ನಿಯಮ ಉಲ್ಲಂಘಿಸಿದ್ರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ: G7 ಶೃಂಗಸಭೆಯಲ್ಲಿ ಟ್ರಂಪ್ ಡೆಡ್ಲಿ ವಾರ್ನಿಂಗ್! Donald Trump

ನಿಯಮ ಉಲ್ಲಂಘಿಸಿದ್ರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ: G7 ಶೃಂಗಸಭೆಯಲ್ಲಿ ಟ್ರಂಪ್ ಡೆಡ್ಲಿ ವಾರ್ನಿಂಗ್!
ನಿಯಮ ಉಲ್ಲಂಘಿಸಿದ್ರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ: G7 ಶೃಂಗಸಭೆಯಲ್ಲಿ ಟ್ರಂಪ್ ಡೆಡ್ಲಿ ವಾರ್ನಿಂಗ್!
Published on
ಪ್ಯಾರಿಸ್: ಅಮೆರಿಕ ಮತ್ತು ಇರಾನ್ ನಡುವೆ ಇಡೀ ಮಧ್ಯಪ್ರಾಚ್ಯವನ್ನು ನಡುಗಿಸಿದ್ದ ಭೀಕರ ಯುದ್ಧಕ್ಕೆ ಅಂತ್ಯಹಾಡಲು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತ ಸಹಿ ಪ್ರಕ್ರಿಯೆ ನಡೆಯಲು ಕೇವಲ ಎರಡು ದಿನ ಬಾಕಿ ಇರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ G7 ಶೃಂಗಸಭೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಮಾತನಾಡಿರುವ ಟ್ರಂಪ್, ಸದ್ಯ ಆಗಿರುವುದು ಕೇವಲ ಮಧ್ಯಂತರ ಒಪ್ಪಂದದ ಪತ್ರ ಅಷ್ಟೇ, ಅದು ಅಂತಿಮವಲ್ಲ. ಇರಾನ್ ಏನಾದರೂ ಅತಿಯಾಗಿ ಆಡಲು ಅಥವಾ ನಿಯಮ ಉಲ್ಲಂಘಿಸಲು ಮುಂದಾದರೆ, ನಾವು ನೇರವಾಗಿ ಅವರ ತಲೆಯ ಮೇಲೆಯೇ ಮತ್ತೆ ಬಾಂಬ್ ಹಾಕಲು ಆರಂಭಿಸುತ್ತೇವೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಫೆಬ್ರವರಿ 28 ರಂದು ಆರಂಭವಾಗಿದ್ದ ಈ ಭೀಕರ ಯುದ್ಧದಲ್ಲಿ ಇರಾನ್ ಮತ್ತು ಲೆಬನಾನ್‌ನಲ್ಲಿ ಸುಮಾರು 7,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಓಬಾಮಾ ವಿರುದ್ಧ ಟ್ರಂಪ್ ವಾಗ್ದಾಳಿ; ಇರಾನ್‌ಗೆ ಹಣ ನೀಡಲು ನಿರಾಕರಣೆ!
ಶೃಂಗಸಭೆಯಲ್ಲಿ ತಮ್ಮ ಎಂದಿನ ವಿಶಿಷ್ಟ ಶೈಲಿಯಲ್ಲಿ ಅಬ್ಬರಿಸಿದ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರ ವಿದೇಶಾಂಗ ನೀತಿಯನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ. ಓಬಾಮಾ ಅವರು ಇರಾನ್‌ಗೆ ಬಿಲಿಯನ್‌ಗಟ್ಟಲೆ ಡಾಲರ್ ಹಣವನ್ನು ಸುಮ್ಮನೆ ನೀಡಿದ್ದರು. ಬ್ಯಾಂಕುಗಳಿಂದ ಬರೋಬ್ಬರಿ 1.7 ಬಿಲಿಯನ್ ಡಾಲರ್ ಹಸಿರು ನೋಟುಗಳನ್ನು ಬೋಯಿಂಗ್ 757 ವಿಮಾನದಲ್ಲಿ ತುಂಬಿಸಿ ಇರಾನ್‌ಗೆ ಕಳುಹಿಸಿಕೊಟ್ಟಿದ್ದರು. ಆದರೂ ಅವರು ವಿಫಲರಾದರು. ಆಗ ಇರಾನಿಯನ್ನರು ಓಬಾಮಾ ಅವರನ್ನು ನೋಡಿ ನಕ್ಕಿದ್ದರು ಎಂದು ಟ್ರಂಪ್ ಲೇವಡಿ ಮಾಡಿದರು. ಅಲ್ಲದೆ, ನನ್ನನ್ನು ಬಿಟ್ಟರೆ ಈ ಒಪ್ಪಂದವನ್ನು ಯಾರಿಗೂ ಮಾಡಲು ಸಾಧ್ಯವಿರಲಿಲ್ಲ ಎಂದೂ ಅವರು ಜಂಬ ಕೊಚ್ಚಿಕೊಂಡಿದ್ದಾರೆ.
ಇದೇ ವೇಳೆ, ಈ ಶಾಂತಿ ಒಪ್ಪಂದದ ಭಾಗವಾಗಿ ಇರಾನ್‌ನ ಪುನರ್ನಿರ್ಮಾಣಕ್ಕಾಗಿ ಅಮೆರಿಕವು 300 ಬಿಲಿಯನ್ ಡಾಲರ್ ನಿಧಿ ನೀಡಲಿದೆ ಎಂಬ ಮಾಧ್ಯಮಗಳ ವರದಿಯನ್ನು ಟ್ರಂಪ್ ಸಂಪೂರ್ಣವಾಗಿ ತಳ್ಳಿಹಾಕಿದರು. ನಾವು ಇರಾನ್‌ಗೆ ಕನಿಷ್ಠ 10 ಸೆಂಟ್ಸ್ ಹಣವನ್ನೂ ನೀಡುತ್ತಿಲ್ಲ. ನಾವು ಅಲ್ಲಿ ಯಾವುದೇ ಹೂಡಿಕೆ ಮಾಡುತ್ತಿಲ್ಲ ಮತ್ತು ಅಂತಹ ಯಾವುದೇ ನಿಧಿಯನ್ನು ನಾವು ಹೊಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ; ಜಿ7 ಜಂಟಿ ಪ್ರಕಟಣೆ

ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ‘ಸ್ಟ್ರೇಟ್ ಆಫ್ ಹೊರ್ಮುಜ್’ ಸದ್ಯಕ್ಕೆ ಭಾಗಶಃ ಮುಕ್ತವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಇದು ಸಂಪೂರ್ಣವಾಗಿ ಸಾರ್ವಜನಿಕ ಮತ್ತು ವಾಣಿಜ್ಯ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಜಿ7 ಒಕ್ಕೂಟದ ಜಾಗತಿಕ ನಾಯಕರು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅಮೆರಿಕ-ಇರಾನ್ ನಡುವಿನ ಮಧ್ಯಂತರ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಆದರೆ, ಇದರ ಬೆನ್ನಲ್ಲೇ ಟೆಹರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನ ಮತ್ತು ಪರಮಾಣು ಯೋಜನೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮತ್ತೊಂದು ಕಠಿಣ ಒಪ್ಪಂದಕ್ಕೆ ಅಮೆರಿಕ ಮುಂದಾಗಬೇಕು ಎಂದು ಜಿ7 ನಾಯಕರು ಒತ್ತಾಯಿಸಿದ್ದಾರೆ. ಸದ್ಯ ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಅಧಿಕೃತ ಸಹಿ ಪ್ರಕ್ರಿಯೆಯ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net