ಮುಜ್ತಬಾ ಖಮೇನಿ ಪರ ನಿಂತ 'ಡೇಂಜರಸ್' ಕಿಮ್! ಇರಾನ್ ಯುದ್ಧದ ಮಧ್ಯೆ ಅಣ್ವಸ್ತ್ರ ಕ್ಷಿಪಣಿ ಉಡಾಯಿಸಿ ಕಿಚ್ಚು ಹಚ್ಚಿದ ಉತ್ತರ ಕೊರಿಯಾ! Kim Jong Un

ಮುಜ್ತಬಾ ಖಮೇನಿ ಪರ ನಿಂತ 'ಡೇಂಜರಸ್' ಕಿಮ್! ಇರಾನ್ ಯುದ್ಧದ ಮಧ್ಯೆ ಅಣ್ವಸ್ತ್ರ ಕ್ಷಿಪಣಿ ಉಡಾಯಿಸಿ ಕಿಚ್ಚು ಹಚ್ಚಿದ ಉತ್ತರ ಕೊರಿಯಾ! ಅಸಲಿ ಆಟ ಈಗ ಶುರು..?
ಮುಜ್ತಬಾ ಖಮೇನಿ ಪರ ನಿಂತ 'ಡೇಂಜರಸ್' ಕಿಮ್! ಇರಾನ್ ಯುದ್ಧದ ಮಧ್ಯೆ ಅಣ್ವಸ್ತ್ರ ಕ್ಷಿಪಣಿ ಉಡಾಯಿಸಿ ಕಿಚ್ಚು ಹಚ್ಚಿದ ಉತ್ತರ ಕೊರಿಯಾ! ಅಸಲಿ ಆಟ ಈಗ ಶುರು..?
Published on
ಪ್ಯೊಂಗ್ಯಾಂಗ್: ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಅಧಿಕಾರ ವಹಿಸಿಕೊಂಡ ಮುಜ್ತಬಾ ಖಮೇನಿ ಅವರಿಗೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್(Kim Jong Un) ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕಾನೂನುಬಾಹಿರ ಎಂದು ಕರೆದಿರುವ ಉತ್ತರ ಕೊರಿಯಾ, ಯುದ್ಧದ ನಡುವೆಯೇ ತನ್ನ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಯಿಂದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕಕ್ಕೆ ನೇರ ಸವಾಲು ಹಾಕಿದೆ.

ಕ್ಷಿಪಣಿ ಉಡಾವಣೆಯ ಮೂಲಕ ಕಿಮ್ ಜಾಂಗ್ ಉನ್ ಕಿಚ್ಚು!

ಇರಾನ್ ವಿಷಯದಲ್ಲಿ ಕೇವಲ ಹೇಳಿಕೆ ನೀಡಿ ಸುಮ್ಮನಾಗದ ಕಿಮ್ ಜಾಂಗ್ ಉನ್, ಪ್ರಾಯೋಗಿಕವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಉತ್ತರ ಕೊರಿಯಾದ ಅತಿದೊಡ್ಡ ನೌಕಾ ವಿಧ್ವಂಸಕ ನೌಕೆ ಚೋ ಹ್ಯೋನ್​ನಿಂದ ವ್ಯೂಹಾತ್ಮಕ ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯನ್ನು ಕಿಮ್ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.
ನಮ್ಮ ನೌಕಾಪಡೆಯನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವುದು ಮತ್ತು ಪ್ರಬಲವಾದ ಪರಮಾಣು ಯುದ್ಧ ಪ್ರತಿಬಂಧಕ ಶಕ್ತಿಯನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದೆ ಎಂದು ಕಿಮ್ ಹೇಳಿದ್ದಾರೆ. ಇದು ಅಮೆರಿಕವು ಇರಾನ್ ಮೇಲೆ ನಡೆಸುತ್ತಿರುವ ದಾಳಿಗೆ ನೀಡಿದ ಪರೋಕ್ಷ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇರಾನ್‌ನ ಹೊಸ ನಾಯಕತ್ವ: ಯಾರ ಬೆಂಬಲ? ಯಾರ ವಿರೋಧ..?

ಇರಾನ್‌ನ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಮುಜ್ತಬಾ ಖಮೇನಿ ಅವರನ್ನು ನೂತನ ಪರಮೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಜಗತ್ತು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ.

ಬೆಂಬಲಿಸಿದ ರಾಷ್ಟ್ರಗಳು

ರಷ್ಯಾ: ವ್ಲಾಡಿಮಿರ್ ಪುಟಿನ್ ಅವರು ಇರಾನ್‌ಗೆ ಅಚಲ ಬೆಂಬಲ ಘೋಷಿಸಿದ್ದು, ರಷ್ಯಾವನ್ನು ವಿಶ್ವಾಸಾರ್ಹ ಪಾಲುದಾರ ಎಂದು ಕರೆದಿದ್ದಾರೆ.
ಚೀನಾ: ಇರಾನ್‌ನ ಸಂವಿಧಾನದಂತೆ ಈ ನೇಮಕ ನಡೆದಿದೆ ಎಂದು ಹೇಳಿರುವ ಚೀನಾ, ಅಮೆರಿಕದ ಹಸ್ತಕ್ಷೇಪವನ್ನು ಖಂಡಿಸಿದೆ.
ಉತ್ತರ ಕೊರಿಯಾ: ಕಿಮ್ ಜಾಂಗ್ ಉನ್ ಸರ್ಕಾರವು ಇರಾನ್ ನಾಯಕತ್ವವನ್ನು ಸಂಪೂರ್ಣವಾಗಿ ಅನುಮೋದಿಸಿದೆ ಮತ್ತು ಅಮೆರಿಕ-ಇಸ್ರೇಲ್ ದಾಳಿಯನ್ನು ದರೋಡೆಕೋರರ ನಡವಳಿಕೆ ಎಂದು ಟೀಕಿಸಿದೆ.
ಓಮನ್ ಮತ್ತು ಇರಾಕ್: ಓಮನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಮತ್ತು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಮುಜ್ತಬಾ ಖಮೇನಿ ಅವರಿಗೆ ಅಧಿಕೃತ ಅಭಿನಂದನೆ ಸಲ್ಲಿಸಿದ್ದಾರೆ.
ಯೆಮನ್ (ಹೌತಿಗಳು): ಇಸ್ಲಾಮಿಕ್ ಕ್ರಾಂತಿಯ ಜಯ ಮತ್ತು ಶತ್ರುಗಳಿಗೆ ಬಿದ್ದ ದೊಡ್ಡ ಏಟು ಎಂದು ಹೌತಿ ಬಂಡುಕೋರರು ಇದನ್ನು ಸಂಭ್ರಮಿಸಿದ್ದಾರೆ.

ವಿರೋಧಿಸಿದ ರಾಷ್ಟ್ರಗಳು

ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಜ್ತಬಾ ಅವರನ್ನು ಲೈಟ್‌ವೈಟ್ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ನನ್ನ ಬಳಿಯೇ ಇರಾನ್ ಆಳಲು ಬೇರೊಬ್ಬ ಅಭ್ಯರ್ಥಿ ಇದ್ದಾರೆ ಎಂದು ಟ್ರಂಪ್​ ಹೇಳಿದ್ದಾರೆ.
ಇಸ್ರೇಲ್: ಇಸ್ರೇಲ್ ವಿದೇಶಾಂಗ ಸಚಿವಾಲಯವು ಮುಜ್ತಬಾ ಅವರನ್ನು ಮತ್ತೊಬ್ಬ ಸರ್ವಾಧಿಕಾರಿ ಎಂದು ಕರೆದಿದೆ. ಅಷ್ಟೇ ಅಲ್ಲದೆ, ಇಸ್ರೇಲಿ ಸೇನೆಯು ಅವರನ್ನು ಕೊಲ್ಲುವುದಾಗಿ ಈಗಾಗಲೇ ಬೆದರಿಕೆ ಹಾಕಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಮುಂದಿನ ಅಪಾಯಗಳೇನು..?

ಉತ್ತರ ಕೊರಿಯಾದಂತಹ ಪರಮಾಣು ಶಕ್ತಿ ರಾಷ್ಟ್ರವು ಇರಾನ್ ಪರವಾಗಿ ಬಹಿರಂಗವಾಗಿ ನಿಂತಿರುವುದು ಪಶ್ಚಿಮ ಏಷ್ಯಾದ ಸಂಘರ್ಷವನ್ನು ವಿಶ್ವಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಟ್ರಂಪ್ ಸರ್ಕಾರವು ಕಿಮ್ ಜಾಂಗ್ ಉನ್ ಜೊತೆಗೆ ನಡೆಸಲು ಉದ್ದೇಶಿಸಿದ್ದ ರಾಜತಾಂತ್ರಿಕ ಮಾತುಕತೆಗಳು ಈಗ ಈ ಬೆಳವಣಿಗೆಯಿಂದ ಹಳಿ ತಪ್ಪುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net