲೋಮೀಟರ್ ಆಳದಲ್ಲಿದೆ. ಇಲ್ಲಿ ವಿಜ್ಞಾನಿಗಳಿಗೆ ಹಲವು ವರ್ಷಗಳಿಂದ ಅರ್ಥವಾಗದ ಕೆಲವು ವಿಚಿತ್ರ ರಚನೆಗಳು ಕಂಡುಬರುತ್ತಿವೆ. ಅವುಗಳನ್ನು ಅಲ್ಟ್ರಾಲೋ ವೆಲಾಸಿಟಿ ಝೋನ್‌ಗಳು ಎಂದು ಕರೆಯಲಾಗುತ್ತದೆ.

ಭೂಮಿಯ ಕೆಳ ಮ್ಯಾಂಟಲ್‌ನಲ್ಲಿ ಕಂಡುಬರುವ ಬ್ರಿಡ್ಜ್‌ಮ್ಯಾನೈಟ್ ಮತ್ತು ಫೆರೋಪೆರಿಕ್ಲೇಸ್‌ನಂತಹ ಪ್ರಮುಖ ಖನಿಜಗಳು ಸಾಮಾನ್ಯವಾಗಿ ನೀರಿನ ಅಂಶ ಕಡಿಮೆ ಹೊಂದಿವೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಂಶೋಧಕರು ಭೂಮಿಯ ಒಳಭಾಗದಲ್ಲಿರುವ ಅಪಾರ ಒತ್ತಡ ಮತ್ತು ಉಷ್ಣತೆಯನ್ನು ಪ್ರಯೋಗಾಲಯದಲ್ಲಿ ಮರುಸೃಷ್ಟಿಸಿ ಅಧ್ಯಯನ ನಡೆಸಿದ್ದಾರೆ.

ಇದಕ್ಕಾಗಿ ಡೈಮಂಡ್ ಆನ್ವಿಲ್ ಸೆಲ್‌ ಎಂಬ ವಿಶೇಷ ಉಪಕರಣವನ್ನು ಬಳಸಲಾಗಿದೆ. ಎರಡು ಸಣ್ಣ ವಜ್ರಗಳ ನಡುವೆ ಮಾದರಿಯನ್ನು ಇರಿಸಿ ಭಾರೀ ಒತ್ತಡಕ್ಕೆ ಒಳಪಡಿಸಿ, ಲೇಸರ್ ಮೂಲಕ ಅದನ್ನು ಬಿಸಿಮಾಡುವ ಮೂಲಕ ಭೂಮಿಯ ಆಳದಲ್ಲಿರುವ ಪರಿಸ್ಥಿತಿಯನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿದೆ. ಈ ಪ್ರಯೋಗದಲ್ಲಿ ಈ ಹಿಂದೆ ಗುರುತಿಸದ ಎರಡು ಖನಿಜಗಳ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ದೊರೆತಿದೆ. ಇವು ಐರನ್ ಆಕ್ಸಿಹೈಡ್ರಾಕ್ಸೈಡ್‌ಗಳು ಆಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ತಮ್ಮ ರಚನೆಯೊಳಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಪ್ರಯೋಗಗಳಲ್ಲಿ ನೀರಿನ ಪ್ರಮಾಣ ಶೇ.0.1ಕ್ಕಿಂತಲೂ ಕಡಿಮೆ ಇದ್ದ ಸಂದರ್ಭದಲ್ಲಿಯೂ ಈ ಖನಿಜಗಳು ರೂಪುಗೊಂಡಿವೆ.

ಈ ಖನಿಜಗಳು ಭೂಮಿಯ ಆಳದಲ್ಲಿನ ಅತ್ಯಂತ ಹೆಚ್ಚಿನ ಒತ್ತಡ ಮತ್ತು ಉಷ್ಣತೆಯ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲವು ಎಂದು ಅಧ್ಯಯನ ಸೂಚಿಸಿದೆ. ಭೂಮಿಯ ಆರಂಭಿಕ ಹಂತದಲ್ಲಿ ಗ್ರಹದ ಬಹುಭಾಗ ಕರಗಿದ ‘ಮ್ಯಾಗ್ಮಾ ಸಾಗರ’ದಂತಿದ್ದಾಗ ಇಂತಹ ಖನಿಜಗಳು ರೂಪುಗೊಂಡು ಕ್ರಮೇಣ ಭೂಮಿಯ ಕೋರ್‌ ಕಡೆಗೆ ಇಳಿದಿರಬಹುದು ಎಂಬ ಸಾಧ್ಯತೆಯನ್ನೂ ವಿಜ್ಞಾನಿಗಳು ಮುಂದಿಟ್ಟಿದ್ದಾರೆ.

ಆದರೆ ಈ ನೀರು ಶಾಶ್ವತವಾಗಿ ಭೂಮಿಯ ಆಳದಲ್ಲೇ ಸಿಲುಕಿಕೊಂಡಿರಬೇಕೆಂದಿಲ್ಲ. ಮ್ಯಾಂಟಲ್‌ನ ವಸ್ತುಗಳು ನಿಧಾನವಾಗಿ ಮೇಲಕ್ಕೆ ಚಲಿಸುವಾಗ ಒತ್ತಡ ಕಡಿಮೆಯಾಗುತ್ತದೆ. ಆಗ ಈ ಖನಿಜಗಳು ವಿಭಜನೆಯಾಗಿ ನೀರನ್ನು ಬಿಡುಗಡೆ ಮಾಡಬಹುದು. ನಂತರ ಈ ನೀರು ಜ್ವಾಲಾಮುಖಿ ಚಟುವಟಿಕೆಗಳ ಮೂಲಕ ಮತ್ತೆ ಭೂಮಿಯ ಮೇಲ್ಮೈಯತ್ತ ತಲುಪುವ ಸಾಧ್ಯತೆ ಇದೆ. ಅಧ್ಯಯನದ ಕುರಿತು ಪ್ರತಿಕ್ರಿಯಿಸಿರುವ ಲೀಡ್ಸ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಆಲ್ಫ್ರೆಡ್ ವಿಲ್ಸನ್, ಹೊಸ ಖನಿಜಗಳ ಪತ್ತೆ ಭೂಮಿಯು ತನ್ನ ನೀರನ್ನು ಹೇಗೆ ಪಡೆದುಕೊಂಡಿತು ಮತ್ತು ಅದನ್ನು ಹೇಗೆ ಉಳಿಸಿಕೊಂಡಿತು ಎಂಬ ರಹಸ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

Also Read
ಕಸ್ತೂರಿ ರಂಗನ್ ವರದಿ ವಿವಾದ: ಉನ್ನತ ಮಟ್ಟದ ಸಮಿತಿ ರಚನೆಗೆ ರಾಜ್ಯ ಸರ್ಕಾರ ಗ್ರೀನ್​ ಸಿಗ್ನಲ್​ | Kasturirangan Report
Earth Science

ಆದರೂ ಭೂಮಿಯ ಆಳದಲ್ಲಿರುವ ಈ ಖನಿಜಗಳು ನಿಖರವಾಗಿ ಎಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಬಲ್ಲವು ಮತ್ತು ಆ ನೀರು ಮತ್ತೆ ಮೇಲ್ಮೈಗೆ ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಜರ್ಮನಿಯ ಬೇಯ್ರಾಯ್ತ್ ವಿಶ್ವವಿದ್ಯಾಲಯದ ಖನಿಜ ಭೌತಶಾಸ್ತ್ರಜ್ಞ ಲಿಯೊನಿಡ್ ಡುಬ್ರೊವಿನ್ಸ್ಕಿ ಅವರ ಪ್ರಕಾರ, ಅತಿ ಕಡಿಮೆ ಪ್ರಮಾಣದ ಹೈಡ್ರೋಜನ್ ಕೂಡ ಈ ಹೆಚ್ಚು ಜಲಯುಕ್ತ ಕಬ್ಬಿಣದ ಸಂಯುಕ್ತಗಳನ್ನು ಸ್ಥಿರಗೊಳಿಸಲು ಸಾಕಾಗಬಹುದು.

ಭೂಮಿಯ ಮೇಲ್ಮೈಯಿಂದ ಸಾವಿರಾರು ಕಿಲೋಮೀಟರ್ ಕೆಳಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಖನಿಜಗಳ ಸುಳಿವು ಸಿಕ್ಕಿರುವುದು, ನಮ್ಮ ಗ್ರಹದ ನೀರಿನ ಮೂಲ ಮತ್ತು ಅದರ ದೀರ್ಘಕಾಲದ ಚಕ್ರವನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿಯನ್ನು ತೆರೆದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net