ಗಲ್ಫ್​ ರಾಷ್ಟ್ರಗಳಿಗೆ ಕ್ಷಮೆಯಾಚನೆ; ಇರಾನ್ ಸೋತಿದೆ, ಮಧ್ಯಪ್ರಾಚ್ಯದ ನೆರೆಹೊರೆಯವರಿಗೆ ಶರಣಾಗಿದೆ ಎಂದ ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಇಸ್ರೇಲ್ ಮತ್ತು ಅಮೆರಿಕಾದ ಜೊತೆಗಿನ ಯುದ್ದದಲ್ಲಿ ನೆರೆಯ ಗಲ್ಫ್ ದೇಶಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದ ಬಳಿಕ, ಇರಾನ್ ಸೋತಿದೆ, ಮಧ್ಯಪ್ರಾಚ್ಯದ ನೆರೆಹೊರೆಯವರಿಗೆ ಶರಣಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ನರಕಕ್ಕೆ ಬಲಿಯಾಗುತ್ತಿರುವ ಇರಾನ್ ಕ್ಷಮೆಯಾಚಿಸಿ, ತನ್ನ ಮಧ್ಯಪ್ರಾಚ್ಯ ನೆರೆಹೊರೆಯವರಿಗೆ ಶರಣಾಗಿದೆ. ಇನ್ಮುಂದೆ ಅವರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಭರವಸೆ ನೀಡಿದೆ. ಈ ಭರವಸೆಯನ್ನು ಅಮೆರಿಕ ಮತ್ತು ಇಸ್ರೇಲ್ ನಿರಂತರ ದಾಳಿಯಿಂದಾಗಿ ನೀಡಲಾಗಿದೆ.
ಇರಾನ್ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಂಡು ಆಳಲು ನೋಡುತ್ತಿತ್ತು. ಸಾವಿರಾರು ವರ್ಷಗಳಲ್ಲಿ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಇರಾನ್ ಸೋತಿರುವುದು ಇದೇ ಮೊದಲು. ಇದಕ್ಕೆ ಮಧ್ಯಪ್ರಾಚ್ಯದ ದೇಶಗಳ ನಾಯಕರು ನನಗೆ ಧನ್ಯವಾದ ಹೇಳಿದ್ದು, ನಾನು ಸ್ವಾಗತ ಮಾಡಿದ್ದೇನೆ. ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ಗೂಂಡಾ ಅಲ್ಲ, ಬದಲಾಗಿ ಮಧ್ಯಪ್ರಾಚ್ಯದ ಸೋತವರು ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರೆದು, ಇಂದು ಇರಾನ್‌ಗೆ ತೀವ್ರ ಹೊಡೆತ ಬೀಳಲಿದೆ. ಇರಾನ್‌ನ ಕೆಟ್ಟ ನಡವಳಿಕೆಯಿಂದಾಗಿ ಸಂಪೂರ್ಣ ವಿನಾಶ ಮತ್ತು ನಿಶ್ಚಿತ ಸಾವಿನ ಗಂಭೀರ ಪರಿಗಣನೆಯಲ್ಲಿದೆ. ಈ ಕ್ಷಣದವರೆಗೆ ಗುರಿಯಾಗಿಸಲು ಪರಿಗಣಿಸದ ಪ್ರದೇಶಗಳು ಮತ್ತು ಜನರ ಗುಂಪುಗಳು. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಗಲ್ಫ್​ ರಾಷ್ಟ್ರಗಳಿಗೆ ಇರಾನ್ ಕ್ಷಮೆಯಾಚನೆ

ಫೆ. 28ರಂದು ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ ಬಳಿಕ, ಅದಕ್ಕೆ ಪ್ರತೀಕಾರವಾಗಿ ಒಂದು ವಾರದಿಂದ ನೆರೆಯ ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಅನೇಕ ಗಲ್ಫ್ ಪ್ರದೇಶಗಳಲ್ಲಿರುವ ಅಮೆರಿಕ ಮಿಲಿಟರಿ ಬೇಸ್ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.
ಈ ಬಗ್ಗೆ ಮಾತನಾಡಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಅಮೆರಿಕಾದ ಮಿಲಿಟರಿ ಬೇಸ್ ಗುರಿಯಾಗಿಸಿ ನೆರೆಯ ರಾಷ್ಟ್ರಗಳ ಮೇಲೆ ಇರಾನ್ ಮಾಡಿದ ದಾಳಿಗೆ ನಾನು ಕ್ಷಮೆಯಾಚಿಸುತ್ತೇನೆ. ಇನ್ಮುಂದೆ ಇರಾನ್ ಮೇಲೆ ಆ ದೇಶಗಳಿಂದ ದಾಳಿ ಮಾಡದ ಹೊರತು ಯಾವುದೇ ಕ್ಷಿಪಣಿಯನ್ನು ಹಾರಿಸುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net