ಟ್ರಂಪ್​ ಅಧಿಕಾರಕ್ಕೆ ಡೆಮಾಕ್ರಟ್​ ಅಂಕುಶ: ಪದಚ್ಯುತಿಗೆ ಪ್ರಸ್ತಾಪ...:ಭಾರತೀಯ- ಮೂಲದ ಅಭ್ಯರ್ಥಿಗಳ ಜಯಭೇರಿ

ಟ್ರಂಪ್​ ಅಧಿಕಾರಕ್ಕೆ ಡೆಮಾಕ್ರಟ್​ ಅಂಕುಶ: ಪದಚ್ಯುತಿಗೆ ಪ್ರಸ್ತಾಪ...:ಭಾರತೀಯ- ಮೂಲದ ಅಭ್ಯರ್ಥಿಗಳ ಜಯಭೇರಿ
Published on: 

ವಾಷಿಂಗ್ಟನ್​: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷ ಹಿನ್ನಡೆ ಅನುಭವಿಸಿರುವುದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಧಿಕಾರಕ್ಕೆ ಮರಳಿದ ಬಳಿಕ ತಮ್ಮದೇ ಕಾರ್ಯಸೂಚಿಯಂತೆ ಆಡಳಿತ ನಡೆಸುತ್ತಿದ್ದ ಟ್ರಂಪ್​ಗೆ ಈಗ ಕಾಂಗ್ರೆಸ್​(ಅಲ್ಲಿನ ಸಂಸತ್​)ನಲ್ಲಿ ಪ್ರತಿಪಕ್ಷಗಳ ಪ್ರಬಲ ವಿರೋಧ ಎದುರಾಗುವುದು ಖಚಿತವಾಗಿದೆ.

ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ವ್ಯಾಪಕ ಅಧಿಕಾರಗಳಿದ್ದರೂ, ಕಾನೂನು ರೂಪಿಸುವ ಮತ್ತು ಸರ್ಕಾರಿ ವೆಚ್ಚಕ್ಕೆ ಅನುಮೋದನೆ ನೀಡುವ ಅಧಿಕಾರ ಕಾಂಗ್ರೆಸ್​ನ ಕೈಯಲ್ಲಿದೆ. ಪ್ರಸ್ತುತ ಎರಡೂ ಸದನಗಳಾದ ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​ ಮತ್ತು ಸೆನೆಟ್​ನಲ್ಲಿ ಡೆಮಾಕ್ರಟಿಕ್​ ಪಕ್ಷ ಬಹುಮತ ಗಳಿಸಿರುವುದು ಟ್ರಂಪ್​ಗೆ ದೊಡ್ಡ ಹಿನ್ನಡೆಯಾಗಿದೆ.

ಇದುವರೆಗೆ ಹಲವು ವಿವಾದಾತ್ಮಕ ನೀತಿ, ಕಾಯ್ದೆಗಳನ್ನು ಜಾರಿಗೆ ತಂದಿರುವ ಟ್ರಂಪ್​ಗೆ ಇನ್ನು ಮುಂದೆ ಪ್ರತಿಯೊಂದು ಪ್ರಮುಖ ನಿರ್ಧಾರದಲ್ಲೂ ಪ್ರತಿಪಕ್ಷಗಳ ಮನವೊಲಿಸುವ ಅನಿವಾರ್ಯತೆ ಎದುರಾಗಲಿದೆ. ಹೊಸ ತೆರಿಗೆ ನೀತಿ, ವಲಸೆ ಸುಧಾರಣೆ, ರಕ್ಷಣಾ ವೆಚ್ಚ, ಆರೋಗ್ಯ ಸೇವೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳ ಮಸೂದೆಗಳಿಗೆ ಅನುಮೋದನೆ ಪಡೆಯುವುದು ಕಷ್ಟವಾಗಲಿದೆ.

ಅಧ್ಯಕ್ಷರ ಅಧಿಕಾರಕ್ಕೆ ಕಡಿವಾಣ ಸಾಧ್ಯವೇ?: ಕಾಂಗ್ರೆಸ್​ನಲ್ಲಿ ಬಹುಮತ ಕಳೆದುಕೊಂಡ ಮಾತ್ರಕ್ಕೆ ಟ್ರಂಪ್​ ಅಧ್ಯಕ್ಷ ಸ್ಥಾನ ಅಥವಾ ಕಾರ್ಯಾಂಗದ ಅಧಿಕಾರ ಕಳೆದುಕೊಳ್ಳುವುದಿಲ್ಲ. ವಿದೇಶಾಂಗ ನೀತಿ, ಸೇನೆಯ ಮುಖ್ಯಸ್ಥರಾಗಿ ನಿರ್ಧಾರ ಕೈಗೊಳ್ಳುವುದು, ಕಾರ್ಯಕಾರಿ ಆದೇಶಗಳನ್ನು ಹೊರಡಿಸುವುದು ಸೇರಿದಂತೆ ಸಂವಿಧಾನ ನೀಡಿರುವ ಅಧಿಕಾರಗಳು ಅವರ ಬಳಿಯೇ ಇರುತ್ತವೆ. ಆದರೆ ಕಾಂಗ್ರೆಸ್​ನ ಅನುಮೋದನೆ ಅಗತ್ಯವಿರುವ ನಿರ್ಧಾರಗಳಲ್ಲಿ ಪ್ರತಿಪಕ್ಷಗಳ ವಿರೋಧ ಎದುರಾಗಲಿದೆ.

  • ಅಮೆರಿಕದ ಪ್ರಮುಖ ಸರ್ಕಾರಿ ಹುದ್ದೆಗಳು, ರಾಯಭಾರಿಗಳು, ಉನ್ನತ ಅಧಿಕಾರಿಗಳು ಹಾಗೂ ಫೆಡರಲ್​ ನ್ಯಾಯಾಂಗದ ಹಲವು ನೇಮಕಾತಿಗಳಿಗೆ ಪ್ರತಿಪಕ್ಷಗಳ ಅನುಮೋದನೆ ಅಗತ್ಯ.

  • ಟ್ರಂಪ್​ ಶಿಫಾರಸು ಮಾಡುವ ಅಭ್ಯರ್ಥಿಗಳ ನೇಮಕಾತಿಯನ್ನು ಡೆಮಾಕ್ರಟಿಕ್​ ಸದಸ್ಯರು ವಿಳಂಬಗೊಳಿಸಬಹುದು ಅಥವಾ ವಿರೋಧಿಸಬಹುದು.

  • ಮಧ್ಯಂತರ ಚುನಾವಣೆಯ ಫಲಿತಾಂಶವು 2028ರ ಅಧ್ಯಕ್ಷೀಯ ಚುನಾವಣೆಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ರಿಪಬ್ಲಿಕನ್​ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟ್ರಂಪ್​ ಪದಚ್ಯುತಿಗೆ ಪ್ರಸ್ತಾಪ?

ಯುಎಸ್​ ಕಾಂಗ್ರೆಸ್​ನ ಉಭಯ ಸದನಗಳಲ್ಲಿ ಬಹುಮತ ಪಡೆದಿರುವ ಡೆಮಾಕ್ರಟ್​ಗಳು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಮೂರನೇ ಬಾರಿಗೆ ಪದಚ್ಯುತಿ ಅಸ್ತ್ರ ಪ್ರಯೋಗಿಸುವ ಕುರಿತು ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಟ್ರಂಪ್​ ಅವರ ಮೊದಲ ಅವಧಿಯಲ್ಲಿನ ಪದಚ್ಯುತಿ ಪ್ರಯತ್ನಗಳು ಸೆನೆಟ್​ನಲ್ಲಿ ವಿಫಲಗೊಂಡು ಅವರ ಬೆಂಬಲಿಗರನ್ನು ಇನ್ನಷ್ಟು ಒಗ್ಗೂಡಿಸಿದ್ದವು. ಹೀಗಾಗಿ, ನೇರವಾಗಿ ಅಧ್ಯಕ್ಷರನ್ನು ಗುರಿಯಾಗಿಸುವ ಬದಲು ಅವರ ಆಪ್ತ ಕ್ಯಾಬಿನೆಟ್​ ವಲಯದ ಮೇಲೆ ಡೆಮಾಕ್ರಟ್​ಗಳು ಗಮನ ಕೇಂದ್ರೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಡೆಮಾಕ್ರಟ್​ಗಳ ಸಾಧನೆಗೆ ಒಬಾಮಾ ಮೆಚ್ಚುಗೆ

ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಸಾಧನೆಯ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದ ಜನತೆ ವಿಭಜಿಸುವ ಬದಲು ಒಗ್ಗೂಡಿಸುವ ರಾಜಕೀಯವನ್ನು ಬಯಸಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ. ಜನರ ಸಮಸ್ಯೆಗಳಿಗೆ ಪ್ರಾಯೋಗಿಕ ಹಾಗೂ ನಿರ್ದಿಷ್ಟ ಪರಿಹಾರ ನೀಡುವ ನಾಯಕರನ್ನು ಅಮೆರಿಕನ್ನರು ಬೆಂಬಲಿಸಿದ್ದಾರೆ. ಟ್ರಂಪ್​ ಆಡಳಿತ ಇನ್ನು ಎರಡು ವರ್ಷ ಅಧಿಕಾರದಲ್ಲಿರುತ್ತದೆ. ಹೀಗಾಗಿ, ನಾವು ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಭಾರತೀಯ- ಮೂಲದ ಅಭ್ಯರ್ಥಿಗಳ ಜಯಭೇರಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ-ಮೂಲದ ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಡೆಮಾಕ್ರಟಿಕ್​ ಪಕ್ಷದ ಹಾಲಿ ಸಂಸದರಾದ ಅಮಿ ಬೆರಾ, ರೋ ಖನ್ನಾ, ಸುಹಾಸ್​ ಸುಬ್ರಮಣ್ಯಂ ಮತ್ತು ಪ್ರಮೀಳಾ ಜಯಪಾಲ್​ ಯುಎಸ್​ ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​ಗೆ

(ಪ್ರತಿನಿಧಿಗಳ ಸಭೆ) ಮರು ಆಯ್ಕೆಯಾಗಿದ್ದಾರೆ. ಪಿಯಾ ದಂಡಿಯಾ ಅವರು ಫ್ಲೋರಿಡಾದಿಂದ ಮೊದಲ ಬಾರಿಗೆ ಯುಎಸ್​ ಕಾಂಗ್ರೆಸ್​ ಪ್ರವೇಶಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕ್ಯಾಲಿಫೋರ್ನಿಯಾದಿಂದ ಅಮಿ ಬೆರಾ (8ನೇ ಅವಧಿ) ಹಾಗೂ ರೋ ಖನ್ನಾ (6ನೇ ಅವಧಿ), ವರ್ಜೀನಿಯಾದಿಂದ ಸುಹಾಸ್​ (2ನೇ ಅವಧಿ) ಮತ್ತು ವಾಷಿಂಗ್ಟನ್​ನಿಂದ ಪ್ರಮೀಳಾ ಜಯಪಾಲ್​ (6ನೇ ಅವಧಿ) ಮರು ಆಯ್ಕೆಯಾಗಿದ್ದಾರೆ. ಮೇರಿಲ್ಯಾಂಡ್​ನಲ್ಲಿ ಡೆಮಾಕ್ರಟಿಕ್​ ಪಕ್ಷದ ಅರುಣಾ ಮಿಲ್ಲರ್​ ಲೆಫ್ಟಿನೆಂಟ್​ ಗವರ್ನರ್​ ಆಗಿ ಮರು ಆಯ್ಕೆಯಾಗಿದ್ದಾರೆ. ಆದರೆ, ಓಹಿಯೋ ಗವರ್ನರ್​ ಕಣದಲ್ಲಿದ್ದ ಡೊನಾಲ್ಡ್​ ಟ್ರಂಪ್​ ಬೆಂಬಲಿತ ರಿಪಬ್ಲಿಕ್​ ಪಕ್ಷದ ವಿವೇಕ್​ ರಾಮಸ್ವಾಮಿ ಮತ್ತು ನಾರ್ತ್​ ಕೆರೊಲಿನಾದಿಂದ ಸ್ಪರ್ಧಿಸಿದ್ದ ಮಹೇಶ್​ ಗನೋರ್ಕರ್​ ಪರಾಭವಗೊಂಡಿದ್ದಾರೆ. ಪೂಜಾ ಸೇಥಿ, ಸಂದೀಪ್​ ಶ್ರೀವಾಸ್ತವ ಸೇರಿ ಕೆಲವು ಅಭ್ಯರ್ಥಿಗಳ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ,

ಗೆಲುವು ಸಾಧಿಸಿದ ಪ್ರಮುಖರು

  1. ಅಮಿ ಬೆರಾ: ಅಮಿ ಬೆರಾ ಕ್ಯಾಲಿಫೋರ್ನಿಯಾದ 3ನೇ ಜಿಲ್ಲೆಯಿಂದ ರಿಪಬ್ಲಿಕನ್​ ಅಭ್ಯರ್ಥಿ ರಾಬ್​ ಟಕರ್​ ಅವರನ್ನು ಸೋಲಿಸಿ ಸತತ 8ನೇ ಬಾರಿಗೆ ಯುಎಸ್​ ಹೌಸ್​ಗೆ ಆಯ್ಕೆಯಾಗಿದ್ದಾರೆ. ವೈದ್ಯ ವೃತ್ತಿಯಿಂದ ರಾಜಕೀಯಕ್ಕೆ ಬಂದಿರುವ ಇವರು 2012ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು.

  2. ಅರುಣಾ ಮಿಲ್ಲರ್​: ಅರುಣಾ ಮಿಲ್ಲರ್​ ಅವರು ಗವರ್ನರ್​ ವೆಸ್​ ಮೂರ್​ ಅವರೊಂದಿಗೆ ಮೇರಿಲ್ಯಾಂಡ್​ನ ಲೆಫ್ಟಿನೆಂಟ್​ ಗವರ್ನರ್​ ಆಗಿ ಮರು ಆಯ್ಕೆಯಾಗಿದ್ದಾರೆ.

  3. ಸುಹಾಸ್​ ಸುಬ್ರಮಣ್ಯಂ: ವರ್ಜೀನಿಯಾದ 10ನೇ ಜಿಲ್ಲೆಯಿಂದ ರಿಪಬ್ಲಿಕನ್​ ಅಭ್ಯರ್ಥಿ ಡೇವ್​ ಬೆಕ್​ವಿತ್​ ಅವರನ್ನು ಮಣಿಸಿರುವ ಸುಹಾಸ್​ ಸುಬ್ರಮಣ್ಯಂ 2ನೇ ಬಾರಿಗೆ ಜನಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ಬರಾಕ್​ ಒಬಾಮ ಆಡಳಿತದಲ್ಲಿ ಶ್ವೇತಭವನದ ತಂತ್ರಜ್ಞಾನ ನೀತಿ ಸಲಹೆಗಾರರಾಗಿದ್ದ ಇವರು, 2019 ರಿಂದ 2023ರವರೆಗೆ ವರ್ಜೀನಿಯಾ ಶಾಸಕಾಂಗದಲ್ಲಿ ಸೇವೆ ಸಲ್ಲಿಸಿದ್ದರು.

  4. ಪಿಯಾ ದಂಡಿಯಾ: ಫ್ಲೋರಿಡಾದ 22ನೇ ಜಿಲ್ಲೆಯಿಂದ ರಿಪಬ್ಲಿಕನ್​ ಅಭ್ಯರ್ಥಿ ಕೇಸಿ ಅಸ್ಕರ್​ ಅವರನ್ನು ಸೋಲಿಸಿರುವ ಪಿಯಾ ದಂಡಿಯಾ ಮೊದಲ ಬಾರಿಗೆ ಕಾಂಗ್ರೆಸ್​ ಪ್ರವೇಶಿಸಿದ್ದಾರೆ.

  5. ರೋ ಖನ್ನಾ: ಕ್ಯಾಲಿಫೋರ್ನಿಯಾದ 17ನೇ ಜಿಲ್ಲೆಯಿಂದ 50 ವರ್ಷದ ಡೆಮಾಕ್ರಟಿಕ್​ ನಾಯಕ ರೋ ಖನ್ನಾ 6 ನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಖನ್ನಾ 2020ರಲ್ಲಿ ಬರ್ನಿ ಸ್ಯಾಂಡರ್ಸ್​ ಅವರ ಪ್ರಚಾರ ಸಮಿತಿ ಸಹ-ಅಧ್ಯಕ್ಷರಾಗಿದ್ದ ಹಾಗೂ ಪ್ರಸ್ತುತ ಕಾಂಗ್ರೆಸ್​ನ ಪ್ರಗತಿಪರ ಕಾಕಸ್​ನ ಉಪಾಧ್ಯಕ್ಷರಾಗಿದ್ದಾರೆ.

  6. ಪ್ರಮೀಳಾ ಜಯಪಾಲ್​: ವಾಷಿಂಗ್ಟನ್​ನ 7ನೇ ಜಿಲ್ಲೆಯಿಂದ ಪ್ರಮೀಳಾ ಜಯಪಾಲ್​ ಮರು ಆಯ್ಕೆಯಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿ ಸಭೆಗೆ ಆಯ್ಕೆಯಾಗುವ ಮೂಲಕ, ಈ ಸಾಧನೆ ಮಾಡಿದ ಮೊದಲ ದಕ್ಷಿಣ ಏಷ್ಯಾ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತನಿಖೆಗಳ ಸುಳಿಯಲ್ಲಿ ಶ್ವೇತಭವನ?

ಟ್ರಂಪ್​ ಆಡಳಿತಕ್ಕೆ ಎದುರಾಗಲಿರುವ ಪ್ರಮುಖ ಸವಾಲು ಸಂಸದೀಯ ತನಿಖೆಗಳು. ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​ನ ವಿವಿಧ ಸಮಿತಿಗಳ ಅಧ್ಯಕ್ಷ ಸ್ಥಾನಗಳು ಡೆಮಾಕ್ರಟಿಕ್​ ಸದಸ್ಯರಿಗೆ ಸಿಗಲಿವೆ. ಇದರಿಂದ ಅಧ್ಯಕ್ಷರ ಆಡಳಿತ ನಿರ್ಧಾರಗಳು, ಸರ್ಕಾರಿ ಇಲಾಖೆಗಳ ಕಾರ್ಯವೈಖರಿ, ಹಣಕಾಸು ವ್ಯವಹಾರಗಳು ಮತ್ತು ನೀತಿ ಅನುಷ್ಠಾನದ ಕುರಿತು ತನಿಖೆ ನಡೆಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿದೆ. ಸರ್ಕಾರದ ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪಗಳು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಅಧ್ಯಕ್ಷರ ವೈಯಕ್ತಿಕ ವ್ಯವಹಾರಗಳ ಕುರಿತೂ ತನಿಖೆ ನಡೆಸುವ ಸಾಧ್ಯತೆ ಇದೆ.

ಮತ ಎಣಿಕೆ ಕೆಲವೇ ಗಂಟೆಗಳಲ್ಲಿ ನಡೆದಿದ್ದೇಗೆ?

ನವೆಂಬರ್​ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 10 ಕೋಟಿಗೂ ಹೆಚ್ಚು ಮತದಾರರು ಕಾಗದದ ಮತಪತ್ರಗಳ (ಬ್ಯಾಲೆಟ್​ ಪೇಪರ್​) ಮೂಲಕ ಮತ ಚಲಾಯಿಸಿದ್ದರು. ಆದರೂ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಅಮೆರಿಕ ಚುನಾವಣೆಯಲ್ಲಿ ಮತದಾರರು ಬ್ಯಾಲೆಟ್​ ಪೇಪರ್​ನಲ್ಲಿ ಅಭ್ಯರ್ಥಿಯ ಹೆಸರಿನ ಮುಂದಿರುವ ಬಾಕ್ಸ್​ ಭರ್ತಿ ಮಾಡುತ್ತಿದ್ದಾರೆ. ಮತ ಎಣಿಕೆ ವೇಳೆ ಬ್ಯಾಲೆಟ್​ ಪೇಪರ್​ಗಳನ್ನು ಹೈ-ಸ್ಪೀಡ್​ ಸ್ಕ್ಯಾನಿಂಗ್​ ಯಂತ್ರಗಳ ಮೂಲಕ ಹಾಯಿಸಲಾಗುತ್ತದೆ. ಈ ಸ್ಕ್ಯಾನರ್​ಗಳು ಗುರುತುಗಳನ್ನು ಓದಿ ಸ್ವಯಂಚಾಲಿತವಾಗಿ ಹಾಗೂ ಅತ್ಯಂತ ವೇಗವಾಗಿ ಮತಗಳನ್ನು ಲೆಕ್ಕಹಾಕುತ್ತವೆ. 10,000ಕ್ಕೂ ಹೆಚ್ಚು ಸ್ಥಳೀಯ ಕೇಂದ್ರಗಳಲ್ಲಿ ಏಕಕಾಲದಲ್ಲಿ ಮತಗಳ ಎಣಿಕೆ ನಡೆಯುತ್ತದೆ. ಸ್ಥಳೀಯ ಅಧಿಕಾರಿಗಳು ಯಂತ್ರಗಳ ಮೂಲಕ ಮತ ಎಣಿಸಿ ತ್ವರಿತವಾಗಿ ಮಾಹಿತಿ ರವಾನಿಸುತ್ತಾರೆ. ಈ ವ್ಯವಸ್ಥೆಯಿಂದಾಗಿ ಅಮೆರಿಕ ತ್ವರಿತವಾಗಿ ಫಲಿತಾಂಶ ನೀಡಲು ಸಾಧ್ಯವಾಗುತ್ತಿದೆ. ಅಮೆರಿಕದಲ್ಲಿ ಚುನಾವಣಾ ದಿನಕ್ಕೂ ಮೊದಲೇ 5.7 ಕೋಟಿಗೂ ಹೆಚ್ಚು ಜನರು ಅಂಚೆ ಮೂಲಕ ಅಥವಾ ಖುದ್ದಾಗಿ ಮತ ಚಲಾಯಿಸಿದ್ದಾರೆ. 43 ರಾಜ್ಯಗಳಲ್ಲಿ ಚುನಾವಣಾ ದಿನಕ್ಕೂ ಮೊದಲೇ ಅಂಚೆ ಮತಗಳ ಸಹಿ ಪರಿಶೀಲನೆ, ಲಕೋಟೆ ತೆರೆಯುವುದು ಹಾಗೂ ಸ್ಕ್ಯಾನಿಂಗ್​ ಪ್ರಕ್ರಿಯೆ ಆರಂಭಿಸಲು ಅವಕಾಶವಿದೆ. ಇದೂ ಸಹ ಮತ ಎಣಿಕೆ ತ್ವರಿತವಾಗಿ ಪೂರ್ಣಗೊಳ್ಳಲು ನೆರವಾಗಿದೆ.

ಟ್ರಂಪ್​ ಹಿನ್ನಡೆಗೆ ಪ್ರಮುಖ ಕಾರಣಗಳು

  • ಆಹಾರ, ಮನೆ ಬಾಡಿಗೆ, ಆರೋಗ್ಯ ಸೇವೆ, ಇಂಧನ ಸೇರಿದಂತೆ ದೈನಂದಿನ ಖರ್ಚುಗಳ ಹೆಚ್ಚಳ ಪರಿಣಾಮ ಜನರ ಜೀವನ ನಿರ್ವಹಣೆಯ ವೆಚ್ಚ ಏರಿಕೆ

  • ಇರಾನ್​ ಜೊತೆಗಿನ ಅಮೆರಿಕದ ಸಂಘರ್ಷದಿಂದ ಹೆಚ್ಚುತ್ತಿರುವ ಮಿಲಿಟರಿ ವೆಚ್ಚ, ಇಂಧನ ಬೆಲೆ ಮತ್ತು ಜಾಗತಿಕ ಅನಿಶ್ಚಿತತೆಯಿಂದ ಮತದಾರರಲ್ಲಿ ಆತಂಕ

  • ವಿದೇಶಿ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಟ್ರಂಪ್​ ನೀತಿ ಅಮೆರಿಕದ ಗ್ರಾಹಕರು ಮತ್ತು ಉದ್ಯಮಗಳ ಮೇಲೆ ನಕಾರಾತ್ಮಕ ಪರಿಣಾಮ

  • ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರದಲ್ಲಿ ಕೇವಲ ಟ್ರಂಪ್​ ಮೇಲೆ ಅವಲಂಬನೆ. ವಿಷಯ ಆಧಾರಿತ ಪ್ರಚಾರ ಕಡಿಮೆ.

  • ಸರ್ಕಾರದ ನೀತಿಗಳು, ಆಡಳಿತದ ನಿರ್ಧಾರಗಳು ಮತ್ತು ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಆಡಳಿತದ ವಿರುದ್ಧ ಜನರ ಅಸಮಾಧಾನ

  • ಮಧ್ಯಂತರ ಚುನಾವಣೆಯಲ್ಲಿನ ಆಡಳಿತ ವಿರೋಧಿ ಅಲೆ

ಟ್ರಂಪ್​ ಮುಂದಿನ ಸ್ಥಿತಿ ಏನು?

  • ಕಾಂಗ್ರೆಸ್​ ಮೇಲೆ ನಿಯಂತ್ರಣ ಕಳೆದುಕೊಂಡ ಟ್ರಂಪ್​. ಎರಡೂ ಸದನಗಳ ನಿಯಂತ್ರಣ ಡೆಮಾಕ್ರಟಿಕ್​ ಪಕ್ಷದ ಕೈಗೆ

  • ಟ್ರಂಪ್​ ಸರ್ಕಾರ ಮಂಡಿಸುವ ಹೊಸ ಕಾನೂನುಗಳಿಗೆ ಡೆಮಾಕ್ರಟಿಕ್​ ಪಕ್ಷದ ಬೆಂಬಲ ಪಡೆಯುವುದು ಅನಿವಾರ್ಯವಾಗಬಹುದು.

  • ಟ್ರಂಪ್​ ಆಡಳಿತ ಅವಧಿಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ, ಯೋಜನೆ ವಿರುದ್ಧ ತನಿಖೆ ಸಾಧ್ಯತೆ

  • ಪ್ರಮುಖ ಸಮಿತಿಗಳ ಅಧ್ಯಕ್ಷ ಸ್ಥಾನಗಳು ಡೆಮಾಕ್ರಟಿಕ್​ ಪಕ್ಷಕ್ಕೆ ಸಿಗಲಿವೆ.

  • ಟ್ರಂಪ್​ ಆಡಳಿತದ ಮೇಲೆ ನಿರಂತರ ರಾಜಕೀಯ ಮತ್ತು ಕಾನೂನು ಒತ್ತಡ ಸೃಷ್ಟಿಯಾಗಬಹುದು.

  • ಟ್ರಂಪ್​ ಪದಚ್ಯುತಿ ಯತ್ನ ಸಾಧ್ಯತೆ

  • 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ

ಟ್ರಂಪ್​ ಮೀಮ್ಸ್​ ವೈರಲ್​

ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಾಲೆಳೆಯುವ ಮೀಮ್​ಗಳ ಸುರಿಮಳೆಯೇ ಆಗುತ್ತಿದೆ. ಟ್ರಂಪ್​ ಸೋಲನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್​ ಕುಮಾರ್​ ಅವರಿಗೆ ತಳುಕುಹಾಕಿ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಷೇಕ್​ ದಿಪ್ಕೆ ಪೋಸ್ಟ್​ ಮಾಡಿ, "ಜ್ಞಾನೇಶ್​ ಇದ್ದಿದ್ದರೆ ಟ್ರಂಪ್​ಗೆ ಈ ಗತಿ ಬರುತ್ತಿರಲಿಲ್ಲ' ಎಂದಿದ್ದಾರೆ. ಪ್ರಧಾನಿ ಮೋದಿಯವರ ಬಳಿ ಟ್ರಂಪ್​ "ಬ್ರೋ, ನನಗೆ ಜ್ಞಾನೇಶ್​ನನ್ನು ಕೊಡು' ಎಂದು ಕೇಳುವ ಮೀಮ್​ಗಳು ಹಾಗೂ "ಚುನಾವಣೆ ನಡೆಸಲು ಜ್ಞಾನೇಶ್​ ಅಮೆರಿಕಕ್ಕೆ ತೆರಳಲಿದ್ದಾರೆ" ಎಂಬ ವಿಡಂಬನಾತ್ಮಕ ಮೀಮ್ಸ್​ಗಳು ಹರಿದಾಡುತ್ತಿವೆ.

ಭಾರತದ ಮೇಲೆ ಏನು ಪರಿಣಾಮ?

  1. ಕಾಂಗ್ರೆಸ್​ನ ಎರಡೂ ಸದನಗಳಲ್ಲಿ ಡೆಮಾಕ್ರಟಿಕ್​ ಪಕ್ಷಕ್ಕೆ ಬಹುಮತ ಇರುವುದರಿಂದ ಟ್ರಂಪ್​ ಅವರ ಸುಂಕ ನೀತಿಯ ಬಗ್ಗೆ ಹೆಚ್ಚಿನ ಚರ್ಚೆ, ಪರಿಶೀಲನೆ ನಡೆಯಬಹುದು. ಸುಂಕ ಹೇರಿಕೆ ತೆರವಿಗೆ ಒತ್ತಡ ಸೃಷ್ಟಿಯಾಗಬಹುದು.

  2. ಎಚ್​&1ಬಿ ವೀಸಾ, ಉದ್ಯೋಗಾಧಾರಿತ ಗ್ರೀನ್​ ಕಾರ್ಡ್​, ವಿದೇಶಿ ಉದ್ಯೋಗಿಗಳ ನೇಮಕಾತಿ ಬಗ್ಗೆ ಟ್ರಂಪ್​ ಆಡಳಿತ ಅತ್ಯಂತ ಕಠಿಣ ನಿಯಮ ಜಾರಿಗೆ ತಂದಿದೆ. ಈ ನಿರ್ಬಂಧಗಳ ವಿರುದ್ಧ ಕೆಲವು ಶಾಸನಾತ್ಮಕ ಪ್ರಯತ್ನ ನಡೆಸಲು ಅವಕಾಶ ಸಿಗಬಹುದು.

  3. ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಟ್ರಂಪ್​ ಆಡಳಿತ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಈ ವಿಚಾರದಲ್ಲಿ ಡೆಮಾಕ್ರಟಿಕ್​ ಪಕ್ಷ ಟ್ರಂಪ್​ ಆಡಳಿತದ ನಿರ್ಧಾರಗಳನ್ನು ಕಾಂಗ್ರೆಸ್​ ಪ್ರಶ್ನಿಸಬಹುದು.

  4. ಭಾರತ ಅಮೆರಿಕಕ್ಕೆ ಪ್ರಮುಖ ಕಾರ್ಯತಂತ್ರದ ಪಾಲುದಾರ. ಈ ವಿಚಾರದಲ್ಲಿ ರಿಪಬ್ಲಿಕನ್​, ಡೆಮಾಕ್ರಟಿಕ್​ ಎರಡೂ ಪಕ್ಷದಿಂದ ಭಾರತಕ್ಕೆ ಯಾವುದೇ ತೊಂದರೆ ಇಲ್ಲ.

  5. ಇರಾನ್​ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಯುದ್ಧದ ತೀವ್ರತೆ ಕಡಿಮೆಯಾದರೆ ಜಾಗತಿಕ ತೈಲ ಬೆಲೆಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಬಹುದು. ಇದರಿಂದ ಭಾರತದ ವೆಚ್ಚ ತಗ್ಗಲಿದೆ.

ವಿವೇಕ್​ ರಾಮಸ್ವಾಮಿಗೆ ಸೋಲು

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆಂಬಲಿತ ಭಾರತೀಯ ಮೂಲದ ಅಭ್ಯರ್ಥಿ ವಿವೇಕ್​ ರಾಮಸ್ವಾಮಿ ಓಹಿಯೋ ಗವರ್ನರ್​ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಆಮಿ ಆಕ್ಟನ್​ ವಿರುದ್ಧ ಸೋಲನುಭವಿಸಿದ್ದಾರೆ. ಈ ಮೂಲಕ ಆಮಿ ಆಕ್ಟನ್​ ಓಹಿಯೋ ರಾಜ್ಯದ ಗವರ್ನರ್​ ಆಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕ್ಟನ್​ ಶೇ.51ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ರಾಮಸ್ವಾಮಿ ಶೇ.45ಕ್ಕಿಂತ ಹೆಚ್ಚು ಮತಗಳನ್ನು ಪಡೆದರು.

ಭಟ್ಕಳದ ಅಳಿಯನಿಗೆ ಗೆಲುವು

ಮಿಚಿಗನ್​ ಸೆನೆಟ್​ ಚುನಾವಣೆಯಲ್ಲಿ ರಿಪಬ್ಲಿಕನ್​ ಅಭ್ಯರ್ಥಿ ಮೈಕ್​ ರೋರ್ಜಸ್​ ಅವರನ್ನು ಮಣಿಸಿರುವ ಡೆಮಾಕ್ರಟಿಕ್​ ಪಕ್ಷದ ಅಬ್ದುಲ್​ ಎಲ್​ -ಸೈಯದ್​, ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್​ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಎಲ್​-ಸೈಯದ್​ ಅವರ ಪತ್ನಿ, ಮನೋವೈದ್ಯೆ ಡಾ. ಸಾರಾ ಜುಕಾಕು ಅವರ ಮೂಲ ಕರ್ನಾಟಕದ ಭಟ್ಕಳ. ಸಾರಾ ಅವರ ಅಜ್ಜ ಜುಕಾಕು ಶಂಶುದ್ದೀನ್​ ಅವರು ಬಿ.ಡಿ. ಜತ್ತಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಹಣಕಾಸು ಉಪಸಚಿವರಾಗಿದ್ದವರು. ಭಟ್ಕಳಕ್ಕೆ ವಿದ್ಯುತ್​ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಂಶುದ್ದೀನ್​, ಆ ಭಾಗದ ಮೊದಲ ವಕೀಲರೂ ಆಗಿದ್ದರು. ಸಾರಾ ಅವರ ತಂದೆ ಡಾ. ತ್ಯೇಬ್​ ಜುಕಾಕು ಬೆಂಗಳೂರಿನಲ್ಲಿ ಎಂಬಿಬಿಎಸ್​ ಮುಗಿಸಿ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು. ತಮ್ಮ ಭಟ್ಕಳ ನಂಟಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಎಲ್​ -ಸೈಯದ್​, ಕಳೆದ 20 ವರ್ಷಗಳಿಂದ ನಾನು ಭಟ್ಕಳ ಮೂಲದ ಕುಟುಂಬದ ಅಳಿಯನಾಗಿದ್ದೇನೆ. ನಾನು ಅರಬ್​ ಎನ್ನುವುದಕ್ಕಿಂತ ಹೆಚ್ಚು ಭಾರತೀಯನಾಗಿರಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಷೇರುಪೇಟೆ ಸಂಭ್ರಮ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಾಟ್​ಗಳು ಸಂಸತ್ತಿನ ಎರಡೂ ಸದನಗಳ ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರಿ ಚೇತರಿಕೆ ಕಂಡುಬಂದಿದೆ. ಆರಂಭದಲ್ಲಿ ರಾಜಕೀಯ ಅನಿಶ್ಚಿತತೆಯಿಂದ ಶೇ. 2ರಷ್ಟು ಕುಸಿದಿದ್ದ ಷೇರುಪೇಟೆ ಬಳಿಕ ಚೇತರಿಸಿಕೊಂಡಿದೆ. ಡೌ ಜೋನ್ಸ್​ ಸೂಚ್ಯಂಕ 1,200ಕ್ಕೂ ಹೆಚ್ಚು ಅಂಕ (ಶೇ.2) ಏರಿಕೆ ಕಂಡರೆ, ಎಸ್​ ಆ್ಯಂಡ್​ ಪಿ 500 ಹಾಗೂ ನಾಸ್ಡಾಕ್​ 100 ಸೂಚ್ಯಂಕಗಳು ಶೇ.2.5ರಷ್ಟು ಜಿಗಿದಿವೆ. ಅಮೆಜಾನ್​, ಮೈಕ್ರೊಸಾಫ್ಟ್​, ಆ್ಯಪಲ್​ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. ಇದೇ ವೇಳೆ ಟ್ರಂಪ್​ ಆಪ್ತ ಎಲಾನ್​ ಮಸ್ಕ್​ ಮಾಲೀಕತ್ವದ ಕಂಪನಿಗಳ ಷೇರು ಇಳಿಕೆ ಕಂಡಿದೆ.

ನಾಲ್ಕು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು

ದಶಕಗಳಿಂದ ರಿಪಬ್ಲಿಕನ್ನರ ಭದ್ರಕೋಟೆಯಾಗಿದ್ದ ನಾಲ್ಕು ಪ್ರಮುಖ ರಾಜ್ಯಗಳ ಗವರ್ನರ್​ ಚುನಾವಣೆಗಳಲ್ಲಿ ಡೆಮಾಕ್ರಟಿಕ್​ ಅಭ್ಯರ್ಥಿಗಳು ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಓಹಿಯೋ ಮತ್ತು ಅಯೋವಾ ರಾಜ್ಯದಲ್ಲಿ 20 ವರ್ಷಗಳ ರಿಪಬ್ಲಿಕನ್​ ಪ್ರಾಬಲ್ಯ ಅಂತ್ಯಗೊಂಡಿದೆ. ಓಹಿಯೋದಲ್ಲಿ ಆಮಿ ಆಕ್ಟನ್​ ಜಯಗಳಿಸಿ ರಾಜ್ಯದ ಮೊದಲ ಮಹಿಳಾ ಗವರ್ನರ್​ ಆಗಿದ್ದಾರೆ. ಅಯೋವಾದಲ್ಲಿ ರಾಬ್​ ಸ್ಯಾಂಡ್​ ಜಯಗಳಿಸಿದ್ದಾರೆ. ಜಾರ್ಜಿಯಾದಲ್ಲಿ 28 ವರ್ಷಗಳ ಬಳಿಕ ರಿಪಬ್ಲಿಕ್​ ಪಕ್ಷ ಸೋಲನುಭವಿಸಿದೆ. ಡೆಮಾಕ್ರಟಿಕ್​ ಪಕ್ಷದ ಕೀಶಾ ಲ್ಯಾನ್ಸ್​ ಬಾಟಮ್ಸ್​ ಜಯಗಳಿಸುವ ಮೂಲಕ ಅಮೆರಿಕದ ಇತಿಹಾಸದಲ್ಲೇ ಗವರ್ನರ್​ ಹುದ್ದೆಗೇರಿದ ಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಟೆಕ್ಸಾಸ್​ನಲ್ಲಿ 36 ವರ್ಷಗಳ ಬಳಿಕ ರಿಪಬ್ಲಿಕನ್​ ಆಡಳಿತ ಅಂತ್ಯಗೊಂಡಿದ್ದು, ಜೀನಾ ಹಿನೊಜೊಸಾ ಹಾಲಿ ಗವರ್ನರ್​ ಗ್ರೆಗ್​ ಅಬಾಟ್​ ರನ್ನು ಸೋಲಿಸಿದ್ದಾರೆ.

ಮಸ್ಕ್​ 4,700 ಕೋಟಿ ವೆಚ್ಚ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷದ ಪರವಾಗಿ ಪ್ರಚಾರ ನಡೆಸಲು ಉದ್ಯಮಿ ಎಲಾನ್​ ಮಸ್ಕ್​ ಸುಮಾರು 4,700 ಕೋಟಿ ರೂ.ಗೂ ಅಧಿಕ ಹಣ ವೆಚ್ಚ ಮಾಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಆದರೆ, ಡೆಮಾಕ್ರಾಟ್​ಗಳು ಸಂಸತ್ತಿನ ಎರಡೂ ಸದನಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಮಸ್ಕ್​ಗೆ ಭಾರಿ ಹಿನ್ನಡೆ ತಂದಿದೆ. ಅವರ ಒಡೆತನದ ಟೆಸ್ಲಾ, ಸ್ಪೇಸ್​ಎಕ್ಸ್​ ಸೇರಿದಂತೆ ವಿವಿಧ ಕಂಪನಿಗಳ ಮೇಲೆ ತನಿಖೆ ಮತ್ತು ನಿಯಂತ್ರಣದ ಕ್ರಮಗಳ ಭೀತಿ ಎದುರಾಗಿದೆ. ರಿಪಬ್ಲಿಕನ್​ ಅಭ್ಯರ್ಥಿಗಳ ಗೆಲುವಿಗಾಗಿ ಮಸ್ಕ್​ 47 ಕೋಟಿ ಡಾಲರ್​ ವ್ಯಯಿಸಿದ್ದರು. ಟೆಕ್ಸಾಸ್​ನಲ್ಲಿ ರಿಪಬ್ಲಿಕನ್​ ಹಿಡಿತ ಉಳಿಸಿಕೊಳ್ಳಲೂ ಭಾರಿ ಹಣ ಹೂಡಿದ್ದರು. ಆದರೆ ಅದು ಫಲ ನೀಡಿಲ್ಲ. ಮಸ್ಕ್​ ಕಂಪನಿಗಳಿಗೆ ಸರ್ಕಾರ ನೀಡುತ್ತಿರುವ ಗುತ್ತಿಗೆ, ಸಬ್ಸಿಡಿ, ತೆರಿಗೆ ವಿನಾಯಿತಿ ಹಾಗೂ ಸರ್ಕಾರಿ ದತ್ತಾಂಶ ಕೇಂದ್ರಗಳ ಯೋಜನೆಗಳ ಕುರಿತು ಡೆಮಾಕ್ರಾಟ್​ಗಳು ತನಿಖೆ ನಡೆಸುವ ಸಾಧ್ಯತೆಯಿದೆ.

ಒಟ್ಟಾಗಿ ಕೆಲಸ ಮಾಡೋಣ

ಭರ್ಜರಿ ಜಯ ಸಾಧಿಸಿದ ಡೆಮಾಕ್ರಟಿಕ್​ ಪಕ್ಷವನ್ನು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಭಿನಂದಿಸಿದ್ದು, ಅವರು ಉತ್ತಮ ಕೆಲಸ ಮಾಡಿದ್ದಾರೆ. ದೇಶದ ಒಳಿತಿಗಾಗಿ ವಿರೋಧ ಪಕ್ಷದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇನೆ. ನಾನು ಚುನಾವಣಾ ಕಣದಲ್ಲಿ ಇರಲಿಲ್ಲ, ಒಂದು ವೇಳೆ ಇದ್ದಿದ್ದರೆ ಭಾರಿ ಬಹುಮತದಿಂದ ಗೆಲ್ಲುತ್ತಿದ್ದೆ ಎಂದು ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.