ತಂಗಿಯ ಪ್ರಭಾವಕ್ಕೆ ಬ್ರೇಕ್ ಹಾಕಿದ್ರಾ ಕಿಮ್..? ಮಗಳನ್ನೇ ಮುಂದಿನ ಸುಪ್ರೀಂ ಲೀಡರ್ ಮಾಡಲು ಸ್ಕೆಚ್ ಹಾಕಿದ್ರಾ ಸರ್ವಾಧಿಕಾರಿ..! Kim Jong Un

ತಂಗಿಯ ಪ್ರಭಾವಕ್ಕೆ ಬ್ರೇಕ್ ಹಾಕಿದ್ರಾ ಕಿಮ್..? ಮಗಳನ್ನೇ ಮುಂದಿನ ಸುಪ್ರೀಂ ಲೀಡರ್ ಮಾಡಲು ಸ್ಕೆಚ್ ಹಾಕಿದ್ರಾ ಸರ್ವಾಧಿಕಾರಿ..!
ತಂಗಿಯ ಪ್ರಭಾವಕ್ಕೆ ಬ್ರೇಕ್ ಹಾಕಿದ್ರಾ ಕಿಮ್..? ಮಗಳನ್ನೇ ಮುಂದಿನ ಸುಪ್ರೀಂ ಲೀಡರ್ ಮಾಡಲು ಸ್ಕೆಚ್ ಹಾಕಿದ್ರಾ ಸರ್ವಾಧಿಕಾರಿ..!
Published on
ಪ್ಯೋಂಗ್‌ಯಾಂಗ್: ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಈಗ ಅಧಿಕಾರ ಹಸ್ತಾಂತರದ ಕಿಡಿ ಹೊತ್ತಿಕೊಂಡಿದೆ. ಸರ್ವಾಧಿಕಾರಿ ಕಿಮ್ ಜೊಂಗ್ ಉನ್(Kim Jong Un) ತಮ್ಮ ಮಗಳು ಕಿಮ್ ಜು ಆಯೆ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿ ಸ್ಥಾನಕ್ಕೆ ತರುತ್ತಿರುವುದು, ಕಿಮ್ ಅವರ ಪ್ರಭಾವಿ ತಂಗಿ ಕಿಮ್ ಯೋ ಜೊಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅಂತಾರಾಷ್ಟ್ರೀಯ ಗುಪ್ತಚರ ವರದಿಗಳು ಎಚ್ಚರಿಸಿವೆ.

ಮಗಳೇ ಉತ್ತರಾಧಿಕಾರಿ: ದಕ್ಷಿಣ ಕೊರಿಯಾ ಗುಪ್ತಚರ ಸಂಸ್ಥೆ ಸ್ಪಷ್ಟನೆ

ಫೆಬ್ರವರಿ 12 ರಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIS) ಮಹತ್ವದ ವರದಿಯನ್ನು ಬಿಡುಗಡೆ ಮಾಡಿದೆ. ಸುಮಾರು 13 ವರ್ಷದ ಕಿಮ್ ಜು ಆಯೆ ಈಗ ಕೇವಲ ತರಬೇತಿ ಹಂತದಲ್ಲಿ ಇಲ್ಲ. ಬದಲಿಗೆ ಆಕೆಯನ್ನು ನಿಯೋಜಿತ ಉತ್ತರಾಧಿಕಾರಿ ಹಂತಕ್ಕೆ ಏರಿಸಲಾಗಿದೆ ಎಂದು ವರದಿ ಹೇಳಿದೆ. ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳು, ಮಿಲಿಟರಿ ಪರೇಡ್‌ಗಳು ಮತ್ತು ಚೀನಾ ಅಧ್ಯಕ್ಷರ ಜೊತೆಗಿನ ಭೇಟಿಯಲ್ಲೂ ಕಿಮ್ ತನ್ನ ಮಗಳನ್ನು ಜೊತೆಗೇ ಇರಿಸಿಕೊಂಡಿರುವುದು ಈ ಶಂಕೆಗೆ ಬಲ ನೀಡಿದೆ.

ಅತ್ತೆ vs ಸೊಸೆ: ಸಂಘರ್ಷ ಏಕೆ..?

ಉತ್ತರ ಕೊರಿಯಾದಲ್ಲಿ ಕಿಮ್ ಜೊಂಗ್ ಉನ್ ನಂತರದ ಸ್ಥಾನದಲ್ಲಿರುವುದು ಅವರ ತಂಗಿ ಕಿಮ್ ಯೋ ಜೊಂಗ್. ರಾಜತಾಂತ್ರಿಕ ವ್ಯವಹಾರಗಳು ಮತ್ತು ಮಿಲಿಟರಿ ನಿರ್ಧಾರಗಳಲ್ಲಿ ಆಕೆ ಪ್ರಬಲ ಹಿಡಿತ ಹೊಂದಿದ್ದಾರೆ.
ಕಿಮ್ ಯೋ ಜೊಂಗ್ ಅವರ ಶಕ್ತಿ: ಉತ್ತರ ಕೊರಿಯಾದ ಸೇನೆ ಮತ್ತು ಕಮ್ಯುನಿಸ್ಟ್ ಪಕ್ಷದಲ್ಲಿ ಆಕೆಗೆ ದೊಡ್ಡ ಬೆಂಬಲವಿದೆ. ಆಕೆ ಈ ದೇಶದ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಮಗಳ ಅಡ್ಡಿ: ಈಗ ಕಿಮ್ ತನ್ನ ಮಗಳನ್ನು ಮುಂದಕ್ಕೆ ತರುತ್ತಿರುವುದು ಕಿಮ್ ಯೋ ಜೊಂಗ್ ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು. ಬ್ರಿಟಿಷ್ ಮಾಧ್ಯಮ ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಕಿಮ್ ಜೊಂಗ್ ಉನ್ ಅವರ ಆರೋಗ್ಯದಲ್ಲಿ ಏರುಪೇರಾದರೆ, ಅಧಿಕಾರಕ್ಕಾಗಿ ಅತ್ತೆ ಮತ್ತು ಸೊಸೆಯ ನಡುವೆ ತೀವ್ರ ಹೋರಾಟ ನಡೆಯುವ ಸಾಧ್ಯತೆಯಿದೆ.

ರಕ್ತಪಾತದ ಇತಿಹಾಸವಿರುವ ಕುಟುಂಬ

ಕಿಮ್ ಕುಟುಂಬವು ಅಧಿಕಾರಕ್ಕಾಗಿ ತನ್ನವರನ್ನೇ ಕೊಲ್ಲಲು ಹಿಂಜರಿಯುವುದಿಲ್ಲ ಎಂಬುದು ಇತಿಹಾಸದಿಂದ ತಿಳಿದುಬಂದಿದೆ. ಕಿಮ್ ಜೊಂಗ್ ಉನ್ ಅಧಿಕಾರಕ್ಕೆ ಬಂದಾಗ ತಮ್ಮದೇ ಚಿಕ್ಕಪ್ಪ ಜಾಂಗ್ ಸಾಂಗ್ ತೇಕ್ ಅವರನ್ನು ಗಲ್ಲಿಗೇರಿಸಿದ್ದರು ಮತ್ತು ಮಲಸಹೋದರ ಕಿಮ್ ಜೊಂಗ್ ನಾಮ್ ಅವರನ್ನು ಮಲೇಷ್ಯಾದ ವಿಮಾನ ನಿಲ್ದಾಣದಲ್ಲಿ ವಿಷ ನೀಡಿ ಹತ್ಯೆ ಮಾಡಿಸಿದ್ದರು. ಈಗ ಮಗಳು ಮತ್ತು ತಂಗಿಯ ನಡುವಿನ ಈ ಶೀತಲ ಸಮರವು ಮುಂದಿನ ದಿನಗಳಲ್ಲಿ ಹಿಂಸಾತ್ಮಕ ತಿರುವು ಪಡೆಯಬಹುದು ಎಂಬ ಆತಂಕ ಮನೆಮಾಡಿದೆ.

ಮುಂದಿನ ದಿನಗಳು ನಿರ್ಣಾಯಕ

ಈ ತಿಂಗಳ ಅಂತ್ಯದಲ್ಲಿ ಉತ್ತರ ಕೊರಿಯಾದಲ್ಲಿ ಬೃಹತ್ ಪಾರ್ಟಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಅಲ್ಲಿ ಕಿಮ್ ಜು ಆಯೆಗೆ ಯಾವುದಾದರೂ ಅಧಿಕೃತ ಮಿಲಿಟರಿ ಅಥವಾ ರಾಜಕೀಯ ಪದವಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಜಗತ್ತು ಕುತೂಹಲದಿಂದ ಕಾಯುತ್ತಿದೆ. ಒಂದು ವೇಳೆ ಮಗಳಿಗೆ ಹೆಚ್ಚಿನ ಅಧಿಕಾರ ನೀಡಿದರೆ, ಅದು ಕಿಮ್ ಯೋ ಜೊಂಗ್ ಅವರ ಆಕ್ರೋಶಕ್ಕೆ ಕಾರಣವಾಗುವುದು ಖಚಿತವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net