ಸುರಂಗದಲ್ಲಿ 93 ಕಾರ್ಮಿಕರ ಪತ್ತೆಗೆ ಬಿಟ್ಟ ಡ್ರೋನ್​ನಲ್ಲಿ ಸಿಕ್ಕ ದೃಶ್ಯವಿದು! ತಮ್ಮವರ ಸುಳಿವಿಗೆ ಕುಟುಂಬಸ್ಥರು ಕಣ್ಣೀರು

 93 ಕಾರ್ಮಿಕರ ಪತ್ತೆಗೆ ಬಿಟ್ಟ ಡ್ರೋನ್​ನಲ್ಲಿ ಸಿಕ್ಕ ದೃಶ್ಯ
93 ಕಾರ್ಮಿಕರ ಪತ್ತೆಗೆ ಬಿಟ್ಟ ಡ್ರೋನ್​ನಲ್ಲಿ ಸಿಕ್ಕ ದೃಶ್ಯ
Published on: 

ಪ್ರಮುಖ ಮುಖ್ಯಾಂಶಗಳು

  • ಸುರಂಗದಲ್ಲಿ ಕಾರ್ಮಿಕರು ಕೆಲಸ ಮಾಡುವಾಗಲೇ ರಕ್ಕಸ ಪ್ರವಾಹ
  • ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 93 ಕಾರ್ಮಿಕರು ಮಿಸ್ಸಿಂಗ್
  • ಅತ್ಯಾಧುನಿಕ ಡ್ರೋನ್ ಬಳಸಿ ಸುರಂಗದ ಮೂಲೆ ಮೂಲೆಗಳಲ್ಲಿ ತೀವ್ರ ಹುಡುಕಾಟ
ಕಾಠ್ಮಂಡು: ನೇಪಾಳದಲ್ಲಿ ಭೋಟೆಕೋಶಿ ನದಿಯ ಪ್ರವಾಹದಿಂದ ಸಂಪೂರ್ಣ ಡ್ಯಾಮೇಜ್​ ಆಗಿರುವ ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿರಬಹುದು ಎನ್ನಲಾದ 93 ಕಾರ್ಮಿಕರನ್ನು ಪತ್ತೆಹಚ್ಚಲು ನಡೆಸಿದ ಹೈಟೆಕ್​ ಡ್ರೋನ್ ಕಾರ್ಯಾಚರಣೆಯೂ ಇದೀಗ ವಿಫಲಗೊಂಡಿದೆ.
ಸುರಂಗದಲ್ಲಿ ಕಾರ್ಮಿಕರು ಕೆಲಸ ಮಾಡುವಾಗಲೇ ರಕ್ಕಸ ಪ್ರವಾಹ ಕೊಚ್ಚಿಬಂದ ಹಿನ್ನೆಲೆ ಬಹುತೇಕರು ಅದರೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ, ರಕ್ಷಣಾ ಪಡೆಗಳು ಅತ್ಯಾಧುನಿಕ ಡ್ರೋನ್ ಬಳಸಿ ಸುರಂಗದ ಮೂಲೆ ಮೂಲೆಗಳನ್ನು ತೀವ್ರ ಪರಿಶೀಲನೆ ನಡೆಸಿದ್ದೇ ಆದರೂ ಯಾರೊಬ್ಬರು ಬದುಕುಳಿದ ಅಥವಾ ಮೃತಪಟ್ಟ ಬಗ್ಗೆ ಸಣ್ಣ ಸುಳಿವು ಕೂಡ ಪತ್ತೆಯಾಗಿಲ್ಲ. ಇದು ತಮ್ಮವರಿಗಾಗಿ ಪರಿತಪಿಸುತ್ತಿರುವ ಕುಟುಂಬಸ್ಥರಲ್ಲಿ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.
ಭೀಕರ ಪ್ರವಾಹದ ವೇಳೆ ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಪಾಳ ಸೇನೆಯು ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ಪ್ರಸ್ತುತ, ಈ ಡ್ರೋನ್ ಶೋಧದ ದೃಶ್ಯಗಳನ್ನು ಸೇನೆ ಸಾರ್ವಜನಿಕರೊಂದಿಗೆ ಹಂಚಿಕೊಂಡಿದೆ.
ಮತ್ತೊಂದೆಡೆ, ಸುರಂಗದೊಳಗೆ ನುಗ್ಗಿದ ಪ್ರವಾಹದಲ್ಲಿ ತೇಲಿ ಬಂದಿರುವ ಕೆಸರು, ಕಲ್ಲು ಮತ್ತು ಬಂಡೆಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಗಳಿವೆ ಎಂದು ಸೇನೆ ಸ್ಪಷ್ಟಪಡಿಸಿದೆ. ಆದರೆ, ಮೇಲ್ನೋಟಕ್ಕೆ ಯಾರೂ ಕಾಣದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಸುವಾ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಒಟ್ಟು 11 ಜಲವಿದ್ಯುತ್ ಯೋಜನೆಗಳ 933ಕ್ಕೂ ಹೆಚ್ಚು ಕಾರ್ಮಿಕರು ಮಿಸ್ಸಿಂಗ್​ ಪಟ್ಟಿಯಲ್ಲಿದ್ದಾರೆ. ಅವರ ಸುಳಿವಿಗೆ ನಡೆಯುತ್ತಿರುವ ವ್ಯಾಪಕ ಶೋಧ ಕಾರ್ಯದ ಭಾಗವಾಗಿಯೇ ರಸುವಾಗಧಿಯಲ್ಲೂ ಈ ಕಾರ್ಯಾಚರಣೆ ನಡೆಸಲಾಗಿತ್ತು,(ಏಜೆನ್ಸೀಸ್).