ಮಧ್ಯಪ್ರಾಚ್ಯದಲ್ಲಿ ಮಹಾಸಮರದ ಕಾರ್ಮೋಡ: "ನಮ್ಮ ಹೊಡೆತಕ್ಕೆ ಗಡಿಗಳಿಲ್ಲ"; ವಿಶ್ವಕ್ಕೆ ನಡುಕ ತಂದ ಖಮೇನಿ ಹೇಳಿಕೆ! Mojtaba Khamenei

Iran's Supreme Leader Mojtaba Khamenei
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ
Published on: 

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಮಹಾಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ವೈರತ್ವ ಈಗ ತುತ್ತತುದಿಗೆ ತಲುಪಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ನೀಡಿರುವ ಒಂದೇ ಒಂದು ಆದೇಶ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಯಾವುದೇ ಕ್ಷಣದಲ್ಲಾದರೂ ಯುದ್ಧ ಎದುರಾಗಬಹುದು, ಸಣ್ಣ ತಪ್ಪಿಗೂ ಶತ್ರುಗಳಿಗೆ ನಡುಕ ಹುಟ್ಟಿಸುವಂತೆ ಹೊಡೆಯಿರಿ ಎಂದು ಖಮೇನಿ ತಮ್ಮ ಸೇನೆಗೆ ನಿರ್ದೇಶನ ನೀಡಿದ್ದಾರೆ. ಅಮೆರಿಕ ಅಥವಾ ಇಸ್ರೇಲ್ ಏನಾದರೂ ಇನ್ನೊಂದು ಸಾಹಸಕ್ಕೆ ಕೈಹಾಕಿದರೆ, ಮುಂದೆ ನಡೆಯುವ ರಣಾಂಗಣದ ನಿಯಮಗಳು ಮತ್ತು ಷರತ್ತುಗಳನ್ನು ನಾವೇ ನಿರ್ಧರಿಸುತ್ತೇವೆ ಎಂದು ಟೆಹ್ರಾನ್ ಗುಡುಗಿದೆ.

ಖಮೇನಿ ಕೊಟ್ಟ ಮಹತ್ವದ ಸೂಚನೆಗಳೇನು?

ವರದಿಗಳ ಪ್ರಕಾರ, ಖಮೇನಿ ತಮ್ಮ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ಎಚ್ಚರಿಕೆಯನ್ನಷ್ಟೇ ನೀಡಿಲ್ಲ; ನೇರವಾಗಿ ಯುದ್ಧದ ಸಿದ್ಧತೆಗೆ ಇಳಿಯಲು ಹೇಳಿದ್ದಾರೆ.

ಗುರಿಗಳ ಪಟ್ಟಿ ನವೀಕರಣ: ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ಮಿಲಿಟರಿ ನೆಲೆಗಳು, ಪ್ರಮುಖ ಹೂಡಿಕೆಗಳು ಮತ್ತು ರಹಸ್ಯ ತಾಣಗಳನ್ನು ಗುರುತಿಸಿ ಹೊಸ ‘ಹಿಟ್ ಲಿಸ್ಟ್’ ಸಿದ್ಧಪಡಿಸಲು ಆದೇಶಿಸಿದ್ದಾರೆ.

ಶಸ್ತ್ರಾಸ್ತ್ರ ಉತ್ಪಾದನೆಗೆ ವೇಗ: ದೇಶೀಯವಾಗಿ ಕ್ಷಿಪಣಿಗಳು, ಅತ್ಯಾಧುನಿಕ ಡ್ರೋನ್‌ಗಳು ಮತ್ತು ಯುದ್ಧಸಾಮಗ್ರಿಗಳ ತಯಾರಿಕೆಯನ್ನು ದುಪ್ಪಟ್ಟುಗೊಳಿಸಲು ಫ್ಯಾಕ್ಟರಿಗಳಿಗೆ ಸೂಚಿಸಲಾಗಿದೆ.

ಗುಪ್ತಚರ ಇಲಾಖೆ ಅಲರ್ಟ್: ಶತ್ರುಗಳ ಪ್ರತಿಯೊಂದು ಚಲನವಲನದ ಮೇಲೂ ಕಣ್ಣಿಡಲು ಮಿಲಿಟರಿ ಇಂಟೆಲಿಜೆನ್ಸ್‌ಗೆ ಹೈ-ಅಲರ್ಟ್ ಘೋಷಿಸಲಾಗಿದೆ.

ವಾಯು ರಕ್ಷಣಾ ವ್ಯವಸ್ಥೆ ಸನ್ನದ್ಧ: ಯಾವುದೇ ಕ್ಷಣದಲ್ಲಿ ಕ್ಷಿಪಣಿ ದಾಳಿ ನಡೆದರೂ ಕ್ಷಣಾರ್ಧದಲ್ಲಿ ಧ್ವಂಸಗೊಳಿಸಲು ವಾಯು ರಕ್ಷಣಾ ಕವಚಗಳನ್ನು ರೆಡಿಯಾಗಿಡಲಾಗಿದೆ.

"ನಮ್ಮ ಹೊಡೆತಕ್ಕೆ ಗಡಿಗಳಿಲ್ಲ": ಇರಾನ್‌ನ ಹೊಸ ಪ್ಲಾನ್

ಈ ಬಾರಿ ಇರಾನ್ ನೀಡಿದ ಎಚ್ಚರಿಕೆಯಲ್ಲಿ ಒಂದು ಮಹತ್ವದ ಅಂಶ ಅಡಗಿದೆ. "ನಮ್ಮ ಪ್ರತೀಕಾರದ ದಾಳಿಗೆ ಯಾವುದೇ ಭೌಗೋಳಿಕ ಮಿತಿಗಳಿಲ್ಲ" ಎಂದು ಖಮೇನಿ ಸಾರಿದ್ದಾರೆ. ಇದರರ್ಥ, ಸಂಘರ್ಷ ಶುರುವಾದರೆ ಅದು ಕೇವಲ ಇರಾನ್ ಅಥವಾ ಇಸ್ರೇಲ್ ಗಡಿಗೆ ಮಾತ್ರ ಸೀಮಿತವಾಗಿರಲ್ಲ; ಇಡೀ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳೂ ಧ್ವಂಸವಾಗುವ ಅಪಾಯವಿದೆ.

"ಯುದ್ಧ ಯಾವಾಗ ಶುರುವಾಗಬೇಕು, ಯಾವಾಗ ಮುಗಿಯಬೇಕು ಮತ್ತು ಯಾವ ಷರತ್ತುಗಳ ಮೇಲೆ ಅಂತ್ಯವಾಗಬೇಕು ಎಂಬುದನ್ನು ಶತ್ರುಗಳಲ್ಲ, ನಾವೇ ತೀರ್ಮಾನಿಸುತ್ತೇವೆ" ಎಂದು ಇರಾನ್ ನಾಯಕತ್ವ ಜಗತ್ತಿಗೆ ನೇರ ಸಂದೇಶ ರವಾನಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಕದನ ಕಹಳೆ!

ಜಗತ್ತಿನ ಮೂರನೇ ಒಂದು ಭಾಗದಷ್ಟು ತೈಲ ಸಾಗಣೆಯಾಗುವ ‘ಹೊರ್ಮುಜ್ ಜಲಸಂಧಿ’ ಬಳಿ ಈಗಾಗಲೇ ಇರಾನ್ ಮತ್ತು ಅಮೆರಿಕ ನೌಕಾಪಡೆಗಳು ಮುಖಾಮುಖಿಯಾಗಿವೆ. ಯಾವುದೇ ಸಣ್ಣ ಕಿಡಿಯೂ ಇಡೀ ಕೊಲ್ಲಿ ಪ್ರದೇಶವನ್ನು ಹೊತ್ತಿ ಉರಿಯುವಂತೆ ಮಾಡುವ ಪರಿಸ್ಥಿತಿ ಅಲ್ಲಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಹಡಗಿನ ಮೇಲೆ ದಾಳಿ ನಡೆದರೂ ಜಾಗತಿಕ ತೈಲ ಬೆಲೆ ಗಗನಕ್ಕೇರುವುದು ಗ್ಯಾರಂಟಿ.

ಇನ್ನೊಂದೆಡೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಂತರ ಚುನಾವಣೆಗಳ ಬಳಿಕ ಇರಾನ್ ಮೇಲೆ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸುವ ಯೋಜನೆಗಳ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಈ ಹೇಳಿಕೆಗಳ ಬೆನ್ನಲ್ಲೇ ಇರಾನ್ ಮುನ್ನೆಚ್ಚರಿಕೆಯಾಗಿ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ.

Also Read
ಹಿರಿಯ ನಟ 'ದತ್ತಣ್ಣ' ಗೆ ದೆಹಲಿ ಕರ್ನಾಟಕ ಸಂಘದ ಪ್ರತಿಷ್ಠಿತ ‘ಕನ್ನಡ ಭಾರತೀ ರಂಗ ಪ್ರಶಸ್ತಿ’ ಪ್ರಕಟ! Dattanna
Iran's Supreme Leader Mojtaba Khamenei

ಜಗತ್ತಿಗೆ ಕಾದಿದೆಯಾ ಮಹಾ ಆಪತ್ತು?

ಇರಾನ್‌ನ ಈ ಆಕ್ರಮಣಕಾರಿ ನಿಲುವು ಇಸ್ರೇಲ್ ಮತ್ತು ವಾಷಿಂಗ್ಟನ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಬರೀ ಮಾತುಗಳಲ್ಲ, ಬದಲಿಗೆ ಸಮರ ಸನ್ನದ್ಧತೆಯ ಭಾಗ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಅಮೆರಿಕ ಅಥವಾ ಇಸ್ರೇಲ್ ಇನ್ನೊಂದು ದಾಳಿ ನಡೆಸಿದರೆ, ಪಶ್ಚಿಮ ಏಷ್ಯಾದಲ್ಲಿ ಹೊತ್ತಿಕೊಳ್ಳುವ ಬೆಂಕಿ ಇಡೀ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡುವುದರಲ್ಲಿ ಅನುಮಾನವಿಲ್ಲ. ಇರಾನ್ ಪಡೆಗಳು ಈಗ ಬಿಲ್ಲು ಹೂಡಿ ನಿಂತಿದ್ದು, ಮುಂದಿನ ಹೆಜ್ಜೆ ಯಾರದ್ದು ಎಂಬ ಕುತೂಹಲ ಇಡೀ ವಿಶ್ವವನ್ನು ಕಾಡುತ್ತಿದೆ, (ಏಜೆನ್ಸೀಸ್​).