US Midterm Elections: ಸೆನೆಟ್, ಹೌಸ್ ಮೇಲೆ ಡೆಮೋಕ್ರಟಿಕ್ ಹಿಡಿತ, ರಿಪಬ್ಲಿಕನ್ ಪ್ರಾಬಲ್ಯ ಕೊನೆ

US Midterm Elections: ಸೆನೆಟ್, ಹೌಸ್ ಮೇಲೆ ಡೆಮೋಕ್ರಟಿಕ್ ಹಿಡಿತ, ರಿಪಬ್ಲಿಕನ್ ಪ್ರಾಬಲ್ಯ ಕೊನೆ
Published on: 
  • ದಶಕಗಳ ಬಳಿಕ ಸೆನೆಟ್​ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಭರ್ಜರಿ ಜಯ.

  • ರಿಪಬ್ಲಿಕನ್ ಭದ್ರಕೋಟೆಗಳಾಗಿದ್ದ ಟೆಕ್ಸಾಸ್ ಮತ್ತು ಸೌತ್ ಕೆರೊಲಿನಾದಲ್ಲಿ ಡೆಮೋಕ್ರಟ್ ಅಭ್ಯರ್ಥಿಗಳಿಗೆ ಜಯ.

  • ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲಿನ ರಿಪಬ್ಲಿಕನ್​ ನಿಯಂತ್ರಣವನ್ನು ವಶಪಡಿಸಿಕೊಂಡ ಡೆಮಾಕ್ರಟಿಕ್ ಪಕ್ಷ.

ವಾಷಿಂಗ್ಟನ್; ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಧಿಕಾರಕ್ಕೆ ಮತ್ತೊಮ್ಮೆ ಸವಾಲೊಡ್ಡುವ ಸೂಚನೆಯನ್ನು ಮಧ್ಯಂತರ ಚುನಾವಣೆಯು ಕೊಟ್ಟಿದೆ. ಆರಂಭಿಕ ಫಲಿತಾಂಶದಲ್ಲಿ ರಿಪಬ್ಲಿಕನ್​ ಪಕ್ಷದ ಭದ್ರಕೋಟೆ ಎಂದು ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿವೆ. ಈ ಮಧ್ಯೆ ಸೆನೆಟ್ ಅನ್ನು ಕೂಡ ತನ್ನ ವಶಕ್ಕೆ ತೆಗೆದು ಕೊಂಡಿದ್ದು, ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ರಿಪಬ್ಲಿಕನ್​​ ವಿರುದ್ಧ ಯುಗಾರಂಭಕ್ಕೆ ಇದು ನಾಂದಿ ಹಾಡಿದೆ.

ಸೆನೆಟ್ ಮತ್ತು ಹೌಸ್ ಎರಡರಲ್ಲೂ ನಾರ್ತ್ ಕೆರೊಲಿನಾವನ್ನು ವಶಪಡಿಸಿಕೊಳ್ಳುವ ಮೂಲಕ ಡೆಮಾಕ್ರಟಿಕ್ ಪಕ್ಷ ತಮ್ಮ ಮೊದಲ ಅದ್ಭುತ ಗೆಲುವನ್ನು ದಾಖಲಿಸಿದ್ದಾರೆ. ರಿಪಬ್ಲಿಕನ್ ಚಕ್ ಎಡ್ವರ್ಡ್ಸ್ ಅವರ ನಿವೃತ್ತಿಯ ನಂತರ ಡೆಮಾಕ್ರಟಿಕ್ ಪಕ್ಷದ ಜೇಮಿ ಏಗರ್ ಹೌಸ್ ಸ್ಥಾನವನ್ನು ಗೆದ್ದುಕೊಂಡರೆ, ಸೆನೆಟ್‌ನಲ್ಲಿ ರಾಯ್ ಕೂಪರ್ ಅವರು ಮೈಕೆಲ್ ವಾಟ್ಲಿ ಅವರನ್ನು ಸೋಲಿಸಿದರು. 2008 ರ ನಂತರ ಡೆಮೋಕ್ರಾಟ್‌ಗಳು ಈ ರಾಜ್ಯದಲ್ಲಿ ಸೆನೆಟ್ ಸ್ಥಾನವನ್ನು ಗೆದ್ದಿರುವುದು ಇದೇ ಮೊದಲು.

ಹಿನ್ನಡೆಗೆ ಕಾರಣ?

ಈ ಮಧ್ಯಂತರ ಚುನಾವಣೆಯ ಫಲಿತಾಂಶವು ಟ್ರಂಪ್​ ಅವರ ಎರಡನೇ ಅವಧಿಯ ಆಡಳಿತದ ವಿರುದ್ಧ ನೀಡುತ್ತಿರುವ ತೀರ್ಪಿನಂತಿದೆ. ಜೀವನ ವೆಚ್ಚ ಏರಿಕೆ, ಸುಂಕ ಹೆಚ್ಚಳ, ಇರಾನ್ ಜೊತೆಗಿನ ಯುದ್ಧದಿಂದಾಗಿ ಇಂಧನ ಬೆಲೆಯು ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ನಷ್ಟವನ್ನುಂಟುಮಾಡಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಮನ್ನಣೆ ರೇಟಿಂಗ್ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಹಿನ್ನಡೆಯುಂಟು ಮಾಡಿದೆ.

ಸದ್ಯ ಹೌಸ್ ಆಫ್​ ರಿಪ್ರಸೆಂಟೇಟಿವ್ಸ್ ಮೇಲೆ ರಿಪಬ್ಲಿಕನ್​ ಪಕ್ಷವು ಹಿಡಿತ ಕಳೆದುಕೊಳ್ಳುವುದು ಪಕ್ಷಕ್ಕಾಗುತ್ತಿರುವ ದೊಡ್ಡ ಹೊಡೆತವಾಗಿದೆ. ಇದು ಟ್ರಂಪ್ ಅವರ ಶಾಸಕಾಂಗ ಕಾರ್ಯಸೂಚಿಯನ್ನು ತಡೆಯಲು ಡೆಮಾಕ್ರಟಿಕ್ ಪಕ್ಷ ಅಧಿಕಾರ ನೀಡಲಿದೆ. ಸೆನೆಟ್ ಚುನಾವಣೆಯ ಸೋಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ನೇಮಿಸುವ ಟ್ರಂಪ್ ಅವರ ಸಾಮರ್ಥ್ಯವನ್ನೂ ಗಂಡಾಂತರಕ್ಕೆ ಸಿಲುಕಿಸಿದೆ.

ಎಷ್ಟು ಸ್ಥಾನಗಳು ಕಣದಲ್ಲಿದ್ದವು?

ಎಲ್ಲಾ 435 ಹೌಸ್ ಸ್ಥಾನಗಳು ಮತ್ತು 100 ಸೆನೆಟ್ ಸ್ಥಾನಗಳ ಪೈಕಿ 35 ಸೆನೆಟ್ ಸ್ಥಾನಗಳು ಕಣದಲ್ಲಿದ್ದವು.. ಇದರೊಂದಿಗೆ 36 ರಾಜ್ಯಗಳ ಗವರ್ನರ್ ಸ್ಥಾನಗಳಿಗೂ ಚುನಾವಣೆ ನಡೆಯಿತು. ಸೆನೆಟ್​​ನಲ್ಲಿ ರಿಪಬ್ಲಿಕನ್ ಪಕ್ಷ 53 ಸ್ಥಾನಗಳನ್ನು ಹೊಂದಿದ್ದರೆ, ಡೆಮಾಕ್ರಟಿಕ್ ಪಕ್ಷವು 47 ಸ್ಥಾನಗಳನ್ನು ಹೊಂದಿವೆ. ಪ್ರತಿನಿಧಿಗಳ ಸಭೆಯಲ್ಲೂ ರಿಪಬ್ಲಿಕನ್ನರು ಬಹುಮತ ಹೊಂದಿದ್ದಾರೆ. ಪ್ರತಿನಿಧಿಗಳ ಸಭೆಯಲ್ಲಿ ಬಹುಮತ ಪಡೆಯಲು ಡೆಮೋಕ್ರಾಟ್​ಗಳಿಗೆ ಮೂರು ಸ್ಥಾನಗಳ ಲಾಭ ಸಾಕು. ಸೆನೆಟ್​​ನಲ್ಲಿ ಬಹುಮತ ಪಡೆಯಲು ನಾಲ್ಕು ಸ್ಥಾನಗಳ ನಿವ್ವಳ ಲಾಭದ ಅವಶ್ಯಕತೆ ಇದೆ.

ಕೆಂಟುಕಿ ಮತ್ತು ಇಂಡಿಯಾನಾದಲ್ಲಿ ಮತದಾನದ ಮೊದಲ ಮತಗಟ್ಟೆಗಳು ಮುಚ್ಚುತ್ತಿದ್ದಂತೆ, ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೌಸ್ ಡೆಮೋಕ್ರಟಿಕ್ ಅಲ್ಪಸಂಖ್ಯಾತ ನಾಯಕ ಹಕೀಮ್ ಜೆಫ್ರೀಸ್ ದೇಶವು "ದಿಕ್ಕಿನ ನಾಟಕೀಯ ಬದಲಾವಣೆಯ ಅಂಚಿನಲ್ಲಿದೆ. ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ನಿಯಂತ್ರಣವನ್ನು ಪಡೆಯುವ ಹಂತದಲ್ಲಿದೆ ಎಂದರು.

ಡಿಸಿಷನ್ ಡೆಸ್ಕ್ ಎಚ್‌ಕ್ಯೂ ತನ್ನ ಅಂತಿಮ ಚುನಾವಣಾ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ 241 ಹೌಸ್ ಸ್ಥಾನಗಳು ಮತ್ತು ರಿಪಬ್ಲಿಕನ್‌ಗಳಿಗೆ 194 ಸ್ಥಾನಗಳು ಹಾಗೂ 52-48 ರಷ್ಟು ಸೆನೆಟ್ ಬಹುಮತ ಸಿಗಲಿದೆ ಎಂದು ಅಂದಾಜಿಸಿತ್ತು, (ಏಜೆನ್ಸೀಸ್)