‘ಡೊನಾಲ್ಡ್ ಟ್ರಂಪ್’ ಎಮ್ಮೆ ಖರೀದಿಗೆ ಭಾರೀ ಕ್ರೇಜ್! ಈ ಪ್ರಾಣಿ ಇಷ್ಟು ವಿಶೇಷ ಯಾಕೆ? | Donald Trump

Donald Trump
Donald Trump
Published on
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಅಪರೂಪದ ಅಲ್ಬಿನೋ ಎಮ್ಮೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ Donald Trump ಅವರಂತೆಯೇ ಕಾಣುತ್ತದೆ ಎಂದು ಜನರು ಹೇಳುತ್ತಿರುವ ಈ ಎಮ್ಮೆ, ಈದ್ ಉಲ್ ಅಧಾ ಹಬ್ಬದ ಮುನ್ನ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ನರಾಯಣಗಂಜ್ ಪ್ರದೇಶದ ರಬೇಯಾ ಆಗ್ರೋ ಫಾರ್ಮ್‌ನಲ್ಲಿ ಸಾಕಲಾಗಿದ್ದ ಈ ಅಪರೂಪದ ಎಮ್ಮೆ, ಅದರ ಬಂಗಾರದ ಬಣ್ಣದ ಕೂದಲು ಮತ್ತು ವಿಶಿಷ್ಟ ಶೈಲಿಯಿಂದ “ಡೊನಾಲ್ಡ್ ಟ್ರಂಪ್” ಎಂಬ ಹೆಸರನ್ನು ಪಡೆದಿದೆ. ಸುಮಾರು 700 ಕಿಲೋಗ್ರಾಂ ತೂಕ ಹೊಂದಿರುವ ಈ ಅಲ್ಬಿನೋ ಎಮ್ಮೆ ಈಗಾಗಲೇ ಈದ್ ಬಲಿಗಾಗಿ ಮಾರಾಟವಾಗಿದೆ ಎಂದು ಫಾರ್ಮ್ ಮಾಲೀಕರು ತಿಳಿಸಿದ್ದಾರೆ.

ಯಾಕೆ ‘ಡೊನಾಲ್ಡ್ ಟ್ರಂಪ್’ ಎಂದು ಹೆಸರು?

ಫಾರ್ಮ್ ಮಾಲೀಕ ಜಿಯಾ ಉದ್ಧಿನ್ ಮೃಧಾ ಹೇಳುವಂತೆ, ಎಮ್ಮೆಯ ತಲೆಯ ಮುಂದಿರುವ ಹಳದಿ-ಬಂಗಾರದ ಬಣ್ಣದ ಕೂದಲು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೆರ್‌ಸ್ಟೈಲ್ ಅನ್ನು ಹೋಲುತ್ತದೆ ಎಂದು ಅವರ ತಮ್ಮ ತಮಾಷೆಯಾಗಿ ಈ ಹೆಸರು ಇಟ್ಟಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋ ಮತ್ತು ವಿಡಿಯೋಗಳು ವೈರಲ್ ಆದವು. ಎಮ್ಮೆ ನೋಡಲು ಪ್ರತಿದಿನ ಹಲವರು ದೂರದ ಜಿಲ್ಲೆಗಳಿಂದಲೂ ಫಾರ್ಮ್‌ಗೆ ಬರುತ್ತಿದ್ದರು. ಜನರು ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ಮಾಡುವುದು ಸಾಮಾನ್ಯ ದೃಶ್ಯವಾಗಿತ್ತು ಎಂದು ವರದಿಗಳು ಹೇಳಿವೆ.

ಅಪರೂಪದ ಅಲ್ಬಿನೋ ಜಾತಿ

ಈ ಎಮ್ಮೆ ಸಾಮಾನ್ಯ ಕಪ್ಪು ಬಣ್ಣದ ಎಮ್ಮೆ ಅಲ್ಲ. ಇದು ಅಲ್ಬಿನೋ ಜಾತಿಗೆ ಸೇರಿದ್ದು, ದೇಹದಲ್ಲಿ ಮೆಲಾನಿನ್ ಅಂಶ ಕಡಿಮೆ ಇರುವುದರಿಂದ ಇದರ ಚರ್ಮ ಹಗುರವಾದ ಗುಲಾಬಿ ಛಾಯೆ ಹೊಂದಿದೆ. ಬಾಂಗ್ಲಾದೇಶದಲ್ಲಿ ಇಂತಹ ಅಲ್ಬಿನೋ ಎಮ್ಮೆ ತುಂಬಾ ಅಪರೂಪ ಎಂದು ತಜ್ಞರು ತಿಳಿಸಿದ್ದಾರೆ. ಎಮ್ಮೆಯ ಉದ್ದ ಬಂಗಾರದ ಕೂದಲು, ಗುಲಾಬಿ ಮೂಗು ಹಾಗೂ ವಿಶಿಷ್ಟ ರೂಪವೇ ಇದನ್ನು ಜನಪ್ರಿಯಗೊಳಿಸಿದೆ.

ವಿಶೇಷ ಆರೈಕೆ

ಫಾರ್ಮ್ ಮಾಲೀಕರ ಪ್ರಕಾರ, ಈ ಎಮ್ಮೆಗಾಗಿ ವಿಶೇಷ ಕಾಳಜಿ ವಹಿಸಲಾಗುತ್ತಿತ್ತು. ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡಿಸುವುದು, ವಿಶೇಷ ಆಹಾರ ನೀಡುವುದು ಸೇರಿದಂತೆ ಆರೋಗ್ಯ ಕಾಪಾಡಲು ಹೆಚ್ಚುವರಿ ಗಮನ ನೀಡಲಾಗುತ್ತಿತ್ತು. “ಇದು ಸ್ವಭಾವದಿಂದ ತುಂಬಾ ಶಾಂತ ಪ್ರಾಣಿ. ಅಲ್ಬಿನೋ ಎಮ್ಮೆಗಳು ಸಾಮಾನ್ಯವಾಗಿ ಆಕ್ರಮಣಕಾರಿ ಆಗುವುದಿಲ್ಲ” ಎಂದು ಫಾರ್ಮ್ ಮಾಲೀಕರು ಹೇಳಿದ್ದಾರೆ.
ℹ️

ಈದ್ ಬಲಿಗೆ ಮಾರಾಟ

ಈದ್ ಉಲ್ ಅಧಾ ಹಬ್ಬದ ಅಂಗವಾಗಿ ಪ್ರಾಣಿಬಲಿ ನೀಡುವ ಸಂಪ್ರದಾಯ ಮುಸ್ಲಿಂ ಸಮುದಾಯದಲ್ಲಿ ಇದೆ. ಅದಕ್ಕಾಗಿ ಈ ಎಮ್ಮೆಯನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ಕಿಲೋಗ್ರಾಂಗೆ 550 ಟಾಕಾ ದರದಲ್ಲಿ( ಸುಮಾರು ಮೂರು ಲಕ್ಷಕ್ಕೆ) ಮಾರಾಟ ಮಾಡಲಾಗಿದೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಈ ಎಮ್ಮೆ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಫೇಸ್‌ಬುಕ್, ಎಕ್ಸ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಕೆಲವರು ಇದನ್ನು “ಟ್ರಂಪ್ ಎಮ್ಮೆ” ಎಂದು ಕರೆಯುತ್ತಾ ಹಾಸ್ಯಮಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಅಪರೂಪದ ಪ್ರಾಣಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಬಾಂಗ್ಲಾದೇಶದಲ್ಲಿ ಈದ್ ಸಮಯದಲ್ಲಿ ವಿಚಿತ್ರ ರೂಪದ ಅಥವಾ ಅತಿದೊಡ್ಡ ಪ್ರಾಣಿಗಳು ವೈರಲ್ ಆಗುವುದು ಹೊಸ ವಿಷಯವಲ್ಲ. ಆದರೆ ಈ ಬಾರಿ “ಡೊನಾಲ್ಡ್ ಟ್ರಂಪ್” ಎಮ್ಮೆ ಜಾಗತಿಕ ಮಟ್ಟದಲ್ಲೇ ಸುದ್ದಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net