"ಯುದ್ಧಭೂಮಿಯಲ್ಲೂ ಸೋತರು, ಚುನಾವಣೆಯಲ್ಲೂ ಮುಗ್ಗರಿಸಿದರು: ನಮ್ಮ ಜೊತೆ ನಕ್ರಾ ಬೇಡ; ಟ್ರಂಪ್​ಗೆ ಇರಾನ್​ ಭದ್ರತಾ ಕಾರ್ಯದರ್ಶಿ ಲೇವಡಿ! Mohsen Rezaei

US President Donald Trump and Iranian Security Secretary Mohsen Rezaei
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್​ ಭದ್ರತಾ ಕಾರ್ಯದರ್ಶಿ ಮೊಹ್ಸೆನ್ ರೆಜೈ
Published on: 

ಟೆಹ್ರಾನ್​​: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತಿದ್ದಂತೆ, ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜೈ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಟ್ರಂಪ್‌ಗೆ ಯುದ್ಧಭೂಮಿ ಮತ್ತು ವಾಷಿಂಗ್ಟನ್ ಎರಡರಲ್ಲೂ ಸೋಲಾಗಿದೆ” ಎಂದು ಹೇಳುವ ಮೂಲಕ ರೆಜೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಚರ್ಚೆಗೆ ಕಿಡಿ ಹೊತ್ತಿಸಿದ್ದಾರೆ.

ಅಮೆರಿಕ ಸಂಸತ್ತಿನ ಎರಡೂ ಸದನಗಳಲ್ಲಿ ಡೆಮಾಕ್ರಟ್‌ಗಳು ಭರ್ಜರಿ ಜಯ ದಾಖಲಿಸಿ ಹಿಡಿತ ಸಾಧಿಸಿದ ಬೆನ್ನಲ್ಲೇ, ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜೈ ತಮ್ಮ ಟ್ವಿಟರ್​ನಲ್ಲಿ ಟ್ರಂಪ್​ ವಿರುದ್ಧ ಕಿಡಿಕಾರಿದ್ದಾರೆ.

"ಮನೆ ಬಾಗಿಲಿಗೇ ಬಂತು ಯುದ್ಧದ ಬಿಸಿ!"

ರೆಜೈ ತಮ್ಮ ಪೋಸ್ಟ್‌ನಲ್ಲಿ, "ನಮ್ಮ ಜತೆ ಯುದ್ಧಕ್ಕೆ ಬಂದಿದ್ದ ಟ್ರಂಪ್​ಗೆ ಇರಾನಿಯನ್ನರು ಯುದ್ಧಭೂಮಿಯಲ್ಲಿ ಹಾಗೂ ಹೊರ್ಮುಜ್​ ಜಲಸಂಧಿಯಲ್ಲಿ ಸೋಲುಣಿಸಿದ್ದಾರೆ. ಅತ್ತ ವಾಷಿಂಗ್ಟನ್​ ರಾಜಕೀಯದಲ್ಲೂ ಅವರಿಗೆ ಹಿನ್ನಡೆಯಾಗಿದೆ. ಆದರೆ ನಮ್ಮೊಂದಿಗಿನ ಯುದ್ಧದ ದುಬಾರಿ ಬಿಲ್​ ಕಟ್ಟಿ ಕೈಸುಟ್ಟುಕೊಂಡಿದ್ದು ಮಾತ್ರ ಅಮೆರಿಕದ ಸಾಮಾನ್ಯ ಜನರು" ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೇ ನಿಲ್ಲದ ಅವರು, "ಇರಾನ್ ವಿರುದ್ಧ ಯುದ್ಧಕ್ಕೆ ಇಳಿಯುವ ಯಾವುದೇ ದೇಶವಾಗಲಿ, ಕೇವಲ ರಣರಂಗದಲ್ಲಷ್ಟೇ ಅಲ್ಲ, ತಮ್ಮ ಸ್ವಂತ ಮನೆ ಬಾಗಿಲಿಗೆ ಬಂದು ಮುಟ್ಟುವ ನಷ್ಟಕ್ಕೂ ಬೆಲೆ ತೆರಬೇಕಾಗುತ್ತದೆ" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಸೋಲಿಗೆ ಕಾರಣವಾಯ್ತಾ ಇರಾನ್ ಸಂಘರ್ಷ?

ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ನರ ಹಿನ್ನಡೆಗೆ ಇರಾನ್ ಯುದ್ಧವೇ ಪ್ರಮುಖ ಕಾರಣ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಕಳೆದ ಎಂಟು ತಿಂಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ವಿಶ್ವದ ಪ್ರಮುಖ ತೈಲ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಹೇರಿದ ನಿರ್ಬಂಧಗಳು ಇಡೀ ಜಾಗತಿಕ ಮಾರುಕಟ್ಟೆಯನ್ನು ತಲ್ಲಳಗೊಳಿಸಿದ್ದವು.

ಇದರ ನೇರ ಪರಿಣಾಮ ಅಮೆರಿಕದ ಜನಸಾಮಾನ್ಯರ ಮೇಲೆ ಬಿತ್ತು. ಪೆಟ್ರೋಲ್-ಡೀಸೆಲ್ ದರಗಳು ಗಗನಕ್ಕೇರಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜೀವನ ವೆಚ್ಚ ವಿಪರೀತ ಹೆಚ್ಚಾಯಿತು. ಚುನಾವಣೆಯಲ್ಲಿ ಮತದಾರರು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ವಿರುದ್ಧ ಮತ ಚಲಾಯಿಸಲು ಈ ಹಣದುಬ್ಬರವೇ ಮುಖ್ಯ ಅಸ್ತ್ರವಾಯಿತು ಎನ್ನಲಾಗುತ್ತಿದೆ.

Also Read
ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಜೀವ ಬೆದರಿಕೆ: ಆಯುಷ್ಮಾನ್-ತುಷಾರ್‌ಗೆ ಫ್ರಾಂಕ್​ ಮಾಡಲು ಹೋಗಿ ಸಿಕ್ಕಿಬಿದ್ದ "ಸಿಲಿಕಾನ್ ಸಿಟಿ" ಇಂಜಿನಿಯರ್! Lawrence Bishnoi Gang
US President Donald Trump and Iranian Security Secretary Mohsen Rezaei

ಸೋಲನ್ನು ಒಪ್ಪಿಕೊಂಡ ಟ್ರಂಪ್: ಆದರೂ ನಿಲುವಿಗೆ ಬದ್ಧ!

ಸ್ವತಃ ಡೊನಾಲ್ಡ್ ಟ್ರಂಪ್ ಕೂಡ ಈ ವಾಸ್ತವವನ್ನು ಮುಚ್ಚಿಟ್ಟಿಲ್ಲ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದಂತೆ, 'ಇರಾನ್ ಯುದ್ಧವೇ ಪಕ್ಷದ ಸೋಲಿಗೆ ಕಾರಣವಾಯಿತೇ?' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಗಗನಕ್ಕೇರಿದ ತೈಲ ಬೆಲೆಗಳನ್ನು ಉಲ್ಲೇಖಿಸಿ, "ಆ ಮಾತು ಬಹುತೇಕ ನಿಜ" ಎಂದು ಒಪ್ಪಿಕೊಂಡಿದ್ದಾರೆ.

"ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ತಯಾರಿಸಬಾರದು ಎಂಬುದು ನಮ್ಮ ಗುರಿಯಾಗಿತ್ತು. ನಾನು ಮತ್ತೊಮ್ಮೆ ಇರಾನ್​ ಕುರಿತು ನಿರ್ಧಾರ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾದರೂ, ಇದೇ ನಿರ್ಧಾರವನ್ನು ಕೈಗೆತ್ತಿಕೊಳ್ಳುತ್ತೇನೆಂದು ಎಂದು ಟ್ರಂಪ್ ತಮ್ಮ ಸೇನಾ ಕಾರ್ಯಾಚರಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ, (ಏಜೆನ್ಸೀಸ್​).