ಅಮೆರಿಕಕ್ಕೆ ಡೆಡ್ಲಿ ವಾರ್ನಿಂಗ್: ನೆತನ್ಯಾಹು ಭ್ರಮೆಗೆ ಬಲಿಯಾಗಬೇಡಿ! ಟ್ರಂಪ್ ವಿರುದ್ಧ ಗುಡುಗಿದ ಇರಾನ್ ಸ್ಪೀಕರ್! Ghalibaf Warning

ಅಮೆರಿಕಕ್ಕೆ ಡೆಡ್ಲಿ ವಾರ್ನಿಂಗ್: ನೆತನ್ಯಾಹು ಭ್ರಮೆಗೆ ಬಲಿಯಾಗಬೇಡಿ! ಟ್ರಂಪ್ ವಿರುದ್ಧ ಗುಡುಗಿದ ಇರಾನ್ ಸ್ಪೀಕರ್!
ಅಮೆರಿಕಕ್ಕೆ ಡೆಡ್ಲಿ ವಾರ್ನಿಂಗ್: ನೆತನ್ಯಾಹು ಭ್ರಮೆಗೆ ಬಲಿಯಾಗಬೇಡಿ! ಟ್ರಂಪ್ ವಿರುದ್ಧ ಗುಡುಗಿದ ಇರಾನ್ ಸ್ಪೀಕರ್!
Published on
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಜಾಗತಿಕ ಸಂಘರ್ಷವಾಗಿ ಬದಲಾಗುವ ಲಕ್ಷಣಗಳು ಕಾಣುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರಾಚ್ಯಕ್ಕೆ ತನ್ನ ಗಣ್ಯ 82ನೇ ಏರ್‌ಬೋರ್ನ್ ಡಿವಿಷನ್ ಸೈನಿಕರನ್ನು ರವಾನಿಸುತ್ತಿರುವುದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್(Ghalibaf Warning) ಅಮೆರಿಕಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

82ನೇ ಏರ್‌ಬೋರ್ನ್ ಡಿವಿಷನ್ ಎಂಟ್ರಿ: ಇರಾನ್ ಕೆಂಗಣ್ಣು

ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸುವ 82ನೇ ಏರ್‌ಬೋರ್ನ್ ಡಿವಿಷನ್‌ನ 1,000ಕ್ಕೂ ಹೆಚ್ಚು ಸೈನಿಕರು ಈಗ ಯುದ್ಧ ಭೂಮಿಗೆ ಇಳಿಯುತ್ತಿದ್ದಾರೆ. ಇವರು ಶತ್ರು ಪ್ರದೇಶಗಳಿಗೆ ನುಗ್ಗಿ ವಿಮಾನ ನಿಲ್ದಾಣ ಮತ್ತು ಆಯಕಟ್ಟಿನ ಜಾಗಗಳನ್ನು ವಶಪಡಿಸಿಕೊಳ್ಳುವಲ್ಲಿ ಪರಿಣಿತರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗಲಿಬಾಫ್, ನಿಮ್ಮ ಸೇನಾ ಜಮಾವಣೆಯನ್ನು ನಾವು ಪ್ರತಿಕ್ಷಣವೂ ಗಮನಿಸುತ್ತಿದ್ದೇವೆ. ನೆತನ್ಯಾಹು ಅವರ ಭ್ರಮೆಗೆ ನಿಮ್ಮ ಸೈನಿಕರು ಬಲಿಯಾಗಲಿದ್ದಾರೆ, ನಮ್ಮ ಭೂಮಿಯನ್ನು ರಕ್ಷಿಸುವ ನಮ್ಮ ಸಂಕಲ್ಪವನ್ನು ಪರೀಕ್ಷಿಸಬೇಡಿ ಎಂದು ಗುಡುಗಿದ್ದಾರೆ.
ನಿಮ್ಮ ಜನರಲ್‌ಗಳು ಮುರಿದಿದ್ದನ್ನು ಸೈನಿಕರು ಸರಿಪಡಿಸಲಾರರು!
ಗಲಿಬಾಫ್ ಅವರ ಈ ಒಂದು ವಾಕ್ಯ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಮೆರಿಕ ಮತ್ತು ಇಸ್ರೇಲ್‌ನ ಉನ್ನತ ಸೇನಾ ನಾಯಕರು ಇರಾನ್‌ನೊಂದಿಗೆ ಸಂಘರ್ಷಕ್ಕಿಳಿದು ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಈಗ ಕೇವಲ ಸಾವಿರಾರು ಸೈನಿಕರನ್ನು ಕಳುಹಿಸುವುದರಿಂದ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲ, ಬದಲಿಗೆ ಸಾವು-ನೋವು ಹೆಚ್ಚಾಗಲಿದೆ ಎಂಬುದು ಇರಾನ್‌ನ ನೇರ ಎಚ್ಚರಿಕೆಯಾಗಿದೆ.

ಟ್ರಂಪ್ ಸಂಧಾನದ ನಾಟಕಕ್ಕೆ ಇರಾನ್ ಎಳ್ಳುನೀರು!

ಒಂದೆಡೆ ಶ್ವೇತಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾವು ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ, ಅವರು ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಸಂಧಾನದ ಉಸ್ತುವಾರಿಯನ್ನು ಜೇರೆಡ್ ಕುಶ್ನರ್, ಮಾರ್ಕೊ ರೂಬಿಯೊ ಮತ್ತು ಜೆಡಿ ವ್ಯಾನ್ಸ್ ಅವರಿಗೆ ವಹಿಸಲಾಗಿದೆ ಎಂದಿದ್ದಾರೆ.
ಆದರೆ, ಇರಾನ್ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಕಾರಿ ಈ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಅಲ್ಲದೆ, ನಿಮ್ಮ ಒಳಗಿನ ಕಿತ್ತಾಟ ಎಲ್ಲಿಗೆ ತಲುಪಿದೆಯೆಂದರೆ, ನೀವು ನಿಮ್ಮಷ್ಟಕ್ಕೆ ನೀವೇ ಮಾತುಕತೆ ನಡೆಸುತ್ತಿದ್ದೀರಿ. ನಮ್ಮಂತಹವರು ನಿಮ್ಮಂತಹವರ ಜೊತೆ ಎಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಭಿನ್ನಮತ?

ಇರಾನ್‌ನ ಈ ಕಠಿಣ ನಿಲುವು ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಇರಾನ್ ಆಡಳಿತವನ್ನು ಬುಡಮೇಲು ಮಾಡಲು ಬಯಸುತ್ತಿದ್ದರೆ, ಟ್ರಂಪ್ ಅವರು ಶಾಂತಿ ಒಪ್ಪಂದದ ಮೂಲಕ ಚುನಾವಣೆ ಗೆಲ್ಲುವ ಹಾದಿ ಹುಡುಕುತ್ತಿದ್ದಾರೆ. ಆದರೆ ಇರಾನ್ ಮಾತ್ರ ಯಾವುದೇ ಒಪ್ಪಂದವಿಲ್ಲ, ಕೇವಲ ಸಮರ ಮಾತ್ರ ಎನ್ನುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net