ಹೋಟೆಲ್​ ಟ್ಯಾಕ್ಸ್ ಕಟ್​, ಊಟ​... ವಿದೇಶಿ ಪ್ರವಾಸಿಗರನ್ನು ಕರೆಸಿ 78,000 ರೂ. ತಗೊಳ್ಳಿ​! ಹುಬ್ಬೇರುತ್ತೆ 'ದುಬೈ ಇನ್ವೈಟ್' ಆಫರ್

ದುಬೈ ನಗರ
ದುಬೈ ನಗರ
Published on

ಪ್ರಮುಖ ಮುಖ್ಯಾಂಶಗಳು

  • ನೆಲಕಚ್ಚಿರುವ ದುಬೈ ಪ್ರವಾಸೋದ್ಯಮಕ್ಕೆ ಮರುಜೀವ
  • ಫ್ರೆಂಡ್ಸ್​, ಫ್ಯಾಮಿಲಿಯನ್ನು ದುಬೈಗೆ ಕರೆಸಿದರೆ 78,000 ರೂ. ಉಡುಗೊರೆ
  • ಹೋಟೆಲ್ ಟ್ಯಾಕ್ಸ್, ಮುನ್ಸಿಪಲ್ಶಶುಲ್ಕ ರದ್ದು
  • ಸಖತ್ ಆಗಿದೆ ದುಬೈನ 'ಎ ದುಬೈ ಇನ್‌ವೈಟ್' ಯೋಜನೆ
ದುಬೈ: ಅತ್ತ ಮಧ್ಯಪ್ರಾಚ್ಯದಲ್ಲಿ ಇರಾನ್​ ಮತ್ತು ಅಮೆರಿಕ ನಡುವೆ ಮತ್ತೆ ವೈಮಾನಿಕ ದಾಳಿ ಭುಗಿಲೆದ್ದರೆ, ಇತ್ತ ಕ್ಷಿಪಣಿ ದಾಳಿಯಿಂದಾಗಿ ಏಕಾಏಕಿ ನೆಲಕಚ್ಚಿರುವ ಪ್ರವಾಸೋದ್ಯಮ ಖಜಾನೆ ತುಂಬಿಸಲು ಅರಬ್​ ರಾಷ್ಟ್ರ ಹೊಸ ಯೋಜನೆಗೆ ಮುಂದಾಗಿದೆ.
2025ರಲ್ಲಿ ಬರೋಬ್ಬರಿ 1.95 ಕೋಟಿ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಬರಮಾಡಿಕೊಂಡು ಸಾರ್ವಕಾಲಿಕ ದಾಖಲೆ ಬರೆದಿದ್ದ ದುಬೈಗೆ, ಇತ್ತೀಚಿನ ಬೆಳವಣಿಗೆಗಳು ದೊಡ್ಡ ಆಘಾತ ನೀಡಿವೆ. ಶೇ.80ರಷ್ಟಿದ್ದ ಹೋಟೆಲ್ ಬುಕಿಂಗ್ ಪ್ರಮಾಣ ಇದೀಗ ದಿಢೀರ್ 10ಕ್ಕೆ ಕುಸಿದಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ದುಬೈ ಸರ್ಕಾರ, ಪ್ರವಾಸೋದ್ಯಮ ಇಲಾಖೆಗೆ ಮತ್ತೆ ಮರುಜೀವ ನೀಡಲು ಹಾಗೂ ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಬಿಗ್ ಆಫರ್​ವೊಂದನ್ನು ಘೋಷಿಸಿದೆ.

ಏನಿದು 'ಎ ದುಬೈ ಇನ್‌ವೈಟ್' ಯೋಜನೆ?

ಪ್ರವಾಸಿಗರನ್ನು ಆಕರ್ಷಿಸಲು ದುಬೈ ಸರ್ಕಾರ 'ಎ ದುಬೈ ಇನ್‌ವೈಟ್' (A Dubai Invite) ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಉಡುಗೊರೆಗಳ ಸುರಿಮಳೆಯನ್ನೇ ಹರಿಸಲು ಸಜ್ಜಾಗಿದೆ. ಯುಎಇಯಲ್ಲಿ ವಾಸಿಸುತ್ತಿರುವ ನಾಗರಿಕರು ಮತ್ತು ನಿವಾಸಿಗಳು ವಿದೇಶದಲ್ಲಿರುವ ತಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ದುಬೈಗೆ ಭೇಟಿ ಕೊಡುವಂತೆ ಆಹ್ವಾನಿಸಿದರೆ, ಅವರಿಗೆ 3,000 ಎಇಡಿ (ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 78,300 ರೂ.) ಮೌಲ್ಯದ ರಿವಾರ್ಡ್ ಪ್ಯಾಕೇಜ್‌ಗಳು ದೊರೆಯಲಿದೆ.

ಯಾರೆಲ್ಲ ಅರ್ಹರು?

18 ವರ್ಷ ಮೇಲ್ಪಟ್ಟ, ಸಿಂಧುವಾದ ಎಮಿರೇಟ್ಸ್ ಐಡಿ ಹೊಂದಿರುವ ಯುಎಇ ನಿವಾಸಿಗಳು ಈ ಯೋಜನೆಯಿಂದ ಲಾಭ ಪಡೆಯಲು ಅರ್ಹ ಎನ್ನಲಾಗಿದೆ. ಪ್ರತಿಯೊಬ್ಬ ನಿವಾಸಿಯೂ ಅಕ್ಟೋಬರ್ 31ರ ಒಳಗಾಗಿ ದುಬೈಗೆ ಪ್ರಯಾಣಿಸಲು ಗರಿಷ್ಠ 3 ಜನ ಅತಿಥಿಗಳನ್ನು ನಾಮನಿರ್ದೇಶನ ಮಾಡಬಹುದು. ಈ ಯೋಜನೆಯಡಿ ಉಚಿತ ಹೋಟೆಲ್ ವಾಸ್ತವ್ಯ ಹಾಗೂ ಡೈನಿಂಗ್ ಆಫರ್‌ಗಳು ಸಿಗಲಿವೆ. ಇದು ನಿಜಕ್ಕೂ ಸಖತ್ ಆಫರ್​ ಎಂದೇ ಹೇಳಬಹುದು.

ವಿದೇಶಿ ಅತಿಥಿಗಳಿಗೆ ಏನೆಲ್ಲ ಕಂಡೀಷನ್​?

ತಮ್ಮ ಕುಟುಂಬದಿಂದ ಆಹ್ವಾನ ಪಡೆದ ವಿದೇಶಿ ಮಂದಿ, ಸಿಂಧುವಾದ ಪ್ರವಾಸಿ ವೀಸಾ ಹೊಂದಿರುವುದು ಕಡ್ಡಾಯ. ವಿಮಾನ, ಹಡಗು ಅಥವಾ ರಸ್ತೆ ಮಾರ್ಗದ ಮೂಲಕ ದುಬೈ ತಲುಪಬಹುದು. ಕೇವಲ 'ಇನ್‌ವೈಟ್' ಯೋಜನೆ ಅಷ್ಟೇ ಅಲ್ಲದೆ, ಪ್ರವಾಸಿಗರನ್ನು ಆಕರ್ಷಿಸಲು ದುಬೈ ಸರ್ಕಾರ ಇನ್ನು ಹಲವು ಆಫರ್​ಗಳನ್ನು ಜಾರಿಗೆ ತರಲು ಮುಂದಾಗಿದೆ.
ಈ ಹಿಂದೆ, ಲಕ್ಸುರಿ ಹೋಟೆಲ್‌ಗಳಲ್ಲಿ ವಿಧಿಸಲಾಗುತ್ತಿದ್ದ ನಿತ್ಯದ ಹೋಟೆಲ್ ಟ್ಯಾಕ್ಸ್ ಅನ್ನು ಕಟ್​ ಆಫ್​ ಮಾಡಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಬಿಲ್‌ಗಳ ಮೇಲೆ ಹಾಕಲಾಗುತ್ತಿದ್ದ ಶೇ.7ರಷ್ಟು ಮುನ್ಸಿಪಲ್ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಹೀಗೆ ಹಲವು ಬೊಂಬಾಟ್​ ಉಡುಗೊರೆಗಳನ್ನು ಘೋಷಿಸುವ ಮೂಲಕ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ದುಬೈಗೆ ಆಗಮಿಸುವಂತೆ ಕೈಬೀಸಿ ಕರೆಯುತ್ತಿದೆ ಅರಬ್​ ರಾಷ್ಟ್ರ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net